ಸ್ವಯಂಕೃತ ಪ್ರಮಾದಕ್ಕೆ ಬೆಲೆ ತೆತ್ತ ರಾಹುಲ್!
ಹಾಗೆ ನೋಡಿದರೆ ಕನ್ನಡಿಗ ಕೆ.ಎಲ್ ರಾಹುಲ್ ದಯನೀಯ ವೈಫಲ್ಯವನ್ನೇನೂ ಎದುರಿಸಿರಲಿಲ್ಲ. ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಎಡವಿದರೂ ರಾಹುಲ್ ಅವರ ಇತ್ತೀಚಿನ 10 ಟೆಸ್ಟ್ ಇನ್ನಿಂಗ್ಸ್’ಗಳ ಆಟ ನಾಯಕ ರೋಹಿತ್ ಶರ್ಮಾಗಿಂತ ಉತ್ತಮವಾಗಿಯೇ ಇತ್ತು.
ಕಳೆದ 10 ಟೆಸ್ಟ್ ಇನ್ನಿಂಗ್ಸ್’ಗಳಲ್ಲಿ ರಾಹುಲ್ 339 ರನ್ ಕಲೆ ಹಾಕಿದ್ದರೆ, ನಾಯಕ ರೋಹಿತ್ ಶರ್ಮಾ ಕೇವಲ 275 ರನ್ ಗಳಿಸಿದ್ದಾರೆ.
ಇದರ ಮಧ್ಯೆಯೂ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಆರಂಭಗೊಂಡ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಆಡುವ ಬಳಗದಿಂದ ರಾಹುಲ್ ಅವರನ್ನು ಕೈ ಬಿಡಲಾಗಿದೆ.
ಹಾಗಾದರೆ ವಿರಾಟ್ ಕೊಹ್ಲಿ ಬಳಿಕ ಟೀಮ್ ಇಂಡಿಯಾದ ಬೆಸ್ಟ್ ಬ್ಯಾಟ್ಸ್’ಮನ್ ಎಂದೇ ಕರೆಸಿಕೊಂಡಿದ್ದ ರಾಹುಲ್ ಅವರಿಗೆ ಪ್ಲೇಯಿಂಗ್ ಇಲೆವೆನ್’ನಲ್ಲಿ ಸ್ಥಾನ ಕಳೆದುಕೊಳ್ಳುವಂತಹ ದಯನೀಯ ಸ್ಥಿತಿ ಎದುರಾಗಿದ್ದೇಕೆ? ಕಾರಣ ಸ್ಪಷ್ಟ. ಇದು ಸ್ವತಃ ರಾಹುಲ್ ಅವರ ಸ್ವಯಂಕೃತ ಪ್ರಮಾದ.
ಈಗಿನ ಭಾರತ ತಂಡದಲ್ಲಿ ರಾಹುಲ್ ಅವರನ್ನು ಟೀಕೆಗಳನ್ನೆದುರಿಸಿ ಮತ್ತೊಬ್ಬ ಆಟಗಾರನಿಲ್ಲ. ಉತ್ತಮವಾಗಿ ಆಡಿದರೂ ನಿಂದನೆ. ಇನ್ನು ಆಡದಿದ್ದರಂತೂ ಕೇಳುವುದೇ ಬೇಡ. ಭಾರತ ತಂಡದ ಟೀಮ್ ಮ್ಯಾನೇಜ್ಮೆಂಟ್ ಕೂಡ ಅಷ್ಟೇ. ಪದೇ ಪದೇ ರಾಹುಲ್ ಅವರ ಬ್ಯಾಟಿಂಗ್ ಕ್ರಮಾಂಕಗಳನ್ನು ಬದಲಿಸುತ್ತಾ ಅವರ ಕ್ರಿಕೆಟ್ ವೃತ್ತಿಜೀವನದಲ್ಲಿ ಚೆಲ್ಲಾಟವಾಡುತ್ತಲೇ ಬಂದಿದೆ.
ಆದರೆ ರಾಹುಲ್.. ಎಂಥದ್ದೇ ಪರಿಸ್ಥಿತಿಯಲ್ಲೂ ಸಾಮರ್ಥ್ಯ ಸಾಬೀತು ಪಡಿಸುವ ತಾಕತ್ತಿನ ಆಟಗಾರ. ತಂಡ ತನ್ನ ಮೇಲೆ ಯಾವುದೇ ಜವಾಬ್ದಾರಿ ವಹಿಸಿದರೂ ಅದಕ್ಕೆ ಬೆನ್ನು ತೋರಿಸದೆ ನಿಂತ ಕ್ರಿಕೆಟಿಗ. ಹೀಗಿರುವಾಗ ರನ್ ಗಳಿಸುವುದೊಂದೇ ರಾಹುಲ್ ಮುಂದಿದ್ದ ದಾರಿ. ಅದರಲ್ಲೂ ತಮ್ಮ ಮೇಲೆ ಕೋಟ್ಯಂತರ ಟೀಕೆಗಳ ಕಣ್ಣುಗಳು ನೆಟ್ಟಿರುವಾಗ ರಾಹುಲ್ ರನ್ ಗಳಿಸಲೇಬೇಕು. ಅದನ್ನು ರಾಹುಲ್ ನ್ಯೂಜಿಲೆಂಡ್ ವಿರುದ್ಧದ ಕಳೆದ ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಮಾಡಿಲ್ಲ. ಪ್ರಥಮ ಇನ್ನಿಂಗ್ಸ್’ನಲ್ಲಿ ಶೂನ್ಯಕ್ಕೆ ಔಟಾಗಿದ್ದ ರಾಹುಲ್, ದ್ವಿತೀಯ ಇನ್ನಿಂಗ್ಸ್’ನಲ್ಲಿ ಗಳಿಸಿದ್ದು ಕೇವಲ 12 ರನ್. ಈ ವೈಫಲ್ಯಕ್ಕೆ ರಾಹುಲ್ ಬೆಲೆ ತೆತ್ತಿದ್ದಾರೆ. ಕಳೆದ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ್ದ ಸರ್ಫರಾಜ್ ಖಾನ್’ರನ್ನು ಪ್ಲೇಯಿಂಗ್ ಇಲೆವೆನ್’ನಿಂದ ಕೈ ಬಿಡುವಂತಿರಲಿಲ್ಲ. ಶುಭಮನ್ ಗಿಲ್’ರನ್ನು ಆಡಿಸಬೇಕಿತ್ತು . ಪರಿಣಾಮ, ಒಂದೇ ಟೆಸ್ಟ್ ಪಂದ್ಯದ ವೈಫಲ್ಯಕ್ಕೆ ರಾಹುಲ್ ಬಲಿಪಶುವಾಗಿದ್ದಾರೆ.