ಕ್ರಿಕೆಟ್ವಿನಯ್ ಕುಮಾರ್ ಕರ್ನಾಟಕ ಕೋಚ್ ಆಗುವುದು ರಾಜ್ಯ ಕ್ರಿಕೆಟ್ ಸಂಸ್ಥೆಗೆ ಬೇಕಿಲ್ಲವೇ?

ವಿನಯ್ ಕುಮಾರ್ ಕರ್ನಾಟಕ ಕೋಚ್ ಆಗುವುದು ರಾಜ್ಯ ಕ್ರಿಕೆಟ್ ಸಂಸ್ಥೆಗೆ ಬೇಕಿಲ್ಲವೇ?

-

- Advertisment -spot_img
10 ವರ್ಷ.. 
ಕರ್ನಾಟಕ ತಂಡ ಕೊನೆಯ ಬಾರಿ ರಣಜಿ ಟ್ರೋಫಿ ಗೆದ್ದು..
10 ವರ್ಷ.. 
ಕರ್ನಾಟಕ ತಂಡಕ್ಕೆ ಆರ್.ವಿನಯ್ ಕುಮಾರ್ ಕೊನೆಯ ಬಾರಿ ರಣಜಿ ಟ್ರೋಫಿ ಗೆಲ್ಲಿಸಿ..
2014ರಲ್ಲಿ ಕರ್ನಾಟಕ ತಂಡ ಚಾಂಪಿಯನ್ ಪಟ್ಟಕ್ಕೇರಿದ ಕ್ಷಣಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದೆ. ಕ್ರಿಕೆಟ್ ತಂಡವೊಂದು ಚಾಂಪಿಯನ್’ಷಿಪ್ ಗೆದ್ದಾಗ ಆ ರೀತಿ ಸಂಭ್ರಮಿಸಿದ್ದನ್ನು ನಾನಂತೂ ನೋಡಿಲ್ಲ, ಕೇಳಿಯೂ ಇಲ್ಲ.
ಹೈದರಾಬಾದ್’ನ ರಾಜೀವ್ ಗಾಂಧಿ ಕ್ರೀಡಾಂಗಣದ ಡ್ರೆಸ್ಸಿಂಗ್ ರೂಮ್’ನ ಗೋಡೆಗಳು ಹೇಳುತ್ತವೆ ಆ ಕಂಡು ಕೇಳರಿಯದ ವಿಕ್ಟರಿ ಸೆಲೆಬ್ರೇಷನ್ ಕಥೆಯನ್ನ.
ಆ ಐತಿಹಾಸಿಕ ಸಂಭ್ರಮದ ವೀಡಿಯೊಗಳನ್ನು ಮುಂದಿನ ದಿನಗಳಲ್ಲಿ ನಿಮ್ಮ ಮುಂದಿಡುತ್ತೇನೆ. ಈಗ ವಿಷಯಕ್ಕೆ ಬರೋಣ..
10 ವರ್ಷಗಳ ಹಿಂದೆ ಕರ್ನಾಟಕ ತಂಡವನ್ನು ರಣಜಿ ಚಾಂಪಿಯನ್ ಪಟ್ಟದತ್ತ ಮುನ್ನಡೆಸಿದವನು ನಮ್ಮೆಲ್ಲರ ಹೆಮ್ಮೆಯ ದಾವಣಗೆರೆ ಎಕ್ಸ್’ಪ್ರೆಸ್ ಆರ್.ವಿನಯ್ ಕುಮಾರ್.
