
ಇಂಗ್ಲೆಂಡ್ ಲಯನ್ಸ್ ವಿರುದ್ಧ ದ್ವಿಶತಕ ಬಾರಿಸಿದ ಕರ್ನಾಟಕ ಲಯನ್ ಕರುಣ್ ನಾಯರ್..!

ಮುಳುಗಿದ ಸೂರ್ಯ ಮತ್ತೆ ಹುಟ್ಟಲೇಬೇಕು.. ಕಾಲಚಕ್ರ ತಿರುಗಲೇಬೇಕು.. ಇದು ಪ್ರಕೃತಿ ನಿಯಮ.
ಆ ಪ್ರಕೃತಿ ನಿಯಮವೇ ನಮ್ಮ ಕರ್ನಾಟಕದ ಹುಡುಗ ಕರುಣ್ ನಾಯರ್’ಗೆ ನ್ಯಾಯ ಕೊಡಲು ನಿಂತು ಬಿಟ್ಟಿದೆ. 7 ವರ್ಷಗಳ ನಂತರ ಭಾರತ ಟೆಸ್ಟ್ ತಂಡಕ್ಕೆ ಮರಳಿರುವ ಕರುಣ್, ಭಾರತ ಎ ಪರ ಇಂಗ್ಲೆಂಡ್’ನಲ್ಲಿ ಅಮೋಘ ದ್ವಿಶತಕವೊಂದನ್ನು ಬಾರಿಸಿದ್ದಾನೆ.

ಅಲ್ಲಿಗೆ ಒಂದಂತೂ ಸ್ಪಷ್ಟ.. ಮುಂದಿನ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಸ್ಥಾನದಲ್ಲಿ ಆಡುವವನು ಇವನೇ..
ಕಾಲಚಕ್ರ ಹೇಗೆ ತಿರುಗಿತು ನೋಡಿ..
ಕರುಣ್ ನಾಯರ್ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದೂ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ.., ಭಾರತ ತಂಡದಿಂದ ಹೊರ ಬಿದ್ದದ್ದೂ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ.
ಟೆಸ್ಟ್ ಕ್ರಿಕೆಟ್’ನಲ್ಲಿ ತ್ರಿಶತಕ ಬಾರಿಸುವುದೆಂದರೆ ಅದೇನು ಸಾಮಾನ್ಯ ಮಾತಲ್ಲ, ಎಲ್ಲರಿಗೂ ಸಿದ್ಧಿಸುವ ಸಾಧನೆಯೂ ಅಲ್ಲ. ದೇಶ ಕಂಡ ಮೊದಲ ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್, 51 ಟೆಸ್ಟ್ ಶತಕ ಬಾರಿಸಿದ ಸಚಿನ್ ತೆಂಡೂಲ್ಕರ್, ದಿ ಗ್ರೇಟ್ ವಾಲ್ ಆಫ್ ಇಂಡಿಯಾ ಎಂದು ಹೆಮ್ಮೆಯಿಂದ ಕರೆಸಿಕೊಂಡ ನಮ್ಮವರೇ ಆದ ರಾಹುಲ್ ದ್ರಾವಿಡ್, ಆಧುನಿಕ ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ.. ಇವರಾರಿಗೂ ಒಲಿಯದ ಟೆಸ್ಟ್ ತ್ರಿಶತಕವನ್ನು ಒಲಿಸಿಕೊಂಡವನು ಕರುಣ್ ನಾಯರ್. ಇವತ್ತಿಗೆ ಭಾರತದ ಟೆಸ್ಟ್ ತ್ರಿಶತಕವೀರರಲ್ಲಿ ವೀರೇಂದ್ರ ಸೆಹ್ವಾಗ್ ನಂತರದ ಸಾಲಿನಲ್ಲಿ ನಿಲ್ಲುವ ಒಂದೇ ಒಂದು ಹೆಸರು ಕರುಣ್ ನಾಯರ್.

