
ಮುಂಬೈನ ಬೀದಿಗಳಲ್ಲಿ ಪಾನಿಪೂರಿ ಮಾರುತ್ತಿದ್ದ ಯಶಸ್ವಿ ಜೈಸ್ವಾಲ್ ಭಾರತ ಪರ ಕ್ರಿಕೆಟ್ ಆಡುತ್ತಾನೆ.. ರೈಲ್ವೇ ಟಿಕೆಟ್ ಕಲೆಕ್ಟರ್ ಆಗಿದ್ದ ಎಂ.ಎಸ್ ಧೋನಿ ಭಾರತಕ್ಕೆ ಎರಡೆರಡು ವಿಶ್ವಕಪ್’ಗಳನ್ನು ಗೆದ್ದು ಕೊಡುತ್ತಾನೆ. Humble backgroundನಿಂದ ಬಂದ ಹುಡುಗರ ಯಶೋಗಾಥೆಗಳು ಒಂದೆರಡಲ್ಲ..
ಇದು ಅಂಥದ್ದೇ ಮತ್ತೊಂದು ಯಶೋಗಾಥೆ.
ಉತ್ತರ ಪ್ರದೇಶದ ಕನೌಜ್’ನಿಂದ ಒಬ್ಬ ಹುಡುಗ ಬದುಕು ಕಟ್ಟಿಕೊಳ್ಳಲು ಹತ್ತು ವರ್ಷಗಳ ಹಿಂದೆ ಮಹಾನಗರಿ ಮುಂಬೈಗೆ ಬರುತ್ತಾನೆ. ಹಾಗೆ ಸಮುದ್ರದ ಅಲೆಗಳ ವಿರುದ್ಧ ಈಜಲು ಹೊರಟವನ ವಯಸ್ಸು ಬರೀ 15. ಅವನ ಹೆಸರು ಮೊಹಮ್ಮದ್ ಜುನೇದ್ ಖಾನ್.

ಮುಂಬೈಗೆ ಕಾಲಿಟ್ಟವನು ಗಾರ್ಮೆಂಟ್ಸ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಶುರು ಮಾಡುತ್ತಾನೆ. 3 ವರ್ಷ ಗಾರ್ಮೆಂಟ್ಸ್’ನಲ್ಲಿ ಕೆಲಸ.
ಒಂದು ದಿನ ಇದ್ದಕ್ಕಿದ್ದಂತೆ ಕೆಲಸ ಬಿಟ್ಟ ಹುಡುಗ ಆಟೋ ರಿಕ್ಷಾ ಓಡಿಸುತ್ತೇನೆಂದು ಹೊರಟು ನಿಲ್ಲುತ್ತಾನೆ. ವಿಧಿಲಿಖಿತ ನೋಡಿ.. ಆಟೋ ಹತ್ತಿದ್ದೇ ಜುನೇದ್ ಖಾನ್ ಬದುಕಿಗೆ ದೊಡ್ಡ ತಿರುವು ಕೊಟ್ಟು ಬಿಡುತ್ತದೆ.

ಮುಂಬೈನಲ್ಲಿ ಆಟೋ ರಿಕ್ಷಾ ಓಡಿಸುತ್ತಿದ್ದ ಜುನೇದ್ ಖಾನ್ ಹೀಗೇ ಒಂದು ದಿನ ಅದೊಂದು ಜಾಗಕ್ಕೆ ಬಂದು ತಲುಪುತ್ತಾನೆ. ಅದು ಮುಂಬೈನ ಮಾಜಿ ವಿಕೆಟ್ ಕೀಪರ್ ಮನೀಶ್ ಬಂಗೇರ ಅವರ ‘ಸಂಜೀವನಿ ಕ್ರಿಕೆಟ್ ಅಕಾಡೆಮಿ’.

ಅಕಾಡೆಮಿಯಲ್ಲಿ ಅಭ್ಯಾಸ ನಡೆಸುತ್ತಿದ್ದ ಹುಡುಗರಿಗೆ ಬೌಲಿಂಗ್ ಮಾಡುವೆಯಾ ಎಂದು ಕೇಳುತ್ತಾರೆ ಮನೀಶ್ ಬಂಗೇರಾ. ಅಲ್ಲಿವರೆಗೆ ಟೆನಿಸ್ ಬಾಲ್ ಮಾತ್ರ ಹಿಡಿದವನು ಅದೇ ಮೊದಲ ಬಾರಿ ಲೆದರ್ ಬಾಲ್ ಹಿಡಿಯುತ್ತಾನೆ ಜುನೇದ್ ಖಾನ್.

