
ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮತ್ತೆ ಧೋನಿ ನಾಯಕ!
ಕ್ರಿಕೆಟ್ ಜಗತ್ತು ಕಂಡ ದಿಗ್ಗಜ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದ ಗತವೈಭವ ಐಪಿಎಲ್’ನಲ್ಲಿ ಮತ್ತೆ ಕಾಣಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಗಾಯದ ಕಾರಣ ಐಪಿಎಲ್-2025 ಟೂರ್ನಿಯಿಂದ ಹೊರ ಬಿದ್ದಿರುವ ಕಾರಣ, ಟೂರ್ನಿಯ ಮುಂದಿನ ಪಂದ್ಯಗಳಲ್ಲಿ ಎಂ.ಎಸ್ ಧೋನಿ ಸಿ.ಎಸ್.ಕೆ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.


ಎಂ.ಎಸ್ ಧೋನಿ ಅವರ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇದುವರೆಗೆ ದಾಖಲೆಯ 5 ಬಾರಿ ಐಪಿಎಲ್ ಚಾಂಪಿಯನ್ ಪಟ್ಟ ಗೆದ್ದಿದೆ. 2010, 2011, 2018, 2021 ಹಾಗೂ 2023ರಲ್ಲಿ ಧೋನಿ ಸಾರಥ್ಯದಲ್ಲಿ ಚೆನ್ನೈ ಚಾಂಪಿಯನ್ ಆಗಿತ್ತು.
ಕಳೆದ ವರ್ಷ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದ ರುತುರಾಜ್ ಗಾಯಕ್ವಾಡ್, ಈ ಬಾರಿ ಮೊದಲ ಐದು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು. ಮೊದಲ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ ವಿರುದ್ಧ ಗೆದ್ದಿದ್ದ ಚೆನ್ನೈ ಸೂಪರ್ ಕಿಂಗ್ಸ್, ನಂತರದ ನಾಲ್ಕೂ ಪಂದ್ಯಗಳನ್ನು ಸೋತು ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.
ಇದೀಗ ಧೋನಿ ಮತ್ತೆ ಚೆನ್ನೈ ನಾಯಕರಾಗಿ ನೇಮಕಗೊಂಡಿದ್ದು, ಸಿ.ಎಸ್.ಕೆ ಅಭಿಮಾನಿಗಳು ಅದೇ ಮಾಂತ್ರಿಕ ನಾಯಕತ್ವದ ನಿರೀಕ್ಷೆಯಲ್ಲಿದ್ದಾರೆ.

ಐಪಿಎಲ್’ನಲ್ಲಿ ಧೋನಿ 226 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದು, 133 ಗೆಲುವು ಹಾಗೂ 91 ಸೋಲುಗಳನ್ನು ಕಂಡಿದ್ದಾರೆ. ಎರಡು ಪಂದ್ಯಗಳಲ್ಲಿ ಫಲಿತಾಂಶ ಬಂದಿಲ್ಲ.

ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 212 ಪಂದ್ಯಗಳಲ್ಲಿ ಮುನ್ನಡೆಸಿರುವ ಧೋನಿ 128 ಗೆಲುವು ಹಾಗೂ 82 ಸೋಲುಗಳ್ನು ಕಂಡಿದ್ದಾರೆ. ಎರಡು ಪಂದ್ಯಗಳಲ್ಲಿ ಫಲಿತಾಂಶ ಬಂದಿಲ್ಲ. ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ 2016 ಮತ್ತು 2017ರಲ್ಲಿ ಚೆನ್ನೈ ತಂಡ ಐಪಿಎಲ್’ನಿಂದ ನಿಷೇಧಕ್ಕೊಳಗಾದಾಗ ಧೋನಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡದ ಪರ ಆಡಿದ್ದರು. 2016ರಲ್ಲಿ ತಂಡದ ನಾಯಕತ್ವ ವಹಿಸಿದ್ದರು.
44 ವರ್ಷದ ಧೋನಿ ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ನಾಯಕರಾಗಿದ್ದು, 2007ರಲ್ಲಿ ಟಿ20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್ ಹಾಗೂ 2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದರು.




