
ಉರ್ವಾ ಮೈದಾನದಲ್ಲಿ ಮಂಗಳಾಪುರ ಟ್ರೋಫಿ ಸಂಭ್ರಮ – ಕೊಂಕಣ್ ಎಕ್ಸ್ಪ್ರೆಸ್ ಚಾಂಪಿಯನ್
ಮಂಗಳೂರು ಉರ್ವಾ ಮೈದಾನದಲ್ಲಿ ಎರಡು ದಿನಗಳ ಕಾಲ ಹೊನಲು ಬೆಳಕಿನಲ್ಲಿ ನಡೆದ “ಮಂಗಳಾಪುರ ಟ್ರೋಫಿ 2026” ಜಿಎಸ್ಬಿ ಕ್ರಿಕೆಟ್ ಆಟಗಾರರ ಹರಾಜು ಆಧಾರಿತ ಕ್ರಿಕೆಟ್ ಟೂರ್ನಿ ಕ್ರಿಕೆಟ್ ಅಭಿಮಾನಿಗಳಿಗೆ ರೋಚಕ ಅನುಭವ ನೀಡಿತು. ಟೀಮ್ ಮಂಗಳಾಪುರ ಸಂಘಟನೆಯಡಿಯಲ್ಲಿ, ಅನಿರುದ್ಧ್ ಭಟ್ ಇವರ ದಕ್ಷ ನಾಯಕತ್ವದಲ್ಲಿ ನಡೆದ ಈ ಪ್ರತಿಷ್ಠಿತ ಟೂರ್ನಿ ಈ ಋತುವಿನ ಕೊನೆಯ ಜಿಎಸ್ಬಿ ಕ್ರಿಕೆಟ್ ಟೂರ್ನಮೆಂಟ್ ಆಗಿ ಎಲ್ಲರ ಗಮನ ಸೆಳೆಯಿತು.

ಪ್ರಬಲ ಪೈಪೋಟಿ, ಭರ್ಜರಿ ಸಿಕ್ಸರ್ಗಳು, ಅದ್ಭುತ ಬೌಲಿಂಗ್ ಹಾಗೂ ಉತ್ಸಾಹಭರಿತ ಅಭಿಮಾನಿಗಳ ಚಪ್ಪಾಳೆಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ “ಕೊಂಕಣ್ ಎಕ್ಸ್ಪ್ರೆಸ್ ಕೋಟೇಶ್ವರ” ತಂಡ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು. ಮಣಿಪಾಲದ “ಇರ್ವತ್ತೂರು ಸ್ಪೋರ್ಟ್ಸ್ ಕ್ಲಬ್” ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು. “ಎಂಜಾಯ್ ಟೈಟಾನ್ಸ್ ಯುನೈಟೆಡ್” ತಂಡ ಕ್ವಾಲಿಫೈರ್ 2 ಹಂತದಲ್ಲಿ ಟೂರ್ನಿಯಿಂದ ಹೊರಬಿದ್ದರೂ ಉತ್ತಮ ಹೋರಾಟ ಪ್ರದರ್ಶಿಸಿತು.


ಚಾಂಪಿಯನ್ ತಂಡ ಕೊಂಕಣ್ ಎಕ್ಸ್ಪ್ರೆಸ್ ಕೋಟೇಶ್ವರವನ್ನು ನಾಯಕ ಅತುಲ್ ಪ್ರಭು ಸಮರ್ಥವಾಗಿ ಮುನ್ನಡೆಸಿದರೆ, ಐಕಾನ್ ಆಟಗಾರ ವಿಘ್ನೇಶ್ ಭಟ್ ಕೋಟೇಶ್ವರ ತಮ್ಮ ಆಲ್ರೌಂಡ್ ಪ್ರದರ್ಶನದಿಂದ ತಂಡಕ್ಕೆ ಬಲ ತುಂಬಿದರು. ಇರ್ವತ್ತೂರು ಸ್ಪೋರ್ಟ್ಸ್ ಕ್ಲಬ್ ಮಣಿಪಾಲ ತಂಡವನ್ನು ಐಕಾನ್ ಆಟಗಾರ ಅನಂತ್ ಎಚ್. ಶೆಣೈ ನೇತೃತ್ವ ವಹಿಸಿ ಗಮನಾರ್ಹ ಹೋರಾಟ ನೀಡಿದರು.

