SportsKannada | ಸ್ಪೋರ್ಟ್ಸ್ ಕನ್ನಡ

80ರ ದಶಕದ ಟೆನ್ನಿಸ್ ಕ್ರಿಕೆಟ್ ನ ಕೌತುಕದ ಪಂದ್ಯ ಟೆನ್ನಿಸ್ ಕ್ರಿಕೆಟ್ ನಲ್ಲಿ ಪ್ರಭುತ್ವ ಸಾಧಿಸಿದ್ದ, ದಕ್ಷಿಣ ಕನ್ನಡ

80ರ ದಶಕದ ಟೆನ್ನಿಸ್ ಕ್ರಿಕೆಟ್ ನ ಕೌತುಕದ ಪಂದ್ಯ. ಅದಾಗಲೇ ಟೆನ್ನಿಸ್ ಕ್ರಿಕೆಟ್ ನಲ್ಲಿ ಪ್ರಭುತ್ವ ಸಾಧಿಸಿದ್ದ, ದಕ್ಷಿಣ ಕನ್ನಡ ಜಿಲ್ಲೆಯ ಚಾಂಪಿಯನ್ ತಂಡ, ಶಿಸ್ತಿನ‌ ಸಿಪಾಯಿಗಳು, ಟೆನ್ನಿಸ್ ಕ್ರಿಕೆಟ್ ನ ಹುಲಿಗಳಾದ ಪ್ಯಾರಡೈಸ್ ಬನ್ನಂಜೆ ವಿರುದ್ಧವಾಗಿ 15 ವರ್ಷಗಳ ಹಿಂದಷ್ಟೇ ಸ್ಥಾಪನೆಯಾಗಿದ್ದ ಕುಂದಾಪುರದ ಸಂಯೋಜಿತ ತಂಡ ಚಕ್ರವರ್ತಿ ಕುಂದಾಪುರದ ನಡುವಿನ ಬೈಂದೂರಿನ ಗಾಂಧಿಮೈದಾನದಲ್ಲಿ ವಿಕ್ರಂ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ ಡಾ|ಪ್ರದೀಪ್ ಕುಮಾರ್ ಶೆಟ್ಟಿ ಸ್ಮರಣಾರ್ಥ ನಡೆದ ಪಂದ್ಯಾಕೂಟದ ಫೈನಲ್ ಪಂದ್ಯಾಟವಾಗಿತ್ತು.

 

20 ಓವರ್ ಗಳ ಎರಡು ಇನ್ನಿಂಗ್ಸ್ ನಲ್ಲಿ ಜರುಗಿದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಪ್ಯಾರಡೈಸ್ ಬನ್ನಂಜೆ ತಂಡ ಪ್ರದೀಪ್ ವಾಜ್,ದಿ|ಪ್ರತಾಪ್ ಚಂದ್ರ ಹೆಗ್ಡೆ,ಗಣೇಶ್ ನಾವುಡರ ನಿಖರ ದಾಳಿಗೆ 37 ರನ್ ಗಳಿಗೆ ಆಲೌಟ್ ಆಗಿತ್ತು. ಆದರೆ ನಂತರ ಬ್ಯಾಟಿಂಗ್ ಮಾಡಿದ್ದ ಚಕ್ರವರ್ತಿ ತಂಡ ಪ್ಯಾರಡೈಸ್ ನ ದಂತಕಥೆ ಶ್ರೀಧರ್ ಶೆಟ್ಟಿ ಹಾಗೂ ಅಂದಿನ ದಿನಗಳಲ್ಲಿ ಭರವಸೆ ಮೂಡಿಸಿದ್ದ ಬೌಲಿಂಗ್ ಮಿಂಚು ಕೋಟೇಶ್ವರ ದಿ|ಸರ್ದಾರ್ ಬಾಬ್ ಜಾನ್ ದಾಳಿ ಎದುರಿಸಲಾಗದೆ 31 ರನ್ ಗಳಿಗೆ ಆಲೌಟ್ ಆಗಿತ್ತು.ಪ್ಯಾರಡೈಸ್ 6 ರನ್ ಗಳ ಮೊದಲ ಇನ್ನಿಂಗ್ಸ್ ಲೀಡ್ ಗಳಿಸಿತ್ತು.

