
ಪಾದಾರ್ಪಣೆಯ ಪಂದ್ಯದಲ್ಲೇ ಐದು ವಿಕೆಟ್ ಪಡೆದು ಮಿಂಚಿದ ಅಭಿಲಾಷ್ ಶೆಟ್ಟಿ
ಕರ್ನಾಟಕದ ಪ್ರತಿಭಾವಂತ ಎಡಗೈ ವೇಗದ ಬೌಲರ್ ಅಭಿಲಾಷ್ ಶೆಟ್ಟಿ, ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಐದು ವಿಕೆಟ್ ಪಡೆದು ಮಿಂಚಿದ್ದಾರೆ.
ಅಹ್ಮದಾಬಾದ್’ನಲ್ಲಿ ನಡೆದ ಪಂಜಾಬ್ ವಿರುದ್ಧದ ಪಂದ್ಯದ ಮೂಲಕ ಅಭಿಲಾಷ್ ಶೆಟ್ಟಿ ಲಿಸ್ಟ್ ಎ ಕ್ರಿಕೆಟ್’ಗೆ ಪಾದಾರ್ಪಣೆ ಮಾಡಿದರು. ಆಡಿದ ಚೊಚ್ಚಲ ಪಂದ್ಯದಲ್ಲೇ ಅಮೋಘ ಬೌಲಿಂಗ್ ಪ್ರದರ್ಶನವಿತ್ತ ಅಭಿಲಾಷ್ ಶೆಟ್ಟಿ ಐದು ವಿಕೆಟ್ ಕಬಳಿಸಿ ಪಾದಾರ್ಪಣೆಯ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು. 10 ಓವರ್ ಬೌಲಿಂಗ್ ಮಾಡಿದ ಅಭಿಲಾಷ್ ಶೆಟ್ಟಿ 44 ರನ್ನಿತ್ತು 5 ವಿಕೆಟ್ ಪಡೆದರು. ತಮ್ಮ ಎಡಗೈ ಸ್ವಿಂಗ್ ಬೌಲಿಂಗ್ ಮೂಲಕ ಪಂಜಾಬ್ ಬ್ಯಾಟಿಂಗ್ ಕ್ರಮಾಂಕವನ್ನು ಸೀಳಿ ಹಾಕಿದ ಅಭಿಲಾಷ್ ಪಂಜಾಬ್ ತಂಡದ ನಾಯಕ ಅಭಿಷೇಕ್ ಶರ್ಮಾ, ಅನ್ಮೋಲ್ ಮಲ್ಹೋತ್ರಾ, ರಮಣ್ ದೀಪ್ ಸಿಂಗ್, ಮಯಾಂಕ್ ಮಾರ್ಕಂಡೆ ಮತ್ತು ಅರ್ಷದೀಪ್ ಸಿಂಗ್ ಅವರನ್ನು ಔಟ್ ಮಾಡಿದರು. 26 ವರ್ಷದ ಅಭಿಲಾಷ್ ಶೆಟ್ಟಿ ಇದೇ ಸಾಲಿನಲ್ಲಿ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದ್ದರು. ಅಭಿಲಾಷ್ ಶೆಟ್ಟಿ ಉಡುಪಿ ಜಿಲ್ಲೆಯ ಕೋಟಾದ ಮೂಡು ಗಿಳಿಯಾರಿನ ಹುಡುಗ.
ಅಭಿಲಾಷ್ ಶೆಟ್ಟಿ ಐದು ವಿಕೆಟ್ ಸಾಧನೆ ಮತ್ತು ನಾಯಕ ಮಯಾಂಕ್ ಅಗರ್ವಾಲ್ ಬಾರಿಸಿದ ಅಜೇಯ ಶತಕದ ನೆರವಿನಿಂದ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಕರ್ನಾಟಕ ತಂಡ ಸತತ ಮೂರನೇ ಗೆಲುವು ದಾಖಲಿಸಿದೆ. ಗುರುವಾರ ಅಹ್ಮದಾಬಾದ್’ನಲ್ಲಿ ನಡೆದ ಸಿ ಗುಂಪಿನ ತನ್ನ ಮೂರನೇ ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡ ಪಂಜಾಬ್ ವಿರುದ್ಧ ಒಂದು ವಿಕೆಟ್ ಅಂತರದ ರೋಚಕ ಗೆಲುವು ಸಾಧಿಸಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಂಜಾಬ್ 49.2 ಓವರ್’ಗಳಲ್ಲಿ 247 ರನ್’ಗಳಿಗೆ ಆಲೌಟಾಯಿತು. ನಂತರ ಗುರಿ ಬೆನ್ನಟ್ಟಿದ ಕರ್ನಾಟಕ ತಂಡವನ್ನು ನಾಯಕ ಮಯಾಂಕ್ ಅಗರ್ವಾಲ್ ಅಮೋಘ ಶತಕದ ಮೂಲಕ ಗೆಲುವಿನ ದಡ ಸೇರಿಸಿದರು. ಏಕಾಂಗಿಯಾಗಿ ಹೋರಾಡಿದ ಮಯಾಂಕ್ 127 ಎಸೆತಗಳಲ್ಲಿ 17 ಬೌಂಡರಿ ಹಾಗೂ 3 ಸಿಕ್ಸರ್”ಗಳ ನೆರವಿನಿಂದ ಅಜೇಯ 139 ರನ್ ಗಳಿಸಿ ಕರ್ನಾಟಕಕ್ಕೆ ರೋಚಕ ಗೆಲುವು ತಂದು ಕೊಟ್ಟರು. ಕರ್ನಾಟಕ ತಂಡ 203 ರನ್ನಿಗೆ 9 ವಿಕೆಟ್ ಕಳೆದುಕೊಂಡಿದ್ದಾಗ ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ಮುರಿಯದ 10ನೇ ವಿಕೆಟ್’ಗೆ ವೇಗಿ ಕೌಶಿಕ್ ಜೊತೆ ಮಯಾಂಕ್ 48 ರನ್ ಸೇರಿಸಿ ತಂಡಕ್ಕೆ ರೋಚಕ ಗೆಲುವು ತಂದು ಕೊಟ್ಟರು.
