
ಉಡುಪಿ ಜಿಲ್ಲಾ ಅಂಡರ್–19 ಪ್ರತಿಭಾ ಶೋಧ ಕ್ರಿಕೆಟ್ ಪಂದ್ಯಾವಳಿ: ಕ್ರಿಕೆಟ್ ಇತಿಹಾಸದಲ್ಲಿ ಹೊಸ ಅಧ್ಯಾಯ
ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆ (UDCA) ವತಿಯಿಂದ ಉಡುಪಿ ಜಿಲ್ಲೆಯ ಅಂಡರ್–19 ವಯೋಮಾನದ ಬಾಲಕರಿಗಾಗಿ ವಿಶೇಷ ಪ್ರತಿಭಾ ಶೋಧ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಇದು ಉಡುಪಿ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಮಹತ್ವದ ಹಾಗೂ ವಿಶಿಷ್ಟ ಕಾರ್ಯಕ್ರಮವಾಗಿದೆ.

ಈ ಪಂದ್ಯಾವಳಿ ಆಯ್ಕೆ ಪಂದ್ಯಗಳ ಮಾದರಿಯಲ್ಲಿ 90 ಓವರ್‌ಗಳ ಎರಡು ಇನಿಂಗ್ಸ್‌ಗಳ ಪಂದ್ಯವಾಗಿ ಆಯೋಜಿಸಿರುವುದು ಇದರ ಪ್ರಮುಖ ವಿಶೇಷತೆಯಾಗಿದೆ. ಇದರಿಂದ ಯುವ ಕ್ರಿಕೆಟ್ ಆಟಗಾರರಿಗೆ ಉನ್ನತ ಮಟ್ಟದ ಪಂದ್ಯ ಅನುಭವವನ್ನು ನೀಡುವ ಜೊತೆಗೆ, ದೀರ್ಘ ಅವಧಿಯ ಆಟದ ಮನೋಭಾವ, ತಾಂತ್ರಿಕತೆ ಮತ್ತು ಶಿಸ್ತು ಬೆಳೆಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.


ಈ ಮಹತ್ವದ ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಕಾರ್ಯಕಾರಿ ಸಮಿತಿ, ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಸಂಪೂರ್ಣ ಬೆಂಬಲ ದೊರೆತಿದ್ದು, ಪಂದ್ಯಗಳು ನಿಟ್ಟೆ ಬಿ.ಸಿ. ಆಳ್ವ ಕ್ರಿಕೆಟ್ ಮೈದಾನದಲ್ಲಿ ಯಶಸ್ವಿಯಾಗಿ ನಡೆಯುತ್ತಿವೆ.

ಪಂದ್ಯಾವಳಿಯ ಉದ್ಘಾಟನಾ ಸಮಾರಂಭವನ್ನು ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾದ ಡಾ. ಕೃಷ್ಣ ಪ್ರಸಾದ್ ಅವರು ನೆರವೇರಿಸಿದರು. ಈ ಸಂದರ್ಭ ಮಾತನಾಡಿದ ಅವರು, ಯುವ ಆಟಗಾರರು ಶಾರೀರಿಕ ಫಿಟ್ನೆಸ್‌ಗೆ ಹೆಚ್ಚಿನ ಮಹತ್ವ ನೀಡಬೇಕು, ಕ್ರೀಸ್‌ನಲ್ಲಿ ತಮ್ಮ ವಿಕೆಟ್‌ನ ಮೌಲ್ಯವನ್ನು ಅರಿತು ಆಟವಾಡಬೇಕು ಹಾಗೂ ಭವಿಷ್ಯದಲ್ಲಿ ಜಿಲ್ಲೆಯಿಂದಲೇ ಬಲಿಷ್ಠ ಟೆಸ್ಟ್ ಕ್ರಿಕೆಟ್ ತಂಡ ನಿರ್ಮಾಣವಾಗುವ ಅಗತ್ಯತೆಯ ಬಗ್ಗೆ ಪ್ರೇರಣಾದಾಯಕವಾಗಿ ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ಡಾ. ರೆನ್ ಟ್ರೆವರ್ ಡಯಾಸ್ ಅವರು ಸಭೆಯನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕೋಚ್ ಶ್ರೀ ಸದಾನಂದ ಶಿರ್ವ, ನಿಟ್ಟೆ ವಿಶ್ವವಿದ್ಯಾಲಯದ ಆಡಳಿತ ವರ್ಗದ ಸದಸ್ಯರು ಉಪಸ್ಥಿತರಿದ್ದರು. ನಿಟ್ಟೆ ವಿಶ್ವವಿದ್ಯಾಲಯದ ಶಾರೀರಿಕ ಶಿಕ್ಷಣ ನಿರ್ದೇಶಕರಾದ ಡಾ.ಶಾಮ್ ಸುಂದರ್ ಅವರು ಸಮಾರಂಭದಲ್ಲಿ ಭಾಗವಹಿಸಿ, ಈ ಮಹತ್ವದ ಕ್ರಿಕೆಟ್ ಉಪಕ್ರಮಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ಉಡುಪಿ ಜಿಲ್ಲೆಯ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸಿ, ಭವಿಷ್ಯದ ಉನ್ನತ ಮಟ್ಟದ ಆಟಗಾರರನ್ನು ರೂಪಿಸುವ ದಿಶೆಯಲ್ಲಿ ಈ ಪಂದ್ಯಾವಳಿ ಮಹತ್ವದ ಹೆಜ್ಜೆಯಾಗಿದ್ದು, ಕ್ರಿಕೆಟ್ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.