ದ್ವಿತೀಯ ಇನ್ನಿಂಗ್ಸ್ ನಲ್ಲಿ ಮತ್ತೆ ಅತ್ಯುತ್ತಮ ಬೌಲಿಂಗ್ ದಾಳಿ ಸಂಘಟಿಸಿದ ಚಕ್ರವರ್ತಿಗಳ ಅಂದಿನ ದಿನಗಳ ಬೌಲಿಂಗ್ ಬ್ರಹ್ಮಾಸ್ತ್ರ ಸದಾನಂದ ಬನ್ನಾಡಿ,ಗಣೇಶ್ ನಾವುಡ,ಯುವ ಎಸೆತಗಾರ ಮೊಹಮದ್ ಶಫಿ ದಾಳಿ ಎದುರಿಸಲಾಗದೆ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 43 ರನ್ ಗಳಷ್ಟೇ ಗಳಿಸಲು ಶಕ್ತವಾಗಿತ್ತು.

ವಿಜಯ ಗಳಿಸಲು 50 ರನ್ ಗಳ ಕಠಿಣ ಸವಾಲನ್ನು ಚಕ್ರವರ್ತಿ ತಂಡ ಮನಮೋಹಕ ಹೊಡೆತಗಳ ಆಟಗಾರ ಪ್ರಕಾಶ್ ಶಿರಸಿಕರ್ ರ ಆಕರ್ಷಕ ಅಜೇಯ 25 ರನ್ ಗಳ ನೆರವಿನಿಂದ 4 ವಿಕೆಟ್ ಅಂತರದ ಜಯಗಳಿಸಿತ್ತು.

ಅಂದು ಚಕ್ರವರ್ತಿ ತಂಡದ ಬೆನ್ನೆಲುಬಾಗಿದ್ದ ಸ್ಪುರದ್ರೂಪಿ,ಪ್ರತಿಭಾವಂತ ಆಟಗಾರ, ಶ್ರೇಷ್ಠ ಕ್ಷೇತ್ರರಕ್ಷಕ ದಿ| ಬಿ.ಪ್ರತಾಪ್ ಚಂದ್ರ ಹೆಗ್ಡೆ 7 ಕ್ಯಾಚ್ ಹಿಡಿದು ಪಂದ್ಯಾಟದ ಮೇಲೆ ಹಿಡಿತ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಪಂದ್ಯಾಕೂಟದ ಶ್ರೇಷ್ಠ ದಾಂಡಿಗ ಪ್ರಶಸ್ತಿಯನ್ನು ಅಂದಿನ ದಿನಗಳ ನಾಯಕ ಶಿವಾನಂದ ಗೌಡ, ಬೌಲಿಂಗ್ ಮಿಂಚು ಪ್ರದೀಪ್ ವಾಜ್ ಶ್ರೇಷ್ಠ ಬೌಲರ್ ಹಾಗೂ ಪ್ರಕಾಶ್ ಸಿರ್ಸಿಕರ್ ಫೈನಲ್ ಪಂದ್ಯದ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದರೆ,ಬೌಲಿಂಗ್,ಬ್ಯಾಟಿಂಗ್ ವಿಭಾಗದಲ್ಲಿ ಶ್ರೇಷ್ಠ ನಿರ್ವಹಣೆ ತೋರಿದ್ದ ಅಂದಿನ ದಿನಗಳ ಶ್ರೇಷ್ಠ ಆಲ್ ರೌಂಡರ್ ಪ್ಯಾರಡೈಸ್ ಬನ್ನಂಜೆಯ ಸರ್ದಾರ್ ಬಾಬ್ ಜಾನ್ ಕೋಟೇಶ್ವರ ಪಡೆದುಕೊಂಡಿದ್ದರು.

