ಎಷ್ಟು ಪೆಟ್ಟು ತಿಂದರೂ ಕ್ಯಾರೇ ಅನ್ನದ 16 ಬಾರಿಯ ವಿಶ್ವಚಾಂಪಿಯನ್ ರೆಸ್ಲರ್!
ರೆಸ್ಲಿಂಗ್ ಇಂದು ಪ್ರತಿಯೊಬ್ಬರ ಹೃದಯ ಬಡಿತವೇ ಆಗಿದ್ದರೆ ಅದಕ್ಕೆ ಕಾರಣರಾದವರು ಅಂಡರ್ ಟೆಕರ್, ದ ಗ್ರೇಟ್ ಖಲಿ, ಶಾನ್ ಮೈಕೆಲ್, ಬಟಿಸ್ಟಾ, ಬಿಗ್ ಶಾ ಮೊದಲಾದ ರೆಸ್ಲರ್ಸ್! ಅದೇ ರೀತಿ ಇದೀಗ ತನ್ನ ಅಸಾಧಾರಣವಾದ ಪ್ರತಿಭೆ ಮತ್ತು ಅಸೀಮ ಸಾಮರ್ಥ್ಯಗಳ ಸಹಾಯದಿಂದ ಅವರೆಲ್ಲರನ್ನೂ ಹಿಂದಕ್ಕೆ ಹಾಕಿರುವ ಜಾನ್ ಸೀನಾ ಎಂಬ ದೈತ್ಯ ರೆಸ್ಲಾರ್ ಬಗ್ಗೆ ನಾನು ಎಷ್ಟು ಬರೆದರೂ ಕಡಿಮೆಯೇ!
ಆತ ಹುಟ್ಟು ಹೋರಾಟಗಾರ!
—————————–
1977 ಏಪ್ರಿಲ್ 23ರಂದು ಅಮೆರಿಕದಲ್ಲಿ ಜನಿಸಿದ ಜಾನ್ ಸೀನಾ ರೆಸ್ಲಾರ್ ಆಗುವ ಕನಸು ಕೂಡ ಕಂಡವರಲ್ಲ! ಅವರ ಕನಸು ಏನಿದ್ದರೂ ಬಾಡಿ ಬಿಲ್ಡಿಂಗ್ ಮತ್ತು ಸಿನೆಮಾದಲ್ಲಿ ನಟನೆ ಮಾತ್ರ ಆಗಿತ್ತು. ಆರು ಅಡಿ ಒಂದು ಇಂಚು ಎತ್ತರದ ಮತ್ತು 114 ಕಿಲೋಗ್ರಾಂ ತೂಕ ಇದ್ದ ಜಾನ್ ಸೀನಾ ಜಿಮ್ ತರಬೇತಿಯ ಮೂಲಕ ಕಟ್ಟುಮಸ್ತಾದ ಮತ್ತು ಹುರಿಮಾಡಿದ ಬಾಡಿ ಬಿಲ್ಡಿಂಗ್ ಮಾಡಿಕೊಂಡಿದ್ದ.
ಮೊದಲ ಪಂದ್ಯದಲ್ಲಿ ಭಾರೀ ಸೋಲು!
—————————— ———————
ಎಂದಿಗೂ ಸೋಲನ್ನು ಒಪ್ಪಿಕೊಳ್ಳದೆ ಇರುವ ಸ್ಟ್ರಾಂಗ್ ಮೈಂಡ್ ಸೆಟ್ ಹೊಂದಿರುವ ಆತ ರೆಸ್ಲಿಂಗ್ ರಿಂಗ್ ಪ್ರವೇಶ ಮಾಡಿದ್ದು ಆಕಸ್ಮಿಕ! 1999ರ ನವೆಂಬರ್ ತಿಂಗಳ ಹೊತ್ತಿಗೆ ಯಾರದ್ದೋ ಸವಾಲನ್ನು ಸ್ವೀಕಾರ ಮಾಡಿ ರೆಸ್ಲಿಂಗ್ ಬೆಲ್ಟ್ ಧರಿಸಿದ ಜಾನ್ ಸೀನಾ ಮೊದಲ ಪಂದ್ಯದಲ್ಲಿಯೆ ಸೋತು ಸುಣ್ಣ ಆಗಿದ್ದ! ಸೋತದ್ದು ಮಾತ್ರವಲ್ಲ ತನ್ನ ಎರಡೂ ದವಡೆಗಳನ್ನು ಕೂಡ ಮುರಿದುಕೊಂಡಿದ್ದ.
ಆಗ ಅವನಿಗೆ ತನ್ನ ತಪ್ಪುಗಳ ಅರಿವಾಯಿತು. ಮುಂದೆ ಎರಡು ವರ್ಷ ಕಠಿಣ ಪರಿಶ್ರಮ ಪಟ್ಟು ಬೆವರು ಹರಿಸಿದ. ಕೋಚ್ ಹೇಳಿದ ಎಲ್ಲವನ್ನೂ ಕರಾರುವಾಕ್ಕಾಗಿ ಪಾಲಿಸಿದ. ಮಾನಸಿಕ ಮತ್ತು ದೈಹಿಕವಾಗಿ ಮುಂದಿನ ಪಂದ್ಯಗಳಿಗೆ ಸಿದ್ಧನಾದ!
ಮುಂದೆ ಸತತ ಗೆಲುವಿನ ಹಸಿವು! ಸೋಲುಗಳನ್ನು ಮೆಟ್ಟಿ ನಿಂತ ದೃಢತೆ!
—————————— ————————-
ಅಂತಾರಾಷ್ಟ್ರೀಯ ರೆಸ್ಲಿಂಗ್ ಫೆಡರೇಶನ್ ( WWF) ಜೊತೆ ಒಪ್ಪಂದ ಮಾಡಿಕೊಂಡ ನಂತರ ಸೀನಾ ವೃತ್ತಿಪರ ರೆಸ್ಲರ್ ಆಗಿ ಬದಲಾದನು. ಆತನ ಅತ್ಯಂತ ಬಲಯುತ ಪಂಚ್ಗಳು, ಚಿರತೆಯ ವೇಗದ ಚಲನೆ, ಎಂತಹ ಬಲಿಷ್ಟ ಪಟುಗಳನ್ನು ಕೂಡ ಕೆಡವಿ ಸಿಂಹನಾದ ಮಾಡುವ ತಾಕತ್ತು, ಶಕ್ತಿಯುತ ಪಟ್ಟುಗಳು………..ಹೀಗೆ ಜಾನ್ ಸೀನಾ ಕೆಲವೇ ತಿಂಗಳಲ್ಲಿ ರೆಸ್ಲಿಂಗ್ ಬಾದಷಾ ಆಗಿ ಬದಲಾದನು. ಅತಿರಥ ಮಹಾರಥ ಪಟುಗಳನ್ನು ಸೋಲಿಸಿ ದಾಖಲೆಯ ಮೇಲೆ ದಾಖಲೆಯನ್ನು ಬರೆದನು.
ರೆಸ್ಲಿಂಗ್ ಬಾದಶಾ ಎಂಬ ಕೀರ್ತಿ!
—————————— —
ಬ್ರೂಕ್ ಲೆಸ್ನಾರ್, ರಾಂಡಿ ಆರ್ಟನ್, ಶಾನ್ ಮೈಕೆಲ್, ಬಟಿಸ್ಟಾ, ಅಂಡರ್ ಟೆಕಾರ್, ಬಿಗ್ ಶಾ ಇವರೆಲ್ಲ ಸೀನಾ ಕೈಯ್ಯಲ್ಲಿ ಒಂದಲ್ಲ ಒಂದು ಬಾರಿ ಸೋಲು ಉಂಡವರೆ ಆಗಿದ್ದಾರೆ! ಬೇರೆಯವರ ಆಟಕ್ಕಿಂತ ಸೀನಾ ಆಟ ತುಂಬಾ ಭಿನ್ನ ಆಗಿರುತ್ತದೆ. ಆತನು ಆರಂಭದಲ್ಲಿ ಆಕ್ರಮಣವನ್ನು ಮಾಡುವುದಿಲ್ಲ. ಆದರೆ ಆಟ ಕುದುರಿದ ಹಾಗೆ ಅವನು ಹೆಚ್ಚು ಆಕ್ರಮಣಕ್ಕೆ ಇಳಿಯುತ್ತಾನೆ. ಎಷ್ಟು ಬಾರಿ ಕೆಳಗೆ ಬಿದ್ದರೂ ಅರ್ಧ ಕ್ಷಣದಲ್ಲಿ ಮತ್ತೆ ಎದ್ದುಬರುವುದು ಆತನ ಶಕ್ತಿ!
ಹೆಚ್ಚು ಸ್ಪರ್ಧಾತ್ಮಕ ಆದ ಮತ್ತು ಅಪಾಯಕಾರಿಯೆ ಆದ ‘ರೆಸ್ಟ್ಲ್ ಮೇನಿಯಾ’ ಎಂಬ ವಾರ್ಷಿಕ ಇವೆಂಟಿನಲ್ಲಿ ಸೀನಾ ಕಳೆದ ಇಪ್ಪತ್ತು ವರ್ಷಗಳ ಅವಧಿಯಲ್ಲಿ ಸೋತಿರುವ ಉದಾಹರಣೆ ಹೆಚ್ಚು ದೊರೆಯುವುದಿಲ್ಲ. ಆತನ ನಗು ಮತ್ತು ಆಟಿಟ್ಯುಡ್ ಯಾರ ಮನಸ್ಸನ್ನಾದರು ಸೆಳೆಯದೆ ಇರಲು ಸಾಧ್ಯವಿಲ್ಲ!
ಎಂತಹ ಪೆಟ್ಟು ತಿಂದರೂ ಎದ್ದು ಬರುವ ಜಾನ್ ಸೀನಾ!
—————————— ———————–
ಎಂತಹ ಮಾರಣಾಂತಿಕ ಪೆಟ್ಟು ತಿಂದರೂ ಮತ್ತೆ ಮತ್ತೆ ಎದ್ದು ಬರುವ ಆತನ ಮಹಾ ಪವರ್ ಮತ್ತು ಸ್ಟೆಮಿನಾ ಶಕ್ತಿಗೆ ನೀವು ತಲೆದೂಗಲೆಬೇಕು. ಒಮ್ಮೆ ತಲೆ ಬುರುಡೆ ಒಡೆದು ರಕ್ತ ಸೋರುತ್ತಿದ್ದರೂ, ಮತ್ತೊಮ್ಮೆ ಬೆನ್ನು ಮೂಳೆಯೇ ಮುರಿದರೂ, ಮತ್ತೊಮ್ಮೆ ಕಿಡ್ನಿ ಡ್ಯಾಮೇಜ್ ಆದರೂ ಆತ ರೆಸ್ಲಿಂಗ್ ಕ್ವಿಟ್ ಮಾಡಿಯೇ ಇಲ್ಲ! ಅವನ ದೇಹದಲ್ಲಿ ಇದುವರೆಗೆ ಆಗಿರುವ ಮೂಳೆ ಮುರಿತಗಳಿಗೆ ಲೆಕ್ಕವೇ ಇಲ್ಲ! ಇಂಥಹ ಯಾವ ಗಾಯವೂ ಅವನನ್ನು ಸೋಲಿಸಲು ಸಾಧ್ಯವೇ ಆಗಿಲ್ಲ!
ದಾಖಲೆಗಳ ಮೇಲೆ ದಾಖಲೆಗಳು!
—————————— —–
ಕಳೆದ 22 ವರ್ಷಗಳ ಅವಧಿಯಲ್ಲಿ ಜಾನ್ ಸೀನಾ ಈವರೆಗೆ ಆಡಿರುವ ಒಟ್ಟು ಪಂದ್ಯಗಳಲ್ಲಿ 70%ಗಿಂತ ಹೆಚ್ಚು ಸಕ್ಸಸ್ ರೇಟನ್ನು ಹೊಂದಿದ್ದಾನೆ. ಸಮಕಾಲೀನ ಯಾವ ರೆಸ್ಲಿಂಗ್ ಪಟು ಕೂಡ ಆತನ ಈ ಕೆಳಗಿನ ದಾಖಲೆಗಳ ಹತ್ತಿರ ಬರಲು ಸಾಧ್ಯವೇ ಇಲ್ಲ!
1) ಒಟ್ಟು 16 ಬಾರಿ ಜಾನ್ ಸೀನಾ ವಿಶ್ವಚಾಂಪಿಯನ್ ಪಟ್ಟವನ್ನು ಗೆದ್ದಿದ್ದಾನೆ. ಇದು ದಾಖಲೆ!
