ಟೆನ್ನಿಸ್ ತರಬೇತಿ ಪಡೆಯುತ್ತಿದ್ದ ಆ ಹುಡುಗನ ಬಗ್ಗೆ ಸ್ವತಃ ತರಬೇತಿದಾರರಿಗೆ ತಾತ್ಸಾರವಿತ್ತು.ದೈತ್ಯದೇಹಿ ಬೊಜ್ಜು ದೇಹದ ಹುಡುಗ ವೃತ್ತಿಪರ ಟೆನ್ನಿಸ್‌ಗೆ ಅನರ್ಹವೆನ್ನುವುದು ಅವರ ಭಾವ. ಡೇವಿಸ್ ಕಪ್ ತಂಡದ ಆಯೋಜಕರಿಗೂ ಮತ್ತದೇ ಭಾವ. ಹುಡುಗ ವಿಕಾರಿ ,ಒಡ್ಡೊಡ್ಡು ಎಂಬ ತಿರಸ್ಕಾರ. ಡೇವಿಸ್ ಕಪ್‌ನ ಪಂದ್ಯಗಳಲ್ಲಿ ತನ್ನನ್ನು ಬಾಲ್ ಬಾಯ್ ಆಗಿ ಆಯ್ಕೆ ಮಾಡಿ ಎಂದಾತ ಆಯೋಜಕರಲ್ಲಿ ವಿನಂತಿಸಿಕೊಂಡರೇ ನೇರವಾಗಿಯೇ ಅವನನ್ನು ಅವಮಾನಿಸಿದ್ದರು ಆಯೋಜಕರು.ನೀನು ಟೆನ್ನಿಸ್ ಆಡಲಾಗದು,ಬೇಕಿದ್ದರೆ ಫುಟ್ಬಾಲ್ ಆಡಬಹುದು,ಅದೂ ಸಹ ನೀನು ಪುಟ್ಬಾಲ್ ಆಗಿದ್ದರೆ ಮಾತ್ರ ಎಂಬ ಅಪಹಾಸ್ಯದ ಮಾತುಗಳನ್ನು ಕೇಳಿಸಿಕೊಂಡ ಹುಡುಗ ಮಂಕಾಗಿ ಮನೆಗೆ ಬಂದಿದ್ದ.ರಾತ್ರಿಯಿಡಿ ಮಗುಮ್ಮಾಗಿ ಕುಳಿತಿದ್ದವನ ಮನಸ ತುಂಬ ಅಸಹನೆ,ನಿರಾಸೆಯ ಹೊಯ್ದಾಟ.
ಆದರೆ ಬದುಕಿನಲ್ಲಿ ಬಟರ್ ಫ್ಲೈ ಪರಿಣಾಮ ಎನ್ನುವುದೊಂದಿರುತ್ತದೆ. ಯಾವುದೋ ಚಿಕ್ಕದ್ದೊಂದು ಘಟನೆಯ ಬದುಕಿನ ಮಹತ್ವದ ಬದಲಾವಣೆಗೆ ಕಾರಣವಾಗುವಂಥದ್ದು.ಜಾರಿ ಬಿದ್ದ ದುರ್ಯೋಧನನನ್ನು ನೋಡಿ ದ್ರೌಪದಿ ನಕ್ಕ ಕಾರಣಕ್ಕೆ ಮಹಾಭಾರತವೇ ನಡೆದು ಹೊಯ್ತು ಎಂಬಂತೆ. ತನ್ನೆಡೆಗನ ಅಪಹಾಸ್ಯದ ಅದೊಂದು ಘಟನೆ ಅವನಲ್ಲಿಯೂ ಬಟರ್ ಫ್ಲೈ ಇಫೆಕ್ಟ್ ತೋರಿಸಿತ್ತು.ಹಟಕ್ಕೆ ಬಿದ್ದವನಂತೆ ಸತತವಾಗಿ ಟೆನ್ನಿಸ್ ಅಭ್ಯಾಸದಲ್ಲಿ ನಿರತನಾದವನು ಹದಿವಯಸ್ಸಿನ ಹೊತ್ತಿಗಾಗಲೇ ಮೈ ಕರಗಿಸಿದ್ದ.ಹದಿನೆಂಟನೆ ವಯಸ್ಸಿಗೆ ವೃತ್ತಿಜೀವನವನ್ನಾರಂಭಿಸಿ ಮೊದಮೊದಲು ಡಬಲ್ಸ್ ಆಟಗಾರನಾಗಿ ಆಟವನ್ನಾರಂಭಿಸಿದ್ದ.
