ಕೆಚ್ಚಿನ.. ಕಿಚ್ಚಿನ ಯುವರಾಜನ ಕಥೆ..!

ಕೆಚ್ಚಿನ.. ಕಿಚ್ಚಿನ ಯುವರಾಜನ ಕಥೆ..!

ಕೆಚ್ಚಿನ.. ಕಿಚ್ಚಿನ ಯುವರಾಜನ ಕಥೆ..!

ಪಂಜಾಬ್’ನ ಲೂಧಿಯಾನದ ಕೆನೆಚ್ ಎಂಬ ಹಳ್ಳಿ. ಅಲ್ಲೊಬ್ಬರು ಒಂದೊಮ್ಮೆ ಭಾರತ ಪರ ಆಡಿದ್ದ ಮಾಜಿ ಕ್ರಿಕೆಟಿಗ.. ಅವರಿಗೊಬ್ಬ ಮಗ.. ತನ್ನ ಕ್ರಿಕೆಟ್ ಬದುಕಿಗೆ ಒಬ್ಬರು ಕೊಳ್ಳಿ ಇಟ್ಟರೆಂಬ ಕೋಪ ಆ ತಂದೆಗೆ. ‘‘ತಾನಿರಬೇಕಿದ್ದ ಜಾಗದಲ್ಲಿ ಮಗನನ್ನು ನೋಡುತ್ತೇನೆ, ಅವನನ್ನು ದೊಡ್ಡ ಕ್ರಿಕೆಟಿಗನಾಗಿಸುತ್ತೇನೆ’’ ಎಂದು ಪ್ರತಿಜ್ಞೆ ಮಾಡಿದ ತಂದೆ ಪುಟ್ಟ ಮಗನಿಗೆ ಕ್ರಿಕೆಟ್ ಪಾಠ ಹೇಳಿ ಕೊಡಲು ಶುರು ಮಾಡುತ್ತಾರೆ.

ಆ ತಂದೆಯೋ.. ಶುದ್ಧ ದೂರ್ವಾಸ ಮುನಿ. ಮೂಗಿನ ತುದಿಯಲ್ಲೇ ಕೋಪ.. ತಾಳ್ಮೆ ಎಂಬ ಪದ ಅವರ ಡಿಕ್ಷನರಿಯಲ್ಲೇ ಇಲ್ಲ. ಕ್ರಿಕೆಟ್ ಟ್ರೈನಿಂಗ್ ವಿಚಾರದಲ್ಲಿ ಅಷ್ಟೇ ಟಾಸ್ಕ್ ಮಾಸ್ಟರ್ ಕೂಡ. ಮಗನನ್ನು ಪ್ರತೀ ದಿನ ಅಭ್ಯಾಸಕ್ಕೆ ಕರೆದೊಯ್ಯುತ್ತಿದ್ದ ತಂದೆ, ಮೈದಾನದಲ್ಲಿ ಅಕ್ಷರಶಃ ನಿರ್ದಯಿಯಾಗುತ್ತಿದ್ದರು.. ಅಷ್ಟು ಕಠಿಣ ಮತ್ತು ಕಠೋರ ಟ್ರೈನಿಂಗ್.

ಖಡಕ್ ತಂದೆಯ ಕಾರಣಕ್ಕೆ ಚಿಕ್ಕ ವಯಸ್ಸಲ್ಲೇ ಹುಡುಗ ‘ಜಗತ್ತೇ ಎದುರು ನಿಂತರೂ ಎದೆಯೊಡ್ಡಿ ಎದುರಿಸಿ ನಿಲ್ಲುವೆ’ ಎಂಬಷ್ಟರ ಮಟ್ಟಿಗೆ ಗಟ್ಟಿಗನಾಗಿ ಬಿಟ್ಟ.

ತಾಯಿಯ ಜೊತೆಗಿನ ಮನಸ್ತಾಪದಿಂದ ಜನ್ಮಕೊಟ್ಟ ತಂದೆ ಮನೆಯಿಂದ ದೂರವಾದರೂ, ತಂದೆಯ ರೂಪದಲ್ಲಿದ್ದ ಕ್ರಿಕೆಟ್ ಗುರು ಮಾತ್ರ ಹುಡುಗನ ಜೊತೆಗೇ ಇದ್ದು ಬಿಟ್ಟರು. ಮಿಲಿಟರಿ ಟ್ರೈನಿಂಗ್’ಗಿಂತಲೂ ಕಠೋರವಾಗಿದ್ದ ತಂದೆಯ ಗರಡಿಯ ಅಭ್ಯಾಸವನ್ನು ಹುಡುಗ ಎಂದಿಗೂ ತಪ್ಪಿಸುತ್ತಿರಲಿಲ್ಲ.

