ಈ ವರ್ಷದ ಕೊನೆಯಲ್ಲಿ ಕತಾರ್‌ನಲ್ಲಿ ನಡೆಯಲಿರುವ ಕಿವುಡರ ಟಿ20 ಕ್ರಿಕೆಟ್‌ಗೆ ಭಾರತೀಯ ತಂಡವನ್ನು ಪ್ರಕಟಿಸಲಾಗಿದೆ. ತಂಡದಲ್ಲಿ ತಾಲೂಕಿನ ಪೃಥ್ವಿರಾಜ್ ಶೆಟ್ಟಿ ಹುಂಚನಿ ಆಯ್ಕೆಯಾಗಿದ್ದಾರೆ.
ಇವರು ರಾಷ್ಟ್ರೀಯ ಕಿವುಡರ ತಂಡದಲ್ಲಿರುವ ಕರ್ನಾಟಕದ ಏಕೈಕ ಆಟಗಾರ.
ಪೃಥ್ವಿರಾಜ್ ಬೈಂದೂರು ತಾಲೂಕಿನ ಗೋಳಿಹೊಳೆ ಗ್ರಾಮದ ಸುಭಾಶ್ಚಂದ್ರ ಶೆಟ್ಟಿ ಮತ್ತು ಶೀಲಾವತಿ ದಂಪತಿಯ ಪುತ್ರ. ಹುಟ್ಟು ಕಿವುಡನಾಗಿದ್ದರೂ, ಕ್ರಿಕೆಟ್ ಆಡುವ ಕನಸನ್ನು ನನಸಾಗಿಸಿಕೊಳ್ಳಲು ಅದು ಅಡ್ಡಿಯಾಗಲಿಲ್ಲ.
ಪೃಥ್ವಿರಾಜ್ ಮೂಡುಬಗೆ ಅಂಪಾರುವಿನ ವಿಶೇಷ ಚೇತನ ಮಕ್ಕಳ ವಾಗ್ಜ್ಯೋತಿ ಶಾಲೆಯ ಹಳೆ ವಿದ್ಯಾರ್ಥಿ.ಟೊರ್ಪೆಡೋಸ್ ಮತ್ತು ಚಕ್ರವರ್ತಿ ಕುಂದಾಪುರ ಕ್ರಿಕೆಟ್ ತಂಡದ ಅರೆಕಾಲಿಕ ತರಬೇತುದಾರರಾಗಿ ಕೆಲಸ ಮಾಡುತ್ತಾರೆ. ಇವರು ಕರ್ನಾಟಕ ವಿಕಲಚೇತನರ ಕ್ರಿಕೆಟ್ ತಂಡದ ನಾಯಕರಾಗಿದ್ದರು. 32 ವರ್ಷದ ಪೃಥ್ವಿರಾಜ್ ಭಾರತ ತಂಡದ ಪ್ರಮುಖ ವೇಗದ ಬೌಲರ್ ಮತ್ತು ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್. ಇತ್ತೀಚೆಗೆ ನಡೆದ ತ್ರಿಕೋನ ಏಕದಿನ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಫಿ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು.
ಕಿವುಡರ T20 ಕ್ರಿಕೆಟ್ ಪಂದ್ಯ ಡಿಸೆಂಬರ್ 1 ರಿಂದ 12 ರವರೆಗೆ ಕತಾರ್ ರಾಜಧಾನಿ ದೋಹಾದಲ್ಲಿ ನಡೆಯಲಿದೆ. ವೀರೇಂದ್ರ ಸಿಂಗ್ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ, ಆಲ್ ರೌಂಡರ್ ಸಾಯಿ ಆಕಾಶ್ ಉಪನಾಯಕ. ಭಾರತ ತಂಡದಲ್ಲಿರುವ ಏಕೈಕ ಕನ್ನಡಿಗ ಪೃಥ್ವಿರಾಜ್ ಕತಾರ್ ಗೆ ತೆರಳಿ ಆಡುವ ಇಲೆವೆನ್ ನಲ್ಲಿ ಸ್ಥಾನ ಪಡೆದು ಭಾರತ ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದಾರೆ.