SportsKannada | ಸ್ಪೋರ್ಟ್ಸ್ ಕನ್ನಡ

ಅಲ್ಲಿ ಆಸ್ಪತ್ರೆ ಬೆಡ್ ಮೇಲೆ ಹೆತ್ತ ತಾಯಿ.., ಇಲ್ಲಿ ದೇಶದ ಪರ ಟೆಸ್ಟ್ ಕ್ರಿಕೆಟ್ ಆಡುವ ಗೌರವ.. ಮಧ್ಯೆ ಸೇತುವೆಯಾದ ಚಾರ್ಟೆಡ್ ಫ್ಲೈಟ್..!

ಭಾರತ ಮತ್ತು ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯದ 2ನೇ ದಿನದಾಟ ಆಗಷ್ಟೇ ಮುಗಿದಿತ್ತು. ಟೆಸ್ಟ್ ಕ್ರಿಕೆಟ್’ನಲ್ಲಿ 500 ವಿಕೆಟ್’ಗಳ ಮಹೋನ್ನತ ಸಾಧನೆಯ ನಂತರ ಡ್ರೆಸ್ಸಿಂಗ್ ರೂಮ್’ಗೆ ಬಂದ ರವಿಚಂದ್ರನ್ ಅಶ್ವಿನ್ ದೊಡ್ಡ ನಿಟ್ಟುಸಿರು ಬಿಟ್ಟಿದ್ದ ಅಷ್ಟೇ. ಫೋನ್ ಕೈಗೆತ್ತಿಕೊಂಡ ಕೆಲವೇ ನಿಮಿಷಗಳಲ್ಲಿ ಅತ್ತ ಕಡೆಯಿಂದ ಪತ್ನಿಯ ಕರೆ. ಸುದ್ದಿ ಕೇಳಿ ಅಶ್ವಿನ್ ಉಸಿರೇ ಒಂದು ಕ್ಷಣ ಕಂಪಿಸಿ ಬಿಟ್ಚಿತ್ತು.
‘’ನಿಮ್ಮ ತಾಯಿಗೆ ಹುಷಾರಿಲ್ಲ, ತುಂಬಾ ಬಳಲಿದ್ದಾರೆ. ಆಸ್ಪತ್ರೆಗೆ ಸೇರಿಸಿದ್ದೇವೆ, ICUನಲ್ಲಿದ್ದಾರೆ’’ ಎಂದು ಪತ್ನಿ ತಿಳಿಸುತ್ತಿದ್ದಂತೆ ನಿಂತ ನೆಲದಲ್ಲೇ ಕುಸಿದು ಬಿಟ್ಟಿದ್ದ.
ಹೆತ್ತ ತಾಯಿ ಆಸ್ಪತ್ರೆಯಲ್ಲಿ ಮಲಗಿದ್ದರೆ ಮಗನ  ಹೃದಯ ಕಂಪಿಸದೆ ಇದ್ದೀತೇ..? ಅಮ್ಮನನ್ನು ಹೋಗಿ ನೋಡಿಕೊಂಡು ಬರೋಣ ಎಂದರೆ, ರಾಜ್’ಕೋಟ್’ಗೂ ಚೆನ್ನೈಗೂ 2000 ಕಿ.ಮೀ ಅಂತರ. ವಿಮಾನದಲ್ಲಿ ಹೋದರೆ ನಾಲ್ಕೂವರೆ ಗಂಟೆ ಪ್ರಯಾಣ. ರಾಜ್’ಕೋಟ್’ನಿಂದ ಚೆನ್ನೈಗೆ ಡೈರೆಕ್ಟ್ ಫ್ಲೈಟ್ ಬೇರೆ ಇಲ್ಲ.
