Site icon SportsKannada ಸ್ಪೋರ್ಟ್ಸ್ ಕನ್ನಡ

ಗಾತ್ರದಲ್ಲಷ್ಟೇ ಕುಬ್ಜ, ಸಾಧನೆಯಲ್ಲಿ ಬಾಹುಬಲಿ ಈ ಬವುಮ.. ಇವನು ಲೇವಡಿಗೆ ಖಂಡಿತಾ ಅರ್ಹನಲ್ಲ..

ಗಾತ್ರದಲ್ಲಷ್ಟೇ ಕುಬ್ಜ, ಸಾಧನೆಯಲ್ಲಿ ಬಾಹುಬಲಿ ಈ ಬವುಮ.. ಇವನು ಲೇವಡಿಗೆ ಖಂಡಿತಾ ಅರ್ಹನಲ್ಲ..!

ದಕ್ಷಿಣ ಆಫ್ರಿಕಾ ತಂಡ ಭಾರತ ವಿರುದ್ಧ ಮೊನ್ನೆ ಕೋಲ್ಕತಾ ಟೆಸ್ಟ್ ಪಂದ್ಯ ಗೆದ್ದ ನಂತರ ಒಂದು ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆ ವೀಡಿಯೊದಲ್ಲಿ ಒಬ್ಬ ವ್ಯಕ್ತಿ ಈ ರೀತಿ ಹೇಳುತ್ತಾನೆ…,

‘’ನನ್ನನ್ನು ಇಲ್ಲಿಯವರೆಗೆ ತುಂಬಾ ಹೆಸರುಗಳಿಂದ ಕರೆಯಲಾಗಿದೆ.. ‘ಚೋಕರ್, ಕೋಟಾ ಪ್ಲೇಯರ್, ಕುಳ್ಳ’.
ನನ್ನ ಅಜ್ಜಿ ನನಗೆ ‘ತೆಂಬಾ’ ಎಂದು ಹೆಸರಿಟ್ಟಿದ್ದರು. ತೆಂಬಾ ಎಂದರೆ ‘ಭರವಸೆ’ ಎಂದರ್ಥ..’’

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಾಯಕ ತೆಂಬಾ ಬವುಮ ಈ ಮಾತುಗಳನ್ನಾಡುವ ಸಂದರ್ಭದಲ್ಲಿ ಒಂದು ಬದಿಯಲ್ಲಿ ನೋವು, ಮತ್ತೊಂದು ಬದಿಯಲ್ಲಿ ಹೆಮ್ಮೆ.

ಹೊರಗಿನವರನ್ನು ನಮ್ಮ ಆಟಗಾರರು ‘ಕುಳ್ಳ’ ಎಂದು ಕರೆದರೆ ನಾವು ನಗುತ್ತೇವೆ. ಅದೇ ನಮ್ಮ ಆಟಗಾರರು ವಿದೇಶಗಳಲ್ಲಿ ಜನಾಂಗೀಯ ಟೀಕೆಗಳನ್ನು ಎದುರಿಸಿದರೆ ಆಕ್ರೋಶ ಉಕ್ಕಿ ಬರುತ್ತದೆ.
ಕೋಲ್ಕತಾ ಟೆಸ್ಟ್ ಪಂದ್ಯದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ, ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬವುಮನನ್ನು ಕುಬ್ಜ ಎಂದು ಬಿಟ್ಟಿದ್ದ.. ಉದ್ದೇಶಪೂರ್ವಕವಲ್ಲ,
Heat of the momentನಲ್ಲಿ ಬಂದ ಮಾತದು. ಬುಮ್ರಾ LBW ಅಪೀಲ್ ಮಾಡಿದಾಗ ಅಂಪೈರ್ ನಾಟೌಟ್ ತೀರ್ಪು ನೀಡುತ್ತಾನೆ. DRS ತೆಗೆದುಕೊಳ್ಳುವ ನಿರ್ಧಾರದ ವೇಳೆ ‘’ಚೆಂಡು ಸ್ಟಂಪ್’ಗೆ ಬಡಿಯುತ್ತಿತ್ತೇ..? ಈತ ಕುಳ್ಳಗೆ ಬೇರೆ ಇದ್ದಾನೆ’’ ಎಂದಿದ್ದ ಬುಮ್ರಾ.
ಬವುಮನನ್ನು ಹೀಯಾಳಿಸಬೇಕೆಂಬ
ಕೆಟ್ಟ ಉದ್ದೇಶ ಇರಲಿಲ್ಲ ಆ ಮಾತುಗಳಲ್ಲಿ. ಸಂಭಾವಿತ ಬುಮ್ರಾ ಪಂದ್ಯ ಮುಗಿಯುತ್ತಿದ್ದಂತೆ ಬವುಮನ ಹೆಗಲಿಗೆ ಕೈ ಹಾಕಿ ಕ್ಷಮೆಯನ್ನೂ ಕೇಳಿದ್ದಾನೆ. ಅಲ್ಲಿಗೆ ಮುಗಿಯಿತು ಆ ಅಧ್ಯಾಯ.

