SportsKannada | ಸ್ಪೋರ್ಟ್ಸ್ ಕನ್ನಡ

“ಮಾಸ್ಟರ್ಸ್ ಇಂಡೋರ್ ವರ್ಲ್ಡ್ ಕಪ್,ಭಾರತ ತಂಡದಲ್ಲಿ ಜೈ ಕರ್ನಾಟಕ ಬೆಂಗಳೂರಿನ ಹಿರಿಯ ವೇಗಿ ನಾಗೇಶ್ ಸಿಂಗ್”

ಅಕ್ಟೋಬರ್ 19 ರಿಂದ 26 ರವರೆಗೆ ಸೌತ್ ಆಫ್ರಿಕಾದ ಕೇಪ್ ಟೌನ್ ನಲ್ಲಿ ನಡೆಯಲಿರುವ ಮಾಸ್ಟರ್ಸ್ ಇಂಡೋರ್ ಕ್ರಿಕೆಟ್ ವರ್ಲ್ಡ್ ಕಪ್ ಪಂದ್ಯಾಕೂಟಕ್ಕಾಗಿ ಭಾರತ ತಂಡಕ್ಕೆ ಜೈ ಕರ್ನಾಟಕದ ಹಿರಿಯ ವೇಗಿ ನಾಗೇಶ್ ಸಿಂಗ್ ಆಯ್ಕೆಯಾಗಿರುತ್ತಾರೆ. ನಾಗೇಶ್ ಸಿಂಗ್ ರವರ ಕ್ರಿಕೆಟ್ ಜೀವನ ಪ್ರಾರಂಭವಾಗಿದ್ದು ಕರ್ನಾಟಕ ರಾಜ್ಯ ಟೆನ್ನಿಸ್ ಕ್ರಿಕೆಟ್ ನ ಇತಿಹಾಸದ ಪುಟಗಳಲ್ಲಿ ಸುವರ್ಣ ಇತಿಹಾಸವನ್ನು ಬರೆದ ತಂಡ “ಜೈ ಕರ್ನಾಟಕ” ಬೆಂಗಳೂರಿನಿಂದ.

ಭಾರತೀಯ ಅಂತರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದ, ಪ್ರಸ್ತುತ ಗೋವಾ ರಣಜಿ ಕೋಚ್ ಆಗಿರುವ ಕರ್ನಾಟಕದ ದೈತ್ಯ ವೇಗಿ ದೊಡ್ಡ ಗಣೇಶ್,ಡೇವಿಡ್ ಜಾನ್ಸನ್,ಎಸ್.ಅರವಿಂದ್ ಹಾಗೂ ಜಸ್ಟ್ ಕ್ರಿಕೆಟ್ ಅಕಾಡೆಮಿ ಬ್ಯಾಟಿಂಗ್ ಕೋಚ್,ವೀಲ್ &ಎಕ್ಸೈಲ್ ನ ಶ್ರೇಷ್ಠ ಕ್ರಿಕೆಟಿಗ ಮುಕೇಶ್ ಇವರೆಲ್ಲರ ಮಾತೃ ಸಂಸ್ಥೆ ಜೈ ಕರ್ನಾಟಕ ತಂಡ.ದಶಕಗಳ ಇತಿಹಾಸದ ಬಳಿಕ ಮತ್ತೆ ಅಂತರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಜೈ ಕರ್ನಾಟಕದ 4 ನೇ ಆಟಗಾರರೆಂಬ ಕೀರ್ತಿಗೆ ನಾಗೇಶ್ ಸಿಂಗ್ ಪಾತ್ರರಾಗಿದ್ದಾರೆ.