ನಾನು ಆತನನ್ನು “ದೇಶೀಯ ಕ್ರಿಕೆಟ್’ನ ಕಿಂಗ್” ಎನ್ನುತ್ತೇನೆ. ಅಂಥಾ ಒಬ್ಬ ನಾಯಕನನ್ನು, ಅಂಥಾ ಒಬ್ಬ ಕ್ರಿಕೆಟಿಗನನ್ನು ಭಾರತದ ದೇಶೀಯ ಕ್ರಿಕೆಟ್ ತನ್ನ ಇತಿಹಾಸದಲ್ಲೇ ಕಂಡಿಲ್ಲ. ಸತತ ಎರಡು ವರ್ಷ ಎರಡು ರಣಜಿ ಟ್ರೋಫಿ, ಎರಡು ಇರಾನಿ ಕಪ್, ಎರಡು ವಿಜಯ್ ಹಜಾರೆ ಟ್ರೋಫಿಗಳನ್ನು ಗೆದ್ದ ಮತ್ತೊಂದು ತಂಡ, ಮತ್ತೊಬ್ಬ ನಾಯಕನನ್ನು ತೋರಿಸಿ.. ಸಾಧ್ಯವೇ ಇಲ್ಲ. ಕಾರಣ, ಈ ಸಾಧನೆ ಮಾಡಿರುವುದು ಕರ್ನಾಟಕ ತಂಡ ಮಾತ್ರ.. ಕರ್ನಾಟಕ ತಂಡಕ್ಕೆ ಅಂಥಾ ಒಂದು ಕಿರೀಟ ತೊಡಿಸಿರುವುದು ವಿನಯ್ ಕುಮಾರ್ ಮಾತ್ರ.
2013-14ನೇ ಸಾಲಿನಲ್ಲಿ ಕರ್ನಾಟಕದ ರಣಜಿ ವಿಕ್ರಮವನ್ನು ವಿವರಿಸುವಾಗ ಆ ಸೆಮಿಫೈನಲ್ ಪಂದ್ಯದ ಬಗ್ಗೆ ಒಂದೆರಡು ಸಾಲುಗಳನ್ನು ಬರೆಯದಿದ್ದರೆ ಮಹಾಪರಾಧವಾಗಿ ಬಿಡುತ್ತದೆ.
ನನಗಿನ್ನೂ ನೆನಪಿದೆ.. ಮೊಹಾಲಿಯಲ್ಲಿ ಪಂಜಾಬ್ ವಿರುದ್ಧ ಸೆಮಿಫೈನಲ್. ಮೊದಲ ದಿನದಾಟವನ್ನು ಪೂರ್ತಿಯಾಗಿ ವರುಣದೇವ ಆಪೋಶನ ತೆಗೆದುಕೊಂಡಿದ್ದ. 2ನೇ ದಿನ ಆಟ ಆರಂಭಗೊಂಡ ಕ್ಷಣದಿಂದ ಪಂಜಾಬ್ ತಂಡ  ರನ್ ಹೊಳೆಯನ್ನೇ ಹರಿಸಿ ಬಿಟ್ಟಿತು. 223 ರನ್ನಿಗೆ 4 ವಿಕೆಟ್.. ದೊಡ್ಡ ಮೊತ್ತದತ್ತ ಸ್ಪಷ್ಟವಾಗಿ ದಾಪುಗಾಲು ಹಾಕುತ್ತಿತ್ತು ಪಂಜಾಬ್.
ಆದರೆ ನಮ್ಮ ವಿನಯ್ ಕುಮಾರ್ ಎಂಥಾ ನಾಯಕನೆಂದರೆ.. ಸಾವಿರ ಪಡೆಗಳು ಸಮರ ಸಾರಿದರೂ ಎದೆಯೊಡ್ಡಿ ನಿಲ್ಲುವ ಛಲದಂಕಮಲ್ಲ..
ಆ ದಿನ ವಿನಯ್ ಮಾಡಿದ ಅದೊಂದು ಸ್ಪೆಲ್ ಕರ್ನಾಟಕ ತಂಡದ ಕಥೆಯನ್ನೇ ಬದಲಿಸಿ ಬಿಟ್ಟಿತು. ವಿನಯ್ ಅದೆಷ್ಟು ಮಾರಕವಾಗಿ ಪಂಜಾಬ್ ಮೇಲೆ ಎರಗಿದನೆಂದರೆ.. 225ಕ್ಕೆ 4 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದ್ದ ಪಂಜಾಬ್ 270 ರನ್ನಿಗೆ ನೆಗೆದು ಬಿದ್ದಿತ್ತು. ಬೌಲರ್’ಗಳ ಪಾಲಿಗೆ ನರಕವಾಗಿದ್ದ ಡೆಡ್ ಪಿಚ್’ನಲ್ಲಿ ವಿನಯ್ ಒಂದೇ ಉಸಿರಲ್ಲಿ 5 ವಿಕೆಟ್ ಉಡಾಯಿಸಿ ಬಿಟ್ಟಿದ್ದ.