ಉದ್ದೇಶಪೂರ್ವಕವಿರಲಿ, ಇಲ್ಲದೇ ಇರಲಿ. ಇಂತಹ ಮಾತುಗಳಿಗೆ ತೆಂಬಾ ಬವುಮ ಅರ್ಹನೇ ಅಲ್ಲ.

ತನ್ನ ತಂಡಕ್ಕಾಗಿ ಹೋರಾಡುತ್ತಿರುವವನ ಗಾತ್ರದ ಬಗ್ಗೆ ಚರ್ಚೆಯಾಗುವುದಕ್ಕಿಂತ ಅವನ ಹೋರಾಟದ ಗಾತ್ರದ ಬಗ್ಗೆ ಚರ್ಚೆಯಾಗಬೇಕು. ದುರದೃಷ್ಟವಶಾತ್, ಬವುಮನ ವಿಚಾರದಲ್ಲಿ ಆ ರೀತಿ ಆಗಿಯೇ ಇಲ್ಲ.

ತೆಂಬಾ ಬವುಮ ದಕ್ಷಿಣ ಆಫ್ರಿಕಾ ತಂಡಕ್ಕೆ ಐಸಿಸಿ ಟೆಸ್ಟ್ ಚಾಂಪಿಯನ್’ಷಿಪ್ ಗೆದ್ದು ಕೊಟ್ಟಿರುವ ನಾಯಕ. ನಾಯಕತ್ವ ವಹಿಸಿದ 11 ಟೆಸ್ಟ್ ಪಂದ್ಯಗಳ ಪೈಕಿ 10ರಲ್ಲಿ ಗೆಲುವು ತಂದುಕೊಟ್ಟಿರುವ ನಾಯಕ. ಅವನ ಮುಂದಾಳತ್ವದಲ್ಲಿ ದಕ್ಷಿಣ ಆಫ್ರಿಕಾ ತಂಡ ಟೆಸ್ಟ್ ಕ್ರಿಕೆಟ್’ನಲ್ಲಿ ಸೋಲನ್ನೇ ಕಂಡಿಲ್ಲ.

ಇಂಥಾ ಸಾಧಕ, ಇಂಥಾ ನಾಯಕ ಯಾವ ಲೇವಡಿಗೂ ಅರ್ಹನಲ್ಲ.. ಅವನು ಎಲ್ಲರಿಂದಲೂ ಎಲ್ಲಾ ರೀತಿಯ ಗೌರವಗಳಿಗೆ ಅರ್ಹನಾಗಿರುವ ಚಾಂಪಿಯನ್ ಕ್ರಿಕೆಟರ್.
-ಸುದರ್ಶನ್

Exit mobile version