ಶ್ರೇಷ್ಠ ಪ್ರದರ್ಶನದ ಮೂಲಕ ಚಕ್ರವರ್ತಿಗಳಿಗೆ ರಾಜ್ಯ,ರಾಷ್ಟ್ರೀಯ ಮಟ್ಟದ ಮನ್ನಣೆ ಕೊಡಿಸಿದ್ದಮೇರು ಕಪ್ತಾನ ಶ್ರೀಪಾದ ಉಪಾಧ್ಯಾಯ, ಟೆನ್ನಿಸ್ ಕ್ರಿಕೆಟ್ ಸಂಜಯ್ ಮಂಜ್ರೇಕರ್ ಸತೀಶ್ ಕೋಟ್ಯಾನ್, ಪ್ರದೀಪ್ ವಾಜ್, ದಿನೇಶ್ ಗಾಣಿಗ ಬೈಂದೂರು, ಮನೋಜ್ ನಾಯರ್, ಕೆ.ಪಿ.ಸತೀಶ್ ರಿಗೆ ಈ ಪಂದ್ಯ ಪ್ರಾರಂಭದ ದಿನಗಳು.

ಅಂದಿನ ದಿನಗಳ ಬೈಂದೂರಿನ ಪರಿಸರದ ಶಿಸ್ತು ಹಾಗೂ ಸಂಯೋಜಿತ ತಂಡ ವಿಕ್ರಂ ತಂಡ ಹಲವಾರು ಪಂದ್ಯಾಕೂಟಗಳನ್ನು ಆಯೋಜಿಸಿದ್ದ ಬೈಂದೂರಿನ ಗಾಂಧಿಮೈದಾನದ ವಿಶಾಲ ಅಂಗಣ ಬೆಂಗಳೂರು, ಮಂಗಳೂರು, ಉಡುಪಿ, ಕುಂದಾಪುರದ ಹಲವು ಯುವ ಕ್ರಿಕೆಟಿಗರ ಭವಿಷ್ಯ ರೂಪಿಸಿತ್ತು‌. ಅಂತರಾಷ್ಟ್ರೀಯ ಕ್ರಿಕೆಟಿಗರಿಗೆ ಇಂಗ್ಲೆಂಡ್ ನ ಲಾರ್ಡ್ಸ್ ಕ್ರಿಕೆಟ್ ಕಾಶಿಯಾದರೆ, ಟೆನ್ನಿಸ್ ಕ್ರಿಕೆಟಿಗರ ಪಾಲಿಗೆ ಬೈಂದೂರಿನ ಗಾಂಧಿಮೈದಾನ ಕ್ರಿಕೆಟ್ ಸ್ವರ್ಗವಾಗಿತ್ತು.

ಈ ಅಂಗಣದಲ್ಲಿ ಹಿರಿಯ ತಂಡ ಜೈ ಕರ್ನಾಟಕ ಬೆಂಗಳೂರು,ಪಡುಬಿದ್ರಿ,ಸನ್ನಿ ಉಡುಪಿ,ವೀರಕೇಸರಿ ಇನ್ನಿತರ ತಂಡಗಳು ಹಲವು ದಾಖಲೆಗಳನ್ನು ಬರೆದಿದೆ.ಇಂದಿಗೆ 30 ವರ್ಷಗಳು ಸರಿದರೂ ರಾಜ್ಯದ ಹಿರಿಯ ಟೆನ್ನಿಸ್ ಕ್ರಿಕೆಟಿಗರು ನೆನಪುಗಳನ್ನು ಸದಾ ಸ್ಮರಿಸುತ್ತಾರೆ. ಆ ಎಲ್ಲಾ ತಂಡಗಳ,ಎಲ್ಲಾ ಗತಕಾಲದ ನೆನಪುಗಳನ್ನು ಮುಂದಿನ ದಿನಗಳಲ್ಲಿ ಪ್ರತಿ ರವಿವಾರ ನಿಮ್ಮೆಲ್ಲರ ಪ್ರೀತಿಯ “ಸ್ಪೋರ್ಟ್ಸ್ ಕನ್ನಡ” ವೆಬ್ಸೈಟ್ ನಲ್ಲಿ ಬರೆಯುವೆ.

ಆರ್.ಕೆ.ಆಚಾರ್ಯ ಕೋಟ

Exit mobile version