ಮಂಗಳೂರು: 90 ರ ದಶಕದಿಂದ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಟೆನಿಸ್ ಕ್ರಿಕೆಟ್ ವಲಯಗಳಲ್ಲಿ ತಮ್ಮ ಸೊಗಸಾದ ಹಿಂದಿ ಕಾಮೆಂಟರಿ ಹಾಗೂ ವಿಶಿಷ್ಟ ಹಿಂದಿ ಧ್ವನಿ ಪ್ರಯೋಗದಿಂದ ಕ್ರೀಡಾಭಿಮಾನಿಗಳನ್ನು ಆಕರ್ಷಿಸುತ್ತಿದ್ದ ಖ್ಯಾತ ಹಿಂದಿ ವೀಕ್ಷಕ ವಿವರಣೆಗಾರ ಜಾಕೀರ್ ಹುಸೇನ್ (50) ಗುರುವಾರ ನಿಧನರಾದರು. ಮೃತ ಝಾಕಿರ್ ಹುಸೇನ್ ಬಜ್ಪೆ ಪೆರ್ಮುದೆ ಬಳಿಯ ತಮ್ಮ ನಿವಾಸದ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳೂರು ಬಜ್ಪೆಯ ಹಿರಿಯ ಕಾಮೆಂಟೇಟರ್ ಜಾಕೀರ್ ಹುಸೇನ್ ಅವರು ಕ್ರಿಕೆಟ್ ವಿಶ್ಲೇಷಣೆಯನ್ನು ಹಿಂದಿ ಭಾಷೆಯೊಂದಿಗೆ ಕೇಳುಗರ ಹೃದಯವನ್ನು ಮುಟ್ಟುವಂತೆ ವಿವರಿಸುತ್ತಿದ್ದರು. ಝಾಕಿರ್ ಹುಸೇನ್ ಕರ್ನಾಟಕ ಟೆನಿಸ್ ಬಾಲ್ ಕ್ರಿಕೆಟ್ ಕಾಮೆಂಟರಿಗೆ ಗಮನಾರ್ಹ ಕೊಡುಗೆ ನೀಡಿದ್ದರು. ಝಾಕಿರ್ ಹುಸೇನ್ ಬಜ್ಪೆ ಅವರು 30 ವರ್ಷಗಳಿಂದ ಕ್ರಿಕೆಟ್ ಕಾಮೆಂಟೇಟರ್ ಆಗಿದ್ದು, ರಾಜ್ಯ ಮಟ್ಟದ ಕ್ರಿಕೆಟ್ ಸ್ಪರ್ಧೆಗಳ ಬಗ್ಗೆ ವಿಶಿಷ್ಟ ಶೈಲಿಯಲ್ಲಿ ಕಾಮೆಂಟ್ರಿ ಮಾಡಿದ್ದಾರೆ. ಹಿಂದಿ ಭಾಷೆಯಲ್ಲಿ ಕಾಮೆಂಟರಿ ನೀಡಿದ ಜಿಲ್ಲೆಯ ಮೊದಲಿಗ ಎಂಬ ಹೆಗ್ಗಳಿಕೆ ಅವರದು. “ಕ್ಯಾಚ್ ಪಕಡೋ ಮ್ಯಾಚ್ ಪಕಡೋ. ಕ್ಯಾಚಸ್ ವಿನ್ಸ್ ಮ್ಯಾಚಸ್” ಎಂದು ಅವರು ಹೇಳುತ್ತಿದ್ದ ರೀತಿ ಇಂದಿಗೂ ಎಲ್ಲರ ಮನದಲ್ಲಿ ಇದೆ. ಅವರ ವ್ಯಾಖ್ಯಾನ ಬಹುತೇಕ ರೇಡಿಯೋ ಕಾಮೆಂಟರಿಯಂತಿತ್ತು. “ಸಭೀ ದರ್ಶಕೊಂಕೋ ಜಾಕೀರ್ ಹುಸೇನ್ ಕಾ ನಮಷ್ಕಾರ್. ನೆಹರೂ ಮೈದಾನ್ ಪರ್ ಮ್ಯಾಚ್ ಖೇಲಾ ಜಾರಹಾ ಹೈ. ಮಾರುತಿ ಕ್ರಿಕೆಟರ್ಸ್ ನೇ ಇಸ್ ಮ್ಯಾಚ್ ಕೋ ಕಿಯಾ ಹೈ, ನ್ಯಾಷನಲ್ ಲೆವೆಲ್ ಮ್ಯಾಚ್ ಕೋ. ರಾಮಾಂಜನೇಯ ಕ್ರಿಕೆಟರ್ಸ್ ಜೋಕಿ ಫೈನಲ್ ಮೇ ಪಹುಂನ್ಚ್ ಚುಕೆ ಹೈ. ಥಂಡೀ ಹವಾ ಜೋಕಿ ಇಸ್ ಸಮಯ್ ಚಲ್ ರಹೀ ಹೇ. ಆಕಾಶ್ ಬಿಲ್ಕುಲ್ ಸಾಫ್. ಸೂರಜ್ ಕೀ ಕಿರನೇ ಪೂರಿ ಥರಹ್ ಮೈದಾನ್ ಪರ್ ಜೋಕಿ ಛಾಹೀ ಹುಯಿ ಹೇ. ಆಟ್ ಟವರ್ಸ್ ಜೋಕಿ ಕೋಲ್ಕತ್ತಾಕೇ ಈಡನ್ ಗಾರ್ಡನ್ಸ್ ಕೇ ತರಹ ಸಜಾವಾ ಮೈದಾನ್ ಹೈ” ಈ ರೀತಿಯಾಗಿ ಮೈದಾನದ ಮತ್ತು ವಾತಾವರಣದ ಬಗ್ಗೆ ಬಣ್ಣಿಸುತ್ತಿದ್ದರು.
ಭಾರತ, ಶ್ರೀಲಂಕಾ, ವೆಸ್ಟ್ ಇಂಡೀಸ್, ಪಾಕಿಸ್ತಾನದ ಧಿಗ್ಗಜ ಆಟಗಾರರ ಹೆಸರು ಹಾಗೂ ಅವರ ಧಾಖಲೆಗಳನ್ನು ಪ್ರತಿಯೊಂದು ಪಂದ್ಯದಲ್ಲೂ ನೆನಪಿಸಿಕೊಳ್ಳುತ್ತಿದ್ದರು. ಅದೇ ರೀತಿ ಚಕ್ರವರ್ತಿ ಕುಂದಾಪುರ, ಟಾರ್ಪಡೋಸ್ ಕುಂದಾಪುರ, ಜೈ ಕರ್ನಾಟಕ ಬೆಂಗಳೂರು, ಗುರುಬ್ರಹ್ಮ ಬೆಂಗಳೂರು, ಚಮಕ್ ಬೆಂಗಳೂರು, ವೀರ ಕೇಸರಿ ಸುರತ್ಕಲ್, ಸನ್ನಿ ಉಡುಪಿ , ಎ ಕೆ ಸ್ಪೋರ್ಟ್ಸ್ , ಜಾನ್ಸನ್ ಕುಂದಾಪುರ ಹೀಗೆ ಹಲವಾರು ತಂಡಗಳ ಆಟಗಾರರ ಕ್ರಿಕೆಟ್ ಕೌಶಲ್ಯಗಳು, ಸಾಮರ್ಥ್ಯಗಳು ಹಾಗೂ ಸಾಧನೆಗಳ ಕುರಿತು ವಿವರಿಸುತ್ತಿದ್ದರು. ರಾಜ್ಯ ಮಟ್ಟದ ಹಾಗೂ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಕಾಮೆಂಟೇಟರ್ ಆಗಿ ಕೆಲಸ ಮಾಡಿದ ಜಾಕೀರ್ ಹುಸೇನ್ ರಾಜ್ಯದ ಎಲ್ಲರ ಮನ ಗೆದ್ದಿದ್ದರು. ಕ್ರಿಕೆಟ್ ಪಂದ್ಯವನ್ನು ಕಣ್ಣಿಗೆ ಕಟ್ಟುವಂತೆ ಕಾಮೆಂಟರಿ ನೀಡುವ ಮೂಲಕ ಜನಪ್ರಿಯರಾಗಿದ್ದರು. ಕುಂದಾಪುರದ ಗಾಂಧೀ ಮೈದಾನ ಮತ್ತು ಸ್ವಾಮಿ ಗಂಗೊಳ್ಳಿಯವರು ನಡೆಸುತ್ತಿದ್ದ ಪ್ರತಿಯೊಂದು ಟೂರ್ನಮೆಂಟ್ ನಲ್ಲೂ ಇವರ ಕಾಮೆಂಟ್ರಿ ಇರುತಿತ್ತು. ಕುಂದಾಪುರ ಭಂಡಾರ್ಕಾರ್ಸ್ ಕಾಲೇಜ್ ವಿದ್ಯಾರ್ಥಿ -ವಿಧ್ಯಾರ್ಥಿನಿಯರಂತೂ ಇವರ ನಿರರ್ಗಳ ಹಿಂದಿ ಕಾಮೆಂಟ್ರಿ ಆಲಿಸುವ ಸಲುವಾಗಿ ಸಾಲು ಸಾಲಾಗಿ ಮೈದಾನದತ್ತ ಬರುತ್ತಿದ್ದರು.
