
ರಾಹುಲ್ ದ್ರಾವಿಡ್ ಬಳಿಕ ಟೆಸ್ಟ್ ಕ್ರಿಕೆಟ್‌ನ ಬಲಗೈ – ಪೂಜಾರ ಕ್ರಿಕೆಟ್‌ಗೆ ವಿದಾಯ
ಸೌರಾಷ್ಟ್ರದ ಸ್ಟಾರ್ ಬ್ಯಾಟರ್, ಟೆಸ್ಟ್ ಸ್ಪೆಷಲಿಸ್ಟ್ ಎಂದೇ ಖ್ಯಾತಿ ಪಡೆದ ಚೇತೇಶ್ವರ್ ಪೂಜಾರ ತನ್ನ ಅಂತಾರಾಷ್ಟ್ರೀಯ ಹಾಗೂ ಪ್ರೊಫೆಷನಲ್ ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ.

ಭಾರತೀಯ ಕ್ರಿಕೆಟ್‌ಗೆ ಟೆಸ್ಟ್ ಫಾರ್ಮ್ಯಾಟಿನಲ್ಲಿ ಹೊಸ ಆಶಾಕಿರಣವಾಗಿ ತಾನೇ ಹೊರಹೊಮ್ಮಿದ್ದ ಚೇತೇಶ್ವರ್ ಪೂಜಾರ ಈಗ ತನ್ನ ಕ್ರಿಕೆಟ್ ಬದುಕಿಗೆ ತೆರೆ ಎಳೆದಿದ್ದಾರೆ. “ದಿ ವಾಲ್” ರಾಹುಲ್ ದ್ರಾವಿಡ್ ಅವರು ಮೈದಾನಕ್ಕೆ ವಿದಾಯ ಹೇಳಿದ ಬಳಿಕ, ಭಾರತೀಯ ತಂಡದ ದೀರ್ಘ ಇನ್ನಿಂಗ್ಸ್ ನಿರ್ವಹಣೆ ಮತ್ತು ತಾಳ್ಮೆಯ ಪ್ರತೀಕವಾಗಿ ಪೂಜಾರರೇ ಅಭಿಮಾನಿಗಳ ಕಣ್ಣಲ್ಲಿ ಕಾಣಿಸಿಕೊಂಡರು.


ಸೌರಾಷ್ಟ್ರ ತಂಡದ ಈ ಬ್ಯಾಟರ್ ತಮ್ಮ ಕಟ್ಟುನಿಟ್ಟಿನ ರಕ್ಷಣಾತ್ಮಕ ಆಟ, ನಿಖರ ತಂತ್ರ ಹಾಗೂ ಶಿಸ್ತುಬದ್ಧ ಬ್ಯಾಟಿಂಗ್ ಮೂಲಕ ಅನೇಕ ಸಾರಿ ತಂಡವನ್ನು ಸಂಕಷ್ಟದಿಂದ ಹೊರತಂದಿದ್ದರು. ಟೆಸ್ಟ್ ಕ್ರಿಕೆಟ್‌ಗೆ ಹೇಳಿ ಮಾಡಿಸಿದ ಆಟಗಾರರಂತೆ ಹೆಸರು ಗಳಿಸಿದ ಪೂಜಾರ, ಭಾರತೀಯ ತಂಡಕ್ಕೆ 100ಕ್ಕೂ ಹೆಚ್ಚು ಟೆಸ್ಟ್‌ಗಳಲ್ಲಿ ಪ್ರತಿನಿಧಿಸಿ ಮಹತ್ವದ ಕೊಡುಗೆ ನೀಡಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ, ದೇಶೀಯ ಕ್ರಿಕೆಟ್‌ನಲ್ಲಿಯೂ ತಮ್ಮದೇ ಆದ ಗುರುತು ಮೂಡಿಸಿದ ಈ ಶಾಂತ ಸ್ವಭಾವದ ಕ್ರಿಕೆಟಿಗನ ವಿದಾಯವು ಭಾರತೀಯ ಕ್ರಿಕೆಟ್ ಅಭಿಮಾನಿಗಳ ಹೃದಯದಲ್ಲಿ ನೆನಪಾಗಿ ಉಳಿಯುವಂತದ್ದು.




