
ಅಯ್ಯೋ.. ಅವನಿಗೆ ಇದೆಂಥಾ ಉಡುಗೊರೆ ಕೊಟ್ಟಿರಿ ನೀವು..?
18 ವರ್ಷಗಳ ಶ್ರಮ 18 ಗಂಟೆಗಳೊಳಗೆ ಕೊಚ್ಚಿ ಹೋಯಿತು.
ಆರ್.ಸಿ.ಬಿ ಗೆದ್ದ ಆ ಐಪಿಎಲ್ ಕಪ್’ಗೆ ಅಂಟಿದ ರಕ್ತದ ಕಲೆ ಎಂದಿಗೂ ಅಳಿಯದು.


ಚರಿತ್ರೆಯ ಪುಟ ಸೇರಿದ ಆರ್.ಸಿ.ಬಿ ವಿಜಯ ನೆನಪಾದಾಗಲೆಲ್ಲಾ ಆ ಅನ್ಯಾಯದ 11 ಸಾವುಗಳು ನೆನಪಾಗುತ್ತಲೇ ಇರುತ್ತವೆ.
ಅಷ್ಟಕ್ಕೂ ಅವನಿಗೆ ಇದೆಂಥಾ ಉಡುಗೊರೆ ಕೊಟ್ಟರು ಇವರೆಲ್ಲಾ..?
ಅಹ್ಮದಾಬಾದ್’ನಲ್ಲಿ ಆಗಷ್ಟೇ ಆರ್.ಸಿ.ಬಿ ಫೈನಲ್ ಗೆದ್ದಿತ್ತು. ಕಪ್ ಇನ್ನೂ ವಿರಾಟ್ ಕೊಹ್ಲಿ ಕೈ ಸೇರಿರಲಿಲ್ಲ. ಆ ಸಮಯದಲ್ಲಿ ಅವನು ಏನು ಹೇಳಿದ ಗೊತ್ತೇ..? ‘’ನನ್ನ ಹೃದಯ ಮತ್ತು ಆತ್ಮ ಎರಡೂ ಬೆಂಗಳೂರಿನಲ್ಲಿದೆ. ಇಲ್ಲಿನ ಸಂಭ್ರಮಕ್ಕಿಂತ ನಾಳೆ ಅಲ್ಲಿನ ಸಂಭ್ರಮವನ್ನು ಕಾಣಲು ಕಾತರನಾಗಿದ್ದೇನೆ’’.
ಬೆಂಗಳೂರಿನ ಬಗ್ಗೆ, ಬೆಂಗಳೂರ ಜನರ ಬಗ್ಗೆ, ತನ್ನನ್ನು ತಲೆಯ ಮೇಲೆ ಹೊತ್ತು ಮೆರೆಸಿದ ಆರ್.ಸಿ.ಬಿ ಅಭಿಮಾನಿಗಳ ಬಗ್ಗೆ ಅವನಿಗಿರುವ ಪ್ರೇಮವದು.

ಬೆಂಗಳೂರಿನಲ್ಲಿ ಅಭಿಮಾನಿಗಳ ಜೊತೆ ಸಂಭ್ರಮಿಸುವುದನ್ನು ಅವನು ಎದುರು ನೋಡುತ್ತಿದ್ದ.. ಆದರೆ ಇಲ್ಲಿ ನಡೆದದ್ದು ಇತಿಹಾಸದ ಪುಟಗಳಲ್ಲಿ ಆರ್.ಸಿ.ಬಿ ಪಾಲಿಗೆ ಕರಾಳ ಚರಿತ್ರೆಯಾಗಿ ದಾಖಲಾಗಿರುವ ಅಧ್ಯಾಯ..