2) ಒಟ್ಟು 13 ಬಾರಿ WWE ಚಾಂಪಿಯನ್ ಆಗಿದ್ದಾನೆ. ಇದೂ ದಾಖಲೆ!
3) ಒಟ್ಟು ಐದು ಬಾರಿ ಅಮೆರಿಕನ್ ಚಾಂಪಿಯನ್. ಇದು ಕೂಡ ಆತನಿಗೇ ಒಲಿದ ದಾಖಲೆ!
4) ಒಟ್ಟು ನಾಲ್ಕು ಬಾರಿ ಆತ ವರ್ಲ್ಡ್ ಟ್ಯಾಗ್ ಟೀಮ್ ಚಾಂಪಿಯನ್!
5) ಅತ್ಯಂತ ಅಪಾಯಕಾರಿ ಆದ ರೆಸ್ಟಲ್ ಮೇನಿಯಾ ಕೂಟದಲ್ಲಿ 5 ಬಾರಿ ಚಾಂಪಿಯನ್ ಪಟ್ಟ!
6) ಎರಡು ಬಾರಿ ರಾಯಲ್ ರಂಬಲ್ ಕೂಟದಲ್ಲಿ ಕಿರೀಟ!
7) ಒಂದು ಬಾರಿ ಮನಿ ಇನ್ ದ ಬ್ಯಾಂಕ್ ಕೂಟದಲ್ಲಿ ವಿಜೇತ ಜಾನ್ ಸೀನಾ!
ಸಿನೆಮಾ ನಟ, ಮಾಡೆಲ್ ಮತ್ತು ರಾಪ್ ಗಾಯಕ!
—————————— ——————-
ರೆಸ್ಲಿಂಗ್ ಪ್ರತಿಭೆಯ ಜೊತೆ ಜಾನ್ ಸೀನಾ ಒಬ್ಬ ಒಳ್ಳೆಯ ನಟನಾಗಿ ಹಲವು ಹಾಲಿವುಡ್ ಸಿನೆಮಾಗಳಲ್ಲಿ ಪ್ರಧಾನ ಪಾತ್ರ ನಿರ್ವಹಣೆ ಮಾಡಿದ್ದಾನೆ. ಮಾಡೆಲಿಂಗ್ ಲೋಕದಲ್ಲಿ ಕೂಡ ಮಿಂಚಿದ್ದಾನೆ. ರಾಪ್ ಗಾಯಕ ಆಗಿದ್ದಾನೆ. ಗಿಟಾರ್ ನುಡಿಸುತ್ತಾನೆ. ಸಂಗೀತ ಸಂಯೋಜನೆ ಮಾಡಿದ್ದಾನೆ.
ತನ್ನ ಸಂಪಾದನೆಯ ಬಹು ದೊಡ್ಡ ಮೊತ್ತವನ್ನು Make A Wish Foundation ಎಂಬ ಸಮಾಜ ಸೇವಾಸಂಸ್ಥೆಯಲ್ಲಿ ತೊಡಗಿಸಿ ಸಮಾಜ ಸೇವೆ ಕೂಡ ಮಾಡುತ್ತಿದ್ದಾನೆ!
ಈಗವನಿಗೆ 45 ವರ್ಷ! ಆತ ಇನ್ನೂ ದಣಿದಿಲ್ಲ! ಗೆಲುವಿನ ಹಸಿವು ಇನ್ನೂ ನೀಗಿಲ್ಲ! ರೆಸ್ಲಿಂಗ್ ರಿಂಗನಲ್ಲಿ ಮಾತ್ರ ನಾವು ಫೈಟ್ ಮಾಡುವುದು, ಅಲ್ಲಿಂದ ಹೊರಬಂದರೆ ನಾವೆಲ್ಲರೂ ಗೆಳೆಯರು ಎಂದು ನಗುವ ಜಾನ್ ಸೀನಾ ನಮ್ಮಲ್ಲಿ ಹಲವರ ಬಾಲ್ಯದ ಹೀರೋ ಆಗಿರುವುದು ಕೂಡ ರೋಮಾಂಚಕ ಸಾಧನೆಯೇ ಸರಿ!