ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಎನ್ಕೌಂಟರ್ ಆಡಲಾಯಿತು.
ತನ್ನ ಐದೂ ಪಂದ್ಯಗಳನ್ನು ಗೆದ್ದು ಗೆಲುವಿನ ನಾಗಾಲೋಟದಲ್ಲಿದ ಟೀಮ್ ಇಂಡಿಯಾ, ಇಂಗ್ಲೆಂಡ್ ತಂಡದೊಂದಿಗೆ ಮುಖಾಮುಖಿಯಾಗಿ ಸೆಣಸಾಡುವ ಪಂದ್ಯ ಹೈ-ವೋಲ್ಟೇಜ್ ಘರ್ಷಣೆ ಎಂದು ನಿರೀಕ್ಷಿಸಲಾಗಿತ್ತು
ನಾಯಕನಾಗಿ ರೋಹಿತ್ ಶರ್ಮ ಗೆ 100ನೇ ಪಂದ್ಯವಾಗಿತ್ತು. ನಾಯಕತ್ವದ ನೂರನೇ ಪಂದ್ಯದಲ್ಲಿ ಇದು ಹಿಟ್‌ಮ್ಯಾನ್ ಅವರ ಹೊಸ ಸಾಧನೆ! ಹೊಸ ಮೈಲಿಗಲ್ಲು..! ಈ ಪಂದ್ಯದಲ್ಲಿ ರೋಹಿತ್ 18,000 ಅಂತರಾಷ್ಟ್ರೀಯ ರನ್ ಕಂಪ್ಲೀಟ್ ಮಾಡಿ ಈ ಮೈಲುಗಲ್ಲು ತಲುಪಿದ ಐದನೆಯ ಭಾರತೀಯ ಅನಿಸಿಕೊಂಡರು. ಅಲ್ಲದೆ ರೋಹಿತ್ ಶರ್ಮಾ ಅವರು 2023ರಲ್ಲಿ ಏಕದಿನ ಪಂದ್ಯಗಳಲ್ಲಿ 1000 ರನ್ ಪೂರ್ಣಗೊಳಿಸಿದ ಎರಡನೇ ಭಾರತೀಯ ಬ್ಯಾಟರ್ ಎನಿಸಿದರು.
ಈ ನಿರೀಕ್ಷಿತ ಹಣಾಹಣಿಯ ರೋಚಕ ಸ್ಪರ್ಧೆಯಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.ಭಾರತ ತಂಡದ ಆರಂಭ ಕಳಪೆಯಾಗಿತ್ತು ಸ್ಲೋ ಪಿಚ್ ನಲ್ಲಿ ಕ್ವಾಲಿಟಿ ಇನ್ನಿಂಗ್ಸ್ ಆಡಿದ ನಾಯಕನ ಆಟ ಭಾರತದ ಬ್ಯಾಟಿಂಗ್ ಕುಸಿತಕ್ಕೆ ತಡೆಯಾಯಿತು. ರೋಹಿತ್ ಜೊತೆ ಕೆ ಎಲ್ ಸಾಥ್ ನೀಡಿದರು ಹಾಗೂ ಕೆಳ ಕ್ರಮಾಂಕದಲ್ಲಿ ಸೂರ್ಯ ಶೈನ್ ಆದರು. ಒತ್ತಡದಲ್ಲಿ ನಾಯಕನ ನಾಕ್ ಆಡಿದ ರೋಹಿತ್ 101 ಎಸೆತಗಳಲ್ಲಿ 87 ರನ್ ಗಳಿಸುವ ಮೂಲಕ ಪಂದ್ಯದಲ್ಲಿ ಅತಿಥೇಯರ ಪರ ಅಗ್ರ ರನ್ ಗಳಿಸಿದ ಆಟಗಾರರಾದರು.ಸೂರ್ಯಕುಮಾರ್ ಯಾದವ್ 49 ರನ್ ಗಳಿಸಿದರೆ, ಕೀಪರ್-ಬ್ಯಾಟರ್ ಕೆಎಲ್ ರಾಹುಲ್ ಕೂಡ ಅಮೂಲ್ಯ 39 ರನ್ ಕೊಡುಗೆ ನೀಡಿದರು. ನಾಲ್ಕನೇ ವಿಕೆಟ್‌ಗೆ 91 ರನ್‌ಗಳ ಜೊತೆಯಾಟವನ್ನು ರೂಪಿಸಿದ ರಾಹುಲ್ ಮತ್ತು ಶರ್ಮಾ ತಮ್ಮ ತಂಡಕ್ಕಾಗಿ ಅಸ್ತವ್ಯಸ್ತವಾಗಿ ಮುಳುಗುತ್ತಿದ್ದ ಹಡಗನ್ನು ನೀರಿನಿಂದ ಹೊರಹಾಕಿದರು. ನಿಧಾನಗತಿಯ ಪಿಚ್ ನಲ್ಲಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದ ಭಾರತ ಇಂಗ್ಲೆಂಡ್‌ಗೆ ಗೆಲ್ಲಲು 230 ರನ್‌ಗಳ ಗುರಿ ನೀಡಿತು.