50 ವರ್ಷದ ಜಾಕೀರ್ ಗುರುವಾರ ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಜಾಕೀರ್ ಹುಸೇನ್ ನಿಧನಕ್ಕೆ ಕರ್ನಾಟಕ ರಾಜ್ಯದ ಪ್ರಮುಖ ಟೆನಿಸ್ ಬಾಲ್ ಕ್ರಿಕೆಟ್ ಆಟಗಾರರು ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ. ಅವರ ನಿಧನಕ್ಕೆ ಕರ್ನಾಟಕ ರಾಜ್ಯದ ಮಾಜಿ ಹಾಗೂ ಹಾಲಿ ಟೆನಿಸ್ ಬಾಲ್ ಕ್ರಿಕೆಟ್ ಆಟಗಾರರು ಹಾಗೂ ದುಬೈ ಸೇರಿದಂತೆ ಇತರ ದೇಶಗಳ ಆಟಗಾರರು ಸಂತಾಪ ವ್ಯಕ್ತ ಪಡಿಸಿದ್ದಾರೆ.
ಸ್ಪೋರ್ಟ್ಸ್ ಕನ್ನಡದ ಪ್ರವರ್ತಕರು, ಕೋಟ ರಾಮಕೃಷ್ಣ ಆಚಾರ್ಯ “ಜಾಕೀರ್ ಹುಸೇನ್ ಅವರ ನಿಧನದ ಬಗ್ಗೆ ಕೇಳಿ ಆಘಾತವಾಯಿತು. ಆಡುವ ದಿನಗಳಲ್ಲಿ ಮೈದಾನಕ್ಕೆ ರಂಗು ತುಂಬುತ್ತಿದ್ದರು. ಅವರ ನಿಧನ ಕರ್ನಾಟಕ ಟೆನಿಸ್ ಬಾಲ್ ಕ್ರಿಕೆಟ್ ಲೋಕಕ್ಕೆ ದೊಡ್ಡ ನಷ್ಟವಾಗಿದೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪಗಳು” ಎಂದು ಸಂತಾಪ ಸೂಚಿಸಿದ್ದಾರೆ
ಜಾಕೀರ್ ಹುಸೇನ್ ನಿಧನ ನಮಗೆಲ್ಲರಿಗೂ ದುಃಖದ ಸುದ್ದಿಯಾಗಿದೆ. ಅವರು ಶ್ರೇಷ್ಠ ಕಾಮೆಂಟೇಟರ್ ಆಗಿದ್ದಲ್ಲದೆ, ಮೈದಾನದಲ್ಲಿ ಶಕ್ತಿ ತುಂಬಿದ್ದರು. ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟಗಳಲ್ಲಿ ನಾವು ಅವರೊಂದಿಗೆ ಹಿಂದೆ ಅನೇಕ ಉತ್ತಮ ನೆನಪುಗಳನ್ನು ಹೊಂದಿದ್ದೇವೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬ ಸದಸ್ಯರಿಗೆ ನಮ್ಮ ಸ್ಪೋರ್ಟ್ಸ್ ಕನ್ನಡದ ಸಂತಾಪಗಳು.
ಟೀಮ್ ಸ್ಪೋರ್ಟ್ಸ್ ಕನ್ನಡ