
ಟೆನಿಸ್ ಬಾಲ್ ಕ್ರಿಕೆಟ್ ಪ್ರತಿಭೆಗೆ ಬೃಹತ್ ವೇದಿಕೆಯಾದ ದುಬೈನ ರಾಹುಲ್ ದ್ರಾವಿಡ್ ಕಪ್
ಅರಬ್ ಸಂಯುಕ್ತರಾಷ್ಟ್ರದ ದುಬೈಯಲ್ಲಿ ರಾಹುಲ್ ದ್ರಾವಿಡರ ಮಹಾ ಅಭಿಮಾನಿಯಾದ ಉಡುಪಿ ಸೂರಾಲು ಮೂಲದ ವಿಠಲ ರಿಶಾನ ನಾಯಕರು ಆಯೋಜಿಸುತ್ತಿರುವ ರಾಹುಲ್ ದ್ರಾವಿಡ್ ಕ್ರಿಕೆಟ್ ಪಂದ್ಯಾಟದ ತೃತೀಯ ಹಂತದ ಲೀಗ್ ಆಟಗಳು ಸಮಬಲದ ರೋಚಕ ಕಾದಾಟದಲ್ಲಿ ಸಾಗುತ್ತಿದೆ.
ಮೊದಲ ಪಂದ್ಯದಲ್ಲಿ ಬಲಿಷ್ಠ ಲಿವಿಂಗ್ ಸ್ಟೋನ್ ತಂಡವು ಗೋಲ್ಡನ್ ಸಿಟಿ ಬಾಯ್ಸ್ ತಂಡದ ವಿರುದ್ಧ ಮೊದಲು ಬ್ಯಾಟ್ ಮಾಡಿ 15 ಓವರ್ ಗಳಲ್ಲಿ 199 ರನ್ನುಗಳ ಬೃಹತ್ ಮೊತ್ತ ಕಲೆಹಾಕಿತು.ಇದನ್ನು ಬೆಂಬತ್ತಿದ ಗೋಲ್ಡನ್ ಸಿಟಿ ಬಾಯ್ಸ್ ತಂಡವು ದಿಟ್ಟ ಪ್ರತಿಹೋರಾಟ ನೀಡಿದರೂ ಅಂತಿಮವಾಗಿ 167 ರನ್ ಸೇರಿಸಿ ತನ್ನೆಲ್ಲಾ ವಿಕೆಟಗಳನ್ನು ಕಳೆದುಕೊಂಡು 32 ರನ್ನುಗಳ ಕೊರತೆಯೊಂದಿಗೆ ಶರಣಾಯಿತು.25ಚೆಂಡುಗಳಲ್ಲಿ 11 ಭರ್ಜರಿ ಸಿಕ್ಸರ್ ಹಾಗೂ ಮೂರು ಬೌಂಡರಿಯೊಂದಿಗೆ 83 ರನ್ ಸಿಡಿಸಿದ ಶಾಹೀದ್ ಕೀ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು.
ಎರಡನೇಯ ಪಂದ್ಯದಲ್ಲಿ ಕರಾವಳಿ ಫ್ರೆಂಡ್ಸ್ ಕ್ರಿಕೆಟರ್ಸ್ ತಂಡವು ಬ್ಲೂ ಮಾಸ್ಟರ್ಸ್ ತಂಡದ ವಿರುದ್ಧ 160 ರನ್ ಗಳಿಸಿದರೆ ಇದಕ್ಕುತ್ತರವಾಗಿ ಬ್ಲೂ ಮಾಸ್ಟರ್ಸ್ ತಂಡವು ಕರಾವಳಿ ಕ್ರಿಕೆಟರ್ಸ್ ತಂಡದ ಚರನ್ ಎಂ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ 104 ರನ್ನುಗಳಿಗೆ ಎಲ್ಲಾ ವಿಕೆಟನ್ನು ಕಳೆದುಕೊಂಡು 56 ರನ್ನುಗಳ ದೀರ್ಘ ಅಂತರದ ಸೋಲುಂಡಿತು.3 ಓವರ್ ಗಳಲ್ಲಿ ಕೇವಲ 18ರನ್ ನೀಡಿ ನಾಲಕ್ಕು ಅಮೂಲ್ಯ ವಿಕೆಟ್ ಪಡೆದ ಕರಾವಳಿ ಕ್ರಿಕೆಟರ್ಸ್ ತಂಡದ ಚರಣ ಎಂ ಅವರಿಗೆ ಅರ್ಹವಾಗಿಯೇ ಪಂದ್ಯಪುರುಷೋತ್ತಮ ಪ್ರಶಸ್ತಿ ಒಲಿಯಿತು.
