
ವಿಶ್ವಕರ್ಮ ಪ್ರೀಮಿಯರ್ ಲೀಗ್ 2026ಕ್ಕೆ ಮಧು ಡೈಮಂಡ್ಸ್ ಟೈಟಲ್ ಸ್ಪಾನ್ಸರ್
ಚಿತ್ರದುರ್ಗ: ಕರ್ನಾಟಕ ರಾಜ್ಯದ ವಿಶ್ವಕರ್ಮ ಸಮುದಾಯದ ಕ್ರೀಡಾ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮಹತ್ವಾಕಾಂಕ್ಷೆಯ ಕ್ರಿಕೆಟ್ ಮಹಾಕೂಟ ವಿಶ್ವಕರ್ಮ ಪ್ರೀಮಿಯರ್ ಲೀಗ್ (VPL) – 2026 ಗೆ ಬೆಂಗಳೂರಿನ ಖ್ಯಾತ ಉದ್ಯಮಿ, ಮಧು ಡೈಮಂಡ್ಸ್ ಸಂಸ್ಥೆಯ ಮಾಲೀಕರು ಹಾಗೂ ವಿಶ್ವಕರ್ಮ ಸೇವಾ ಸಮಿತಿ ಬೆಂಗಳೂರು ಅಧ್ಯಕ್ಷರಾದ ಮಧುಸೂಧನ್ ಅವರು ಟೈಟಲ್ ಸ್ಪಾನ್ಸರ್ ಆಗಿ ಕೈಜೋಡಿಸಿರುವುದು ಟೂರ್ನಿಯ ಮಹತ್ವವನ್ನು ಇನ್ನಷ್ಟು ಹೆಚ್ಚಿಸಿದೆ.

ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ, ಚಿತ್ರದುರ್ಗದ ಆಶ್ರಯದಲ್ಲಿ ಆಯೋಜನೆಗೊಳ್ಳುತ್ತಿರುವ ಈ ಪಂದ್ಯಾವಳಿಯು ವಿಶ್ವಕರ್ಮ ಸಮಾಜದ ಕ್ರಿಕೆಟ್ ಇತಿಹಾಸದಲ್ಲೇ ಅತಿ ದೊಡ್ಡ ಕ್ರೀಡಾ ಉತ್ಸವವಾಗಿ ಗುರುತಿಸಿಕೊಳ್ಳುವ ನಿರೀಕ್ಷೆಯಿದೆ.

ಆಗಸ್ಟ್ 6ರಿಂದ 9ರವರೆಗೆ ಚಿತ್ರದುರ್ಗದ ಹಳೇ ಮಾಧ್ಯಮಿಕ ಶಾಲಾ ಮೈದಾನ ಹಾಗೂ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ. ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಿಂದ ಆಟಗಾರರು ಹಾಗೂ ಕ್ರೀಡಾಸಕ್ತರು ಟೂರ್ನಿಯತ್ತ ಕಾತರದಿಂದ ಎದುರು ನೋಡುತ್ತಿದ್ದಾರೆ.
ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆಯು ಜುಲೈ 12, 2026ರಂದು ನಡೆಯಲಿದ್ದು, ಭಾಗವಹಿಸುವ ತಂಡಗಳು ತಮ್ಮ ತಂಡವನ್ನು ಬಲಿಷ್ಠಗೊಳಿಸಲು ಪ್ರತಿಭಾವಂತ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಿವೆ.
ಈ ಬಾರಿಯ ವಿಶ್ವಕರ್ಮ ಪ್ರೀಮಿಯರ್ ಲೀಗ್‌ಗೆ ಸ್ಪೋರ್ಟ್ಸ್ ಕನ್ನಡ ಮಾಧ್ಯಮ ಸಹಭಾಗಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇದರ ನೇತೃತ್ವವನ್ನು ಕೆ.ಆರ್.ಕೆ ಆಚಾರ್ಯ ವಹಿಸಿಕೊಂಡಿದ್ದಾರೆ. ಪಂದ್ಯಾವಳಿಯ ವಿಶೇಷ ವರದಿಗಳು, ಆಟಗಾರರ ಪರಿಚಯ, ನೇರ ಪ್ರಸಾರ ಹಾಗೂ ವಿವಿಧ ವಿಶೇಷ ಕಾರ್ಯಕ್ರಮಗಳ ಮೂಲಕ ಟೂರ್ನಿಯ ಸಂಪೂರ್ಣ ಮಾಹಿತಿಯನ್ನು ಕ್ರೀಡಾಭಿಮಾನಿಗಳಿಗೆ ತಲುಪಿಸುವ ಜವಾಬ್ದಾರಿಯನ್ನು ಸ್ಪೋರ್ಟ್ಸ್ ಕನ್ನಡ ನಿರ್ವಹಿಸಲಿದೆ.
ವಿಶ್ವಕರ್ಮ ಸಮುದಾಯದ ಯುವ ಪ್ರತಿಭೆಗಳಿಗೆ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸುವುದರ ಜೊತೆಗೆ, ಪರಸ್ಪರ ಬಾಂಧವ್ಯ ಮತ್ತು ಕ್ರೀಡಾಸ್ಫೂರ್ತಿಯನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾಗುತ್ತಿರುವ ಈ ಟೂರ್ನಿಯು ರಾಜ್ಯ ಮಟ್ಟದಲ್ಲಿ ವಿಶೇಷ ಗಮನ ಸೆಳೆಯುತ್ತಿದೆ.




