Site icon SportsKannada ಸ್ಪೋರ್ಟ್ಸ್ ಕನ್ನಡ

5 ವರ್ಷಗಳ ನಂತರ ಕರ್ನಾಟಕ ಪರ ರಣಜಿ ಪಂದ್ಯವಾಡಲಿದ್ದಾರೆ ರಾಹುಲ್

5 ವರ್ಷಗಳ ನಂತರ ಕರ್ನಾಟಕ ಪರ ರಣಜಿ ಪಂದ್ಯವಾಡಲಿದ್ದಾರೆ ರಾಹುಲ್

ಕರ್ನಾಟಕದ ಸ್ಟಾರ್ ಕ್ರಿಕೆಟರ್ ಕೆ.ಎಲ್ ರಾಹುಲ್ ಐದು ವರ್ಷಗಳ ನಂತರ ತಮ್ಮ ತವರು ರಾಜ್ಯದ ಪರ ರಣಜಿ ಪಂದ್ಯವಾಡಲು ಸಜ್ಜಾಗಿದ್ದಾರೆ. ಗುರುವಾರ (ಜನವರಿ 30) ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಹರ್ಯಾಣ ವಿರುದ್ಧದ ಪಂದ್ಯದಲ್ಲಿ ರಾಹುಲ್ ಕರ್ನಾಟಕ ಪರ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ.

2010ರಲ್ಲಿ ಪಂಜಾಬ್ ವಿರುದ್ಧದ ಪಂದ್ಯದ ಮೂಲಕ ಕರ್ನಾಟಕ ಪರ ರಣಜಿ ಕ್ರಿಕೆಟ್’ಗೆ ಪದಾರ್ಪಣೆ 2013-14ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಸಾವಿರ ರನ್ ಸರದಾರನಾಗಿ ಕರ್ನಾಟಕ ತಂಡ 14 ವರ್ಷಗಳ ನಂತರ ರಣಜಿ ಟ್ರೋಫಿ ಗೆಲ್ಲಲು ಕಾರಣರಾಗಿದ್ದರು. ಮಹಾರಾಷ್ಟ್ರ ವಿರುದ್ಧ ಹೈದರಾಬಾದ್’ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ರಾಹುಲ್ ಅಮೋಘ ಶತಕ ಬಾರಿಸಿದ್ದರು. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 2014-15ನೇ ಸಾಲಿನ ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ ಭರ್ಜರಿ ತ್ರಿಶತಕ ದಾಖಲಿಸಿದ್ದ ರಾಹುಲ್ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆ ತಮಿಳುನಾಡು ವಿರುದ್ಧದ ಫೈನಲ್ ಪಂದ್ಯದಲ್ಲಿ ಅಮೋಘ 180 ರನ್ ಗಳಿಸಿ ಕರ್ನಾಟಕ ತಂಡ ಸತತ ಎರಡನೇ ಬಾರಿ ರಣಜಿ ಚಾಂಪಿಯನ್ ಆಗುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ವಿರುದ್ಧದ ರಣಜಿ ಪಂದ್ಯವನ್ನು ಆತಿಥೇಯ ಕರ್ನಾಟಕ ತಂಡಇನ್ನಿಂಗ್ಸ್ ಹಾಗೂ 207 ರನ್’ಗಳ ಭರ್ಜರಿ ಅಂತರದಲ್ಲಿ ಗೆದ್ದುಕೊಂಡಿತ್ತು. ಇನ್ನಿಂಗ್ಸ್ ಗೆಲುವಿನ ಬಲದೊಂದಿಗೆ ಬೋನಸ್ ಅಂಕ ಸಹಿತ ಪಂದ್ಯದಲ್ಲಿ ಒಟ್ಟು ಏಳು ಪಾಯಿಂಟ್ ಗಳಿಸಿದ್ದ ಕರ್ನಾಟಕ ಒಟ್ಟಾರೆ ಅಂಕ ಗಳಿಕೆಯನ್ನು 19ಕ್ಕೆ ಏರಿಸಿಕೊಳ್ಳುವ ಮೂಲಕ ನಾಕೌಟ್ ಕನಸನ್ನು ಜೀವಂತವಾಗಿಟ್ಟುಕೊಂಡಿತು.

ಪಂಜಾಬ್ ವಿರುದ್ಧದ ಇನ್ನಿಂಗ್ಸ್ ಗೆಲುವಿನೊಂದಿಗೆ ಕರ್ನಾಟಕ ತಂಡ ಎಲೈಟ್ ಸಿ ಗುಂಪಿನಲ್ಲಿ ಆಡಿರುವ 6 ಪಂದ್ಯಗಳಲ್ಲಿ 19 ಅಂಕ ಗಳಿಸಿದೆ. ಹರ್ಯಾಣ ವಿರುದ್ಧ ಜನವರಿ 30ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಅಂತಿಮ ಲೀಗ್ ಪಂದ್ಯವನ್ನು ಗೆದ್ದಲ್ಲಿ ಕರ್ನಾಟಕ ನಾಕೌಟ್ ಹಂತಕ್ಕೆ ಪ್ರವೇಶ ಪಡೆಯಲಿದೆ.

ಇದೇ ವೇಳೆ ಆಧುನಿಕ ಕ್ರಿಕೆಟ್’ನ ದಿಗ್ಗಜ ಆಟಗಾರ, ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ ದೆಹಲಿ ಪರ ಕಣಕ್ಕಿಳಿಯಲಿದ್ದಾರೆ.

Exit mobile version