ಇಪ್ಪತ್ತೆರಡನೇ ವಯಸ್ಸಿಗಾಗಲೇ ಪ್ರಥಮ ಯಶಸ್ಸು ಕೈಗೆ ಹತ್ತಿತ್ತು.ಡಬಲ್ಸ್‌ನ ಮೊದಲ ಯು.ಎಸ್ ಓಪನ್ ಗೆದ್ದಿದ್ದ 1968ರಲ್ಲಿ.ನಿಧಾನಕ್ಕೆ ಡಬಲ್ಸ್‌ನಲ್ಲಿಯೇ ವೃತ್ತಿಜೀವನ ಮುಂದುವರೆಸಿದ್ದವನಿಗೆ ತಾನೇಕೆ ಸಿಂಗಲ್ಸ್ ಆಡಬಾರದು ಎಂಬ ಪ್ರಶ್ನೆ ಎದುರಾಗಿತ್ತು. ಡಬಲ್ಸ್ ಆಡುತ್ತಲೇ ಸಿಂಗಲ್ಸ್ ಸಹ ಆಡಲಾರಂಭಿಸಿದವನಿಗೆ ಸಹಜವಾಗಿ ಆರಂಭಿಕ ಸೋಲುಗಳು ಕಾಡಿದ್ದವು. ಆದರೆ ಆಟವನ್ನು ತುಂಬ ಪ್ರೀತಿಸಿದ್ದವನು ಆತ. ಏಕಾಗ್ರತೆಯಿಂದ ಗಮನಿಸಿ ಬಹುಬೇಗ ಸಿಂಗಲ್ಸ್ ಆಟದ ಪಟ್ಟುಗಳನ್ನು ಕಲಿತುಬಿಟ್ಟಿದ್ದ.ಬದುಕು ಪರಿಶ್ರಮವನ್ನು ಸೋಲಿಸಿದ ಉದಾಹರಣೆಗಳು ತೀರ ಕಡಿಮೆ.ಅವನ ಪರಿಶ್ರಮವೂ ಸೋಲಲಿಲ್ಲ. 1971ರಲ್ಲಿ ಇಪ್ಪತ್ತೈದನೇ ವಯಸ್ಸಿಗೆ ತನ್ನ ಮೊದಲ ಸಿಂಗಲ್ಸ್ ಯು.ಎಸ್ ಓಪನ್ ಗೆದ್ದಿದ್ದ.ಅದೇ ಮರು ವರ್ಷ ಅಂದರೆ ಇಪ್ಪತ್ತಾರನೇ ವಯಸ್ಸಿಗೆ ಮೊದಲ ವಿಂಬಲ್ಡನ್ ಸಹ ಗೆದ್ದು ಬೀಗಿದ್ದ ಅವನು.ಸಹಜವಾಗಿ ವರ್ಷಾಂತ್ಯವನ್ನು ಅಗ್ರ ಶ್ರೇಯಾಂಕಿತನಾಗಿ ಮುಗಿಸಿದ್ದ.ಸಾಮಾನ್ಯವಾಗಿ ಪುರುಷರ ವಿಭಾಗದಲ್ಲಿ ಸಿಂಗಲ್ಸ್ ಆಡುವವರಿಗೆ ಡಬಲ್ಸ್ ನ ಯಶಸ್ಸು ಕಡಿಮೆ.ಆದರೆ ಇವನ ಕತೆ ಬೇರೆಯದಿತ್ತು.
