SportsKannada | ಸ್ಪೋರ್ಟ್ಸ್ ಕನ್ನಡ

ಅಪಮಾನದ ಕಿಚ್ಚಿಗೆ ಗೆಲುವಿನುತ್ತರ ನೀಡಿದ ಡಾನಿಲ್ ಮಡ್ವಡೇವ್

ಪಂದ್ಯವೊಂದರ ವೇಳೆ ಸಣ್ಣದ್ದೊಂದು ಒರಟು ವರ್ತನೆಗೆ ಜನ ಛಿಮಾರಿ ಹಾಕಿದ್ದರು ಈ ಹುಡುಗನಿಗೆ.ಪಂದ್ಯ ಪೂರ್ತಿ ಕೂಗುತ್ತಲೇ ಇವನನ್ನು ಅಪಹಾಸ್ಯ ಮಾಡಿದ್ದರು ಪ್ರೇಕ್ಷಕರು.ಅಷ್ಟಾಗಿಯೂ ಧೃತಿಗೆಡದೇ ಪಂದ್ಯವನ್ನು ಗೆದ್ದು ಮುಗಿಸಿದ ಈತ,’ನನ್ನನ್ನು ಅಪಹಾಸ್ಯ ಮಾಡುತ್ತಿರುವ ನಿಮಗೆ ಧನ್ಯವಾದಗಳು.ನಿಮ್ಮ ಈ ಅಪಹಾಸ್ಯದ ಧ್ವನಿಯೇ ನನ್ನನ್ನು ಅವುಡುಗಚ್ಚಿ ಆಡುವಂತೆ ಪ್ರೋತ್ಸಾಹಿಸುತ್ತದೆ.

ಇದೊಂದು ಪಂದ್ಯದಲ್ಲಿನ ನಿಮ್ಮ ತಿರಸ್ಕಾರದಿಂದ ನನ್ನಲ್ಲಿ ಹುಟ್ಟಿಕೊಂಡಿರುವ ಕಿಚ್ಚು ಕನಿಷ್ಟ ಮುಂದಿನ ಐದು ಪಂದ್ಯಗಳನ್ನು ಗೆಲ್ಲುವ ಶಕ್ತಿ ಕೊಟ್ಟಿದೆ’ ಎಂದಿದ್ದ.ಮಾತಿಗೆ ತಕ್ಕ ಹಾಗೆ ಮುಂದಿನ ಎಲ್ಲ ಪಂದ್ಯಗಳನ್ನು ಗೆದ್ದು ಬಂದವನು ಪ್ರಶಸ್ತಿ ಗೆಲ್ಲುವ ಕೊನೆಯ ಹಂತದಲ್ಲಿ ವಿಶ್ವ ಶ್ರೇಷ್ಠ ಎದುರಾಳಿಗೆ ಸಂಪೂರ್ಣ ಬೆವರಿಳಿಸಿ ವೀರೋಚಿತ ಸೋಲು ಕಂಡ .ಆವತ್ತಿನ ಮಾತುಗಳನ್ನೇ ಇವತ್ತಿಗೂ ಪುನರಾವರ್ತಿಸಿದವನ ಧಾಟಿ ಕೊಂಚಬದಲಾಗಿತ್ತು.’ನಿಮ್ಮ ಅಪಹಾಸ್ಯದ ಕೂಗು ನನ್ನನ್ನ ಗೆಲ್ಲಿಸುತ್ತಿದೆ ಎಂದು ಆವತ್ತು ಕೊಂಚ ಕೋಪದಲ್ಲಿ ನುಡಿದಿದ್ದೆ.ಇವತ್ತಿಗೂ ಅದೇ ಮಾತನ್ನ ಹೇಳುತ್ತೇನಾದರೂ ಕೋಪದಲ್ಲಿ ಅಲ್ಲ,ನಿಮ್ಮ ಪ್ರೋತ್ಸಾಹವೇ ನನ್ನನ್ನು ಇಲ್ಲಿಯವರೆಗೂ ಎಳೆದುತಂದಿದ್ದು’ ಎಂದು ನುಡಿದವನ ಧ್ವನಿಯಲ್ಲಿ ಪ್ರಾಮಾಣಿಕತೆ ಇತ್ತು.ಅಂದು ಅಪಹಾಸ್ಯದ ಕೂಗಿದ್ದ ಪ್ರೇಕ್ಷಕರ ಧ್ವನಿಯಲ್ಲಿಂದು ಮೆಚ್ಚುಗೆಯ ಹರ್ಷೋಧ್ಘಾರವಿತ್ತು.

ಇಪ್ಪತ್ಮೂರರ ಹರೆಯದ ಹುಡುಗನ ಆಟದಲ್ಲಿ ಅದ್ಭುತ ಶಾಸ್ತ್ತಿಯತೆಯಿದೆ,ಗೆಲ್ಲುವ ಛಲವಿದೆ.ಸಧ್ಯಕ್ಕಂತೂ ಎಟಿಪಿ ರ‌್ಯಾಂಕಿಂಗ್‌ನಲ್ಲಿ ನಾಲ್ಕನೆ ಸ್ಥಾನದಲ್ಲಿರುವ ರಷ್ಯಾದ ಡಾನಿಲ್ ಮಡ್ವಡೇವ್ ಭವಿಷ್ಯದ ಟೆನ್ನಿಸ್ ಭರವಸೆಯ ಆಟಗಾರನೇನೋ ಎನ್ನಿಸುತ್ತದೆ.ಹೌದಾ ಅಲ್ಲವಾ ಎಂಬ ಪ್ರಶ್ನೆಗೆ ಕಾಲವೇ ಉತ್ತರವಾದೀತು.

-ಗುರುರಾಜ್ ಕೊಡ್ಕಣಿ ಯಲ್ಲಾಪುರ

Exit mobile version