ನಂತರ ಕರುಣ್ ನಾಯರ್ ಮತ್ತು ಅಮಿತ್ ವರ್ಮಾ ಬಾರಿಸಿದ ಶತಕಗಳು ಕರ್ನಾಟಕವನ್ನು ಫೈನಲ್’ಗೆ ಮುನ್ನಡೆಸಿದ್ದವು. ಅಲ್ಲಿಂದ ಮುಂದೆ ನಡೆದದ್ದು ದೇಶೀಯ ಕ್ರಿಕೆಟ್ ಹಿಂದೆದ್ದೂ ಕಾಣದ, ಮುಂದೆಂದೂ ಕಾಣಲು ಅಸಾಧ್ಯ ಎನಿಸುವಂಥಾ ಕರ್ನಾಟಕ ತಂಡದ “ಅವಳಿ ತ್ರಿವಳಿ” ಮಹಾ ಸಾಧನೆ.
ವಿನಯ್ ಕುಮಾರ್ ಕರ್ನಾಟಕಕ್ಕೆ ರಣಜಿ ಟ್ರೋಫಿ ಗೆದ್ದು ಕೊಟ್ಟದ್ದೇ ಕೊನೆ.. ನಂತರ ನಮ್ಮ ತಂಡ ಮತ್ತೆ ರಣಜಿ ಟ್ರೋಫಿ ಗೆದ್ದಿಲ್ಲ. ಗೆಲ್ಲಿಸುವ ಸಾಮರ್ಥ್ಯವುಳ್ಳ ವಿನಯ್’ನನ್ನು ಕರ್ನಾಟಕ ತಂಡದ ಹೆಡ್ ಕೋಚ್ ಆಗಿ ನೇಮಕ ಮಾಡುವ ಅವಕಾಶವಿದ್ದರೂ ನಮ್ಮ ಕ್ರಿಕೆಟ್ ಸಂಸ್ಥೆ ಅದೇಕೋ ಮನಸ್ಸು ಮಾಡುತ್ತಿಲ್ಲ. ಈ ಬಾರಿ ಮತ್ತೆ ಯರೇ ಗೌಡ ರಾಜ್ಯ ತಂಡದ ಹೆಡ್ ಕೋಚ್ ಆಗಿ ಬಂದಿದ್ದಾರೆ.
ಯರೇ ಗೌಡ 2020ರಲ್ಲಿ ಕರ್ನಾಟಕ ತಂಡದ ಕೋಚ್ ಆಗಿದ್ದವರು. ಈ ಬಾರಿ ಇತಿಹಾಸದಲ್ಲೇ ಮೊದಲ ಬಾರಿ ಕರ್ನಾಟಕಕ್ಕೆ ಸಿ.ಕೆ ನಾಯ್ಡು ಟ್ರೋಫಿ U-23 ಚಾಂಪಿಯನ್’ಷಿಪ್ ಗೆಲ್ಲಿಸಿದ್ದ ಯರೇ ಗೌಡರಿಗೆ ಸೀನಿಯರ್ ತಂಡದ ಕೋಚ್ ಆಗಿ ಪ್ರಮೋಶನ್ ಸಿಕ್ಕಿದೆ.
