ಕುಂದಾಪುರ: ಈಗಾಗಲೇ ತಮ್ಮ ಮೂಲಕ ಗುರುತಿಸಿಕೊಂಡ ಚಾಲೆಂಜ್ ಕ್ರಿಕೆಟ್ ಸಂಸ್ಥೆಯು ಕ್ರೀಡೆಯ ಜೊತೆಗೆ ಅಶಕ್ತರಿಗೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಹಾಯಧನ ನೀಡುವ ಮೂಲಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಕುಂದಾಪುರ ಪುರಸಭಾ ಅಧ್ಯಕ್ಷರಾದ ವೀಣಾ ಭಾಸ್ಕರ್ ಮೆಂಡನ್ ಹೇಳಿದರು.
ವಡೇರಹೋಬಳಿ ಸರಕಾರಿ ಶಾಲೆಯಲ್ಲಿ ಹಮ್ಮಿಕೊಂಡ ಕುಂದಾಪುರದ ಚಾಲೆಂಜ್ ಕ್ರಿಕೆಟ್ ಸಂಸ್ಥೆ ನಡೆಸಿದ ರಾಷ್ಟ್ರಮಟ್ಟದ ಹೊನಲು ಬೆಳಕಿನ ಕ್ರೀಡಾಕೂಟದಲ್ಲಿ ಉಳಿಕೆಯಾದ ಹಣವನ್ನು 30 ಜನ ಅನಾರೋಗ್ಯ ಪೀಡಿತರಿಗೆ ಹಾಗೂ 25 ಜನ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಸಹ ಪ್ರಭಾರಿ ರಾಜೇಶ್ ಕಾವೇರಿ ಮಾತನಾಡಿ, ಅತ್ಯಂತ ವ್ಯವಸ್ಥಿತವಾಗಿ ಕ್ರೀಡಾಕೂಟವನ್ನು ನಡೆಸುವ ಮೂಲಕ ಕ್ರೀಡಾಸಕ್ತರಿಗೂ ಹಾಗೂ ಅದರಿಂದ ಉಳಿಕೆಯಾದ ಹಣವನ್ನು ಸಮಾಜದ ಹಿತ ಕಾಯುವ ಕಾರ್ಯಗಳಿಗೆ ಬಳಕೆ ಮಾಡಿದ ಸಂಸ್ಥೆಯು ಎಲ್ಲರಿಗೂ ಮಾದರಿ ಆಗಿದೆ ಎಂದರು.
ಇದೆ ಸಂದರ್ಭದಲ್ಲಿ ಹಿರಿಯ ಸಮಾಜಸೇವಕ ನರಸಿಂಹ ಪೂಜಾರಿ, ನಾಗ ಮೆಂಡನ್, ಸಂಜೀವ ಪೂಜಾರಿ, ಯುವ ಆಟಗಾರರಿಗೆ ಸದಾ ಪ್ರೋತ್ಸಾಹ ನೀಡುವ ಕ್ರಿಕೆಟ್ ಆಟಗಾರ ಮನೋಜ್ ನಾಯರ್ ಹಾಗೂ ಸಂಸ್ಥೆ ಸದಸ್ಯರು ಇತ್ತೀಚಿಗೆ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ನಾಗರಾಜ್ ರಾಯಪ್ಪನ ಮಠ ಇವರನ್ನು ಸನ್ಮಾನಿಸಲಾಯಿತು.
ಸಾರ್ವಜನಿಕ ರುದ್ರಭೂಮಿ ಹೊಸಾಳ ಬಾರ್ಕೂರು ಇದರ ಅಭಿವೃದ್ಧಿ ಕಾರ್ಯಕ್ಕೆ ನೆರವು ನೀಡಲಾಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ದಾನಿಗಳಾದ ಪ್ರಿಯ ವಸಂತ ಕರ್ಕೇರ ಗುತ್ತಿಗೆದಾರರಾದ ಸಚಿತ್ ಪೈ, ಕುಂದಾಪುರ ಪುರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಗಿರೀಶ್ ಕೆ, ಕೆದೂರು ಪಂಚಾಯತ್ ಮಾಜಿ ಅಧ್ಯಕ್ಷರಾದ ಸಂಪತ್ ಕುಮಾರ್ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯಿನಿ ರತ್ನ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸುಧಾಕರ ಮೊಗವೀರ ಉದ್ಯಮಿಗಳಾದ ಪ್ರವೀಣ್ ಗಡಿಯಾರ್, ಸಂಸ್ಥೆಯ ಗೌರವಾಧ್ಯಕ್ಷ ಗಂಗಾಧರ ಶೇರಿಗಾರ್, ಅಧ್ಯಕ್ಷ ಚಂದ್ರ ಪೂಜಾರಿ, ಸಂಸ್ಥೆಯ ಪ್ರಮುಖರಾದ ಶಿವಕುಮಾರ್ ಮೆಂಡನ್, ಭಾಸ್ಕರ್ ಬಿಲ್ಲವ ಮುಂತಾದವರು ಉಪಸ್ಥಿತರಿದ್ದರು. ಹಿರಿಯ ಕ್ರಿಕೆಟಿಗ ಕೆ.ಪಿ ಸತೀಶ್ ಕಾರ್ಯಕ್ರಮ ನಿರ್ವಹಿಸಿ, ಸಂಸ್ಥೆ ಕಾರ್ಯದರ್ಶಿ ನವೀನ್ ಮೆಂಡನ್ ವಂದಿಸಿದರು.