ಅಭಿಮಾನಿಗಳ ಅತಿರೇಕ, ಆಳುವವರ ಹೊಣೆಗೇಡಿತನ, ರಾಜ್ಯ ಕ್ರಿಕೆಟ್ ಸಂಸ್ಥೆಯ ಅದಕ್ಷತೆ.. ಎಲ್ಲರೂ ಸೇರಿ 11 ಜೀವಗಳನ್ನು ಬಲಿ ಪಡೆದರು.
18 ವರ್ಷ.. ಸುಮ್ಮನೆ ತಮಾಷೆಯ ಮಾತಲ್ಲ..
ವರ್ಷಗಳು ಉರುಳಿದಂತೆ ಆರ್.ಸಿ.ಬಿ ಕಪ್ ಗೆಲ್ಲುವ ಕನಸೂ ಉರುಳುತ್ತಾ ಹೋಗಿತ್ತು. ಆ 18 ವರ್ಷಗಳಲ್ಲಿ 9 ವರ್ಷ ಸ್ವತಃ ನಾಯಕನಾಗಿದ್ದರೂ ಕಪ್ ಗೆಲ್ಲಿಸಲು ಕೊಹ್ಲಿಗೆ ಸಾಧ್ಯವಾಗಿರಲಿಲ್ಲ. ಬೇರೆ ಯಾರೇ ಆಗಿದ್ದರೂ ಎರಡನೇ ಯೋಚನೆ ಮಾಡಿ ಬಿಡುತ್ತಿದ್ದರೇನೋ.. ಆದರೆ ವಿರಾಟ್ ಕೊಹ್ಲಿ ತನ್ನನ್ನು ತಾನು ಬೆಂಗಳೂರಿಗೆ ಸಮರ್ಪಿಸಿಕೊಂಡಿದ್ದ. ಬೆಂಗಳೂರು ತಂಡವನ್ನು ಬಿಟ್ಟು ಹೋಗಲಾರೆನೆಂದು ಪ್ರತಿಜ್ಞೆ ಮಾಡಿದ್ದ. ಈ ಕ್ಷಣಕ್ಕೂ ಆ ಪ್ರತಿಜ್ಞೆಗೆ ಬದ್ಧನಾಗಿದ್ದಾನೆ ಅವನು.

ನಿರಂತರ ವೈಫಲ್ಯಗಳ ಮಧ್ಯೆಯೂ ತಂಡವನ್ನು ಹೃದಯದಲ್ಲಿಟ್ಟುಕೊಂಡು ಅವನು ಆಡುತ್ತಿರುವುದು ಆರ್.ಸಿ.ಬಿ ಅಭಿಮಾನಿಗಳಿಗಾಗಿ. ಅವರಿಗೊಂದು ಕಪ್ ಗೆದ್ದುಕೊಡಬೇಕೆಂದು ನಿರಂತರ ಹೋರಾಟ ನಡೆಸುತ್ತಾ ಬಂದವನು ಕೊನೆಗೂ ಕಪ್ ಗೆದ್ದಿದ್ದ. ಆ ಕಪ್ ಹಿಡಿದು ತಂಡದೊಂದಿಗೆ ರಾಜಧಾನಿಗೆ ಕಾಲಿಟ್ಟಿದ್ದ.. ಎರಡೇ ಎರಡು ಗಂಟೆಗಳಲ್ಲಿ ಆ ಸಂಭ್ರಮ ಮರೆಯಾಗಿ ಬಿಟ್ಟಿತು. ಯಾರಿಗಾಗಿ ಕಪ್ ಗೆದ್ದು ತಂದಿದ್ದನೋ ಅದೇ ಅಭಿಮಾನಿ ಸಾಗರದ 11 ಹನಿಗಳು ಆರಿ ಹೋಗಿದ್ದವು.

ಸಾವಿನ ಮನೆಯಲ್ಲಿ ವಿರಾಟ್ ಕೊಹ್ಲಿ ಸಂಭ್ರಮ ಪಡುತ್ತಿದ್ದಾನೆ ಎಂದ ಅವಿವೇಕಿಗಳಿಗೆ ಒಂದು ಮಾತು.
ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕುಳಿತಾಗಲಾಗಲೀ, ಚಿನ್ನಸ್ವಾಮಿ ಕ್ರೀಡಾಂಗಣದೊಳಗೆ ಕಪ್ ಹಿಡಿದು ಸಂಭ್ರಮಿಸುತ್ತಿದ್ದಾಗಲಾಗಲೀ ಅಭಿಮಾನಿಗಳ ಸಾವಿನ ಸುದ್ದಿ ವಿರಾಟ್ ಕೊಹ್ಲಿಯ ಕಿವಿಗೆ ಬಿದ್ದಿರಲೇ ಇಲ್ಲ. ಒಂದು ವೇಳೆ ವಿಷಯ ಗೊತ್ತಾಗಿದ್ದಿದ್ದರೆ ಅದನ್ನು ಕೇಳಿದ ಮೇಲೂ ಸಂಭ್ರಮಿಸುವ ಕೀಳು ಮನಸ್ಥಿತಿಯ ವ್ಯಕ್ತಿಯಲ್ಲ ಅವನು. ಅಭಿಮಾನಿಗಳ ಸಂಭ್ರಮವನ್ನು ನೋಡಲು ಬಂದವನು ಸಾವನ್ನು ನೋಡಿದ್ದಿದ್ದರೆ ಅಥವಾ ಅದು ಗೊತ್ತಾಗಿದ್ದಿದ್ದರೆ ಅದೇ ಕ್ಷಣ ಎದ್ದು ನಡೆದು ಬಿಡುತ್ತಿದ್ದ.. ಕಾರಣ, ಆರ್.ಸಿ.ಬಿ ಅಭಿಮಾನಿಗಳಿಗೆ ಹೃದಯದಲ್ಲಿ ಸ್ಥಾನ ಕೊಟ್ಟವನು ವಿರಾಟ್ ಕೊಹ್ಲಿ. ಅವನಿಗೆ ಅವರು, ಅವರಿಗೆ ಅವನು.. ಅಂಥವರ ಸಮಾಧಿಯ ಮೇಲೆ ನಿಂತು ಸಂಭ್ರಮಿಸುವಷ್ಟು ಕಲ್ಲು ಹೃದಯದವನಲ್ಲ.

