
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (MAHE) ಇದರ ಏರ್ ಕಂಡೀಷನ್ ಡಿಪಾರ್ಟ್‌ಮೆಂಟ್ (ಸಾಮಾನ್ಯ ಸೇವೆಗಳ ವಿಭಾಗ) ವತಿಯಿಂದ ಆಯೋಜಿಸಲಾಗುತ್ತಿರುವ “ಸ್ಪಂದನ ಟ್ರೋಫಿ – 2026” ಕ್ರೀಡಾಕೂಟವು ಮಣಿಪಾಲದಲ್ಲಿ ವಿಶಿಷ್ಟ ಸಾಮಾಜಿಕ ಸಂದೇಶದೊಂದಿಗೆ ನಡೆಯಲಿದ್ದು, ಕ್ರೀಡಾಭಿಮಾನಿಗಳ ಗಮನ ಸೆಳೆಯುತ್ತಿದೆ.
ಸ್ಪಂದನ ಟ್ರೋಫಿ, ಕೇವಲ ಕ್ರೀಡಾಕೂಟವಾಗಿರದೆ, ಕ್ಯಾನ್ಸರ್‌ನಿಂದ ಬಳಲುತ್ತಿರುವ ಬಡ ಮಕ್ಕಳ ನೆರವಿಗಾಗಿ ಸಮರ್ಪಿತವಾಗಿರುವುದು ವಿಶೇಷ. ಕ್ರೀಡೆಯ ಮೂಲಕ ಮಾನವೀಯತೆಯ ಮೌಲ್ಯಗಳನ್ನು ಸಮಾಜಕ್ಕೆ ತಲುಪಿಸುವ ಮಹತ್ವದ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ.
ಫೆಬ್ರವರಿ 21 ಮತ್ತು 22, 2026 ರಂದು ಮಣಿಪಾಲ್‌ನ ಎಂಡ್‌ಪಾಯಿಂಟ್ ಕ್ರಿಕೆಟ್ ಗ್ರೌಂಡ್ – ಬಿ ನಲ್ಲಿ ನಡೆಯಲಿರುವ ಈ MAHE ಸಿಬ್ಬಂದಿ ಕ್ರೀಡಾಕೂಟದಲ್ಲಿ ವಿವಿಧ ವಿಭಾಗಗಳ ಸಿಬ್ಬಂದಿ ಭಾಗವಹಿಸಲಿದ್ದಾರೆ. ಕ್ರಿಕೆಟ್, ತ್ರೋಬಾಲ್ ಹಾಗೂ ಪುರುಷ–ಮಹಿಳೆಯರಿಗಾಗಿ ವಿಭಾಗವಾರು ಟಗ್ ಆಫ್ ವಾರ್ ಸ್ಪರ್ಧೆಗಳು ನಡೆಯಲಿವೆ.
ಸ್ಪಂದನ ಟ್ರೋಫಿ – 2026 ಕ್ರೀಡಾಕೂಟಕ್ಕೆ MAHE ಆಡಳಿತ, ವಿವಿಧ ವಿಭಾಗಗಳು ಹಾಗೂ ಸಿಬ್ಬಂದಿಯಿಂದ ಉತ್ತಮ ಬೆಂಬಲ ದೊರೆಯುತ್ತಿದ್ದು, ‘Access Life – Supporting Cancer Bravehearts’ ಸಂಸ್ಥೆಯ ಸಹಕಾರವೂ ಈ ಕಾರ್ಯಕ್ರಮಕ್ಕೆ ದೊರೆತಿದೆ. ಕ್ರೀಡೆ, ಆರೋಗ್ಯ ಮತ್ತು ಸಮಾಜಸೇವೆಯನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಈ ಪ್ರಯತ್ನ ಶ್ಲಾಘನೀಯವಾಗಿದೆ.
ಕ್ರೀಡಾ ಪ್ರತಿಭೆ ಪ್ರದರ್ಶನದ ಜೊತೆಗೆ, ಸಮಾಜದ ಸಂಕಷ್ಟದಲ್ಲಿರುವ ಮಕ್ಕಳ ಬದುಕಿಗೆ ಆಶಾಕಿರಣ ನೀಡುವ ಉದ್ದೇಶದಿಂದ ಆಯೋಜಿಸಲಾದ ಈ ಕ್ರೀಡಾಕೂಟವು MAHE ಸಂಸ್ಥೆಯ ಸಾಮಾಜಿಕ ಬದ್ಧತೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ: 0820-2922241, 9900023917, 8310908851
ಇಮೇಲ್: ac.kh@manipal.edu