* ವಿಕೆಟ್ಸ್ ಗಾನ್! ಬೇಟೆ ಶುರೂ!!*
ಕೌಂಟರ್ ಇನ್ನಿಂಗ್ಸ್‌ನಲ್ಲಿ ಆಡುವಾಗ ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್‌ಗಳು ಒಬ್ಬರ ನಂತರ ಒಬ್ಬರಂತೆ ಔಟಾಗುತ್ತಲೇ ಇದ್ದರು. ಭಾರತದ ‘ವೇಗ’ಕ್ಕೆ ಆಂಗ್ಲರ ಟಾಪ್ ಆರ್ಡರ್ ಹಾರಿ ಹೋಯಿತು. ಬುಮ್ರಾ- ಶಮಿ ಶರವೇಗದ ದಾಳಿ ಭಾರತಕ್ಕೆ ಮಾಸ್ ಆರಂಭ ನೀಡಿತು. ಬುಮ್ರಾ- ಶಮಿ ಉರಿ ದಾಳಿಗೆ ಬೆದರಿದ ಆಂಗ್ಲರ ಟಾಪ್ ನಾಲ್ಕು ಬ್ಯಾಟ್ಸಮನ್ ಗಳು ಔಟ್ ಆಗಿ ಇಂಗ್ಲೆಂಡ್ ಸಂಕಷ್ಟಕ್ಕೆ ಸಿಲುಕಿತು. ಬಳಿಕ ಕುಲ್ದೀಪ್ ಸ್ಪಿನ್ ಸುಳಿಗೆ ಬಟ್ಲರ್ ದಂಗಾದರು. ಶಮಿ ತನ್ನ ಉರಿ ದಾಳಿಯಿಂದ ನಾಲ್ಕು ವಿಕೆಟ್ಸ್ ಕಬಳಿಸಿ ಸೂಪರ್ ಹೀರೋ ಆದರು. ಕ್ರಿಕೆಟ್ ಜನಕರಿಗೂ ತಟ್ಟಿದ ‘ಶಮಿ’ ಕಾಟದಿಂದಾಗಿ ಭಾರತದ ಅಜೇಯ ಓಟ ಮುಂದುವರೆದಿದೆ. ಮೂರು ವಿಕೆಟ್ ಗಳಿಸಿದ ಬೂಂ ಬೂಂ ಬುಮ್ರಾ ಎದುರಾಳಿಗೆ ಸಿಂಹಸ್ವಪ್ನರಾದರು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ 34.5 ಓವರ್ ಗಳಲ್ಲಿ ಕೇವಲ 129 ರನ್ ಗಳಿಗೆ ಸೀಮಿತವಾಗಿ ಹೀನಾಯ ಸೋಲು ಅನುಭವಿಸಿತು. ಸುಲಭ ಜಯ ದಾಖಲಿಸಿದ ಟೀಂ ಇಂಡಿಯಾ ತಂಡ ಇಂಗ್ಲೆಂಡ್ ತಂಡವನ್ನು 100 ರನ್‌ಗಳ ಬೃಹತ್ ಅಂತರದಿಂದ ಸೋಲಿಸುವ ಮೂಲಕ ಟೂರ್ನಿಯಿಂದ ಬಹುತೇಕ ಹೊರಹಾಕಿದೆ. ಈ ಗೆಲುವಿನೊಂದಿಗೆ ಭಾರತ ಟೂರ್ನಿಯಲ್ಲಿ ಆರನೇ ಜಯ ದಾಖಲಿಸಿದೆ.
ಆಂಗ್ಲರ ಮೇಲೆ ಭಾರತದ ಪವರ್ ತೋರಿಸಿದ ರೋಹಿತ್ ಪಡೆ ಇಂಗ್ಲೆಂಡ್ ರಿಟರ್ನ್ ಟಿಕೆಟ್ ಕನ್ಫರ್ಮ್ ಮಾಡಿದ್ದಾರೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ಅನ್ನು 100 ರನ್‌ಗಳಿಂದ ಸೋಲಿಸುವ ಮೂಲಕ ಟೀಮ್ ಇಂಡಿಯಾದ ಸೆಮಿಫೈನಲ್‌ನ ಹಾದಿ ಸುಲಭವಾಗಿದೆ ಮತ್ತು ಸತತ ಆರನೇ ಗೆಲುವಿನ ಅಪ್ಪುಗೆ ಭಾರತಕ್ಕೆ ಸಿಕ್ಕಿದೆ. ಭಾರತ ತಂಡ ವಿಶ್ವಕಪ್ ನಲ್ಲಿ ಗೆಲುವಿನ ಅಭಿಯಾನ ಮುಂದುವರಿಸಿದೆ.ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಅಂಕಪಟ್ಟಿಯಲ್ಲಿ ಮತ್ತೆ ನಂಬರ್ ಒನ್ ಕಿರೀಟವನ್ನು ತನ್ನದಾಗಿಸಿಕೊಂಡಿದೆ.
ಸುರೇಶ್ ಭಟ್, ಮೂಲ್ಕಿ
ಟೀಂ ಸ್ಪೋರ್ಟ್ಸ್ ಕನ್ನಡ