ಟೀಮ್ ಮ್ಯಾನೇಜ್ಮೆಂಟ್’ಗೆ ಅಶ್ವಿನ್ ವಿಷಯ ತಿಳಿಸುತ್ತಾನೆ. ಸುದ್ದಿ ಬಿಸಿಸಿಐ ಅಧಿಕಾರಿಗಳ ಕಿವಿಗೆ ಬಿದ್ದ ಒಂದು ಗಂಟೆಯೊಳಗೆ ಅಶ್ವಿನ್ ಚೆನ್ನೈಗೆ ಹೋಗಲು ಚಾರ್ಟೆಡ್ ಫ್ಲೈಟ್ ವ್ಯವಸ್ಥೆಯಾಗುತ್ತದೆ. ಭಾರತ ತಂಡದ ದಿಗ್ಗಜ ಸ್ಪಿನ್ನರ್, ಟೀಮ್ ಇಂಡಿಯಾಗೆ ಸಾಕಷ್ಟು ಟೆಸ್ಟ್ ಪಂದ್ಯಗಳನ್ನು ಗೆಲ್ಲಿಸಿಕೊಟ್ಟವನು, ತಾನು ಹೆಸರು ಮಾಡಿದ್ದಷ್ಟೇ ಅಲ್ಲದೆ, ಭಾರತೀಯ ಕ್ರಿಕೆಟ್’ಗೂ ಗೌರವ ತಂದ ಆಟಗಾರ. ಎರಡನೇ ಯೋಚನೆಯೇ ಇಲ್ಲದೆ, ಅಶ್ವಿನ್ ಸಹಾಯಕ್ಕೆ ಬಿಸಿಸಿಐ ನಿಂತು ಬಿಟ್ಟಿತ್ತು.
ರಾತ್ರೋ ರಾತ್ರಿ ಅಶ್ವಿನ್ ರಾಜ್’ಕೋಟ್’ನಿಂದ ಚೆನ್ನೈಗೆ ಬಂದಿಳಿದ. ನೇರವಾಗಿ ಆಸ್ಪತ್ರೆಗೆ ಹೋಗಿ ತಾಯಿಯ ಮುಂದೆ ನಿಂತು ಬಿಟ್ಟ. ಇದೆಲ್ಲಾ ನಡೆದದ್ದು ಶುಕ್ರವಾರ. ಶನಿವಾರ ಪೂರ್ತಿ ತಾಯಿಯ ಜೊತೆಗಿದ್ದ ಅಶ್ವಿನ್.
ತಾಯಿಯ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಾಣುತ್ತಿದ್ದಂತೆ ಅಶ್ವಿನ್ ಮನಸ್ಸು ಮತ್ತೆ ರಾಜ್’ಕೋಟ್’ಗೆ ಮರಳುವ ಲೆಕ್ಕಾಚಾರ ಹಾಕುತ್ತಿತ್ತು. ಟೀಮ್ ಮ್ಯಾನೇಜರ್’ಗೆ ಕರೆ ಮಾಡಿ ತಾನು ವಾಪಸ್ ಬರುವ ನಿರ್ಧಾರ ಮಾಡಿರುವುದಾಗಿ ತಿಳಿಸುತ್ತಾನೆ.
‘’Are you sure..? ಈ ಸಮಯದಲ್ಲಿ ನೀನು ತಾಯಿಯ ಜೊತೆಗಿರುವುದಕ್ಕೆ ಮೊದಲ ಆದ್ಯತೆ. ಅಲ್ಲೇ ಇದ್ದು ತಾಯಿಯನ್ನು ನೋಡಿಕೋ’’ ಎಂದು ಬಿಟ್ಟಿತ್ತು ಭಾರತ ತಂಡದ ಟೀಮ್ ಮ್ಯಾನೇಜ್ಮೆಂಟ್.
ಆದರೆ ಅಶ್ವಿನ್ ದೃಢವಾಗಿ ನಿರ್ಧರಿಸಿ ಬಿಟ್ಟಿದ್ದ. ಬಿಸಿಸಿಐಗೆ ತನ್ನ ನಿರ್ಧಾರವನ್ನು ತಿಳಿಸಿ ಭಾನುವಾರ ಚಾರ್ಟೆಟ್ ಫ್ರೈಟ್ ಹತ್ತಿ ಮತ್ತೆ ರಾಜ್’ಕೋಟ್’ಗೆ ಬಂದಿಳಿದಿದ್ದಾನೆ. ನೇರವಾಗಿ ನಿರಂಜನ್ ಶಾ ಮೈದಾನಕ್ಕೆ ಬಂದು 4ನೇ ದಿನದಾಟಕ್ಕೆ ಭಾರತ ತಂಡವನ್ನು ಸೇರಿಕೊಂಡಿದ್ದಾನೆ.
ಇದು Unreal dedication.  ಅನ್ನ ಕೊಟ್ಟ ಆಟಕ್ಕೆ, ಹೆಸರು-ಗೌರವ ತಂದು ಕೊಟ್ಟ ಕ್ರಿಕೆಟ್’ಗೆ, ಭಾರತ ತಂಡಕ್ಕೆ ಒಬ್ಬ ಆಟಗಾರ ತೋರುವ ಬದ್ಧತೆಗೆ ಇದು ಬೆಸ್ಟ್ ಎಕ್ಸಾಂಪಲ್.
#RavichandranAshwin #INDvsENG
Exit mobile version