ಅಂದ ಹಾಗೆ ಆ ಹುಡುಗ ಯಾರು ಗೊತ್ತೇ..
ಭಾರತೀಯ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ವೈಟ್ ಬಾಲ್ ಕ್ರಿಕೆಟರ್, ಶ್ರೇಷ್ಠಾತಿಶ್ರೇಷ್ಠ ಮ್ಯಾಚ್ ವಿನ್ನರ್, ವಿಶ್ವಕಪ್ ಹೀರೋ ಯುವರಾಜ್ ಸಿಂಗ್.

ಭಾರತೀಯ ಕ್ರಿಕೆಟ್’ನಲ್ಲಿ ದಿಗ್ಗಜರೆನಿಸಿಕೊಂಡವರು ಹೆಜ್ಜೆಗೊಬ್ಬೊಬ್ಬರಂತೆ ಸಿಗುತ್ತಾರೆ.. ಇಲ್ಲಿ ಒಬ್ಬ ಮರೆಯಾದರೆ ಮತ್ತೊಬ್ಬ ಹುಟ್ಟಿ ಬರುತ್ತಾನೆ. ಸುನೀಲ್ ಗವಾಸ್ಕರ್ ನಂತರ ಸಚಿನ್ ತೆಂಡೂಲ್ಕರ್.. ತೆಂಡೂಲ್ಕರ್ ನಂತರ ವಿರಾಟ್ ಕೊಹ್ಲಿ.. ಈಗ ಕೊಹ್ಲಿ ನಂತರ ಇನ್ನೊಬ್ಬ.. ಇದು ಲೋಕ ಮೆಚ್ಚುವ ಕ್ರಿಕೆಟ್ ತಾರೆಗಳನ್ನು ತಯಾರು ಮಾಡುವ ನೆಲ..

ಆದರೆ..
ಯಾರೇ ಬರಲಿ.. ಯಾರೇ ಹೋಗಲಿ.. ಯುವರಾಜ್ ಸಿಂಗ್’ನಂಥಾ ಮತ್ತೊಬ್ಬ ಕ್ರಿಕೆಟಿಗ ಈ ಮಣ್ಣಿನಲ್ಲಿ ಮತ್ತೆ ಹುಟ್ಟಿ ಬರಲಾರ.. ಇದು ಅತಿಶಯೋಕ್ತಿಯಲ್ಲ, ಮುಖಸ್ತುತಿಯ ಮಾತೂ ಅಲ್ಲ.

ಯುವರಾಜ್ ಸಿಂಗ್ ಅಪ್ರತಿಮ ಮ್ಯಾಚ್ ವಿನ್ನರ್.. ಅವನ ಜೀವನವೇ ಒಂದು ಹೋರಾಟ, ಸ್ಫೂರ್ತಿ, ಚರಿತ್ರೆ..

ಬ್ಯಾಟ್ಸ್’ಮನ್’ಗಳು ಬ್ಯಾಟಿಂಗ್’ಗೆ ಬಲ ತುಂಬುತ್ತಾರೆ.. ಬೌಲರ್’ಗಳು ಬೌಲಿಂಗ್ ಪಡೆಗೆ ಶಕ್ತಿಯಾಗುತ್ತಾರೆ. ಆದರೆ ಸವ್ಯಸಾಚಿಗಳು ಇಡೀ ತಂಡಕ್ಕೆ ಬೆನ್ನೆಲುಬಾಗಿ ನಿಲ್ಲುತ್ತಾರೆ. ಭಾರತದ ಪಾಲಿಗೆ ಯುವರಾಜ ಅಂಥಾ ಬೆನ್ನೆಲುಬಾಗಿದ್ದವನು.

2011..
ಭಾರತ ತಂಡ ಭಾರತದಲ್ಲೇ ನಡೆಯಲಿದ್ದ ಐಸಿಸಿ ಏಕದಿನ ವಿಶ್ವಕಪ್’ಗೆ ಸಜ್ಜಾಗುತ್ತಿದ್ದ ಸಮಯ. ಆ ಕಾಲಕ್ಕೆ ತಂಡದ ಆಧಾರಸ್ಥಂಭವಾಗಿ ಬೆಳೆದಿದ್ದ ಯುವರಾಜ್ ಸಿಂಗ್ ಆಗಲೇ ದೇಶಕ್ಕೆ ಎರಡು ವಿಶ್ವಕಪ್’ಗಳನ್ನು ಗೆದ್ದು ಕೊಟ್ಟು ಮೂರನೇ ವಿಶ್ವ ಕಿರೀಟದ ಮೇಲೆ ಕಣ್ಣಿಟ್ಟಿದ್ದ. ಅವನಿಗೆ ಗೊತ್ತಿತ್ತು, ಈ ಬಾರಿ ಭಾರತ ವಿಶ್ವಕಪ್ ಗೆಲ್ಲಬೇಕಾದರೆ ತನ್ನ ಪಾತ್ರವೇ ನಿರ್ಣಾಯಕ ಎಂದು.

