SportsKannada | ಸ್ಪೋರ್ಟ್ಸ್ ಕನ್ನಡ

90ರ ದಶಕದ ಉಡುಪಿಯ ಸನ್ನಿ ಶ್ರೇಷ್ಠ ತಂಡ ಕ್ರಿಕೆಟಿಗ ಪ್ರೇಮೇಂದ್ರ ಶೆಟ್ಟಿ

ಕಳೆದ ನಾಲ್ಕು ತಿಂಗಳ ಹಿಂದೆ ಮಂಗಳೂರಿನ ದೇರಳಕಟ್ಟೆಯಲ್ಲಿ ನಡೆದ ಲೆದರ್ ಬಾಲ್ ಲೀಗ್ ಪಂದ್ಯಾಟದಲ್ಲಿ ಕೆ.ಆರ್.ಸಿ.ಎ ತಂಡದ ಪರವಾಗಿ ಆಡಿ ಅರ್ಧಶತಕ ಸಿಡಿಸಿ ತಂಡವನ್ನು ಗೆಲ್ಲಿಸಿದ ಕೀರ್ತಿ 44 ವರ್ಷ ಪ್ರಾಯದ ಹಿರಿಯ ಆಟಗಾರ 90ರ ದಶಕದ ಉಡುಪಿಯ ಶ್ರೇಷ್ಠ ತಂಡ ಸನ್ನಿ ಉಡುಪಿಯ ಪ್ರೇಮೇಂದ್ರ ಶೆಟ್ಟಿ (ಪ್ರೇಮ್).

90 ರ ದಶಕದಲ್ಲಿ ಕಲಾ ಕಿರಣ ಕೊರಂಗ್ರಪಾಡಿ ಉಡುಪಿಯ ಪರವಾಗಿ ಕ್ರಿಕೆಟ್ ಜೀವನ ಪ್ರಾರಂಭಿಸಿದ ಪ್ರೇಮ್ ನೇತಾಜಿ ಪರ್ಕಳದ ಅಂಗಣದಲ್ಲಿ ಅಂದಿನ ಬಲಿಷ್ಠ ತಂಡ ಬ್ಲೂ ಸ್ಟಾರ್ ಶಿರ್ವದ ಶ್ರೇಷ್ಠ ಬೌಲರ್ ಶಾಕಿರ್ ಹುಸೇನ್ ಎಸೆತಕ್ಕೆ ಹ್ಯಾಟ್ರಿಕ್ ಸಿಕ್ಸರ್ ಸಿಡಿಸುವ ಮೂಲಕ ಟೆನ್ನಿಸ್ ಬಾಲ್ ಗೆ ಪಾದಾರ್ಪಣೆಗೈದಿದ್ದರು.ನಂತರದ ದಿನಗಳಲ್ಲಿ ಸನ್ನಿ ಉಡುಪಿಯ ತಂಡದಲ್ಲಿ ಸ್ಥಾನ ಗಿಟ್ಟಿಸಿದ ಇವರು ಗಮನಾರ್ಹ ನಿರ್ವಹಣೆ ನೀಡುತ್ತಾ ಬಂದಿದ್ದು ನಂತರದ ಒಂದು ಸೀಸನ್ ನಲ್ಲಿ ಕುಂದಾಪುರದ ಶ್ರೇಷ್ಠ ತಂಡ “ಟಾರ್ಪೊಡೋಸ್” ಪರವಾಗಿ ಹರಿಪ್ರಸನ್ನ ಪುಟ್ಟಾ ಹಾಗೂ ಗೌತಮ್ ಶೆಟ್ಟಿಯವರ ಜೊತೆ ಇನ್ನಿಂಗ್ಸ್ ಆರಂಭಿಸಿರುತ್ತಾರೆ.

ಆ ಸೀಜನ್ ಬಳಿಕದ ಎಲ್ಲಾ ಪಂದ್ಯಾಕೂಟಗಳಲ್ಲಿ ಸನ್ನಿ ಉಡುಪಿಯ ಪರವಾಗಿ ಆಡಿದರು. ಅಂದಿನ ದಿನಗಳಲ್ಲಿ ಉಡುಪಿಯ ಶ್ರೇಷ್ಠ ತಂಡಗಳಾದ ಪ್ಯಾರಡೈಸ್ ಬನ್ನಂಜೆ,ಆದರ್ಶ ಉಡುಪಿ,ಕಲಾ ಕಿರಣ ಕೊರಂಗ್ರಪಾಡಿ,ಕೆಮ್ಮಣ್ಣು ಫ್ರೆಂಡ್ಸ್ ಹೀಗೆ ಹಲವಾರು ತಂಡಗಳು ಉಡುಪಿಯಲ್ಲಿ ಚಾಲ್ತಿಯಲ್ಲಿದ್ದ ಸಮಯ.