ಟೆಸ್ಟ್ ತ್ರಿಶತಕ ಬಾರಿಸಿದಾಗ ಇಡೀ ಕ್ರಿಕೆಟ್ ಜಗತ್ತೇ ಕರುನಾಡ ಕರುಣ್’ನತ್ತ ಬೆರಗುಗಣ್ಣಿನಿಂದ ನೋಡಿತ್ತು. ಆದರೆ.. ಭಾರತಕ್ಕೆ ಮತ್ತೊಬ್ಬ ‘ಲಿಟ್ಲ್ ಮಾಸ್ಟರ್’ ಸಿಕ್ಕ ಎನ್ನುವಷ್ಟರಲ್ಲಿ ಮರೆಯಾಗಿ ಬಿಟ್ಟ. ನೆನಪಿರಲಿ.. ಆ ತ್ರಿಶತಕದ ನಂತರ ಕರುಣ್ ನಾಯರ್’ಗೆ ಸಿಕ್ಕ ಅವಕಾಶಗಳು ಬೆರಳಿಕೆಯಷ್ಟೂ ಮಾತ್ರ.. ಲೆಕ್ಕ ಹಾಕಿ ಹೇಳುವುದಾದರೆ ನಾಲ್ಕೇ ನಾಲ್ಕು ಇನ್ನಿಂಗ್ಸ್.
ಹಾಗಾದರೆ ಕರುಣ್ ನಾಯರ್’ಗೆ ಅನ್ಯಾಯ ಮಾಡಿದ್ದು ಯಾರು..?
2016ರಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಸಂದರ್ಭದಲ್ಲಿ ಉಪನಾಯಕ ಅಜಿಂಕ್ ರಹಾನೆ ಗಾಯಗೊಳ್ಳುತ್ತಾನೆ. ರಹಾನೆಗೆ ಬದಲಿ ಆಟಗಾರನಾಗಿ ತಂಡ ಸೇರಿಕೊಂಡವನು ಕರುಣ್ ನಾಯರ್. ಮೊದಲೆರಡು ಪಂದ್ಯಗಳಲ್ಲಿ ವೈಫಲ್ಯ. ಮೂರನೇ ಪ್ರಯತ್ನದಲ್ಲೇ ತ್ರಿಶತಕದ ತ್ರಿವಿಕ್ರಮ ಹೆಜ್ಜೆಯನ್ನಿಟ್ಟು ಬಿಟ್ಟಿದ್ದ ಕರುನಾಡ ತ್ರಿವಿಕ್ರಮ.
ದೌರ್ಭಾಗ್ಯ ಏನೆಂದರೆ, ತ್ರಿಶತಕ ಬಾರಿಸಿದ ಬೆನ್ನಲ್ಲೇ ಮುಂದಿನ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಡುವ ಬಳಗದಲ್ಲಿ ಸ್ಥಾನ ಕಳೆದುಕೊಳ್ಳುತ್ತಾನೆ. ಕಾರಣ, ಗಾಯದಿಂದ ಚೇತರಿಸಿಕೊಂಡಿದ್ದ ಉಪನಾಯಕ ಅಜಿಂಕ್ಯ ರಹಾನೆ ವಾಪಸ್ ಬಂದಿದ್ದ. ದುರದೃಷ್ಟ ಹೆಗಲೇರಿದ್ದು ಅದೇ ಕ್ಷಣ.