ಮನಸ್ಸಿನಲ್ಲಿ ವಿಷ, ಮೆದುಳಲ್ಲಿ ದ್ವೇಷವನ್ನೇ ತುಂಬಿಕೊಂಡಿರುವ ವಿಷಜಂತುಗಳಿಗೆ ಇದು ಎಂದಿಗೂ ಅರ್ಥವಾಗದು.
ಇನ್ನು ದುರಂತಕ್ಕೆ ಹೊಣೆ ಯಾರು ಎಂಬ ಪ್ರಶ್ನೆ. ಮೊದಲ ಹೊಣೆಗಾರರು ಅತಿರೇಕದ ಅಭಿಮಾನಿಗಳೇ.. ಎಲ್ಲವೂ ಒಂದು ಮಿತಿಯಲ್ಲಿದ್ದರೆ ಚೆನ್ನ.. ಅತಿಯಾದರೆ ಅಮೃತವೂ ವಿಷವಾಗುತ್ತದೆ.

ದುರಂತದ ಮುಖ್ಯ ಪ್ರಾಯೋಜಕ ಆಳುವ ಸರ್ಕಾರ. ಇವರಿಗೆ ಆರ್.ಸಿ.ಬಿ ಗೆಲುವಿನಲ್ಲಿ ಪ್ರಚಾರ ಪಡೆಯುವ ಹಪಹಪಿ.. ವೈಯಕ್ತಿಕ ಸ್ವಾರ್ಥ ಸಾಧನೆ..
ಐಪಿಎಲ್ ಕಪ್ ಗೆದ್ದವರಿಗೆ ಸರ್ಕಾರಿ ಗೌರವ ಸಲ್ಲಿಸುವ ಉದ್ದೇಶದೊಂದಿಗೆ ವಿಧಾನಸೌಧದ ಮೆಟ್ಟಿಲೇರಿದವರ ಜೊತೆಗಿದ್ದವರು ಯಾರು..? ಅವರ ಮಕ್ಕಳು, ಮೊಮ್ಮಕ್ಕಳು, ಸಂಬಂಧಿಗಳು. ಅವರು ಅಲ್ಲಿದ್ದರು, ಆರ್.ಸಿ.ಬಿ ಅಭಿಮಾನಿಗಳು ಬೀದಿಯಲ್ಲಿ ಉಸಿರು ಬಿಗಿ ಹಿಡಿದು ನಿಂತಿದ್ದರು.

ಇನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ. ಕಳೆದ ವರ್ಷ ಕರ್ನಾಟಕ ಅಂಡರ್-19 ತಂಡ ಕೂಚ್ ಬೆಹಾರ್ ಟ್ರೋಫಿ ಗೆದ್ದಿತ್ತು. ಕರ್ನಾಟಕ ಅಂಡರ್-23 ತಂಡ ಕರ್ನಲ್ ಸಿ.ಕೆ ನಾಯ್ಡು ಟ್ರೋಫಿ ಗೆದ್ದು ಇತಿಹಾಸ ಬರೆದಿತ್ತು. ರಾಜ್ಯದ ಕ್ರಿಕೆಟ್ ಚರಿತ್ರೆಯಲ್ಲಿ ಈ ಎರಡು ಟ್ರೋಫಿಗಳು ಬಂದದ್ದು ಅದೇ ಮೊದಲು. ಹುಡುಗರನ್ನು ಕೆ.ಎಸ್.ಸಿ.ಎ ಕಾನ್ಫರೆನ್ಸ್ ಹಾಲ್’ಗೆ ಕರೆದು ಕನಿಷ್ಠ ಅಭಿನಂದನೆಯನ್ನೂ ತಿಳಿಸಲಿಲ್ಲ ರಾಜ್ಯ ಕ್ರಿಕೆಟ್ ಸಂಸ್ಥೆ.