ಯುವರಾಜ್ ಸಿಂಗ್ ಕ್ರಿಕೆಟ್ ಮೈದಾನದ ಪಾದರಸ.. ಅವನದ್ದು ಚಿರತೆವೇಗ.. ಆದರೆ ವಿಶ್ವಕಪ್ ಗೆಲ್ಲುವ ಶಪಥ ಮಾಡಿ ಅಖಾಡಕ್ಕಿಳಿದವನ ದೇಹ ಎಂದಿನಂತೆ ಚುರುಕಾಗಿರಲಿಲ್ಲ. ಮನಸ್ಸಿನ ಮಾತು ಕೇಳುತ್ತಿರಲಿಲ್ಲ.. ದೇಹ ಬಹುಬೇಗ ಬಳಲುತ್ತಿತ್ತು.. ಕೆಲವೇ ನಿಮಿಷಗಳ ಟ್ರೈನಿಂಗ್’ನಲ್ಲಿ ಯುವಿ ಬಳಲಿ ಬಿಡುತ್ತಿದ್ದ.. ಏದುಸಿರು ಬಿಡುತ್ತಿದ್ದ.. ಎಲ್ಲೋ ಏನೋ ಸರಿಯಿಲ್ಲ ಎಂಬಂತೆ ಭಾಸವಾಗುತ್ತಿತ್ತು. ಕಾರಣ ಗೊತ್ತಾದಾಗ ಒಂದು ಕ್ಷಣ ಉಸಿರೇ ನಿಂತ ಅನುಭವವಾಗಿತ್ತಂತೆ ಅವನಿಗೆ. ಏಕೆಂದರೆ ಯುವರಾಜನನ್ನು ಕ್ಯಾನ್ಸರ್ ಆವರಿಸಿಕೊಂಡಿತ್ತು.

ಅತ್ತ ವಿಶ್ವಕಪ್.. ಇತ್ತ ಕ್ಯಾನ್ಸರ್ ಆರಂಭಿಕ ಹಂತ.. ಚಿಕಿತ್ಸೆ ಪಡೆಯಲೇಬೇಕು.. ಇಲ್ಲವಾದಲ್ಲಿ ಪ್ರಾಣಕ್ಕೇ ಕಂಟಕ ಎದುರಾಗುವ ಆತಂಕ..
ಮಾರಣಾಂತಿಕ ಕಾಯಿಲೆ ಅಂಟಿರುವುದು ಗೊತ್ತಿದ್ದೂ ವಿಶ್ವಕಪ್ ಅಖಾಡಕ್ಕೆ ಇಳಿದು ಬಿಟ್ಟ ಯುವಿ. ಅಸಾಧಾರಣ ಧೈರ್ಯ, ಆತ್ಮಸ್ಥೈರ್ಯ ಬೇಕು ಆ ನಿರ್ಧಾರ ತೆಗೆದುಕೊಳ್ಳಲು. ಕ್ಯಾನ್ಸರ್ ಹೆಸರು ಕೇಳಿದರೇನೇ ನಡುಗಿ ಬಿಡುವವರ ಮಧ್ಯೆ ಅದೆಂಥಾ ಗಟ್ಟಿ ಗುಂಡಿಗೆ..!

ಕ್ರಿಕೆಟ್ ಯೋಧ ಯುವಿ ವಿಶ್ವಕಪ್’ನಲ್ಲಿ ಅಬ್ಬರಿಸಿ ಬಿಟ್ಟ. 15 ವಿಕೆಟ್, 362 ರನ್.. ಯುವರಾಜನ ಆಟ ಏಕದಿನ ವಿಶ್ವಕಪ್ ಚರಿತ್ರೆಯಲ್ಲಿ ದಾಖಲಾದ ಶ್ರೇಷ್ಠ ಆಲ್ರೌಂಡರ್ ಪ್ರದರ್ಶನಗಳಲ್ಲೊಂದು. ಯುವರಾಜ್ ಸಿಂಗ್ 28 ವರ್ಷಗಳ ನಂತರ ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟಿದ್ದ.

