ಅದೇನೋ RCB ಅನ್ ಬಾಕ್ಸ್ ಅಂತೆ. 19ನೇ ತಾರೀಕು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ. ಇವ್ರಿಗೆ ದುಡ್ಡು ಮಾಡಲು ಒಂದು ನೆಪ ಬೇಕು ಅಷ್ಟೇ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗೆ ಹುಚ್ಚು ಅಭಿಮಾನದ ಅಭಿಮಾನಿಗಳೇ ಬಂಡವಾಳ.
16 ವರ್ಷಗಳಿಂದ ಕಪ್ ಗೆಲ್ಲದೇ ಇದ್ದರೂ RCB ಕ್ರೇಜ್ ವರ್ಷದಿಂದ ವರ್ಷಕ್ಕೆ ಜಾಸ್ತಿಯಾಗ್ತಿದೆ ಅಂದ್ರೆ ಅದು ನಮ್ಮ ಕನ್ನಡಿಗರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಗೆ ಹಾಕಿರೋ ಭಿಕ್ಷೆ. ಗೆದ್ದರೂ ಸೋತರೂ ಬದಲಾಗದೆ ಇರುವುದು ಒಂದೇ. ಅದು RCB ಅಭಿಮಾನಿಗಳ ನಿಯತ್ತು.
ಮೊನ್ನೆ ಮೊನ್ನೆಯಷ್ಟೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ (WPL) ಟೂರ್ನಿಯಲ್ಲಿ RCB ಅಭಿಮಾನಿಗಳು RCB ಮಹಿಳಾ ತಂಡಕ್ಕೆ ಕೊಟ್ಟ ಪ್ರೀತಿಯನ್ನು ಕಂಡು ಆಟಗಾರಗಾರ್ತಿಯೇ ದಂಗಾಗಿ ಹೋಗಿದ್ದರು. RCB ತಂಡವನ್ನು ಇಷ್ಟೊಂದು ಪ್ರೀತಿಸುವ ಆ ಅಭಿಮಾನಿಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಏನು ಕೊಟ್ಟಿದೆ..? ಕಪ್..? ಅದಂತೂ ಇವರ ಹಣೆಬರಹದಲ್ಲಿ ಬರೆದಂತೆ ಕಾಣುತ್ತಿಲ್ಲ. ಹೋಗಲಿ, ತನ್ನ ತಂಡವನ್ನು ಹೃದಯದಲ್ಲಿಟ್ಟು ಪ್ರೀತಿಸುವ ಅಭಿಮಾನಿಗಳಿಗೆ ಇಂಥಾ unbox ಈವೆಂಟ್’ಗಳನ್ನಾದರೂ ಉಚಿತವಾಗಿ ತೋರಿಸಬಹುದಲ್ಲವೇ..? ಅಲ್ಲೂ ದುಡ್ಡು ಮಾಡುವ ಹುನ್ನಾರ.. ತಂಡದ ಹೆಸರಿನ ಮುಂದೆ ‘ಬೆಂಗಳೂರು’ ಇರುವ ಕಾರಣಕ್ಕೆ ಕನ್ನಡಿಗರು RCB ತಂಡವನ್ನು ಪ್ರೀತಿಸುತ್ತಾರೆಯೇ ಹೊರತು, ಇವರು ಆಡುವ ಚಂದಕ್ಕಲ್ಲ.
ಇನ್ನು RCB ತಂಡದಲ್ಲಿ ನಮ್ಮ ಕರ್ನಾಟಕದ ಹುಡುಗರಿಗೆ ಎಷ್ಟು ಅವಕಾಶ ಕೊಟ್ಟಿದ್ದಾರೆ ಎಂಬ ವಿಚಾರಕ್ಕೆ ಬರೋಣ. ವೈಶಾಖ್ ವಿಜಯ್ ಕುಮಾರ್ ಮತ್ತು ಮನೋಜ್ ಭಾಂಡಗೆ ಸದ್ಯ RCB ತಂಡದಲ್ಲಿರುವ ಕನ್ನಡಿಗ ಆಟಗಾರರು. ಇವರಲ್ಲಿ ವೈಶಾಖ್’ಗೆ ಒಂದಷ್ಟು ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕಿದೆ. ಭಾಂಡಗೆಗೆ ಬೆಂಚ್ ಕಾಯಿಸುವುದಷ್ಟೇ ಕಾಯಕ.
ವಿಜಯ್ ಮಲ್ಯ ಮಾಲೀಕರಾಗಿದ್ದಾಗ ಕರ್ನಾಟಕದ ಹತ್ತತ್ತು ಆಟಗಾರರು RCB ತಂಡದಲ್ಲಿದ್ದರು. ಈಗ ತಂಡದ ಮಾಲೀಕತ್ವ, ಕರ್ನಾಟಕದ ಬಗ್ಗೆ ಕಿಂಚಿತ್ತೂ ಅಭಿಮಾನ ಇರದ ಅದ್ಯಾರೋ ಉತ್ತರ ಭಾರತೀಯರ ಕೈಯಲ್ಲಿದೆ.
ಇನ್ನು RCB ತಂಡದ scout (talent hunter ಅಥವಾ ಪ್ರತಿಭಾನ್ವೇಷಕ). ಅಲ್ಲಿ ಕೂತಿರುವವನು ತಮಿಳುನಾಡಿನ ಮಾಜಿ ಕ್ರಿಕೆಟರ್ ಮಲೋಲನ್ ರಂಗರಾಜನ್. ಈತ ತಮಿಳುನಾಡು ಪರ ಆಡಿರುವ ಕ್ರಿಕೆಟ್ ಪಂದ್ಯಗಳ ಸಂಖ್ಯೆ ಮೂರು ಮತ್ತೊಂದು. ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ನಮ್ಮ ಕರ್ನಾಟಕದ ಲೆಜೆಂಡರಿ ಕ್ಯಾಪ್ಟನ್ ಆರ್.ವಿನಯ್ ಕುಮಾರ್ ಅವರನ್ನು scout ಆಗಿ ನೇಮಕ ಮಾಡಿಕೊಂಡು ಮೂರ್ನಾಲ್ಕು ವರ್ಷಗಳೇ ಕಳೆದಿದೆ. ಆದರೆ ನಮ್ಮ ನೆಲದ ತಂಡಕ್ಕೆ ನಮ್ಮವರು ಬೇಡ. ಆ ತಮಿಳುನಾಡಿನವನನ್ನು ತಲೆಯ ಮೇಲೆ ಹೊತ್ತು ಮೆರೆಸಿದರೆ, ಆತ ನಮ್ಮ ಹುಡುಗರನ್ನು ಹೇಗೆ ನೋಡಿಯಾನು..? ಈತ ಕರ್ನಾಟಕ ತಂಡದ ಪಂದ್ಯಗಳನ್ನು ವೀಕ್ಷಿಸಲು ಬಂದದ್ದನ್ನು ನಾನಂತೂ ಒಮ್ಮೆಯೂ ನೋಡಿಲ್ಲ.
RCB ಅಭಿಮಾನಿಗಳಿಗೆ ಕೊನೆಗೊಂದು ಮಾತು. ಈ ಫ್ರಾಂಚೈಸಿಗೆ ಬೇಕಿರುವುದು ದುಡ್ಡು ಅಷ್ಟೇ. ದುಡ್ಡು ಮಾಡಲು ನಿಮ್ಮ ಅಭಿಮಾನವೇ ಅವರಿಗೆ ಅಸ್ತ್ರ.
#RCB #RoyalChallengersBangalore