
ಅವನು ಲಕ್ಷ್ಮಣನಲ್ಲ.. ಭಾರತೀಯ ಕ್ರಿಕೆಟ್’ನ ಅಭಿನವ ಶ್ರೀರಾಮ..!
ಕ್ರಿಕೆಟಿಗರ ಬಗ್ಗೆ ಕ್ರಿಕೆಟಿಗರಿಂದಲೇ ಹತ್ತಾರು ಕಥೆಗಳನ್ನು ಕೇಳಿದ್ದೇನೆ. ಅದರಲ್ಲಿ ಕೆಲವರದ್ದು ವರ್ಣರಂಜಿತ.. ಇನ್ನು ಕೆಲವರದ್ದು ರೋಚಕ.. ಹಲವರದ್ದು ‘ರಸ’ವತ್ತಾದ ಕಥೆಗಳು. ಅಷ್ಟೂ ಕಥೆಗಳನ್ನು ಕೇಳಿದ ನಂತರ ನಡತೆಯಲ್ಲಿ, ವ್ಯಕ್ತಿತ್ವದಲ್ಲಿ ಶ್ರೀರಾಮಚಂದ್ರನಂತೆ ಕಂಡದ್ದು ಈ ಲಕ್ಷ್ಮಣ..

ವಿವಿಎಸ್ ಲಕ್ಷ್ಮಣ್.. ವೆಂಗಿಪರಪ್ಪು ವೆಂಕಟಸಾಯಿ ಲಕ್ಷ್ಮಣ್.. ತೆಲಂಗಾಣದ ಈ ಕ್ರಿಕೆಟಿಗನನ್ನು ಕ್ರಿಕೆಟ್ ಜಗತ್ತು ವೆರಿ ವೆರಿ ಸ್ಪೆಷಲ್ ಲಕ್ಷ್ಮಣ್ ಎಂದೇ ಕರೆಯುತ್ತದೆ. ಹೌದು.. ಆಟದಂತೆ ಅವರ ವ್ಯಕ್ತಿತ್ವವೂ ವೆರಿ ವೆರಿ ಸ್ಪೆಷಲ್.

90ರ ದಶಕದ ಹುಡುಗರಂತೆ ನಾನೂ ಕೂಡ ವಿವಿಎಸ್ ಲಕ್ಷ್ಮಣ್ ಅವರ ಆಟವನ್ನು ನೋಡುತ್ತಾ ಬಂದವನು. ಟೆಸ್ಟ್ ಕ್ರಿಕೆಟ್’ನ ಅಸಲಿ ಶಕ್ತಿ ಅರ್ಥವಾಗುವ ಮುನ್ನ ಲಕ್ಷ್ಮಣ್ ಆಟ ಅಷ್ಟಾಗಿ ಹಿಡಿಸುತ್ತಿರಲಿಲ್ಲ. ಆದರೆ ಒಮ್ಮೆ ಟೆಸ್ಟ್ ಕ್ರಿಕೆಟ್ ಇಷ್ಟವಾಗುತ್ತಿದ್ದಂತೆ ಲಕ್ಷ್ಮಣ್ ಅವರ ಆಟವೂ ಇಷ್ಟವಾಗುತ್ತಾ ಹೋಯಿತು.
ಕೋಲ್ಕತಾ ಟೆಸ್ಟ್’ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಾರಿಸಿದ ಆ 280 ರನ್.. ಸಿಡ್ನಿ ಟೆಸ್ಟ್’ನಲ್ಲಿ ಸಿಡಿಸಿದ ಶತಕ.. ಇಂತಹ ವಿಶೇಷ ಆಟಗಳೇ ಲಕ್ಷ್ಮಣ್’ರನ್ನು ವಿಶೇಷ ಸ್ಥಾನದಲ್ಲಿ ನಿಲ್ಲಿಸಿರುವುದು.