ಡಬಲ್ಸ್‌ನಿಂದಲೇ ವೃತ್ತಿ ಜೀವನವನ್ನಾರಂಭಿಸಿದೆನ್ನುವ ಕಾರಣಕ್ಕೊ ಏನೋ,ಆತನಿಗೆ ಡಬಲ್ಸ್‌ನ ಮೇಲೆಯೂ ಗಟ್ಟಿಯಾದ ಹಿಡಿತವಿತ್ತು.ನಾಲ್ಕು ಯು.ಎಸ್ ಓಪನ್ ಮತ್ತು ಒಂದು ಆಸ್ಟ್ರೇಲಿಯನ್ ಓಪನ್‌ನ ಡಬಲ್ಸ್ ಪ್ರಶಸ್ತಿಯನ್ನು ಸಹ ಅವನು ತನ್ನ ಮಡಲಿಗೆ ಹಾಕಿಕೊಂಡುಬಿಟ್ಟಿದ್ದ. ಒಟ್ಟಾರೆಯಾಗಿ ಸಿಂಗಲ್ಸ್ ಮತ್ತು ಡಬಲ್ಸ್ ಪಂದ್ಯಾವಳಿ ಸೇರಿ ಆತ ಗೆದ್ದಿದ್ದು ಏಳು ಗ್ರಾಂಡ್‌ಸ್ಲಾಮ್ ಪ್ರಶಸ್ತಿಗಳು.
ಈ ಎಲ್ಲ ಸಾಧನೆಗಳನ್ನು ಆತ ಮಾಡಿದ್ದರೂ ಆತ ಬಹುಮುಖ್ಯವಾಗಿ ಗುರುತಿಸಲ್ಪಡುವುದೇ ಅಮೇರಿಕಾದ ತಂಡಕ್ಕೋಸ್ಕರ ಆತ ಡೇವಿಸ್ ಕಪ್‌ನಲ್ಲಿ ಮಾಡಿರುವ ಸಾಧನೆಗಾಗಿ. 1968ರಿಂದ 1979ರವರೆಗೆ ಅಮೆರಿಕೆಯ ಡೇವಿಸ್ ಕಪ್‌ನ ತಂಡದಲ್ಲಿ ಆಡಿದ ಆತ ಇಂದಿಗೂ ಅಮೇರಿಕಾದ ಸಾರ್ವಕಾಲಿಕ ಶ್ರೇಷ್ಠ ಡೇವಿಸ ಕಪ್ ಆಟಗಾರರಲ್ಲಿ ಒಬ್ಬನೆಂದೇ ಗುರುತಿಸಲ್ಪಡುತ್ತಾನೆ. ಡೇವಿಸ್ ಕಪ್‌ನ ಟೂರ್ನಿಯಲ್ಲಿ ಆಡಿದ ಒಟ್ಟು ನಲ್ವತ್ತೆರಡು ಪಂದ್ಯಗಳ ಪೈಕಿ ಮೂವತ್ತೈದರಲ್ಲಿ ಆತ ಜಯ ಸಾಧಿಸಿದ್ದಾನೆ. ಡೇವಿಸ್ ಕಪ್‌ನ ಡಬಲ್ಸ್ ಪಂದ್ಯವೊಂದರಲ್ಲಿ ಅತಿ ಹೆಚ್ಚು ಗೇಮ್‌ಗಳನ್ನಾಡಿದ ದಾಖಲೆ ಇವತ್ತಿಗೂ ಇವನ ಹೆಸರಲ್ಲಿದೆ. ಡಬಲ್ಸ್ ಆಟದ ಸೆಟ್ಟೊಂದರಲ್ಲಿ ಅತೀ ಹೆಚ್ಚು ಗೇಮ್‌ಗಳನ್ನಾಡಿದ ದಾಖಲೆ ಸಹ ಇವನದ್ದೇ.ಇವನ ಸಾಧನೆಯನ್ನು ಗಮನಿಸಿದ ಅಂತರಾಷ್ಟ್ರೀಯ ಟೆನ್ನಿಸ್ ಸಂಸ್ಥೆ 1987ರಲ್ಲಿ ಇವನನ್ನು ಅಂತರಾಷ್ಟ್ರೀಯ ಟೆನ್ನಿಸ್ ಹಾಲ್ ಆಫ್ ಫೇಮ್‌ನ ಪಟ್ಟಿಗೆ ಸೇರಿಸಿತು.1979ರಲ್ಲಿ ಆತ್ಮಕಥೆ ಬರೆದ ಮತ್ತೊಬ್ಬ ಟೆನ್ನಿಸ್ ದಂತಕತೆ ಜಾಕ್ ಕ್ರಾಮರ್,ವಿಶ್ವದ ಸಾರ್ವಕಾಲಿಕ ಇಪ್ಪತ್ತು ಶ್ರೇಷ್ಠ ಆಟಗಾರರ ಪೈಕಿ ಇವನನ್ನೂ ಒಬ್ಬನಾಗಿ ಸೇರಿಸಿದ. 2005ರಲ್ಲಿ ತನ್ನ ನಲ್ವತ್ತನೇ ವಸಂತವನ್ನು ಪೂರೈಸಿದ ಟೆನ್ನಿಸ್‌ನ ಶ್ರೇಷ್ಠ ಟೆನ್ನಿಸ್ ಕ್ರೀಡಾ ಪತ್ರಿಕೆ ‘TENNIS’ ಸಾರ್ವಕಾಲಿಕ ವಿಶ್ವಶ್ರೇಷ್ಠ ನಲ್ವತ್ತು ಟೆನ್ನಿಸ್ ಕ್ರೀಡಾಳುಗಳ ಪೈಕಿ ಇವನನ್ನು ಒಬ್ಬನಾಗಿ ಗುರುತಿಸಿತ್ತು.
