ಇತ್ತೀಚಿನ ವರ್ಷಗಳಲ್ಲೇ ಬಿಸಿಸಿಐ ತೆಗೆದುಕೊಂಡ ಒಂದು ಒಳ್ಳೆಯ ನಿರ್ಧಾರವಿದು. ಅದಕ್ಕಾಗಿ ಬಿಸಿಸಿಐಗೊಂದು ಬಿಗ್ ಸಲ್ಯೂಟ್.
ಆ ಇಬ್ಬರು ಆಟಗಾರರನ್ನು ಭಾರತ ತಂಡದಿಂದ ಹೊರ ಹಾಕಲಾಗಿತ್ತು. ಟೀಮ್ ಇಂಡಿಯಾದಿಂದ ಹೊರ ಬಿದ್ದವರಿಗೆ ಕೋಚ್ ದ್ರಾವಿಡ್ ಹೇಳಿದ್ದು ಒಂದೇ ಮಾತು. ‘’ಹೋಗಿ, ರಣಜಿ ಟ್ರೋಫಿ ಆಡಿ ಬನ್ನಿ’’ ಎಂದು. ಫಿಟ್ ಇದ್ದರೆ ಡೊಮೆಸ್ಟಿಕ್ ಕ್ರಿಕೆಟ್ ಆಡಲೇಬೇಕೆಂದು ಬಿಸಿಸಿಐನಿಂದಲೂ ಫರ್ಮಾನು ಹೊರ ಬಿತ್ತು.
ಆದರೆ ಆ ಇಬ್ಬರು ಮಾಡಿದ್ದೇನು ಗೊತ್ತೇ..? ಶುದ್ಧ ಕಳ್ಳಾಟ. ದ್ರಾವಿಡ್’ರಂಥಾ ದಿಗ್ಗಜನ ಮಾತಿಗೂ ಬೆಲೆ ಇಲ್ಲ, ‘ತಾಯಿ’ ಸ್ಥಾನದಲ್ಲಿರುವ ಬಿಸಿಸಿಐ ಆದೇಶಕ್ಕೂ ಕ್ಯಾರೇ ಇಲ್ಲ. ರಣಜಿ ಟ್ರೋಫಿ ಆಡು ಮಾರಾಯ ಅಂದ್ರೆ, ಆ ಇಶಾನ್ ಕಿಶನ್.., ಅಲ್ಲೆಲ್ಲೋ ಬರೋಡದ ರಿಲಯನ್ಸ್ ಸ್ಟೇಡಿಯಂನಲ್ಲಿ ‘ಪುಡಾಂಗ್’ ಪಾಂಡ್ಯ ಜೊತೆ ಐಪಿಎಲ್’ಗೆ ರೆಡಿಯಾಗ್ತಾ ಇದ್ದ.

ಇತ್ತ ಕಡೆ ಶ್ರೇಯಸ್ ಅಯ್ಯರ್.. ಈತ ಕಂಪ್ಲೀಟ್ ಫಿಟ್ ಇದ್ದಾನೆ ಎಂದು ಸ್ವತಃ national cricket academyಯ ಫಿಸಿಯೋ ಸರ್ಟಿಫಿಕೇಟ್ ಕೊಟ್ಟರೂ, ‘ನಾನು ಫಿಟ್ ಇಲ್ಲ’ ಎಂದು ಸುಳ್ಳು ಹೇಳಿ ರಣಜಿ ಟ್ರೋಫಿಗೆ ಬೆನ್ನು ತೋರಿಸಿ ಬಿಟ್ಟ.
ಕೆರಳಿತು ಬಿಸಿಸಿಐ. ಜಿದ್ದಿಗೆ ಬಿದ್ದರೆ ಜಗಜಟ್ಟಿಗಳನ್ನೇ ಹೊಸಕಿ ಹಾಕಿ ಬಿಡಬಲ್ಲ ತಾಕತ್ತಿನ ಕ್ರಿಕೆಟ್ ಸಂಸ್ಥೆ. ಇನ್ನು ಈ ಇಬ್ಬರು ಜುಟ್ಟುಗಳು ಅದ್ಯಾವ ಲೆಕ್ಕ..? ಹಿಂದೆ ಮುಂದೆ ನೋಡದೆ ಇಬ್ಬರ central contract (ಬಿಸಿಸಿಐ ಜೊತೆಗಿನ ವಾರ್ಷಿಕ ಒಪ್ಪಂದ) ಅನ್ನೇ terminate ಮಾಡಿ ಬಿಟ್ಟಿತು, ಕಪಾಳಮೋಕ್ಷ ಮಾಡಿದ ಹಾಗೆ.