ಪ್ರಾರಂಭದ ದಿನಗಳಲ್ಲಿ(1988-96) ಇಂದಿರಾ ನಗರದ “ಕ್ಲಾಸಿಕ್ ಕ್ರಿಕೆಟರ್ಸ್” ತಂಡವನ್ನು ಪ್ರತಿನಿಧಿಸುತ್ತಿದ್ದರು. ಲೆದರ್ ಬಾಲ್ ಪ್ರಾಕ್ಟೀಸ್ ಗಾಗಿ “ಹೆಚ್.ಎ.ಎಲ್”ಅಂಗಣದಲ್ಲಿ ನಾಗೇಶ್ ಸಿಂಗ್ ರವರ ಪ್ರತಿಭೆಯನ್ನು ಗುರುತಿಸಿದ ಟೆನ್ನಿಸ್ ಬಾಲ್ ನ ದಂತಕಥೆ “H.A.L”ನ ಸೀನಿಯರ್ ಮೆನೇಜರ್ ಮನೋಹರ್ ರವರು 1996 ರಿಂದ ಜೈ ಕರ್ನಾಟಕ ತಂಡವನ್ನು ಪ್ರತಿನಿಧಿಸುವ ಸುವರ್ಣಾವಕಾಶವನ್ನು ನಾಗೇಶ್ ಸಿಂಗ್ ರವರಿಗೆ ಕಲ್ಪಿಸುತ್ತಾರೆ.

ದಶಕಗಳ ಸಾರಥಿ ಸೆಂಥಿಲ್ ಅಶ್ವಥ್ ಕುಮಾರ್ ಸಾರಥ್ಯದ ” ಜೈ ಕರ್ನಾಟಕ” ಶಿಸ್ತು, ಸಂಘಟಿತ ಹೋರಾಟ ಹಾಗೂ ಕಠಿಣ ಅಭ್ಯಾಸಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದ ತಂಡ. ಜೈ ಕರ್ನಾಟಕ ತಂಡದಲ್ಲಿ ಒಂದೇ ಕುಟುಂಬದ ಅವಳಿ ಸಹೋದರರ 5 ಜೋಡಿಗಳಾದ ಜೈ ಕರ್ನಾಟಕದ ಬ್ರಹ್ಮಾಸ್ತ್ರಗಳಾದ ಕುಮ್ಮಿ-ರಾಜೇಶ್, ಕರ್ನಾಟಕದ ಕಲಾತ್ಮಕ ಆಟಗಾರ ರಾಜೇಶ್-ಮಂಜು, ಮನೋಹರ್-ಬಾಬು, ಡೇವಿಡ್ ಜಾನ್ಸನ್-ಡಾನ್ ಜಾನ್ಸನ್, ಜಾನಿ-ಮೌನ್ಸಿ ಯ ಬಳಿಕ ಒಂದೇ ಮನೆಯ 4 ಸಹೋದರರಾದ ನಾಗೇಶ್ ಸಿಂಗ್,ಸ್ಪೋಟಕ ಆರಂಭಿಕ ಭಗವಾನ್ ಸಿಂಗ್,ಅಂಬರೀಶ್ ಸಿಂಗ್ ಹಾಗೂ ಅನೀಷ್ ಸಿಂಗ್ ಪ್ರತಿನಿಧಿಸಿರುವುದು‌ ಕ್ರಿಕೆಟ್ ಇತಿಹಾಸದಲ್ಲಿಯೇ ಅತ್ಯಪರೂಪದ ದಾಖಲೆ.

