Categories
ಟೆನಿಸ್ ಸ್ಪೋರ್ಟ್ಸ್

“ಜರ್ಮನ್ ಸಿಂಹಿಣಿ ಸ್ಟೆಫಿಗ್ರಾಫ್ ಆರ್ಭಟ”

ಟೆನ್ನಿಸ್‌ ಟೂರ್ನಿಗಳ ಫೈನಲ್‌ಗಳು ಸಾಮಾನ್ಯವಾಗಿ ಜಿದ್ದಾಜಿದ್ದಿನ ಕಾದಾಟಗಳೇ. ಅದರಲ್ಲೂ ಅಗ್ರಶ್ರೇಯಾಂಕಿತ ಆಟಗಾರರಾದರೇ ಗಂಟೆಗಟ್ಟಲೆಗಳ ಕಾದಾಟ ಸಾಮಾನ್ಯ.ಆದರೆ ಆಟಗಾರರ ಪೈಕಿ ಒಬ್ಬರು ಅದ್ಭುತ ಫಾರ್ಮ‌ನಲ್ಲಿದ್ದು ಇನ್ನೊಬ್ಬರಿಗೆ ಅನುಭವ ಸಾಲದಾದರೇ ಏನಾಗುತ್ತದೆ..?

1988ರ ಮಹಿಳೆಯರ ಫ್ರಂಚ್ ಓಪನ್ ಫೈನಲ್ ಆಗುತ್ತದೆ.ಅಗ್ರಶ್ರೇಯಾಂಕಿತ ಜರ್ಮನಿಯ ಸ್ಟೆಫಿಗ್ರಾಫ್ ,ಆಗಷ್ಟೇ ವೃತ್ತಿಪರಳಾಗಿದ್ದ ಅನಿರೀಕ್ಷಿತವಾಗಿ ಫೈನಲ್ ಪ್ರವೇಶಿಸಿದ್ದ ಬೆಲಾರೂಸ್‌ನ ನತಾಶಾ ಜ್ವರೇವಾ ನಡುವಣದ ಕಾದಾಟವದು.ಎಲ್ಲ ಟೆನ್ನಿಸ್ ಪ್ರಿಯರಿಗೂ ಗೆಲುವು ಯಾರದೆನ್ನುವ ಕುತೂಹಲವಿತ್ತು. ಮತ್ತೊಬ್ಬ ದಂತಕತೆ ಮಾರ್ಟಿನಾ ನವ್ರಾಟಿಲೋವಾರನ್ನು ಸೋಲಿಸಿ ಫೈನಲ್‌ಗೇರಿದ್ದ ನತಾಶಾ ,ಅಗ್ರಶ್ರೇಯಾಂಕಿತಳಿಗೆ ಭಯಂಕರ ಪೈಪೋಟಿ ನೀಡಳಿದ್ದಾಳೆ ಎನ್ನುವುದು ಅನೇಕರ ಲೆಕ್ಕಾಚಾರವಾಗಿತ್ತು. ಆದರೆ ನಡೆದ ಕತೆಯೇ ಬೇರೆ.ಜರ್ಮನ್ ಸಿಂಹಿಣಿ ಸ್ಟೆಫಿಯದ್ದು ಅಕ್ಷರಶ ಜಿಂಕೆಬೇಟೆ.ನೇರವಾಗಿ 6 – 0,6-0ಯಿಂದ ನತಾಶಾಳನ್ನು ಮಣಿಸಲು ಗ್ರಾಫ್ ತೆಗೆದುಕೊಂಡ ಕಾಲಾವಧಿ ಕೇವಲ 34 ನಿಮಿಷಗಳು ಮಾತ್ರ. ಇವತ್ತಿಗೂ ಟೆನ್ನಿಸ್ ಲೋಕದ ಅತ್ಯಂತ ಕಡಿಮೆ ಕಾಲಾವಧಿಯ ಫೈನಲ್ ಎಂಬ ಕೀರ್ತಿ ಹೊಂದಿರುವ ಈ ದಾಖಲೆಯನ್ನು ಮುರಿಯುವುದು ಯಾರಿಗೂ ಸಾಧ್ಯವಾಗಲಿಲ್ಲ. ದುರದೃಷ್ಟವೆಂದರೆ ಅಂತದ್ದೊಂದು ಸೋಲು ನತಾಶಾಳ ಆತ್ಮವಿಶ್ವಾಸವನ್ನು ದಯನೀಯವಾಗಿ ನೆಲಕಚ್ಚಿಸಿಬಿಟ್ಟಿತ್ತು.

ಮುಂದೆ ಆಕ ಸಿಂಗಲ್ಸ್ ಆಡಲೇ ಇಲ್ಲ. ಅವತ್ತಿಗೆ ಸ್ಟೆಫಿ ಗ್ರಾಫ್ ಅದ್ಯಾವ ಪರಿಯ ವೃತ್ತಿಜೀವನದ ಉತ್ತುಂಗದಲ್ಲಿದ್ದರೆಂದರೆ 1988ರ ನಾಲ್ಕು ಗ್ರಾಂಡ್‌ಸ್ಲಾಮ್‌ ಗೆದ್ದಿದ್ದಲ್ಲದೇ ,ಅದೇ ವರ್ಷದ ಒಲಿಂಪಿಕ್ಸ್‌ನ ಚಿನ್ನದ ಪದಕ ಗೆದ್ದು ಏಕವಾರ್ಷಿಕ ಗೋಲ್ಡನ್ ಸ್ಲಾಮ್ ಸಾಧನೆಗೈದ ಟೆನ್ನಿಸ್ ಲೋಕದ ಏಕೈಕ ಕ್ರೀಡಾಳು ಎಂಬ ಕೀರ್ತಿ ಸಾಧಿಸಿದರು.ಇಂಥದ್ದೊಂದು ಸಾಧನೆಯನ್ನು ಪುರುಷರಲ್ಲಿಯೂ ಒಬ್ಬರು ಮಾಡಿಲ್ಲವೆನ್ನುವುದು ಗಮನಾರ್ಹ.


-ಗುರುರಾಜ್ ಕೊಡ್ಕಣಿ ಯಲ್ಲಾಪುರ