ಮೂರನೇ ಪಂದ್ಯದಲ್ಲಿ ಬ್ಲಿಟ್ಸ್ ವಾರಿಯರ್ಸ್ ಡಿಎಕ್ಸಬಿ ತಂಡವು ಝನ್ನು ಅಲಯನ್ ತಂಡದ ವಿರುದ್ಧ ಮೊದಲು ಬ್ಯಾಟ್ ಮಾಡಿ 99ರನ್ ಗಳಿಸಿದರೆ ಈ ಮೊತ್ತವನ್ನು ಬೆನ್ನಟ್ಟಿದ ಝನ್ನು ಅಲಯನ್ ತಂಡವು ಕೇವಲ ನಾಲಕ್ಕು ವಿಕೆಟ್ ಕಳೆದುಕೊಂಡು.11.1 ಓವರನಲ್ಲಿ ಸಲೀಸಾಗಿ ಗುರಿ ತಲುಪಿತು.2 ಓವರಗಳಲ್ಲಿ ಬ್ಲಿಟ್ಜ್ ವಾರಿಯರ್ಸ್ ನ ಪ್ರಮುಖ ಎರಡು ವಿಕೆಟ್ ಕಿತ್ತ ರಶೀದಗೆ ಪಂದ್ಯ ಶ್ರೇಷ್ಠಪ್ರಶಸ್ತಿ ಲಭಿಸಿತು.
ನಾಲ್ಕನೇ ಪಂದ್ಯದಲ್ಲಿ ಫಾಲ್ಕನ್ಸ್ ಅಜ್ಮಾನ್ ತಂಡವು ಸಿಯಾಲ್ಕೊಟ್ ರೈಸಿಂಗ್ ಸ್ಟಾರ್ ಕ್ರಿಕೆಟರ್ಸ್ ತಂಡದ ವಿರುದ್ಧ 10 ಓವರಗಳಲ್ಲಿ ತನ್ನೆಲ್ಲಾ ವಿಕೆಟಗಳನ್ನು ಕಳೆದುಕೊಂಡು144 ರನ್ ಪೇರಿಸಿತು.ಇದಕ್ಕುತ್ತರವಾಗಿ ಸಿಯಾಲ್ಕೊಟ್ ತಂಡವು 14.5 ಓವರಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಜಯಗಳಿಸಿತು. ತೀವ್ರ ಜಿದ್ದಾಜಿದ್ದಿನಿಂದ ಸಾಗಿದ ಈ ಪಂದ್ಯದ ಫಲಿತಾಂಶ ಕೊನೆಕ್ಷಣದವರೆಗೂ ಕುತೂಹಲ ಮೂಡಿಸಿತ್ತು. ಕೇವಲ ಹದಿನಾರು ಚೆಂಡುಗಳಲ್ಲಿ ಏಳು ಸಿಕ್ಸರನೊಂದಿಗೆ ಅರ್ಧಶತಕ ಸಿಡಿಸಿ ಪಂದ್ಯದ ಪಥವನ್ನೇ ಬದಲಿಸಿದ ಸಿಯಾಲ್ಕೋಟ್ ಕ್ರಿಕೆಟರ್ಸ್ ತಂಡದ ಎಂಝಾಕಿ ಪಂದ್ಯದ ವ್ಯಕ್ತಿಯಾಗಿ ಅಭಿನಂದಿತರಾದರು.ಜೊತೆಗೆ ಬೌಲಿಂಗನಲ್ಲೂ ಕೂಡಾ ಎಂಝಾಕಿ ಮೂರು ಅತ್ಯಮೂಲ್ಯ ವಿಕೆಟ್ ಗಳಿಸಿದ್ದರು.