ಅಂದಿನ ದಿನಗಳಲ್ಲಿ ಚೆಂಡಿನ ತೂಕವನ್ನಷ್ಟೇ ತೂಗಿ ಎದುರಾಳಿ ದಾಂಡಿಗನ ಕ್ರೀಸಿನ‌‌ ಆಯುಷ್ಯ ಅಳೆಯುತ್ತಿದ್ದ ಮೆರಿನ್, ದಾಂಡಿಗನ ಎದೆಯನ್ನು ಸೀಳಿದಂತೆ ಭಾಸವಾಗುವಂತೆ ವೇಗ ಕಾಯ್ದುಕೊಳ್ಳುತ್ತಿದ್ದ ಮಂಜುನಾಥ್ (ಮಂಜ),ದಾಂಡು,ಚೆಂಡು ಹಾಗೂ ಕ್ಷೇತ್ರರಕ್ಷಣೆಯಲ್ಲಿ ಪರಿಪೂರ್ಣತೆ ಕಾಯ್ದುಕೊಳ್ಳುತ್ತಿದ್ದ ಮೇರು ಕಪ್ತಾನ ಮನೋಹರ್ ಅವರ ಜೊತೆ ಅದ್ಭುತ ಬೌಲಿಂಗ್ ಪ್ರದರ್ಶನ ತೋರುತ್ತಾ, ಕರಾವಳಿ ಸೇರಿದಂತೆ ಹಲವಾರು ಪ್ರತಿಷ್ಟಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ರಾಜ್ಯಾದ್ಯಂತ ಜೈ ಕರ್ನಾಟಕ ತಂಡ,ಮತ್ತು ಆಟಗಾರರು ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿದ್ದಾರೆ.

ಬೆಂಗಳೂರಿನ‌ ಶ್ರೇಷ್ಠ ತಂಡ ಶಾಜ್ ತಂಡವನ್ನು ಪ್ರತಿನಿಧಿಸಿ, ಮುಂಬಯಿಯಲ್ಲಿ ನಡೆದ ” ರಾಜ್ ಕಪೂರ್ ಮೆಮೊರಿಯಲ್ ಟ್ರೋಫಿ”ಯಲ್ಲಿ ಅದ್ಭುತ ಪ್ರದರ್ಶನ ತೋರಿ ಕರ್ನಾಟಕದ ಮೆಚ್ಚುಗೆಗೆ ಪಾತ್ರರಾಗಿದ್ದರು.

ಕ್ರಮೇಣ ಬೌಲಿಂಗ್ ಜೊತೆ ಬ್ಯಾಟಿಂಗಲ್ಲೂ ಮಿಂಚತೊಡಗಿದ ಕುಳ್ಳನೆಯ ವಾಮನಮೂರ್ತಿ, ಅಂದಿನ ದಿನಗಳ ದಾಖಲೆಯ 38 ಸರಣಿ ಶ್ರೇಷ್ಟ ಪ್ರಶಸ್ತಿ ವಿಜೇತ ಕರ್ನಾಟಕದ ಕಲಾತ್ಮಕ ಆಟಗಾರ ರಾಜೇಶ್ ರವರ ಜೊತೆ ಕೂಡ ಇನ್ನಿಂಗ್ಸ್ ಆರಂಭಿಸಿರುವರು.2009 ರ ನಂತರ ಲೆದರ್ ಬಾಲ್ ನ ಪಂದ್ಯಗಳಲ್ಲಿ ಭಾಗವಹಿಸುತ್ತಿದ್ದ ನಾಗೇಶ್ ರವರು ಮತ್ತೆ 2016 ರಲ್ಲಿ ತಂಡದಲ್ಲಿ ಮತ್ತೆ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ರಾಜ್ಯಾದ್ಯಂತ ಜನಪ್ರಿಯತೆಗೆ ಕಾರಣೀಭೂತವಾದ ಜೈ ಕರ್ನಾಟಕ ತಂಡದ ಅಭಿಮಾನಕ್ಕಾಗಿ ಬಲಗೈ ತೋಳಿನಲ್ಲಿ J.K ಬರಹದ ಟ್ಯಾಟೂ ಕ್ರಿಕೆಟ್ ಪ್ರೇಮಿಗಳ ಹುಚ್ಚೆಬ್ಬಿಸುತ್ತದೆ.

