ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಬಿಸಿಸಿಐ ಜ್ಯೂನಿಯರ್ ಸೆಲೆಕ್ಷನ್ ಕಮಿಟಿಯ ಚೇರ್ಮನ್, ಕರ್ನಾಟಕದ ದಿಗ್ಗಜ ವಿಕೆಟ್ ಕೀಪರ್ ತಿಲಕ್ ನಾಯ್ಡು ಅವರು, ನಾನು ಹಾಗೂ ಗೆಳೆಯರು ಊಟಕ್ಕೆ ಸೇರಿದ್ದೆವು.
ಕ್ರಿಕೆಟ್ ಬಗ್ಗೆ ಲೋಕಾಭಿರಾಮವಾಗಿ ಮಾತಾಡುತ್ತಿದ್ದಾಗ ಧ್ರುವ ಜುರೆಲ್ ಬಗ್ಗೆ ತಿಲಕ್ ನಾಯ್ಡು ಅವರೇ ಪ್ರಸ್ತಾಪಿಸಿದರು. ‘’ನೋಡ್ತಾ ಇರೋ, ಇನ್ನು ಕೆಲವೇ ತಿಂಗಳುಗಳಲ್ಲಿ ಧ್ರುವ ಜುರೆಲ್ ಟೆಸ್ಟ್ ಕ್ರಿಕೆಟ್ ಆಡುತ್ತಾನೆ. ಭಾರತ ತಂಡದ ಭವಿಷ್ಯದ ವಿಕೆಟ್ ಕೀಪರ್ ಇವನೇ’’ ಎಂದಿದ್ದರು ತಿಲಕ್ ನಾಯ್ಡು.
ತಿಲಕ್ ನಾಯ್ಡು ಆ ಮಾತು ಹೇಳಿ ಆರೇ ತಿಂಗಳಲ್ಲಿ ಧ್ರುವ ಜುರೆಲ್ ಭಾರತ ಪರ ಟೆಸ್ಟ್ ಕ್ರಿಕೆಟ್ ಆಡಿದ್ದಷ್ಟೇ ಅಲ್ಲ, ತಾನೇ ಟೀಮ್ ಇಂಡಿಯಾದ ಭವಿಷ್ಯದ ವಿಕೆಟ್ ಕೀಪರ್ ಎಂಬುದನ್ನು ಸಾಬೀತು ಮಾಡಿದ್ದಾನೆ.
ಕೆಳ ಕ್ರಮಾಂಕದಲ್ಲಿ ಕ್ರೀಸ್’ಗಿಳಿದು ಆಡುವ ಕೆಲ ಇನ್ನಿಂಗ್ಸ್’ಗಳಿಗೆ ಶತಕಗಳಿಗಿಂತಲೂ ಹೆಚ್ಚು ಮಹತ್ವವಿರುತ್ತದೆ. ಇಂಗ್ಲೆಂಡ್ ವಿರುದ್ಧದ ರಾಂಚಿ ಟೆಸ್ಟ್ ಪಂದ್ಯದಲ್ಲಿ ಧ್ರುವ ಜುರೆಲ್ ಅಂಥದ್ದೇ ಒಂದು ಇನ್ನಿಂಗ್ಸ್ ಆಡಿ ಭಾರತ ತಂಡವನ್ನು ದೊಡ್ಡ ಅಪಾಯದಿಂದ ಪಾರು ಮಾಡಿದ್ದಾನೆ.
90 ರನ್ ಗಳಿಸಿ ಔಟಾದ ಧ್ರುವ ‘ಅರ್ಹ’ ಶತಕದಿಂದ ವಂಚಿತನಾಗಿದ್ದಾನೆ. ಆದರೆ ಆತ ಆಡಿದ ವೀರೋಚಿತ ಇನ್ನಿಂಗ್ಸ್’ನ ಮೌಲ್ಯ ಶತಕಕ್ಕಿಂತಲೂ ದೊಡ್ಡದು. ಕಾರಣ, ಧ್ರುವ ಕ್ರೀಸ್’ಗಿಳಿಯುವ ಹೊತ್ತಿಗೆ ಭಾರತ 161 ರನ್ನಿಗೆ 5 ವಿಕೆಟ್ ಕಳೆದುಕೊಂಡಿತ್ತು. ಇಂಗ್ಲೆಂಡ್ ಮೊತ್ತವನ್ನು ಚುಕ್ತಾ ಮಾಡಲು ಇನ್ನೂ 192 ರನ್ ಬೇಕಿತ್ತು. ಆ ಸಂದರ್ಭದಲ್ಲಿ ಧ್ರುವ ಜುರೆಲ್ ತೋರಿದ ತಾಳ್ಮೆ, ಕೌಶಲ್ಯ, temperament ನೋಡಿದರೆ ಈತ ನಿಜಕ್ಕೂ next level ಕ್ರಿಕೆಟರ್. ಭಾರತ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ವಿಕೆಟ್ ಕೀಪರ್ ಧೋನಿ ಅವರ ನೆಲದಿಂದಲೇ ಧ್ರುವ ದೊಡ್ಡ ಸಿಗ್ನಲ್ ಕೊಟ್ಟಿದ್ದಾನೆ.
