
ಕರ್ನಾಟಕ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನ್ನಿಸ್ ಪಂದ್ಯಾವಳಿ: ಹಿಮಾಂಶಿ ಚೌಧರಿ ಹಾಗೂ ಬಿ.ಆರ್. ಗೌರವ್ ಚಾಂಪಿಯನ್
ದಕ್ಷಿಣ ಕನ್ನಡ ಜಿಲ್ಲಾ ಟೇಬಲ್ ಟೆನ್ನಿಸ್ ಅಸೋಸಿಯೇಷನ್ ವತಿಯಿಂದ ಮಂಗಳೂರು ಟೇಬಲ್ ಟೆನ್ನಿಸ್ ಅಕಾಡೆಮಿ, ಮಂಗಳೂರಿನಲ್ಲಿ ಜುಲೈ 1ರಿಂದ 4ರವರೆಗೆ ನಡೆಯುತ್ತಿರುವ ಕರ್ನಾಟಕ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನ್ನಿಸ್ ಪಂದ್ಯಾವಳಿಯ ಎರಡನೇ ದಿನದ ಪಂದ್ಯಗಳಲ್ಲಿ ಅಂಡರ್-19 ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ರೋಚಕ ಹಣಾಹಣಿಗಳು ನಡೆದವು.

ಅಂಡರ್-19 ಬಾಲಕಿಯರ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ಹಿಮಾಂಶಿ ಚೌಧರಿ ಅವರು ರಾಶಿ ವಿ. ರಾವ್ ಅವರನ್ನು 9-11, 11-6, 11-13, 12-10, 11-6, 4-11, 11-6 ಅಂತರದಿಂದ ಸೋಲಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಸೆಮಿಫೈನಲ್ನಲ್ಲಿ ಹಿಮಾಂಶಿ ಚೌಧರಿ ಅವರು ಐರಿನ್ ಅಣ್ಣಾ ಸುಭಾಷ್ ಅವರನ್ನು 11-9, 7-11, 11-1, 11-9 ಅಂತರದಿಂದ ಮಣಿಸಿದರು. ಇನ್ನೊಂದು ಸೆಮಿಫೈನಲ್ನಲ್ಲಿ ರಾಶಿ ವಿ. ರಾವ್ ಅವರು ಹಿಯಾ ಸಿಂಗ್ ಅವರನ್ನು 11-4, 11-5, 9-11, 12-10 ಅಂತರದಿಂದ ಪರಾಭವಗೊಳಿಸಿ ಫೈನಲ್ ಪ್ರವೇಶಿಸಿದರು.
ಅಂಡರ್-19 ಬಾಲಕರ ಸಿಂಗಲ್ಸ್ ವಿಭಾಗದ ಫೈನಲ್ನಲ್ಲಿ ಬಿ.ಆರ್. ಗೌರವ್ ಅವರು ಗೌರವ್ ಗೌಡ ಅವರನ್ನು 11-6, 12-14, 11-9, 11-8, 9-11, 11-1 ಅಂತರದಿಂದ ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದರು.

ಸೆಮಿಫೈನಲ್ ಪಂದ್ಯಗಳಲ್ಲಿ ಗೌರವ್ ಗೌಡ ಅವರು ಆರ್ನವ್ ನವೀನ್ ಅವರನ್ನು 5-11, 11-4, 5-11, 11-7, 11-5 ಅಂತರದಿಂದ ಮಣಿಸಿದರೆ, ಬಿ.ಆರ್. ಗೌರವ್ ಅವರು ತಮೋಘ್ನ ಮುಂಡರ್ಗಿ ಅವರನ್ನು 11-5, 11-5, 11-8 ಅಂತರದಿಂದ ಸೋಲಿಸಿ ಫೈನಲ್ಗೆ ಲಗ್ಗೆಯಿಟ್ಟರು.
ಪಂದ್ಯಾವಳಿಯ ವಿಶೇಷ ಅತಿಥಿಗಳಾಗಿ ಟಿ.ಜಿ. ಉಪಾಧ್ಯ ಹಾಗೂ ಕೆ.ಆರ್. ಮಂಜುನಾಥ್ ಭಾಗವಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಟೇಬಲ್ ಟೆನ್ನಿಸ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಕುಂದಾಪುರ ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಗೌತಮ್ ಶೆಟ್ಟಿ ಅವರು ಪಂದ್ಯಾವಳಿಯ ಯಶಸ್ವಿ ಆಯೋಜನೆಗೆ ನೇತೃತ್ವ ವಹಿಸಿದ್ದಾರೆ.




