Site icon SportsKannada ಸ್ಪೋರ್ಟ್ಸ್ ಕನ್ನಡ

ಬಂಗಾಳ ದಾಳಿಗೆ ಕುಸಿದ ಕರ್ನಾಟಕಕ್ಕೆ ‘ಅಭಿನವ’ ಆಸರೆ!

ಬಂಗಾಳ ದಾಳಿಗೆ ಕುಸಿದ ಕರ್ನಾಟಕಕ್ಕೆ ‘ಅಭಿನವ’ ಆಸರೆ!

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಂಗಾಳ ವಿರುದ್ಧದ ರಣಜಿ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ತಂಡ ಇನ್ನಿಂಗ್ಸ್ ಹಿನ್ನಡೆಯ ಭೀತಿಯಲ್ಲಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ್ದ ಬಂಗಾಳ ತಂಡ ಪ್ರಥಮ ದಿನದಂತ್ಯಕ್ಕೆ 78 ಓವರ್’ಗಳಲ್ಲಿ 5 ವಿಕೆಟ್ ನಷ್ಟಕ್ಕೆ 249 ರನ್ ಕಲೆ ಹಾಕಿತ್ತು. ದ್ವಿತೀಯ ದಿನ ಆಟ ಮುಂದುವರಿಸಿದ ಬಂಗಾಳ 52 ರನ್ ಸೇರಿಸುವಷ್ಟರಲ್ಲಿ ಉಳಿದ ಐದು ವಿಕೆಟ್ ಕಳೆದುಕೊಂಡು 301 ರನ್’ಗಳಿಗೆ ಆಲೌಟಾಯಿತು. ಕರ್ನಾಟಕ ಪರ ಬಲಗೈ ಮಧ್ಯಮ ವೇಗದ ಬೌಲರ್ ವಾಸುಕಿ ಕೌಶಿಕ್ 25 ಓವರ್’ಗಳಲ್ಲಿ ಕೇವಲ 38 ರನ್ನಿತ್ತಿ 5 ವಿಕೆಟ್ ಕಬಳಿಸಿದರು. ಪದಾರ್ಪಣೆಯ ಪಂದ್ಯದಲ್ಲಿ ಮಿಂಚಿದ ಎಡಗೈ ವೇಗದ ಬೌಲರ್ ಅಭಿಲಾಷ್ ಶೆಟ್ಟಿ 62 ರನ್ನಿಗೆ 2 ವಿಕೆಟ್ ಪಡೆದರು.
ನಂತರ ತನ್ನ ಪ್ರಥಮ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ದ್ವಿತೀಯ ದಿನದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 155 ರನ್ ಗಳಿಸಿದೆ. ನಾಯಕ ಮಯಾಂಕ್ ಅಗರ್ವಾಲ್ 17 ರನ್, ಕಿಶನ್ ಬೆದರೆ 23 ರನ್, ವಿಕೆಟ್ ಕೀಪರ್ ಸುಜಯ್ ಸತೇರಿ 10 ರನ್, ಸ್ಮರಣ್ ಆರ್. 26 ರನ್ನಿಗೆ ಔಟಾದರೆ ಮಾಜಿ ನಾಯಕ ಮನೀಶ್ ಪಾಂಡೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. 
ಒಂದು ಹಂತದಲ್ಲಿ ಕೇವಲ 97 ರನ್ನಿಗೆ 5 ವಿಕೆಟ್ ಕಳೆದುಕೊಂಡು ಭಾರೀ ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಅಭಿಮನ್ ಮನೋಹರ್ ಮತ್ತು ಶ್ರೇಯಸ್ ಗೋಪಾಲ್ ಆಸರೆಯಾಗಿ ನಿಂತಿದ್ದಾರೆ. ಈ ಜೋಡಿ ಮುರಿಯದ 6ನೇ ವಿಕೆಟ್’ಗೆ 58 ರನ್’ಗಳ ಜೊತೆಯಾಟವಾಡಿದ್ದು, ಅಭಿನವ್ ಮನೋಹರ್ ಅಜೇಯ 50 ಹಾಗೂ ಶ್ರೇಯಸ್ ಗೋಪಾಲ್ ಅಜೇಯ 23 ರನ್’ಗಳೊಂದಿಗೆ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇನ್ನಿಂಗ್ಸ್ ಮುನ್ನಡೆ ಪಡೆಯಲು ಕರ್ನಾಟಕ ತಂಡ ಇನ್ನೂ 147 ರನ್ ಗಳಿಸಬೇಕಿದೆ.
Exit mobile version