ಐದನೇಯ ಪಂದ್ಯದಲ್ಲಿ ಆಲ್ಫಾ ಕ್ರಿಕೆಟ್ ಕ್ಲಬ್ ತಂಡವು ದುಬೈನ ಫ್ರೆಂಡ್ಸ್ ಕ್ಲಬ್ ವಿರುದ್ಧ 15 ಓವರಗಳಲ್ಲಿ 8 ವಿಕೆಟ್ ಕಳೆದುಕೊಂಡು 139ರನ್ ಗಳಿಸಿತು.ಈ ಗುರಿಯನ್ನು ಬೆಂಬತ್ತಿದ ಫ್ರೆಂಡ್ಸ್ ಕ್ಲಬ್ ದುಬೈ ತಂಡವು ನಡುವೆ ಸಂಕಷ್ಟದಲ್ಲಿ ಸಿಲುಕಿದರೂ ಕೀಫಾಯತ್ ಅಫ್ರಿದಿ ಅವರ ಅಮೋಘ ಆಟದಿಂದಾಗಿ ಎಂಟು ವಿಕೆಟ್ ಕಳೆದುಕೊಂಡರೂ ಅಂತಿಮ ಕ್ಷಣದಲ್ಲಿ ಜಯವನ್ನು ಒಲಿಸಿಕೊಂಡಿತು.ಕಿಫಾಯತ್ ಅಫ್ರಿದಿಯವರು ಕೇವಲ 20 ಚೆಂಡುಗಳಲ್ಲಿ ಏಳು ಸಿಕ್ಸರ್ ಎರಡು ಬೌಂಡರಿಯೊಂದಿಗೆ ಮಿಂಚಿನ 60 ರನ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು.ಅಲ್ಲದೆ 3 ಓವರಗಳಲ್ಲಿ 10 ರನ್ ನೀಡಿ ಜರೂರಿನ ಒಂದು ವಿಕೆಟನ್ನು ಜೋಬಿಗಿಳಿಸಿಕೊಂಡರು.ಸಹಜವಾಗಿಯೇ ಅಫ್ರಿದಿಯವರು ಪಂದ್ಯದ ವ್ಯಕ್ತಿಯಾಗಿ ಆಯ್ಕೆಯಾದರು.
ಅರಬ್ ಸಂಯುಕ್ತ ರಾಷ್ಟ್ರದ ದುಬೈನಲ್ಲಿ ಪ್ರಭಲ ಪ್ರತಿಸ್ಪರ್ಧೆಯೊಂದಿಗೆ ಸಾಗುತ್ತಿರುವ ರಾಹುಲ್ ದ್ರಾವಿಡ್ ಕ್ರಿಕೆಟ್ ಪಂದ್ಯಾಟವು ವಿಠಲ್ ರಿಶಾನ್ ನಾಯಕರ ಹಿರಿತನದಲ್ಲಿ ಸಾಗುತ್ತಿದೆ.ಪ್ರತಿ ಭಾನುವಾರ ಜರಗುತ್ತಿರುವ ಈ ಪಂದ್ಯದ ವೀಕ್ಷಣೆಗೆ ದುಬೈ ಮಾತ್ರವಲ್ಲದೆ ಸಮೀಪದ ವಿವಿಧ ಪಟ್ಟಣಗಳಿಂದಲೂ ಆಗಮಿಸುತ್ತಿರುವ ನೂರಾರು ಕ್ರಿಕೆಟ್ ಪ್ರಿಯರು ಈ ಅಪೂರ್ವ ಕ್ರೀಡಾ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದ್ದಾರೆ.