ಫೈನಲ್ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಕೊಂಕಣ್ ಎಕ್ಸ್ಪ್ರೆಸ್ ತಂಡದ ಆಕಾಶ್ ಪ್ರಭು ಅವರಿಗೆ “ಮ್ಯಾನ್ ಆಫ್ ದ ಮ್ಯಾಚ್” ಪ್ರಶಸ್ತಿ ಲಭಿಸಿತು. ಟೂರ್ನಿಯುದ್ದಕ್ಕೂ ಶ್ರೇಷ್ಠ ಪ್ರದರ್ಶನ ನೀಡಿದ ಐ ಎಸ್ ಸಿ ಮಣಿಪಾಲದ ಅನಂತ್ ಶೆಣೈ “ಮ್ಯಾನ್ ಆಫ್ ದ ಸೀರಿಸ್” ಪ್ರಶಸ್ತಿಗೆ ಭಾಜನರಾದರು. ಉದಯೋನ್ಮುಖ ಆಟಗಾರ ಪ್ರಶಸ್ತಿಯನ್ನು ಕೊಂಕಣ್ ಎಕ್ಸ್ಪ್ರೆಸ್ ನ ರಾಮನಾಥ್ ಭಟ್ ಪಡೆದರೆ, ಅತ್ಯುತ್ತಮ ಬ್ಯಾಟ್ಸ್ಮನ್ ಪ್ರಶಸ್ತಿ ಅದೇ ತಂಡದ ವಿಘ್ನೇಶ್ ಭಟ್ ಅವರಿಗೆ ಸಂದಿತು. ಕೊಂಕಣ್ ಎಕ್ಸ್ಪ್ರೆಸ್ ತಂಡದ ಅತುಲ್ ಪ್ರಭು ಪಂದ್ಯದಲ್ಲಿ ಅತ್ಯುತ್ತಮ ಬೌಲರ್ ಆಗಿ ಹೊರಹೊಮ್ಮಿದರು.




ಟೂರ್ನಿಯ ನೇರ ಪ್ರಸಾರವನ್ನು “ಸ್ಪೋರ್ಟ್ಸ್ ಕನ್ನಡ ಲೈವ್ ಮೀಡಿಯಾ” ನಿರ್ವಹಿಸಿತು. ಕಾಮೆಂಟ್ರಿ ವಿಭಾಗದಲ್ಲಿ ಸುರೇಶ್ ಭಟ್ ಮುಲ್ಕಿ, ಯಶ್ವಂತ್ ಹೆಗ್ಡೆ ಬೆಂಗಳೂರು, ತ್ರಿವಿಕ್ರಮ್ ಶೆಣೈ ಮಂಗಲ್ಪಾಡಿ ಹಾಗೂ ಗೋಪಿ ಭಟ್ ಮಂಗಳೂರು ಪಂದ್ಯಗಳಿಗೆ ಮತ್ತಷ್ಟು ರಂಗ ತುಂಬಿದರು.


ಟೂರ್ನಿಯ ಸಮಾರೋಪ ಸಮಾರಂಭದಲ್ಲಿ ವಿಜೇತರು, ರನ್ನರ್ ಅಪ್ ತಂಡ ಹಾಗೂ ವೈಯಕ್ತಿಕ ಪ್ರಶಸ್ತಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಭಾಗವಹಿಸಿದ ಎಲ್ಲಾ ತಂಡದ ಮಾಲೀಕರನ್ನು ಸಹ ಗೌರವಿಸಲಾಯಿತು. ಕಾರ್ಯಕ್ರಮದ ನಿರೂಪಣೆಯಲ್ಲಿ ರಜತ್ ಭಂಡಾರ್ಕರ್ ಅವರು ಸಹಕರಿಸಿ ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ವಿಶೇಷ ಮೆರುಗು ತಂದರು.

ಕ್ರಿಕೆಟ್ ಕೌಶಲ್ಯ, ಕ್ರೀಡಾಸ್ಫೂರ್ತಿ ಹಾಗೂ ಅಭಿಮಾನಿಗಳ ಉತ್ಸಾಹದಿಂದ ಕಂಗೊಳಿಸಿದ “ಮಂಗಳಾಪುರ ಟ್ರೋಫಿ 2026” ಜಿಎಸ್ಬಿ ಕ್ರಿಕೆಟ್ ಲೋಕದಲ್ಲಿ ಮತ್ತೊಂದು ಸ್ಮರಣೀಯ ಅಧ್ಯಾಯವಾಗಿ ಉಳಿಯಿತು.





