ಶಿವಮೊಗ್ಗ-ತೀರ್ಥಹಳ್ಳಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್,ದೇಶಕ್ಕಾಗಿ ನಾವು ತೀರ್ಥಹಳ್ಳಿ,ಸ್ನೇಹಜೀವಿ ಗೆಳೆಯರ ಬಳಗ ಇವರ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ “ಡಿ.ಕೆ.ಶಿವಕುಮಾರ್ ಕಪ್-ಸೀಸನ್ 2” ಪ್ರಶಸ್ತಿಯನ್ನು ಇಜಾನ್ ಸ್ಪೋರ್ಟ್ಸ್ ಉಡುಪಿ ಗೆದ್ದುಕೊಂಡಿತು.
ಇಜಾನ್ ಸ್ಪೋರ್ಟ್ಸ್ ಸಂಘಟಿತ ಹೋರಾಟ-ಡಿ.ಕೆ.ಶಿ ಕಪ್ ಚಾಂಪಿಯನ್ಸ್ ಕಿರೀಟ

ಉದ್ಯಾನ ನಗರಿಯ ಯುವ ಉದಯೋನ್ಮುಖ ಆಟಗಾರ ಪ್ರಶಾಂತ್ ಪಿಳ್ಳೆ ಹೊರತು ಪಡಿಸಿ,ಸಂಪತ್ ಬೈಲಾಕೆರೆ ನಾಯಕತ್ವದಲ್ಲಿ,ಸಾಗರ್ ವಿಶ್ವ ಮಾರ್ಗದರ್ಶನದಲ್ಲಿ,10 ಮಂದಿ ಉಡುಪಿಯ ಯುವ ಆಟಗಾರರನ್ನೇ ನೆಚ್ಚಿಕೊಂಡ ಇಜಾನ್ ಸ್ಪೋರ್ಟ್ಸ್ ಲೀಗ್ ಹಂತದಿಂದಲೇ ಈ ಹಿಂದಿನ ಟೂರ್ನಮೆಂಟ್ ಗಳ ಸೋಲಿನ ಲೆಕ್ಕ ಒಂದೊಂದೇ ಚುಕ್ತಾ ಮಾಡುತ್ತಾ ಬಂದಿತ್ತು.
ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ಪ್ರಕೃತಿ ನ್ಯಾಶ್ ವಿರುದ್ಧ ಅಕ್ಷಯ್ ಶೆಟ್ಟಿ ಮತ್ತು ಡೆರಿನ್,ಕ್ವಾರ್ಟರ್ ಫೈನಲ್ ನಲ್ಲಿ ಜನಪ್ರಿಯ ಮೈಟಿ ದಾವಣಗೆರೆ ವಿರುದ್ಧ ಪವನ್ ಪಿಳ್ಳೆ,ಸೆಮಿಫೈನಲ್ ನಲ್ಲಿ ರಿಯಲ್ ಫೈಟರ್ಸ್ ವಿರುದ್ಧ ಪವನ್,ಪಿಳ್ಳೆ ಮತ್ತು ರಾಹಿಲ್ ಅತ್ಯುತ್ತಮ ಪ್ರದರ್ಶನ ನೀಡಿ,ಕೂದಲೆಳೆ ಅಂತರದಲ್ಲಿ ಸಾಲು ಸಾಲು ಘಟಾನುಘಟಿ ತಂಡಗಳನ್ನು ಮಣಿಸಿ ಫೈನಲ್ ನೆಗೆದೇರಿತ್ತು.
ಫೈನಲ್ ಡೆರಿನ್ ಸ್ಪೋಟಕ ಆಟ