ಕಪಿಲ್ ದೇವ್ ನನಗೆ ಅನ್ಯಾಯ ಮಾಡಿದರೆಂದು ಆಕ್ರೋಶಗೊಂಡಿದ್ದವರು ಯುವಿ ತಂದೆ ಯೋಗರಾಜ್ ಸಿಂಗ್. ಅದೇ ಕಪಿಲ್ ದೇವ್ ದೇಶಕ್ಕೆ ಮೊದಲ ವಿಶ್ವಕಪ್ ಗೆದ್ದು ಕೊಟ್ಟ ನಂತರ, ಏಕದಿನ ಕ್ರಿಕೆಟ್’ನಲ್ಲಿ ಮತ್ತೊಂದು ವರ್ಲ್ಡ್ ಕಪ್ ಗೆಲ್ಲಿಸಲು ಯೋಗರಾಜ್ ಸಿಂಗ್ ಅವರ ಮಗನೇ ಬರಬೇಕಾಯಿತು.

‘’ನಾವು ವಿಶ್ವಕಪ್’ನಲ್ಲಿ ಆಡುವ ಸಂದರ್ಭದಲ್ಲಿ ರೆಸ್ಟ್ ರೂಮ್’ನಲ್ಲಿ ಒಂದು ದಿನ ಯುವಿ ರಕ್ತ ವಾಂತಿ ಮಾಡಿಕೊಂಡದ್ದನ್ನು ನಾನು ನೋಡಿದ್ದೆ. ಏನಾಯಿತೆಂದು ಕೇಳಿದರೆ ಏನೋ ಸಬೂಬು ಹೇಳಿದ್ದ’’ ಎಂದಿದ್ದರು ವೀರೇಂದ್ರ ಸೆಹ್ವಾಗ್.

ಹೌದು.. ದೇಹದೊಳಗೆ ಕ್ಯಾನ್ಸರ್ ಚುಚ್ಚುತ್ತಿತ್ತು.. ಪ್ರಾಣ ಹಿಂಡುತ್ತಿತ್ತು. ಇಡೀ ಟೂರ್ನಿಯನ್ನು ಯುವರಾಜ ಅಸಾಧ್ಯ ನೋವಿನಲ್ಲೇ ಆಡಿದ್ದ. ವಿಶ್ವಕಪ್ ಗೆದ್ದು ಬೀಗಿದ್ದ. ಬೆನ್ನಲ್ಲೇ ಅಮೆರಿಕಗೆ ತೆರಳಿ ಕ್ಯಾನ್ಸರ್’ಗೆ ಚಿಕಿತ್ಸೆ ಪಡೆದು ಮರುಜನ್ಮ ಪಡೆದಿದ್ದ.
ಅವನು ಹೋರಾಟಗಾರ.. ಅಷ್ಟು ಸುಲಭವಾಗಿ ಸೋತು ಕೈಚೆಲ್ಲುವವನಲ್ಲ.. ಮರಣಶಯ್ಯೆಯಿಂದ ಎದ್ದು ಬಂದವನು ಮತ್ತೆ ಐದಾರು ವರ್ಷ ಭಾರತ ಪರ ಆಡಿದ.

2000ನೇ ಇಸವಿ..
ಮೊಹಮ್ಮದ್ ಕೈಫ್ ನಾಯಕತ್ವದ ಭಾರತ ಕಿರಿಯರ ತಂಡ ಅಂಡರ್-19 ವಿಶ್ವಕಪ್ ಗೆದ್ದಿತ್ತು. ಆ ಗೆಲುವಿನ ರೂವಾರಿಯಾಗಿದ್ದವನು ಇದೇ ಯುವರಾಜ.
ಅಲ್ಲಿಂದ ನೇರವಾಗಿ ಭಾರತ ಸೀನಿಯರ್ ತಂಡ ಪ್ರವೇಶ. ಹಾಗೆ ಯುವರಾಜನನ್ನು ಕರೆ ತಂದವರು ಆಗಿನ ಭಾರತ ತಂಡದ ನಾಯಕ, ಬಂಗಾಳದ ಮಹಾರಾಜ ಸೌರವ್ ಗಂಗೂಲಿ. ಹೊಸ ಹುಡುಗರ ಬೆನ್ನು ತಟ್ಟಿ ಅವರ ಮೇಲೆ ಭರವಸೆ ಇಟ್ಟು ಅವಕಾಶಗಳನ್ನು ನೀಡಿ ಬೆಳೆಸಿದ ಭಾರತದ ನಾಯಕರ ಪೈಕಿ ಸೌರವ್ ಗಂಗೂಲಿ ಅಗ್ರಗಣ್ಯ. ಯುವರಾಜ್ ಸಿಂಗ್, ವೀರೇಂದ್ರ ಸೆಹ್ವಾಗ್, ಜಹೀರ್ ಖಾನ್, ಹರ್ಭಜನ್ ಸಿಂಗ್, ಆಶಿಶ್ ನೆಹ್ರಾರಂತಹ ಆಟಗಾರರೆಲ್ಲಾ ಪಳಗಿದ್ದು, ಅವರನ್ನು ಪಳಗಿಸಿದ್ದು ಸೌರವ್ ದಾದ.