ಯರೇ ಗೌಡ ಒಳ್ಳೆಯ ಆಟಗಾರನಷ್ಟೇ ಅಲ್ಲ, ಒಳ್ಳೆಯ ಕೋಚ್ ಕೂಡ ಹೌದು. ಆದರೆ ಕರ್ನಾಟಕ ಸೀನಿಯರ್ ತಂಡದ ಮಟ್ಟಿಗೆ ಹೇಳುವುದಾದರೆ ಈಗಾಗಲೇ tried and tested ಕೋಚ್. ಅವರಿದ್ದಾಗಲೂ ರಣಜಿ ಟ್ರೋಫಿ ಬಂದಿಲ್ಲ. ಈ ವರ್ಷ ಗೆದ್ದೇ ಗೆಲ್ಲುತ್ತಾರೆ ಎಂದು ಎದೆ ತಟ್ಟಿ ಹೇಳುವಷ್ಟು ಬಲ ನಮ್ಮ ರಣಜಿ ತಂಡದಲ್ಲಿ ಉಳಿದಿಲ್ಲ. ಕಾರಣ, ಶ್ರೇಯಸ್ ಗೋಪಾಲ್, ಸಮರ್ಥ್, ಸಿದ್ಧಾರ್ಥ್, ಕರುಣ್ ನಾಯರ್ ಸಹಿತ ಒಂದಷ್ಟು ಪ್ರತಿಭಾವಂತರು ಬೇರೆ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ. ಈಗ ಸೀನಿಯರ್ ಆಟಗಾರರೆಂದರೆ ಮಯಾಂಕ್ ಅಗರ್ವಾಲ್ ಮತ್ತು ಮನೀಶ್ ಪಾಂಡೆ ಮಾತ್ರ. ಇವರಲ್ಲಿ ಪಾಂಡೆ ಕೂಡ ಒಂದು ಕಾಲು ಹೊರಗಿಟ್ಟಿರುವ ಸುದ್ದಿಯಿದೆ.
ಹೀಗಾಗಿ ಹೊಸ ಹುಡುಗರಿಂದಲೇ ತುಂಬಿ ತುಳುಕುತ್ತಿರುವ ಕರ್ನಾಟಕ ತಂಡವನ್ನು ಪಳಗಿಸಲು ವಿನಯ್ ಕುಮಾರ್’ಗಿಂತ ಒಳ್ಳೆಯ ಗರಡಿ ಮನೆಯ ಪೈಲ್ವಾನ್ ಬೇರೆ ಯಾರಿದ್ದರು..? ಈಗೇನೋ ಯರೇ ಗೌಡ ಬಂದಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಕರ್ನಾಟಕ ಮತ್ತೆ ರಣಜಿ ಟ್ರೋಫಿ ಗೆಲ್ಲಲಿ ಎಂದಪ ಆಶಿಸೋಣ..
ಒಂದು ವೇಳೆ… ಇನ್ನೆರಡು ವರ್ಷಗಳಲ್ಲಿ ಕರ್ನಾಟಕ ರಣಜಿ ಟ್ರೋಫಿ ಗೆಲ್ಲದೇ ಇದ್ದರೆ..? ಆಗಲೂ ವಿನಯ್ ಕುಮಾರ್ ನಮಗೆ ಬೇಡ ಎಂದು ಬಿಡುತ್ತೀರಾ..? ಹಾಗೆ ಮಾಡಿದರೆ ನಷ್ಟ ಕರ್ನಾಟಕ ಕ್ರಿಕೆಟ್’ಗೆ ಹೊರತು ವಿನಯ್ ಕುಮಾರ್’ಗಲ್ಲ.. ಚಾಂಪಿಯನ್ ಕ್ರಿಕೆಟರ್ ವಿನಯ್’ಗೆ ಡಿಮ್ಯಾಂಡ್ ಇದ್ದೇ ಇದೆ. ಅದಿಲ್ಲದಿದ್ದರೆ ಭಾರತ ತಂಡದ ಬೌಲಿಂಗ್ ಕೋಚ್ ಸ್ಥಾನಕ್ಕೆ ಎಲ್ಲರಿಗಿಂತ ಮೊದಲಿಗನಾಗಿ ವಿನಯ್ ಹೆಸರನ್ನು ಗೌತಮ್ ಗಂಭೀರ್ ಬಿಸಿಸಿಐ ಮುಂದಿಡುತ್ತಿರಲಿಲ್ಲ..!