ಮೂಲತಃ ಅಗ್ರಕ್ರಮಾಂಕದ ಆಟಗಾರ.. ತಂಡ ಅಗತ್ಯತೆಗೆ, ಪರಿಸ್ಥಿತಿಯ ಅನಿವಾರ್ಯತೆಗೆ ಕಟ್ಟು ಬಿದ್ದು ಕೆಳಕ್ರಮಾಂಕದಲ್ಲಿ ಆಡಿ ದಂತಕಥೆ ಎನಿಸಿಕೊಂಡವರು ಲಕ್ಷ್ಮಣ್. ತಮ್ಮದಲ್ಲದ ಜಾಗದಲ್ಲಿ ಆಡಬೇಕೆಂದಾಗ ಯಾವ ತಕರಾರನ್ನೂ ತೆಗೆಯದೆ ತಂಡಕ್ಕಾಗಿ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದ ‘ನಿಸ್ವಾರ್ಥ’ ಆಟಗಾರ.
ಲಕ್ಷ್ಮಣ್ ಅವರ ಶುಭ್ರ ವ್ಯಕ್ತಿತ್ವದ ಬಗ್ಗೆ ಅವರನ್ನು ತುಂಬಾ ಹತ್ತಿರದಿಂದ ಬಲ್ಲವರಿಂದಲೇ ಕೇಳಿದ್ದೆ. ಅವರು ಎಂಥಾ ಸರಳ ಮನುಷ್ಯ ಎಂಬುದು ಪ್ರತ್ಯಕ್ಷವಾಗಿ ಅರ್ಥವಾಗಿದ್ದು ಕಳೆದ ವರ್ಷ.
ವಿವಿಎಸ್ ಲಕ್ಷ್ಮಣ್ ಅವರಿಗೆ ಸಂಬಂಧಿಸಿದ ವೈಯಕ್ತಿಕ ಕಾರ್ಯನಿಮಿತ್ತ ಕಳೆದ ವರ್ಷ ಬಹುತೇಕ ಇದೇ ಸಮಯದಲ್ಲಿ ಅವರೊಂದಿಗೆ ಎರಡು ದಿನಗಳ ಕಾಲ ಮಾತನಾಡುವ ಅವಕಾಶ ಸಿಕ್ಕಿತ್ತು. ಕರೆ ಮಾಡಿದರು.. ‘’ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಬನ್ನಿ, ಅಲ್ಲೇ ಮಾತನಾಡೋಣ’’ ಎಂದರು.

ದೊಡ್ಡ ಕ್ರಿಕೆಟಿಗ.. ದಂತಕಥೆ..
ಕೊಂಚ ಸಂಕೋಚದಿಂದಲೇ ಹೋಗಿ ಅವರ ಮುಂದೆ ನಿಂತೆ.. ಅಲ್ಲಿಯವರೆಗೆ ಅವರನ್ನು ಮುಖತಃ ಭೇಟಿಯಾಗಿರಲಿಲ್ಲ.
‘ಯಾರು’ ಎಂಬ ಮುಖಭಾವದಲ್ಲಿ ನನ್ನತ್ತ ನೋಡಿದರು. ‘ಸರ್, ಸುದರ್ಶನ್’ ಎಂದೆ..
‘’Oh, sorry.. ಗೊತ್ತಾಗಲಿಲ್ಲ.. ಬನ್ನಿ ಕುಳಿತುಕೊಳ್ಳಿ’’ ಎಂದರು. ಕುಡಿಯಲು ಬಿಸಿ ಬಿಸಿ ಕಾಫಿ ತರಿಸಿದರು. ಸರಿ ಸುಮಾರು ಒಂದೂವರೆ ಗಂಟೆ ಮಾತನಾಡಿದರು. ಈ ಮನುಷ್ಯ ವೆರಿ ವೆರಿ ಸ್ಪೆಷಲ್ ಅಷ್ಟೇ ಅಲ್ಲ.. ಅಷ್ಟೇ ಸರಳ ಅನ್ನಿಸಿತು. ಕ್ರಿಕೆಟ್ ವಲಯದಲ್ಲಿ ಇವರಿಗೆ ಸಿಗುವ ಗೌರವದ ಗುಟ್ಟೇನು ಎಂಬುದು ಪ್ರತ್ಯಕ್ಷವಾಗಿ ಅರಿವಾಯಿತು.
ವೆರಿ ವೆರಿ ಸ್ಪೆಷಲ್ ಕ್ರಿಕೆಟರ್.. ವೆರಿ ವೆರಿ ಸ್ಪೆಷಲ್ ವ್ಯಕ್ತಿ..
Happy birthday Legend VVS Laxman❤️
-ಸುದರ್ಶನ್




