ಭಾರತ ಕ್ರಿಕೆಟ್ ತಂಡದ ನೂತನ ಹೆಡ್ ಕೋಚ್ ಗೌತಮ್ ಗಂಭೀರ್ ಒಬ್ಬ ಕಟ್ಟುನಿಟ್ಟಿನ ಹೆಡ್ ಮಾಸ್ಟರ್.
ಅದು ಯಾರೇ ಆಗಿರಲಿ, ಎಷ್ಟೇ ದೊಡ್ಡ ಆಟಗಾರನಿರಲಿ. ನಿಯಮ ಎಲ್ಲರಿಗೂ ಒಂದೇ ಎನ್ನುವ ಮನೋಭಾವದವರು ಗೌತಮ್ ಗಂಭೀರ್.
ದೆಹಲಿಯ ಗೌತಮ್ ಗಂಭೀರ್ ಟೀಮ್ ಇಂಡಿಯಾ ಕೋಚ್ ಆದ ನಂತರ ಒಂದಷ್ಟು ನಿಯಮಗಳನ್ನು ರೂಪಿಸಿದ್ದಾರೆ. ಈ ಪೈಕಿ ಭಾರತ ತಂಡದ ಆಟಗಾರರಿಗೆ ಅಂತರಾಷ್ಟ್ರೀಯ ಪಂದ್ಯಗಳಿಲ್ಲದೇ ಇದ್ದಾಗ ದೇಶೀಯ ಕ್ರಿಕೆಟ್ ಆಡಬೇಕೆಂಬುದು. ಅದರ ಪರಿಣಾಮ ಎಂಬಂತೆ, ಭಾರತ ಕ್ರಿಕೆಟ್ ತಂಡದ ಇಬ್ಬರು ದೊಡ್ಡ ಸ್ಟಾರ್ ಆಟಗಾರರು ಬಹಳ ವರ್ಷಗಳ ನಂತರ ದೇಶೀಯ ಕ್ರಿಕೆಟ್’ನಲ್ಲಿ ಆಡಲು ಸಜ್ಜಾಗಿದ್ದಾರೆ. ಅವರೇ, ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಕ್ರಿಕೆಟ್ ಜಗತ್ತಿನ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ.
ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ರನ್ ಮಷಿನ್ ಖ್ಯಾತಿಯ ವಿರಾಟ್ ಕೊಹ್ಲಿ, ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಆಡವ ಸಾಧ್ಯತೆಯಿದೆ..
ಬಾಂಗ್ಲಾದೇಶ ವಿರುದ್ಧ ಭಾರತ ಮುಂದಿನ ತಿಂಗಳು 2 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದೆ. ಅದಕ್ಕೂ ಮುನ್ನ ಟೆಸ್ಟ್ ಸರಣಿಯಲ್ಲಿ ಆಡಲಿರುವ ಆಟಗಾರರು ದುಲೀಪ್ ಟ್ರೋಫಿ ಪಂದ್ಯಗಳಲ್ಲಿ ಆಡಬೇಕೆಂದು ಕೋಚ್ ಗೌತಮ್ ಗಂಭೀರ್ ಕಟ್ಟಪ್ಪಣೆ ಮಾಡಿದ್ದಾರೆ. ಹೀಗಾಗಿ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೂಡ ದೇಶೀಯ ಕ್ರಿಕೆಟ್’ನ ಮಹತ್ವದ ಟೂರ್ನಿಯಲ್ಲಿ ಆಡಲಿದ್ದಾರೆ ಎನ್ನಲಾಗುತ್ತಿದೆ.
ವಿರಾಟ್ ಕೊಹ್ಲಿ 2012ರ ನಂತರ ದೇಶೀಯ ಕ್ರಿಕೆಟ್’ನಲ್ಲಿ ಯಾವುದೇ ರೆಡ್ ಬಾಲ್ ಪಂದ್ಯಗಳನ್ನಾಡಿಲ್ಲ. 2012ರಲ್ಲಿ ಗಾಜಿಯಾಬಾದ್’ನಲ್ಲಿ ನಡೆದ ಉತ್ತರ ಪ್ರದೇಶ ವಿರುದ್ಧದ ರಣಜಿ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದೆಹಲಿ ಪರ ಕಣಕ್ಕಿಳಿದಿದ್ದರು. ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ ದೆಹಲಿ ತಂಡದ ನಾಯಕತ್ವ ವಹಿಸಿದ್ದರೆ, ಸೆಹ್ವಾಗ್ ಜೊತೆ ಟೀಮ್ ಇಂಡಿಯಾದ ಹಾಲಿ ಕೋಚ್ ಗೌತಮ್ ಗಂಭೀರ್ ದೆಹಲಿ ತಂಡದ ಇನ್ನಿಂಗ್ಸ್ ಆರಂಭಿಸಿದ್ದರು.
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಜೊತೆ ಭಾರತ ಟೆಸ್ಟ್ ತಂಡದ ಆಟಗಾರರಾದ ಕನ್ನಡಿಗ ಕೆ.ಎಲ್ ರಾಹುಲ್, ಶುಭಮನ್ ಗಿಲ್, ಅಕ್ಷರ್ ಪಟೇಲ್, ಯಶಸ್ವಿ ಜೈಸ್ವಾಲ್, ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್, ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಕೂಡ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಆಡಲಿದ್ದಾರೆ.
ದುಲೀಪ್ ಟ್ರೋಫಿ ಟೂರ್ನಿಯೊಂದಿಗೆ ಈ ಬಾರಿಯ ದೇಶೀಯ ಕ್ರಿಕೆಟ್ ಋತು ಆರಂಭವಾಗಲಿದೆ. ದುಲೀಪ್ ಟ್ರೋಫಿ ಟೂರ್ನಿಯಲ್ಲಿ ನಾಲ್ಕು ತಂಡಗಳು ಭಾಗವಹಿಸಲಿದ್ದು, ಟೂರ್ನಿ ಸೆಪ್ಟೆಂಬರ್ 5ರಂದು ಆಂಧ್ರಪ್ರದೇಶದ ಅನಂತಪುರದಲ್ಲಿ ಆರಂಭವಾಗಲಿದೆ.
ಬಾಂಗ್ಲಾದೇಶ ತಂಡ ಮುಂದಿನ ತಿಂಗಳು ಭಾರತಕ್ಕೆ ಆಗಮಿಸಲಿದ್ದು, ಆತಿಥೇಯರ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿ ಹಾಗೂ 3 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ.
ಭಾರತ ತಂಡದ ಆಟಗಾರರು ಅಂತರಾಷ್ಟ್ರೀಯ ಪಂದ್ಯಗಳಿಲ್ಲದಿದ್ದಾಗ ದೇಶೀಯ ಕ್ರಿಕೆಟ್’ನಲ್ಲಿ ಆಡಿಯೇ ಭಾರತ ತಂಡಕ್ಕೆ ಮರಳಬೇಕೆಂದು ಕೋಚ್ ಗೌತಮ್ ಗಂಭೀರ್ ಹೊಸ ನಿಯಮ ಮಾಡಿದ್ದಾರೆ. ಅದರಂತೆ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುವ ಸಂಭಾವ್ಯ ಆಟಗಾರರು ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಆಡಲು ಸಿದ್ಧತೆ ನಡೆಸುತ್ತಿದ್ದಾರೆ.