LEAVE A REPLY

Please enter your comment!
Please enter your name here

fifteen − 9 =

Latest news

ಗುರುಗಣೇಶ್ ನೇಜಾರು ಫ್ರೆಂಡ್ಶಿಫ್ ಟ್ರೋಫಿ-2026 ಚಾಂಪಿಯನ್ಸ್

ಗುರುಗಣೇಶ್ ನೇಜಾರು ಫ್ರೆಂಡ್ಶಿಫ್ ಟ್ರೋಫಿ-2026 ಚಾಂಪಿಯನ್ಸ್ ಕುಂದಾಪುರ-ಇಲ್ಲಿನ ಫ್ರೆಂಡ್ಸ್ ಕೆದೂರು ಮೊತ್ತ ಮೊದಲ ಬಾರಿಗೆ ಆಯೋಜಿಸಿದ 60 ಗಜಗಳ ಮುಕ್ತ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ ಫ್ರೆಂಡ್ಶಿಫ್ ಟ್ರೋಫಿ-2026...

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿ ಸಂಘ (ರಿ) ಮತ್ತು ಜಿಲ್ಲಾ ಘಟಕ ಶಿವಮೊಗ್ಗ ವತಿಯಿಂದ ರಾಜ್ಯಮಟ್ಟದ ಕ್ರೀಡಾಕೂಟ 2026

ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿ ಸಂಘ (ರಿ) ಮತ್ತು ಜಿಲ್ಲಾ ಘಟಕ ಶಿವಮೊಗ್ಗ ವತಿಯಿಂದ ರಾಜ್ಯಮಟ್ಟದ ಕ್ರೀಡಾಕೂಟ 2026 ಕಂದಾಯ ಇಲಾಖೆ ಕರ್ನಾಟಕ ರಾಜ್ಯ ಗ್ರಾಮ...

ಮಣಿಪಾಲದಲ್ಲಿ ಅಂಡರ್-21 ಫ್ಲಡ್‌ಲೈಟ್ ಫುಟ್‌ಬಾಲ್ ಟೂರ್ನಿ – CHIVAS ಕಪ್ 2026

ಮಣಿಪಾಲದಲ್ಲಿ ಅಂಡರ್-21 ಫ್ಲಡ್‌ಲೈಟ್ ಫುಟ್‌ಬಾಲ್ ಟೂರ್ನಿ – CHIVAS CUP 2026 CHIVAS ಎಫ್‌ಸಿ ವತಿಯಿಂದ ಅಂಡರ್-21 ಫ್ಲಡ್‌ಲೈಟ್ ಟರ್ಫ್ ಲೀಗ್ ಟೂರ್ನಮೆಂಟ್ “CHIVAS ಕಪ್ 2026”...

ಸುರತ್ಕಲ್‌ನಲ್ಲಿ ಮತ್ತೆ ಕ್ರಿಕೆಟ್ ಸಂಭ್ರಮ – ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-5

ಸುರತ್ಕಲ್‌ನಲ್ಲಿ ಮತ್ತೆ ಕ್ರಿಕೆಟ್ ಸಂಭ್ರಮ – ಲೆಜೆಂಡ್ಸ್ ಕ್ರಿಕೆಟ್ ಲೀಗ್ ಸೀಸನ್-5 ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ.) ಹಾಗೂ ಸುರತ್ಕಲ್ ಸ್ಪೋರ್ಟ್ಸ್ & ಕಲ್ಚರಲ್...
- Advertisement -spot_imgspot_img

ಆಜ್ಮಾ ಟ್ರೋಫಿ – 2026 ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ

ಆಜ್ಮಾಟ್ರೋಫಿ – 2026 ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ ಪ್ರೆಂಡ್ಸ್ ನೇಜಾರ್ ಮತ್ತು ಇಸಾಕ್ ನೇಜಾರ್ ಇವರ ನೇತೃತ್ವದಲ್ಲಿ ನಡೆಯಲಿರುವ **ಆಜ್ಮಾ ಟ್ರೋಫಿ – 2026**...

ತೆಂಕಪೇಟೆ ಫ್ರೆಂಡ್ಸ್ ಉಡುಪಿ ಚಾಂಪಿಯನ್ – ಎಂಜಾಯ್ ಪ್ರೀಮಿಯರ್ ಲೀಗ್ 2026 ಯಶಸ್ವಿ ಸಮಾಪ್ತಿ

ತೆಂಕಪೇಟೆ ಫ್ರೆಂಡ್ಸ್ ಉಡುಪಿ ಚಾಂಪಿಯನ್ – ಎಂಜಾಯ್ ಪ್ರೀಮಿಯರ್ ಲೀಗ್ 2026 ಯಶಸ್ವಿ ಸಮಾಪ್ತಿ ಮಂಗಳೂರು: ಎಂಜಾಯ್ ಟೈಟನ್ಸ್ ಯುನೈಟೆಡ್ ಆಯೋಜಿಸಿದ್ದ ಜಿಎಸ್‌ಬಿ ಸಮುದಾಯದ ಪ್ರತಿಷ್ಠಿತ “ಎಂಜಾಯ್...

Must read

- Advertisement -spot_imgspot_img

You might also likeRELATED
Recommended to you