‘ಕೆಟ್ಟ ಮೇಲೆ ಬುದ್ಧಿ ಬಂತು’ ಎನ್ನುವಂತೆ ಬಿಸಿಸಿಐನಿಂದ ತಪರಾಕಿ ಬಿದ್ದ ಮೇಲೆ ಶ್ರೇಯಸ್ ಅಯ್ಯರ್ ದಾರಿಗೆ ಬಂದಿದ್ದಾನೆ. ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯಕ್ಕೆ ನಾನು ರೆಡಿ ಎಂದಿದ್ದಾನೆ. ಇದೇ ಕೆಲಸವನ್ನು ಮೊದಲೇ ಮಾಡಿದ್ದರೆ, ಸಿಗುತ್ತಿದ್ದ ಶ್ರೇಯಸ್ಸೇ ಬೇರೆ.
ಶ್ರೇಯಸ್ ಅಯ್ಯರ್ ನನಗೆ ವೈಯಕ್ತಿಕವಾಗಿ ಪರಿಚಯವಿರುವ ಆಟಗಾರ. ಆತನ ತಾಯಿ ರೋಹಿಣಿ ಅಯ್ಯರ್ ನಮ್ಮೂರು ದಕ್ಷಿಣ ಕನ್ನಡದವರು. ಹೀಗೇ ಒಮ್ಮೆ ಶ್ರೇಯಸ್ ಜೊತೆ ದೂರವಾಣಿಯಲ್ಲಿ ಮಾತನಾಡುತ್ತಿದ್ದಾಗ, ನಾನು ಅವನ ತಾಯಿಯ ಊರಿನವನು ಎಂದು ತಿಳಿದು ತುಂಬಾ ಖುಷಿ ಪಟ್ಟಿದ್ದ. ಈಗಲೂ ಸಂಪರ್ಕದಲ್ಲಿದ್ದಾನೆ. ಕ್ರಿಕೆಟ್ ಬಗ್ಗೆ ತುಂಬಾ ಬದ್ಧತೆ ಇದ್ದ ಹುಡುಗ. ಹೀಗೇಕೆ ಮಾಡಿದ ಎಂಬುದೇ ದೊಡ್ಡ ಅಚ್ಚರಿ.
ಹಾಗೆ ನೋಡಿದರೆ ಶ್ರೇಯಸ್ ಅಯ್ಯರ್ ಕ್ರಿಕೆಟ್ ಬದುಕಿಗೆ ಬುನಾದಿ ಹಾಕಿದ್ದೇ ರಣಜಿ ಟ್ರೋಫಿ. 2013-14ನೇ ಸಾಲಿನಲ್ಲಿ ಕರ್ನಾಟಕ ರಣಜಿ ಚಾಂಪಿಯನ್ ಆದ ವರ್ಷ ರಣಜಿ ಟ್ರೋಫಿಗೆ debut ಮಾಡಿದ್ದ. 3-4 ಒಳ್ಳೆಯ ರಣಜಿ ಸೀಸನ್’ಗಳ ನಂತರ ಭಾರತ ತಂಡದಲ್ಲಿ ಸ್ಥಾನವೂ ಸಿಕ್ಕಿತು. ಟೀಮ್ ಇಂಡಿಯಾ ಪರ ಭರವಸೆ ಮೂಡಿಸಿದ್ದ ಕ್ರಿಕೆಟರ್.. ಈಗ ಬೇಡದ ವಿಚಾರಕ್ಕೆ ಸುದ್ದಿಯಲ್ಲಿದ್ದಾನೆ.