ಪ್ರಸ್ತುತ ಯುವ ಆಟಗಾರರಿಗಾಗಿ ತಂಡದಲ್ಲಿ ಜಾಗ ಬಿಟ್ಟು ಕೊಟ್ಟಿದ್ದರೂ,ರಾಜ್ಯದ ಪ್ರತಿಷ್ಟಿತ ತಂಡಗಳು 50 ರ ಹರೆಯದ ನಾಗೇಶ್ ರವರಿಗೆ ಬುಲಾವ್ ನೀಡುತ್ತಿರುವುದು ಅದ್ಭುತ ಪ್ರದರ್ಶನದ ಕಾರಣ, ಅಧಮ್ಯ ಉತ್ಸಾಹಿ,ಜೀವನದುದ್ದಕ್ಕೂ ಕ್ರಿಕೆಟ್ ಆರಾಧಿಸಿದ ಜೀವ, ಎಲ್ಲಾ ತಂಡಗಳ ಜೊತೆಗೂ ಅತ್ಯುತ್ತಮ ಬಾಂಧವ್ಯ ಹೊಂದಿರುವ ಇವರು ಇಂದಿಗೂ ಪ್ರತಿಷ್ಟಿತ ಪಂದ್ಯಾಟಗಳಲ್ಲಿ ಅಂಪಾಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ನಡೆದ “ಹೆಸರಘಟ್ಟ ಪ್ರಿಮಿಯರ್ ಲೀಗ್” ಪಂದ್ಯಾಕೂಟದಲ್ಲಿ ಅನುಜ ಭಗವಾನ್ ಸಿಂಗ್ ಜೊತೆಗೂಡಿ ದಿನವೊಂದಕ್ಕೆ ಸತತ 16 ಗಂಟೆಗಳ ಕಾಲ, ಅಂಪಾಯರಿಂಗ್ ನಡೆಸಿ ಕ್ರಿಕೆಟ್ ಇತಿಹಾಸದಲ್ಲಿಯೇ ದಾಖಲೆಯ ಅಂಪಾಯರಿಂಗ್ ನಡೆಸಿರುತ್ತಾರೆ.

ವಯಸ್ಸು ಅರ್ಧಶತಕದ ಗಡಿ ದಾಟಿದರೂ ಕಠಿಣ ವ್ಯಾಯಾಮದಿಂದ ದೈಹಿಕ ಕ್ಷಮತೆ ಕಾಪಾಡಿಕೊಂಡಿದ್ದು, ಸತತ ಅಭ್ಯಾಸ,ಪರಿಶ್ರಮದ ಮೂಲಕ ಕಾರ್ಪೊರೇಟ್ ಲೀಗ್ ಪಂದ್ಯಗಳಲ್ಲಿ ಜೆ.ಬಿ‌.ಎನ್ ಸಿ.ಸಿ ಹಾಗೂ ವಿ.ಎಸ್.ಎಲ್ ಕ್ರಿಕೆಟ್ ಕ್ಲಬ್ ಪರವಾಗಿ ಆಡಿ ಅತ್ಯುತ್ತಮ ನಿರ್ವಹಣೆ ತೋರಿದ,ನಾಗೇಶ್ ಸಿಂಗ್ ರವರ ಸಾಧನೆಗಳನ್ನು ಗುರುತಿಸಿ ಭಾರತ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.ಸೌತ್ ಆಫ್ರಿಕಾದಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯಾಕೂಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿರುವ ನಾಗೇಶ್ ಸಿಂಗ್ ರವರಿಗೆ ವಿ.ಎಸ್.ಎಲ್ ಕ್ರಿಕೆಟ್ ಕ್ಲಬ್ ನ ಮಾಲೀಕ ಶ್ರೀ ವಿಶ್ವಾಸ್ ಲಾಡ್ ಸಂಪೂರ್ಣ ಸಹಕಾರ ನೀಡಿ ಪ್ರೋತ್ಸಾಹಿಸುತ್ತಿದ್ದಾರೆ.

ಆರ್.ಕೆ.ಆಚಾರ್ಯ ಕೋಟ

Exit mobile version