ಒಂದೇ ರನ್ನಿಂದ ಶತಕದ ಜೋಶ್ ತಪ್ಪಿಸಿಕೊಂಡ ಜೋಸ್, ಕರ್ನಾಟಕಕ್ಕೆ ಸಿಗಲಿಲ್ಲ ಗ್ರ್ಯಾಂಡ್ಓಪನಿಂಗ್!
ಇಂದೋರ್’ನಲ್ಲಿ ನಡೆದ ಕರ್ನಾಟಕ ಹಾಗೂ ಆತಿಥೇಯ ಮಧ್ಯಪ್ರದೇಶ ತಂಡಗಳ ನಡುವಿನ ಸಿ ರಣಜಿ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯಗೊಂಡಿದೆ.
ಇದರೊಂದಿಗೆ ಸಿ ಗುಂಪಿನಲ್ಲಿ ಗೆಲುವಿನೊಂದಿಗೆ ಈ ಬಾರಿಯ ರಣಜಿ ಅಭಿಯಾನ ಆರಂಭಿಸುವ ಲೆಕ್ಕಾಚಾರದಲ್ಲಿದ್ದ ಕರ್ನಾಟಕಕ್ಕೆ ಭಾರೀ ನಿರಾಸೆಯಾಗಿದೆ. ಪ್ರಥಮ ಇನ್ನಿಂಗ್ಸ್ ಪೂರ್ತಿಗೊಳ್ಳದೆ ಪಂದ್ಯ ಡ್ರಾಗೊಂಡ ಕಾರಣ ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕ ಸಿಕ್ಕಿದೆ.
ಮಳೆಯಿಂದ ಅಡಚಣೆಗೊಳಗಾದ ಪಂದ್ಯದಲ್ಲಿ ಮಧ್ಯಪ್ರದೇಶ ತಂಡ ತನ್ನ ಪ್ರಥಮ ಇನ್ನಿಂಗ್ಸ್’ನಲ್ಲಿ 8 ವಿಕೆಟ್ ನಷ್ಟಕ್ಕೆ 425 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿತ್ತು. ಇದಕ್ಕೆ ಪ್ರತಿಯಾಗಿ ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತನ್ನ ಪ್ರಥಮ ಇನ್ನಿಂಗ್ಸ್’ನಲ್ಲಿ 5 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿತು.
ಕರ್ನಾಟಕ ಪರ ಆರಂಭಿಕನಾಗಿ ಕಣಕ್ಕಿಳಿದ ಬಲಗೈ ಬ್ಯಾಟರ್ ನಿಕಿನ್ ಜೋಸ್ 99 ರನ್’ಗಳಿಗೆ ಔಟಾಗುವ ಮೂಲಕ ಪ್ರಸಕ್ತ ಸಾಲಿನ ಮೊದಲ ಪಂದ್ಯದಲ್ಲೇ ಶತಕ ಸಾಧನೆಯಿಂದ ವಂಚಿತರಾದರು. ನಾಯಕ ಮಯಾಂಕ್ ಅಗರ್ವಾಲ್ ಇನ್ನಿಂಗ್ಸ್’ನ ಮೊದಲ ಓವರ್’ನಲ್ಲೇ ಶೂನ್ಯಕ್ಕೆ ಔಟಾದರೆ, 3ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ಎಡಗೈ ಬ್ಯಾಟರ್ ದೇವದತ್ತ್ ಪಡಿಕ್ಕಲ್ 16 ರನ್ ಗಳಿಸಿದರು. ರಣಜಿ ಪದಾರ್ಪಣೆಯ ಪಂದ್ಯದಲ್ಲಿ ಸ್ಮರಣ್ ಆರ್. 17 ರನ್ ಗಳಿಸಿ ಔಟಾದರೆ, ಉಪನಾಯಕ ಮನೀಶ್ ಪಾಂಡೆ ಗಳಿಸಿದ್ದು ಕೇವಲ 9 ರನ್. 72 ರನ್’ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನಿಕಿನ್ ಜೋಸ್ ಮತ್ತು ಆಲ್ರೌಂಡರ್ ಶ್ರೇಯಸ್ ಗೋಪಾಲ್ ಆಸರೆಯಾದರು. ಈ ಬಲಗೈ ಜೋಡಿ 5ನೇ ವಿಕೆಟ್’ಗೆ 127 ರನ್’ಗಳ ಜೊತೆಯಾಟವಾಡಿ ತಂಡಕ್ಕೆ ಆಸರೆಯಾಯಿತು.
ಇದೇ ಶುಕ್ರವಾರ (ಅಕ್ಟೋಬರ್ 18) ಬೆಂಗಳೂರಿನ ಹೊರವಲಯದಲ್ಲಿರುವ ಆಲೂರಿನ ಕೆ.ಎಸ್.ಸಿ.ಎ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ತನ್ನ 2ನೇ ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡ, ಕೇರಳ ತಂಡವನ್ನು ಎದುರಿಸಲಿದೆ.