Site icon SportsKannada ಸ್ಪೋರ್ಟ್ಸ್ ಕನ್ನಡ

ಭಾರತ ಟೆಸ್ಟ್ ತಂಡಕ್ಕೆ ಉಡುಪಿ ಹುಡುಗನ ಎಂಟ್ರಿ.. ಈತ ಅಶ್ವಿನ್ ಉತ್ತರಾಧಿಕಾರಿ

ಭಾರತ ಟೆಸ್ಟ್ ತಂಡಕ್ಕೆ ಉಡುಪಿ ಹುಡುಗನ ಎಂಟ್ರಿ..
ಈತ ಅಶ್ವಿನ್ ಉತ್ತರಾಧಿಕಾರಿ

ಇದು ಉಡುಪಿ ಜಿಲ್ಲೆಯ ಕ್ರಿಕೆಟ್ ಪ್ರಿಯರಿಗೆ ಸಿಹಿ ಸುದ್ದಿ. ಉಡುಪಿಯ ಪಾಂಗಾಳ ಮೂಲದ ಕ್ರಿಕೆಟಿಗ ತನುಷ್ ಕೋಟ್ಯಾನ್ ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಅಂತರಾಷ್ಟ್ರೀಯ ಕ್ರಿಕೆಟ್’ಗೆ ನಿವೃತ್ತಿ ಘೋಷಿಸಿರುವ ಕಾರಣ, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅಶ್ವಿನ್ ಅವರ ಸ್ಥಾನಕ್ಕೆ ತನುಷ್ ಕೋಟ್ಯಾನ್ ಆಯ್ಕೆಯಾಗಿದ್ದಾರೆ.

ರಣಜಿ ಚಾಂಪಿಯನ್ ಮುಂಬೈ ತಂಡ, 15ನೇ ಬಾರಿ ಇರಾನಿ ಕಪ್ ಟ್ರೋಫಿ ಗೆಲ್ಲುವಲ್ಲಿ ತನುಷ್ ಪಾತ್ರ ಮಹತ್ವದ್ದಾಗಿತ್ತು. ಲಕ್ನೋದ ಅಟಲ್ ಬಿಹಾರಿ ವಾಜಪೇಯಿ – ಏಕನಾ ಮೈದಾನದಲ್ಲಿ ನಡೆದಿದ್ದ ಪಂದ್ಯದಲ್ಲಿ ರೆಸ್ಟ್ ಆಫ್ ಇಂಡಿಯಾ ವಿರುದ್ಧ ತನುಷ್ ಕೋಟ್ಯಾನ್ ಅಮೋಘ ಶತಕ ಬಾರಿಸಿದ್ದರು.

25 ವರ್ಷದ ತನುಷ್ ಕೋಟ್ಯಾನ್ ಪ್ರತಿಭಾವಂತ ಆಲ್ರೌಂಡರ್. ಆಫ್ ಸ್ಪಿನ್ನರ್ ಆಗಿರುವ ತನುಷ್ ಉತ್ತಮ ಬ್ಯಾಟ್ಸ್’ಮನ್ ಕೂಡ ಹೌದು.
2018ರಲ್ಲಿ ಮುಂಬೈ ಪರ ಪ್ರಥಮದರ್ಜೆ ಕ್ರಿಕೆಟ್’ಗೆ ಪಾದಾರ್ಪಣೆ ಮಾಡಿದ್ದ ತನುಷ್ ಕೋಟ್ಯಾನ್ ಇಲ್ಲಿವರೆಗೆ ಒಟ್ಟು 30 ಪ್ರಥಮದರ್ಜೆ ಪಂದ್ಯಗಳನ್ನಾಡಿದ್ದಾರೆ. 30 ಪಂದ್ಯಗಳಿಂದ 88 ವಿಕೆಟ್’ಗಳನ್ನು ಪಡೆದಿರುವ ತನುಷ್ 2 ಶತಕಗಳು ಹಾಗೂ 13 ಅರ್ಧಶತಕಗಳ ಸಹಿತ 45.34ರ ಸರಾಸರಿಯಲ್ಲಿ 1451 ರನ್ ಗಳಿಸಿದ್ದಾರೆ. 19 ಲಿಸ್ಟ್ ಎ ಪಂದ್ಯಗಳನ್ನಾಡಿರುವ ತನುಷ್ ಕೋಟ್ಯಾನ್ 20 ವಿಕೆಟ್ ಹಾಗೂ 90 ರನ್ ಗಳಿಸಿದ್ದಾರೆ. ಐಪಿಎಲ್ ಸಹಿತ ಆಡಿರುವ 24 ಟಿ20 ಪಂದ್ಯಗಳಿಂದ 24 ವಿಕೆಟ್ ಪಡೆದಿರುವ ತನುಷ್ ಕೋಟ್ಯಾನ್ 86 ರನ್ ಗಳಿಸಿದ್ದಾರೆ.

ತನುಷ್ ಕೋಟ್ಯಾನ್ ಹುಟ್ಟಿದ್ದು ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ. ಅವರ ತಂದೆ ಕರುಣಾಕರ್ ಕೋಟ್ಯಾನ್ ಉಡುಪಿ ಜಿಲ್ಲೆಯ ಪಾಂಗಾಳಗವರು. ಕರಾವಳಿಯಿಂದ ಮುಂಬೈಗೆ ಹೋಗಿ ಅಲ್ಲೇ ನೆಲೆಸಿರುವ ಕರುಣಾಕರ್, ಪುತ್ರನನ್ನು ಕ್ರಿಕೆಟಿಗನನ್ನಾಗಿ ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

Exit mobile version