ಅಮರ್ ನಾಥ್ ಭಟ್ ಸಾರಥ್ಯದಲ್ಲಿ ಅಂದಿನ ದಿನಗಳ ಅದ್ಭುತ ಸ್ವಿಂಗ್ ಬೌಲರ್ ಡೇವಿಡ್ ಮಾಸ್ಟರ್, ಅಶೋಕ್, ಕಿಶೋರ್, ನಾಗರಾಜ ಕಿಣಿ, ಸಚ್ಚೀಂದ್ರ ಶೆಟ್ಟಿ, ಪ್ರಶಾಂತ್, ದಿ|ಗಣೇಶ್ ಒಳಗೊಂಡ ತಂಡ ಹಲವಾರು ಪ್ರತಿಷ್ಟಿತ ಪ್ರಶಸ್ತಿಗಳನ್ನು ಬಗಲಿಗೇರಿಸಿಕೊಂಡಿದ್ದವು.ದಿಗ್ಗಜ ಆಟಗಾರರ ಜೊತೆಯಾಗಿ ಪ್ರೇಮ್ ಹಲವು ಪಂದ್ಯಾಕೂಟಗಳಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಟೆನ್ನಿಸ್ ಬಾಲ್ ಇತಿಹಾಸದಲ್ಲಿ ಪ್ರಾರಂಭದ ದಿನಗಳಲ್ಲಿ ರಿವರ್ಸ್ ಸಿಕ್ಸರ್ ಸಿಡಿಸಿದ ಉಡುಪಿಯ ಆಟಗಾರ ಎಂಬಖ್ಯಾತಿಗೂ ಪಾತ್ರರಾಗಿರುತ್ತಾರೆ.

ಬೈಂದೂರಿನ ಅಂಗಣದಲ್ಲಿ ಹಿರಿಯ ತಂಡ ಜೈ ಕರ್ನಾಟಕ ಬೆಂಗಳೂರಿನ ಮ್ಯಾಜಿಕಲ್ ಬೌಲರ್ ಮೆರಿನ್ ಎಸೆತದಲ್ಲಿ ದಾಖಲೆಗೈದಿರುವುದು ಬ್ಯಾಟಿಂಗ್ ಪರಾಕ್ರಮಕ್ಕೆ ಸಾಕ್ಷಿ. ಆಸೀಸ್ ನ ಸ್ಟೀವ್ ವಾ- ಮಾರ್ಕ್ ವಾ ಜೋಡಿಯಂತೆ ಸಹೋದರ ಟೆನ್ನಿಸ್ ಬಾಲ್ ನ ರಾಹುಲ್ ದ್ರಾವಿಡ್ ಸಚ್ಚೀಂದ್ರ ಶೆಟ್ಟಿ ಜೊತೆಗೂಡಿ ಕಟ್ಟಿದ ಇನ್ನಿಂಗ್ಸ್ ಪಡುಬಿದ್ರಿ ಹಾಗೂ ಹಳೆಕೋಟೆ ಮೈದಾನದ ಹೊನಲು ಬೆಳಕಿನ ರಾಜ್ಯ ಮಟ್ಟದ ಪಂದ್ಯಾಟದಲ್ಲಿ ಸನ್ನಿಗೆ ಗೆಲುವಿನ ಮುಕುಟ ತೊಡಿಸಿತ್ತು.ಅಮೋಘ ಬ್ಯಾಟಿಂಗ್ ಜೊತೆಗೆ ಫೀಲ್ಡಿಂಗ್ ವಿಭಾಗದಲ್ಲೂ ಪಾದರಸದಂತಹ ಚುರುಕುತನವಿತ್ತು.ಇಂದಿಗೂ ಅದೇ ಫಿಟ್ನೆಸ್ ಹಾಗೂ ಫಾರ್ಮ್ ನಲ್ಲಿದ್ದು ಕಳೆದ ವಾರ ನಡೆದ “ಸ್ಪೋರ್ಟ್ಸ್ ಕನ್ನಡ” ಉದ್ಘಾಟನಾ ಸಮಾರಂಭದ ಪ್ರಯುಕ್ತ ನಡೆದ ದಂತಕಥೆಗಳ ಕ್ರಿಕೆಟ್ ಪಂದ್ಯಾಕೂಟದಲ್ಲೂ ಅದ್ಭುತ ಕ್ಯಾಚೊಂದನ್ನು ಹಿಡಿದು,ಬೆಸ್ಟ್ ಫೀಲ್ಡರ್ ಪ್ರಶಸ್ತಿಗೂ ಪಾತ್ರರಾಗಿರುತ್ತಾರೆ.

ಬರೋಬ್ಬರಿ ಒಂದೂವರೆ ದಶಕದ ಟೆನ್ನಿಸ್ ಬಾಲ್ ಕ್ರಿಕೆಟ್ ಜೀವನದಲ್ಲಿ ಅತಿ ಶಿಸ್ತಿನ ಆಟಗಾರನಾಗಿ ಹೊರಹೊಮ್ಮಿದ್ದರು.ಕ್ರಿಕೆಟ್ ಅಲ್ಲದೇ ಅಂದಿನ ದಿನಗಳ ಮಂಗಳೂರು ವಿಶ್ವವಿದ್ಯಾನಿಲಯದ ಶ್ರೇಷ್ಠ ವಾಲಿಬಾಲ್ ಆಟಗಾರ ಕೂಡ ಹೌದು.ಮಣಿಪಾಲದ “ಮಾಹೆ” ಯಲ್ಲಿ ಉದ್ಯೋಗಿಯಾಗಿದ್ದು ನಂತರದ ದಿನಗಳಲ್ಲಿ ಲೆದರ್ ಬಾಲ್ ನತ್ತ ಆಸಕ್ತಿ ತೋರಿದ್ದು ಲೀಗ್ ಪಂದ್ಯಾಟಗಳಲ್ಲಿ ಬಾಗವಹಿಸುತ್ತಿದ್ದು, ಸಂಜೆಯ ಬಳಿಕ ಸುಮಾರು ‍50 ಕ್ಕೂ ಹೆಚ್ಚಿನ ಯುವ ಆಟಗಾರರಿಗೆ ಕೋಚ್ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಆರ್.ಕೆ.ಆಚಾರ್ಯ ಕೋಟ

Exit mobile version