ಒಂದು impressive run up, ಬೆಂಕಿ ಎಸೆತ.. ಪಕ್ಕದಲ್ಲೇ ನಿಂತು ನೋಡುತ್ತಿದ್ದ ಮನೀಶ್ ಬಂಗೇರ ಹೇಳಿದ್ದು ಒಂದೇ ಮಾತು, ‘’ಪ್ರತೀ ದಿನ ಇದೇ ರೀತಿ ಬೌಲಿಂಗ್ ಮಾಡು’’.
‘’ಕ್ರಿಕೆಟ್ ನಮ್ಮಂಥ ಬಡ ಹುಡುಗರಿಗಲ್ಲ ಸಾಬ್’’ ಎಂದವನೇ ಆಟೋ ಹತ್ತಿ ಹೊರಟು ಬಿಡುತ್ತಾನೆ.
ಆದರೆ ಮನೀಶ್ ಬಂಗೇರ ಹೇಳಿದ ಮಾತು ಮನಸ್ಸಲ್ಲೇ ಕೊರೆಯಲು ಶುರು ಮಾಡುತ್ತದೆ. ‘’ಅವರು ನನ್ನಲ್ಲೇನೋ ನೋಡಿದ್ದಾರೆ. ಯಾಕೆ ಒಂದು ಪ್ರಯತ್ನ ಮಾಡಬಾರದು’’ ಎಂದುಕೊಂಡವನೇ ಲೆದರ್ ಬಾಲ್ ಬೌಲಿಂಗ್ ಆರಂಭಿಸುತ್ತಾನೆ. ಹಾಗೆ ಶುರುವಾಗಿತ್ತು ಆಟೋ ಚಾಲಕನ ಕ್ರಿಕೆಟ್ ಪ್ರಯಾಣ.

ಒಮ್ಮೆ PJ Hindu Gymkhana ತಂಡದ ಪರ ಆಡುತ್ತಿದ್ದಾಗ ಭಾರತ ತಂಡದ ಈಗಿನ ಅಸಿಸ್ಟೆಂಟ್ ಕೋಚ್ ಅಭಿಷೇಕ್ ನಾಯರ್ ಕಣ್ಣಿಗೆ ಬೀಳುತ್ತಾನೆ ಜನೇದ್.
ಹುಡುಗ ಆಟೋ ಓಡಿಸುತ್ತಾನೆ ಎಂಬುದು ಗೊತ್ತಾದಾಗ ಅಭಿಷೇಕ್ ನಾಯರ್’ಗೆ ಒಂದು ಕ್ಷಣ ಮಾತೇ ನಿಂತು ಹೋಗಿತ್ತು.
‘’ಆಟೋ ಓಡಿಸುವುದನ್ನು ಇವತ್ತಿಗೇ ನಿಲ್ಲಿಸಿ ನಿನ್ನ ಸಮಯವನ್ನೆಲ್ಲಾ ಕ್ರಿಕೆಟ್’ಗೆ ಮೀಸಲಿಟ್ಟು ಬಿಡು’’ ಎನ್ನುತ್ತಾರೆ ಅಭಿಷೇಕ್ ನಾಯರ್.
ತಮ್ಮದೇ ಕ್ರಿಕೆಟ್ ಅಕಾಡೆಮಿಯಲ್ಲಿ ಜುನೇದ್ ಖಾನ್’ಗೆ ಅಭ್ಯಾಸಕ್ಕೆ ಜಾಗ ನೀಡುತ್ತಾರೆ. 2024ರ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ತಂಡದ ನೆಟ್ ಬೌಲರ್ ಆಗಿ ಜುನೇದ್’ನನ್ನು ಕರೆದೊಯ್ಯುತ್ತಾರೆ ಅಭಿಷೇಕ್ ನಾಯರ್.
ಹುಡುಗರಲ್ಲಿ ಪ್ರತಿಭೆಯಿದೆ ಎಂದಾಕ್ಷಣ ಅವರ ವಯಸ್ಸು, ಹಿನ್ನೆಲೆ ಯಾವುದನ್ನೂ ನೋಡದೆ merit ಮೇಲೆ ಅವಕಾಶ ಕೊಡುವುದು ಮುಂಬೈ ಕ್ರಿಕೆಟ್ ಸಂಸ್ಥೆಯ ಸ್ಪೆಷಾಲಿಟಿ. ಜುನೇದ್ ಖಾನ್ ಆಟವನ್ನು ನೋಡಿದವರು ಇರಾನಿ ಕಪ್ ಪಂದ್ಯಕ್ಕೆ ಮುಂಬೈ ತಂಡದಲ್ಲಿ ಜುನೇದ್ ಖಾನ್’ಗೆ ಅವಕಾಶ ಕೊಡುತ್ತಾರೆ.
ಮುಂಬೈನ ಬೀದಿಗಳಲ್ಲಿ ಆಟೋ ಓಡಿಸುತ್ತಿದ್ದ ಯುವಕ ಈಗ ಇರಾನಿ ಕಪ್ ಎತ್ತಿ ಹಿಡಿದಿದ್ದಾನೆ.