ಯುವರಾಜ ಆಗಿನ್ನೂ 19ರ ಯುವಕ. ಕೀನ್ಯಾದ ನೈರೋಬಿಯಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ. ಸೀನಿಯರ್ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಮೊದಲ ಬಾರಿ ಬ್ಯಾಟ್ ಹಿಡಿದು ಮೈದಾನಕ್ಕಿಳಿದಿದ್ದ ಯುವರಾಜ. ಎದುರಿಗಿದ್ದದ್ದು ಆ ಕಾಲದ ದೈತ್ಯ ತಂಡ ಆಸ್ಟ್ರೇಲಿಯಾ.

ಆಸೀಸ್ ಬತ್ತಳಿಕೆಯಲ್ಲಿದ್ದ ಬೌಲಿಂಗ್ ಅಸ್ತ್ರಗಳನ್ನೊಮ್ಮೆ ನೆನಪಿಸಿಕೊಳ್ಳಿ.. ಗ್ಲೆನ್ ಮೆಗ್ರಾತ್, ಬ್ರೆಟ್ ಲೀ, ಯಾಸನ್ ಗಿಲೆಸ್ಪಿ, ಶೇನ್ ವಾರ್ನ್.. ಒಂದು ಕ್ಷಣಕ್ಕಾದರೂ ದಾಂಡಿಗರ ಎದೆ ನಡುಗಿಸುವಂತಹ ಬೌಲಿಂಗ್ ದಂಡು.. ಅಂಥಾ ಬೌಲರ್’ಗಳ ಎದುರಲ್ಲಿ ಅವತ್ತು ನಿಂತವನು ಭಾರತದ ವೀರಾಗ್ರಣಿ ಯುವರಾಜ್ ಸಿಂಗ್.

ಜಗತ್ತಿನ ಭಯಾನಕ ಬೌಲಿಂಗ್ ಆಕ್ರಮಣದ ಮುಂದೆ ಎದೆಯುಬ್ಬಿಸಿ ನಿಂತ ಯುವಿ 80 ಎಸೆತಗಳಲ್ಲಿ 84 ರನ್ ಚಚ್ಚಿ ಬಿಸಾಕಿದ್ದ.. ನೆನಪಿರಲಿ, ಭಾರತ ಪರ ಬ್ಯಾಟಿಂಗ್’ನಲ್ಲಿ ಯುವರಾಜನ ಮೊದಲ ಆಟ ಅದು. ಹೊಸ ಹುಡುಗನ ಆರ್ಭಟಕ್ಕೆ ದಂಗಾಗಿ ಹೋಗಿತ್ತು ಆಸ್ಟ್ರೇಲಿಯಾ.

2002ರ ನಾಟ್ ವೆಸ್ಟ್ ಫೈನಲ್’ನಲ್ಲಿ ಯುವಿ ಆಡಿದ ಆಟ, 2007ರ ಟಿ20 ವಿಶ್ವಕಪ್’ನಲ್ಲಿ ಇಂಗ್ಲೆಂಡ್ ವಿರುದ್ಧ ಬಾರಿಸಿದ ಆ ಸಿಡಿಲ ಸಿಕ್ಸರ್’ಗಳು, ಆಸ್ಟ್ರೇಲಿಯಾ ವಿರುದ್ಧ ಆಡಿದ ವೀರಾವೇಶದ ಇನ್ನಿಂಗ್ಸ್.. ದಶಕದ ಕಾಲ ಭಾರತ ತಂಡಕ್ಕೆ ಬಲವಾಗಿ ನಿಂತು ಆಡಿದ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್’ಗಳು ಹತ್ತಾರು..

ಯುವರಾಜ್ ಸಿಂಗ್’ನಂಥಾ ಕ್ರಿಕೆಟಿಗ ಶತಮಾನಕ್ಕೊಬ್ಬ..

-ಸುದರ್ಶನ್

Leave a Reply

Your email address will not be published. Required fields are marked *