ನಾವು ಹೆಚ್ಚಾಗಿ ಕೇಳಿರದ, ಒಂದು ಕಾಲದ ಅಮೇರಿಕಾದ ಟೆನ್ನಿಸ್ ದಂತ ಕತೆ ಸ್ಟಾನ್ಲಿ ರೋಜರ್ ಸ್ಮಿತ್‌ನ ಯಶೋಗಾಥೆಯಿದು. ಆದರೆ ಇಷ್ಟಕ್ಕೆ ಮುಗಿಯಲಿಲ್ಲ ಅವನ ಯಶಸ್ಸಿನ ಕತೆ.ಪ್ರಸಿದ್ದ ಬೂಟು ಕಂಪನಿ ಆಡಿಡಾಸ್ ತನ್ನ ಬೂಟುಗಳ ಪ್ರಚಾರಕ್ಕಾಗಿ ಟೆನ್ನಿಸ್ ಆಟಗಾರನೊಬ್ಬನನ್ನು ಹುಡುಕುತ್ತಿತ್ತು. ಆಡಿಡಾಸ್‌ನ ಟೆನ್ನಿಸ್ ರಾಯಭಾರಿಯಾಗಿದ್ದ ಪ್ರಾನ್ಸ್‌ನ ಖ್ಯಾತ ಟೆನ್ನಿಸ್ ಆಟಗಾರ ರಾಬರ್ಟ್ ಹೆಲ್ಲೆಟ್ ಆಟದಿಂದ ನಿವೃತ್ತನಾಗಿದ್ದ.ತಕ್ಷಣವೇ ಕಂಪನಿ ಸ್ಟಾನ್ಲಿಯನ್ನು ತನ್ನ ರಾಯಭಾರಿಯಾಗಿ ಒಪ್ಪಿಸಿತ್ತು. ಮುಂದಿನದ್ದು ಇತಿಹಾಸ. ಇವತ್ತಿಗೂ ಆಡಿದಾಸ್ ಸ್ಟಾನ್ಲಿ ಸ್ಮಿತ್ ಶೂಗಳೆಂದರೇ ಟೆನ್ನಿಸ್ ಲೋಕದ ಅತ್ಯಂತ ಪ್ರಸಿದ್ಧ ಶೂಗಳು. ವೃತ್ತಿಪರರು ಈಗ ಹೆಚ್ಚಾಗಿ ಸ್ಟಾನ್ಲಿ ಸ್ಮಿತ್ ಶೂಗಳನ್ನು ಬಳಸುವುದಿಲ್ಲವಾದರೂ ಟೆನ್ನಿಸ್ ಪ್ರಿಯರ ಲೋಕದಲ್ಲಿನ್ನೂ ಅವುಗಳ ಜನಪ್ರಿಯತೆ ಕಡಿಮೆಯಾಗಿಲ್ಲ.
