ತಂದೆಯ ಪ್ರತೀ ಬೆವರ ಹನಿಗೂ ಬೆಲೆ ತಂದು ಕೊಟ್ಟ ಮಗ!
ಆ ತಂದೆ ತನ್ನ ಮಕ್ಕಳಿಬ್ಬರೂ ಭಾರತ ಕ್ರಿಕೆಟ್ ತಂಡದ ಪರ ಆಡಲೇಬೇಕೆಂದು ಕನಸು ಕಂಡವರು. ಇಬ್ಬರೂ ಹುಡುಗರಿಗೆ ತಂದೆಯೇ ಕೋಚ್. ಹಗಲೂ ರಾತ್ರಿ ಮಕ್ಕಳಿಗೆ ಕ್ರಿಕೆಟ್ ಪಾಠ ಹೇಳಿ ಕೊಟ್ಟ ತಂದೆ, ಮಕ್ಕಳಿಗಾಗಿ ಹರಿಸಿದ ಬೆವರ ಹನಿಗಳಿಗೆ ಲೆಕ್ಕವೇ ಇಲ್ಲ. ಭೂಮಿಗೆ ಬಿದ್ದ ತಂದೆಯ ಆ ಪ್ರತೀ ಬೆವರ ಹನಿಗೂ ಬೆಲೆ ತಂದು ಕೊಟ್ಟಿದ್ದಾನೆ ಹಿರಿ ಮಗ.
ನ್ಯೂಜಿಲೆಂಡ್ ವಿರುದ್ಧದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸಿದ ಮುಂಬೈ ಆಟಗಾರ ಸರ್ಫರಾಜ್ ಖಾನ್’ನ ಹಿಂದೆ ನಿಂತಿರುವ ಯಶೋಶಕ್ತಿ ತಂದೆ ನೌಶಾದ್ ಖಾನ್.
ನೌಶಾದ್ ಖಾನ್ ಉತ್ತರ ಪ್ರದೇಶದ ಅಜಂಗಢದವರು. ಕ್ರಿಕೆಟ್ ಮೇಲಿನ ಪ್ರೀತಿ ಅವರನ್ನು ಮುಂಬೈಗೆ ಕರೆ ತಂದಿತ್ತು. ಮುಂಬೈನ ಆಜಾದ್ ಮೈದಾನಕ್ಕೆ ಬರುತ್ತಿದ್ದ ಹುಡುಗರಿಗೆ ಕ್ರಿಕೆಟ್ ಪಾಠ ಹೇಳಿ ಕೊಡುತ್ತಿದ್ದ ನೌಶಾದ್ ಖಾನ್ ತಮ್ಮ ಇಬ್ಬರು ಗಂಡು ಮಕ್ಕಳ ಪಾಲಿಗಂತೂ ದ್ರೋಣಾಚಾರ್ಯನೇ ಆಗಿ ಬಿಟ್ಟಿದ್ದಾರೆ.
ಒಬ್ಬ ಸರ್ಫರಾಜ್ ಖಾನ್, ಇನ್ನೊಬ್ಬ ಮುಶೀರ್ ಖಾನ್. ಕ್ರಿಕೆಟ್ ಹಸಿವಿರುವ ಹುಡುಗರು. ಮೊನ್ನೆ ದುಲೀಪ್ ಟ್ರೋಫಿಯಲ್ಲಿ ಮುಶೀರ್ ಖಾನ್ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಾರಿಸಿದ್ದ ಶತಕವನ್ನು ನೋಡಿ ರೋಮಾಂಚನವಾಗಿತ್ತು. ಈಗ ಅದೇ ಮೈದಾನದಲ್ಲಿ ಅಣ್ಣ ಸರ್ಫರಾಜ್ ಖಾನ್ ಟೆಸ್ಟ್ ವೃತ್ತಿಜೀವನದ ಮೊದಲ ಶತಕ ಬಾರಿಸಿದ್ದಾನೆ.
ಮಕ್ಕಳಿಗಾಗಿ ನೌಶಾದ್ ಖಾನ್ ಮಾಡಿದ ತ್ಯಾಗ ತುಂಬಾ ದೊಡ್ಡದು. ಅದೆಷ್ಟೋ ದಿನ ಹಸಿದ ಹೊಟ್ಟೆಯಲ್ಲಿ ಮಲಗಿದ್ದೂ ಇದೆ. ಇಬ್ಬರು ಮಕ್ಕಳಲ್ಲಿ ಒಬ್ಬನಾದರೂ ಭಾರತ ಪರ ಆಡಬೇಕು ಅಷ್ಟೇ. ಇದೊಂದೇ ತಂದೆಯ ಕನಸಾಗಿತ್ತು.
ಇದೇ ವರ್ಷದ ಫೆಬ್ರವರಿಯಲ್ಲಿ ಮಗ ಟೆಸ್ಟ್ ಕ್ಯಾಪ್ ಧರಿಸಿದಾಗ ಕಣ್ಣೀರಿಟ್ಟಿದ್ದ ತಂದೆಗೆ ಈಗ ಶತಕದ ಉಡುಗೊರೆ ಕೊಟ್ಟಿದ್ದಾನೆ ಹೆಮ್ಮೆಯ ಪುತ್ರ ಸರ್ಫರಾಜ್