ಇನ್ನು ಆ ಇಶಾನ್ ಕಿಶನ್. ಏಕದಿನ ಕ್ರಿಕೆಟ್’ನಲ್ಲಿ ದ್ವಿಶತಕ ಬಾರಿಸಿ ಸದ್ದು ಮಾಡಿದ್ದವ. ಪ್ರತಿಭಾವಂತ. ಆದರೆ ತಲೆ ನಿಲ್ಲುವುದಿಲ್ಲ. ಸಹವಾಸವೂ ಸರಿಯಿಲ್ಲ (ಸರಿ ಇದ್ದಿದ್ದರೆ ಭಾರತ ತಂಡದಿಂದ ಹೊರ ಬಿದ್ದಾಗ, ಆ ಪಾಂಡ್ಯನ ಬಳಿ ಏಕೆ ಹೋಗುತ್ತಿದ್ದ..?). ‘’ಹೋಗು ರಣಜಿ ಟ್ರೋಫಿಯಲ್ಲಿ ಆಡು’’ ಎಂದರೆ, ಅದಕ್ಕೂ ನನಗೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸಿದ್ದಾನೆ. ಕೆರಳಿದ ಬಿಸಿಸಿಐ ಬಡಿದು ಬಿಸಾಕಿ ಬಿಟ್ಟಿದೆ.
ಅಷ್ಟಕ್ಕೂ ಅಂತರಾಷ್ಟ್ರೀಯ ಕ್ರಿಕೆಟ್ ಆಡಿದವರು ರಣಜಿ ಟ್ರೋಫಿಯಲ್ಲಿ ಆಡುವುದು ಅಷ್ಟೊಂದು ಅವಮಾನವೇ..? ರಣಜಿ ಕ್ರಿಕೆಟ್ ಆಡಿ ಎಂದರೆ ಇವರು ಮುಖ ತಿರುಗಿಸುವುದೇಕೆ..? ರಾಹುಲ್ ದ್ರಾವಿಡ್ ಭಾರತ ತಂಡದ ನಾಯಕರಾಗಿದ್ದಾಗಲೂ ಸಮಯ ಸಿಕ್ಕಾಗ ಬಂದು ಕರ್ನಾಟಕ ಪರ ರಣಜಿ ಟ್ರೋಫಿಯಲ್ಲಿ ಪ್ಯಾಡ್ ಕಟ್ಟಿದ್ದಾರೆ. ಅನಿಲ್ ಕುಂಬ್ಳೆಯವರೂ ರಣಜಿ ಕ್ರಿಕೆಟ್ ಆಡುವ ಅವಕಾಶ ಸಿಕ್ಕಾಗ ತಪ್ಪಿಸಿಕೊಂಡವರಲ್ಲ. ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ವೀರೇಂದ್ರ ಸೆಹ್ವಾಗ್.. ಹೀಗೆ ದಿಗ್ಗಜರೆನಿಸಿಕೊಂಡವರೆಲ್ಲಾ ರಣಜಿ ಟ್ರೋಫಿಯನ್ನು ಎಂದಿಗೂ ಮರೆತವರಲ್ಲ. ಈಗಿನ ಹುಡುಗರಿಗೆ ರಣಜಿ ಕ್ರಿಕೆಟ್ ಎಂದರೆ ಅದೇನೋ ತಾತ್ಸಾರ.
ಭಾರತೀಯ ಕ್ರಿಕೆಟ್’ನಲ್ಲಿ ರಣಜಿ ಟ್ರೋಫಿ ಅಂದ್ರೆ ಅದು ‘ತಾಯಿ ಬೇರು’. ಅದೇ ಬೇಡ ಎಂದರೆ..? ಇದನ್ನೆಲ್ಲಾ ನೋಡಿಯೇ, ‘’ಇನ್ನು ಮುಂದೆ ಅಂತರಾಷ್ಟ್ರೀಯ ಪಂದ್ಯಗಳಿಲ್ಲದಿದ್ದಾಗ, ಟೀಮ್ ಇಂಡಿಯಾ ಆಟಗಾರರು ದೇಶೀಯ ಕ್ರಿಕೆಟ್’ನಲ್ಲಿ ಆಡಲೇಬೇಕು’’ ಎಂದು ಬಿಸಿಸಿಐ ಕಟ್ಟಪ್ಪಣೆ ಮಾಡಿದ್ದು