ತನ್ನ ಆಟವನ್ನು ನೋಡಿರದ ಕೇಳಿರದ ಇಂದಿನ ಅನೇಕ ಯುವಕರು ನನ್ನ ಹೆಸರು ಕೇಳಿದಾಕ್ಷಣ ಅದೇನು ಶೂ ಹೆಸರಿಟ್ಟುಕೊಂಡಿದ್ದೀರಿ ಎಂದು ಮುಗ್ಧವಾಗಿ ಕೇಳಿಬಿಡುತ್ತಾರೆ. ಬಹುತೇಕರು ಇಂದಿಗೂ ನನ್ನ ಶೂ ಎಂದೇ ತಿಳಿದುಕೊಂಡಿದ್ದಾರೆ’ ಎಂದು ನಕ್ಕುಬಿಡುತ್ತಾನೆ ಸ್ಟಾನ್ಲಿ. ವೃತ್ತಿಜೀವನದ ನಂತರ ಟೆನ್ನಿಸ್ ತರಬೇತುದಾರನಾಗಿ ಕೆಲಕಾಲ ಕಾರ್ಯ ನಿರ್ವಹಿಸಿದ ಸ್ಟಾನ್ಲಿ ಪ್ರಸ್ತುತಕ್ಕೆ ಅಮೇರಿಕಾದಲ್ಲಿರುವ ಅಂತರಾಷ್ಟ್ರೀಯ ಟೆನ್ನಿಸ್ ಹಾಲ್ ಆಫ್ ಫೇಮ್‌ನ ಅಧ್ಯಕ್ಷ.
ಹಿಂತಿರುಗಿ ನೋಡಿದರೆ ಸ್ಟಾನ್ಲಿ ಗೆದ್ದದ್ದು ಒಟ್ಟು ತೊಂಬತ್ತೆರಡು ಪ್ರಶಸ್ತಿಗಳು.ಅದರಲ್ಲಿ ಏಳು ಗ್ರಾಂಡ್‌ಸ್ಲಾಮ್‌ಗಳು.ವಿಚಿತ್ರ ನೋಡಿ,ಯಾವ ಡೇವಿಸ್ ಕಪ್ ಅಂಗಳದಲ್ಲಿ ಅವನ ಬಗ್ಗೆ ದೈತ್ಯಜೀವಿ ಎಂದು ವ್ಯಂಗ್ಯವಾಡಲಾಗಿತ್ತೋ ಅದೇ ಅಂಕಣದ ಟೆನ್ನಿಸ್ ದೈತ್ಯನಾಗಿ ಬೆಳೆದು ನಿಂತ ಸ್ಟಾನ್ಲಿ. ಬಾಲ್ ಬಾಯ್ ಆಗಲೂ ಸಹ ಯೋಗ್ಯತೆಯಿಲ್ಲ ಎನ್ನಿಸಿಕೊಂಡ ಆಟಗಾರ,ತನ್ನ ಹೆಸರಿನ ಶೂಗಳನ್ನು ಅದೆಷ್ಟೋ ಆಟಗಾರರು ಕಾಲುಗಳಲ್ಲಿ ಧರಿಸುವಷ್ಟು ಕೀರ್ತಿ ಸಂಪಾದಿಸಿದ ಸ್ಟಾನ್ಲಿ ಸ್ಮಿತ್. ಅಪಹಾಸ್ಯವಾಡಿದವರ ಅಪಹಾಸ್ಯವೇ ಅಪಹಾಸ್ಯಕ್ಕೊಳಗಾಗುವಂತೆ ಗೆದ್ದು ನಿಲ್ಲಬೇಕು ಎನ್ನುತ್ತದೆ ಬದುಕು. ಅಣಕವಾಡುವವರೆದುರು ಸೇಡು ತೀರಿಸಿಕೊಳ್ಳುವುದೆಂದರೆ ಹೀಗಿರಬೇಕು ಎನ್ನುವುದಕ್ಕೆ ಸ್ಟಾನ್ಲಿಯ ಯಶೊಗಾಥೆಯೊಂದು ಋಜುವಾತು. ಹಾಗೊಂದು ಯಶಸ್ಸು ಸಾಧಿಸಿ ತೋರಿಸಿದ ಸ್ಟಾನ್ಲಿ ಸ್ಮಿತ್‌ನ ಗೆಲುವಿನ ಕತೆ ಸಾಧನೆಯ ಹಾದಿಯಲ್ಲಿ ಸೋತು ನಿರಾಶರಾಗಿ ಕೈ ಚೆಲ್ಲಿದ ಅದೆಷ್ಟೋ ಜನಕ್ಕೊಂದು ಸ್ಪೂರ್ತಿಯಾಗಿ ಗೋಚರಿಸಬಹುದಲ್ಲವೆ..?
-ಗುರುರಾಜ ಕೊಡ್ಕಣಿ,ಯಲ್ಲಾಪುರ