ಬಲಿಷ್ಟ ಫ್ರೆಂಡ್ಸ್ ಬೆಂಗಳೂರು ತಂಡದೆದುರಿನ ಫೈನಲ್ ಪಂದ್ಯದಲ್ಲಿ ಇಜಾನ್ ಸ್ಪೋರ್ಟ್ಸ್ ಉಡುಪಿಯ ಡ್ಯಾಶಿಂಗ್ ಓಪನರ್ ಡೆರಿನ್ ಫ್ರೆಂಡ್ಸ್ ಬೆಂಗಳೂರಿನ ಪ್ರಸಾದ್ ನೇರಳಕಟ್ಟೆ ಎಸೆದ ಅಂತಿಮ ಓವರ್ ನಲ್ಲಿ ಎರಡು ಬೌಂಡರಿ ಹಾಗೂ ಎರಡು ಭರ್ಜರಿ ಸಿಕ್ಸರ್ ಸಹಿತ 21 ರನ್ ಸಿಡಿಸಿ ಭಾಗಶಃ ಫ್ರೆಂಡ್ಸ್ ಬೆಂಗಳೂರು ತಂಡವನ್ನು ಒತ್ತಡಕ್ಕೆ ಸಿಲುಕಿಸಿತ್ತು.ಇಜಾನ್ ಸ್ಪೋರ್ಟ್ಸ್ ನ ವೇಗಿ ರಾಹಿಲ್ ಫ್ರೆಂಡ್ಸ್ ಬೆಂಗಳೂರು ತಂಡದ ಪ್ರಮುಖ ಬ್ಯಾಟರ್ ಗಳ ವಿಕೆಟ್ ಉರುಳಿಸಿ ಇಜಾನ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಚಾಂಪಿಯನ್ಸ್ ಇಜಾನ್ ಸ್ಪೋರ್ಟ್ಸ್ ಉಡುಪಿ ಪ್ರಥಮ ಬಹುಮಾನ 3 ಲಕ್ಷ ರೂ ನಗದು ಹಾಗೂ ದ್ವಿತೀಯ ಸ್ಥಾನಿ ಫ್ರೆಂಡ್ಸ್ ಬೆಂಗಳೂರು 1.5 ಲಕ್ಷ ರೂ ನಗದು ಸಹಿತ ಆಕರ್ಷಕ ಪಾರಿತೋಷಕಗಳನ್ನು ಪಡೆದರು.

ಪಂದ್ಯಾಟದ ಬೆಸ್ಟ್ ಬೌಲರ್ ರಾಹಿಲ್ ಇಜಾನ್ ,ಬೆಸ್ಟ್ ಬ್ಯಾಟರ್ ಸಾಗರ್ ಭಂಡಾರಿ ಫ್ರೆಂಡ್ಸ್,ಬೆಸ್ಟ್ ಫೀಲ್ಡರ್ ಅಕ್ಷಯ್ ಶೆಟ್ಟಿ ಇಜಾನ್,ಬೆಸ್ಟ್ ಕೀಪರ್ ಶಂಕರ್ ಜೈ ಕರ್ನಾಟಕ ಹಾಗೂ ಫೈನಲ್ ಪಂದ್ಯಶ್ರೇಷ್ಟ-ಸರಣಿ ಶ್ರೇಷ್ಠ ಪ್ರಶಸ್ತಿ ಡೆರಿನ್ ಪಡೆದುಕೊಂಡರು.

*ಇಜಾನ್ ಸ್ಪೋರ್ಟ್ಸ್ ಗೆಲುವಿಗೆ ಹರ್ಷ ವ್ಯಕ್ತಪಡಿಸಿ,ಸ್ಪೋರ್ಟ್ಸ್ ಕನ್ನಡದೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ* *ಮಾತನಾಡಿದ ತಂಡದ ಮಾಲೀಕರಾದ ಮೊಹಮ್ಮದ್ ಸರ್ಫರಾಜ್ ರೆಹಮತ್*

*“ನಮ್ಮ ತಂಡದ ಯುವ ಆಟಗಾರರ ಸಂಯೋಜನೆ,ಸಂಘಟಿತ ಹೋರಾಟದ ಫಲವಾಗಿ ಜಯ ಲಭಿಸಿದ್ದು,ಮುಂದಿನ ದಿನಗಳಲ್ಲಿ ಯುವ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಲಿದ್ದು,ಭವಿಷ್ಯದಲ್ಲಿ ಯುವಕರಿಗೆ ಉದ್ಯೋಗ ಮತ್ತು ಇಜಾನ್ ಸ್ಪೋರ್ಟ್ಸ್ ಸಂಸ್ಥೆಯ ಮೂಲಕ ಬಹಳಷ್ಟು ಸಮಾಜ ಸೇವಾ ಕಾರ್ಯಗಳನ್ನು ಹಮ್ಮಿಕೊಂಡಿದ್ದೇವೆ” ಎಂದರು.*