ಈ ವರ್ಷ ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ಸೀನಿಯರ್ ತಂಡ 5 ವರ್ಷಗಳ ನಂತರ ರಾಜ್ಯಕ್ಕೆ ವಿಜಯ್ ಹಜಾರೆ ಕಪ್ ಗೆದ್ದು ಕೊಟ್ಟಾಗಲೂ ಅಷ್ಟೇ.. ಕರ್ನಾಟಕವನ್ನು ಪ್ರತಿನಿಧಿಸಿ ರಾಜ್ಯಕ್ಕೆ ಗೌರವ ತಂದು ಕೊಟ್ಟ ನಮ್ಮ ಹೆಮ್ಮೆಯ ಕ್ರಿಕೆಟಿಗರನ್ನು ಇವರು ಅಭಿನಂದಿಸಲೇ ಇಲ್ಲ.
ತನ್ನದೇ ಕ್ರಿಕೆಟ್ ಸಂಸ್ಥೆಯ ಹುಡುಗರ ಸಾಧನೆಯನ್ನು ಗೌರವಿಸುವ ಯೋಗ್ಯತೆ ಇಲ್ಲದವರು ಆರ್.ಸಿ.ಬಿ ತಂಡವನ್ನು ಅಭಿನಂದಿಸಲು ಮುಂದಾಗಿದ್ದೇ ಅಚ್ಚರಿ. ಹಾಗೆ ನೋಡಿದರೆ ಆರ್.ಸಿ.ಬಿ ಫ್ರಾಂಚೈಸಿಗೂ ರಾಜ್ಯ ಕ್ರಿಕೆಟ್ ಸಂಸ್ಥೆಗೂ ಸಂಬಂಧವೇ ಇಲ್ಲ. ಇವರಿಗೆ ಪ್ರೀತಿ, ಅಭಿಮಾನ ಇರಬೇಕಿರುವುದು ತಲೆಯ ಮೇಲೆ ಗಂಡಭೇರುಂಡ ಲಾಂಛನದ ಕ್ಯಾಪ್ ಧರಿಸಿ ಆಡುವ, ಕರ್ನಾಟಕವನ್ನು ಪ್ರತಿನಿಧಿಸುವ ಕ್ರಿಕೆಟಿಗರ ಬಗ್ಗೆ, ಅವರ ಸಾಧನೆಗಳ ಬಗ್ಗೆ.
ವಿಧಾನಸೌಧದ ಮೆಟ್ಟಿಲುಗಳ ಮೇಲೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಲು ರಾತ್ರೋ ರಾತ್ರಿ ಸರ್ಕಾರಕ್ಕೆ ಕೆ.ಎಸ್.ಸಿ.ಎ ಪತ್ರ ಬರೆದದ್ದು ಕ್ರಿಕೆಟ್ ಮೇಲಿನ ಪ್ರೀತಿಯಿಂದಲೂ ಅಲ್ಲ, ಕ್ರಿಕೆಟಿಗರನ್ನು ಗೌರವಿಸುವ ದೊಡ್ಡ ಮನಸ್ಸಿನಿಂದಲೂ ಅಲ್ಲ. ಇದೆಲ್ಲಾ ಸರ್ಕಾರದ ‘ದೊಡ್ಡ’ ವ್ಯಕ್ತಿಯನ್ನು ಮೆಚ್ಚಿಸಲು. ಕೊನೆಗೆ ಅವರ ಕೈಗೆ ಇವರು ದಾಳವಾದರು ಅಷ್ಟೇ. ಸಮಾಧಿಯಾಗಿದ್ದು ಮಾತ್ರ ಆರ್.ಸಿ.ಬಿ ಅಭಿಮಾನಿಗಳು.