ಧ್ರುವ ಜುರೆಲ್ ಉತ್ತರ ಪ್ರದೇಶದ ಆಗ್ರಾದ ಹುಡುಗ. ತಂದೆ 1999ರಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ್ದ ಸೈನಿಕ. 13ನೇ ವಯಸ್ಸಿಗೆ ಒಬ್ಬನೇ ಟ್ರೈನ್ ಹತ್ತಿ ಕ್ರಿಕೆಟ್ ಆಡಲೆಂದೇ ಆಗ್ರಾದಿಂದ ನೋಯ್ಡಾಗೆ ಬಂದಿದ್ದ ಹುಡುಗ. ನೋಯ್ಡಾದಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡುವುದಾಗಿ ಹೇಳಿದ್ದ ಸ್ನೇಹಿತನೊಬ್ಬ ಇಲ್ಲಿಗೆ ಬಂದ ಮೇಲೆ ಕೈಗೆ ಸಿಗದೆ ಮರೆಯಾಗಿದ್ದ. ಆಗ ಧ್ರುವನ ಪಾಲಿಗೆ ದೇವರಂತೆ ಕಂಡವರು ನೋಯ್ಡಾದ ಫೇಮಸ್ ಕ್ರಿಕೆಟ್ ಕೋಚ್ ಫೂಲ್ ಚಾಂದ್.
ಫೂಲ್ ಚಾಂದ್ ಅವರ ಬಳಿ ಬಂದ ಹುಡುಗ. ಯಾರಪ್ಪ ನೀನು ಎನ್ನುವ ಮೊದಲೇ, ‘’ಸರ್ ನನ್ನ ಹೆಸರು ಧ್ರುವ ಜುರೆಲ್. ದಯವಿಟ್ಟು ನನ್ನನ್ನು ನಿಮ್ಮ ಅಕಾಡೆಮಿಗೆ ಸೇರಿಸಿಕೊಳ್ಳಿ’’ ಎಂದಿದ್ದ.
ಒಬ್ಬಂಟಿಯಾಗಿ ಬಂದಿದ್ದ ಹುಡುಗನನ್ನು ನೋಡಿ ಫೂಲ್ ಚಾಂದ್’ಗೊ ಅಚ್ಚರಿ. ಆ ಕ್ಷಣ ಅವರ ಮನಸ್ಸಲ್ಲಿ ಮೂಡಿದ ಪ್ರಶ್ನೆ ‘’ಇವನೇನಾದರೂ ಮನೆ ಬಿಟ್ಟು ಓಡಿ ಬಂದಿರುವನೇ’’ ಎಂದು.
ಧ್ರವನಿಂದ ತಂದೆಯ ಫೋನ್ ನಂಬರ್ ಪಡೆದು ಹುಡುಗನ ಬಗ್ಗೆ ವಿಚಾರಿಸುತ್ತಾರೆ. ಮನೆಯವರ ವಿರೋಧದ ಮಧ್ಯೆಯೂ ಕ್ರಿಕೆಟ್ ಆಡಲು ನೋಯ್ಡಾಗೆ ಬಂದಿರುವುದಾಗಿ ಧ್ರುವನ ತಂದೆ ಮಾಹಿತಿ ನೀಡುತ್ತಾರೆ.
13ನೇ ವಯಸ್ಸಿನಲ್ಲೇ ಅಷ್ಟು ದೂರದಿಂದ ಒಬ್ಬನೇ ಬಂದಿದ್ದ ಹುಡುಗನ ಕಣ್ಣುಗಳಲ್ಲಿದ್ದ ಮಿಂಚನ್ನು ನೋಡಿ, ಈ ಬಾಲಕನಲ್ಲೇನೋ ಇದೆ ಎಂಬುದನ್ನು ಗುರುತಿಸಿ ಬಿಟ್ಟರು ಫೂಲ್ ಚಾಂದ್.
ಧ್ರುವ ಜುರೆಲ್’ನೊಳಗೊಂದು ಕ್ರಿಕೆಟ್ ಕಿಚ್ಚಿತ್ತು. ಆರಂಭದಲ್ಲಿ ಇದನ್ನು ಗುರುತಿಸಲು ವಿಫಲರಾಗಿದ್ದ ತಂದೆ-ತಾಯಿಗೆ ನಂತರ ಅರಿವಾಗಿದ್ದು ಮಗನ ದಾರಿ ಇದೇ ಎಂದು. ತಾಯಿ ತನ್ನ ಚಿನ್ನದ ಆಭರಣಗಳನ್ನು ಅಡವಿಟ್ಟು ಮಗನಿಗೆ ಕ್ರಿಕೆಟ್ ಕಿಟ್ ಕೊಡಿಸಿದ್ದರು. ಅದೇ ಹುಡುಗನೀಗ ಭಾರತ ಚೆಸ್ಟ್ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಸಮಸ್ಯೆಗೆ ಉತ್ತರವಾಗುವ ಭರವಸೆ ಮೂಡಿಸಿದ್ದಾನೆ. #DhruvJurel