ಮುಂದೆ ನಾಲ್ಕು ಇನ್ನಿಂಗ್ಸ್’ಗಳಲ್ಲಿ ಅವಕಾಶ ಸಿಕ್ಕಿತು ನಿಜ.. ಆ ನಾಲ್ಕು ಅವಕಾಶಗಳಲ್ಲಿ ಕರುಣ್ ಎಡವಿದ್ದೂ ನಿಜ.. ಆದರೆ ತ್ರಿಶತಕಕ್ಕೆ ಕಟ್ಟಿದ ಬೆಲೆ ಅಷ್ಟೇ. ‘ಆ್ಯಟಿಟ್ಯೂಡ್ ಸರಿಯಿಲ್ಲ’ ಎಂಬ ಒಂದೇ ಒಂದು ಕಾರಣಕ್ಕೆ ಕರುಣ್ ನಾಯರ್’ಗೆ ನ್ಯಾಯವಾಗಿ ಸಿಗಬೇಕಿದ್ದ ಅವಕಾಶಗಳನ್ನು ನಿರಾಕರಿಸಲಾಯಿತು.
ಹೌದು.. ದೂರದಿಂದ ನೋಡುವವರಿಗೆ ಕರುಣ್ ನಾಯರ್ ‘ಆ್ಯಟಿಟ್ಯೂಡ್’ ಇರುವ ಮನುಷ್ಯನಂತೆ ಕಾಣುತ್ತಾನೆ. ಆದರೆ ನಾನು ನೋಡಿದ ಹಾಗೆ ಕರುಣ್ ಅಂಥಾ ವ್ಯಕ್ತಿ ಅಲ್ಲವೇ ಅಲ್ಲ. ಅವನು ಸ್ವಲ್ಪ ಅಂತರ್ಮುಖಿ. ತನ್ನ ಸ್ನೇಹಿತರ ಬಳಗ ಹೊರತು ಪಡಿಸಿ ಹೊರಗಿನವರೊಂದಿಗೆ ಸುಲಭವಾಗಿ ಬೆರೆಯುವವನಲ್ಲ. ಅದು ಕೆಲವರ ಕಣ್ಣಿಗೆ ‘ಆ್ಯಟಿಟ್ಯೂಡ್’ನಂತೆ ಕಾಣುತ್ತದೆ. ಅದೇ ಅವನಿಗೆ ಮುಳುವಾಗಿದ್ದು.
‘ಆ್ಯಟಿಟ್ಯೂಡ್’ ಎಂಬುದೇ ಮಾನದಂಡವಾಗಿದ್ದರೆ ಈಗಿನ ಭಾರತ ತಂಡದಲ್ಲಿರುವವರ ಪೈಕಿ ಅರ್ಧಕರ್ಧ ಮಂದಿಯನ್ನು ಮನೆಗೆ ಕಳುಹಿಸಬೇಕಾಗುತ್ತದೆ. ಆದರೆ ಅವರಲ್ಲಿ ಯಾರಿಗೂ ಇಲ್ಲದ ಸಮಸ್ಯೆ ಕರುಣ್ ನಾಯರ್’ನಲ್ಲಿ ಕಂಡಿತ್ತು ಎಂದರೆ.. ಅವನನ್ನು ಉದ್ದೇಶಪೂರ್ವಕವಾಗಿಯೇ ಹೊರ ಹಾಕಲಾಗಿತ್ತು.
ಕರುಣ್ ನಾಯರ್ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡಾಗ ಭಾರತ ತಂಡದ ನಾಯಕರಾಗಿದ್ದ ವಿರಾಟ್ ಕೊಹ್ಲಿ ಈಗ ಟೆಸ್ಟ್ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿದ್ದಾರೆ. ವಿರಾಟ್ ನಿವೃತ್ತಿಯ ಬೆನ್ನಲ್ಲೇ ಕರುಣ್ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಈಗ ಅದೇ ವಿರಾಟ್ ಸ್ಥಾನಕ್ಕೆ ನಾನೇ ಉತ್ತರಾಧಿಕಾರಿ ಎಂಬುದನ್ನು ಇಂಗ್ಲೆಂಡ್ ಲಯನ್ಸ್ ವಿರುದ್ಧದ ದ್ವಿಶತಕದ ಮೂಲಕ ಸಾರಿ ಹೇಳಿದ್ದಾರೆ.
ಇದೇ ಕಾಲಚಕ್ರ..
-ಸುದರ್ಶನ್




