SportsKannada | ಸ್ಪೋರ್ಟ್ಸ್ ಕನ್ನಡ

ಭಾನುವಾರದ ವಿಶೇಷ ವರದಿ ಕ್ರಿಕೆಟ್ ಕೀಟಲೆಗಳು……..!!!

       ಭಾನುವಾರದ ವಿಶೇಷ ವರದಿ : ಈ ಬಾರಿ ಕ್ರಿಕೆಟ್ ವಿಶ್ವಕಪ್ ಸಾಕಷ್ಟು ವಿವಾದಕ್ಕೀಡಾಯಿತು. ಮಳೆಯ ಕಾರಣಕ್ಕೆ ಅನೇಕ ಮಹತ್ವದ ಪಂದ್ಯಗಳು ರದ್ದಾಗಿದ್ದು ಆರಂಭಿಕ ಗೊಂದಲವಾದರೆ,ಸೆಮಿ ಫೈನಲ್ ‌ನಲ್ಲಿ ಪರೋಕ್ಷವಾಗಿ ಮಳೆಯ ಕಾರಣಕ್ಕೆ ಭಾರತ ಸೋತಿದ್ದು ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿತ್ತು. ಫೈನಲ್ಲಿನಲ್ಲಂತೂ ಅಕ್ಷರಶ: ದೊಂಬರಾಟ.ಮ್ಯಾಚ್ ಟೈ ಆಯಿತೆನ್ನುವ ಕಾರಣಕ್ಕೆ ಹೆಚ್ಚು ಬೌಂಡರಿಗಳನ್ನು ಗಳಿಸಿದ್ದ ಇಂಗ್ಲೆಂಡ್ ತಂಡವನ್ನು ಚಾಂಪಿಯನ್ ಎಂದು ಘೋಷಿಸಿದ್ದು ಅನೇಕರ ಅಪಹಾಸ್ಯಕ್ಕೆ ಕಾರಣವಾಯಿತು.ಅದರ ಬೆನ್ನ ಹಿಂದೆ ಸಾಲು ಸಾಲು ಮೀಮ್‌ಗಳು ಪ್ರಕಟವಾದವು. ‘ಬೌಂಡರಿಗಳು ಸಹ ಸರಿಸಮನಾಗಿದ್ದರೆ ಹೇಗೆ ಚಾಂಪಯನ್ನರ ನಿರ್ಧಾರ ಮಾಡುತ್ತಿದ್ದಿರಿ ಎಂಬ ಪ್ರಶ್ನೆಗೆ ,ನಾವು ಆಟಗಾರರ ಹತ್ತನೇ ತರಗತಿಯ ಅಂಕಗಳ ತುಲನೆ ಮಾಡಿ ವಿಜೇತರನ್ನು ನಿರ್ಧರಿಸುತ್ತಿದ್ದೆವು ಎಂದು ಐಸಿಸಿ ನುಡಿಯುತ್ತಿದೆ’ ಎಂಬ ಮೀಮ್ ಕಂಡಾಗಲಂತೂ ನಗು ಉಕ್ಕಿ ಹರಿದಿತ್ತು.ಸುಮ್ಮನೇ ಕೂತು ಆಲೋಚಿಸಿದಾಗ ಕ್ರಿಕೆಟ್ ವಾಕ್ಚಾತುರ್ಯ ಪ್ರದರ್ಶನದ ಒಂದಷ್ಟು ಘಟನೆಗಳು ನೆನಪಾದವು.ಇಂಥಹ ಕ್ರಿಕೆಟ್ ಜಗದ ಕೆಲವು ಪ್ರಸಿದ್ಧ ವಾಗ್ಯುದ್ಧದ ಘಟನೆಗಳನ್ನು ಇಂದು ನಿಮ್ಮ ಮುಂದೆ ಹಂಚಿಕೊಳ್ಳೋಣ ಎಂದೆನ್ನಿಸಿದೆ.

* ಆಸ್ಟ್ರೇಲಿಯನ್ ವೇಗಿ ಗ್ಲೆನ್ ಮೆಗ್ರಾತ್ ಯಾರಿಗೆ ತಾನೇ ಗೊತ್ತಿಲ್ಲ.ವೇಗದ ಬೌಲಿಂಗ್ ದಂತಕತೆಯೆನಿಸಿಕೊಂಡಿರುವ ಗ್ಲೆನ್ , ಆಟದ ನಡುವೆ ತಮ್ಮ ಮೊನಚಾದ ಮಾತುಗಳಿಂದ ಎದುರಾಳಿಗಳನ್ನು ಕೆಣುಕುವಲ್ಲಿಯೂ ನಿಸ್ಸೀಮ.ಆದರೆ ಕೆಲವೊಮ್ಮೆ ಮಾತಿನ ಜಟಾಪಟಿ ಸ್ವತ: ಮೆಗ್ರಾತ್ ಗೆ ತಿರುಗುಬಾಣವಾಗಿದ್ದೂ ಇದೆ. ಜಿಂಬಾಂಬ್ವೆ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯವದು.ಕಾಂಗರೂಗಳ ಬಿಗಿ ದಾಳಿಗೆ ಶರಣಾಗಿದ್ದ ಜಿಂಬಾಂಬ್ವೆಯ ಒಂಬತ್ತು ದಾಂಡಿಗರು ಅದಾಗಲೇ ಪೆವಿಲಿಯನ್ ಸೇರಿದ್ದರು.ಕೊನೆಯ ದಾಂಡಿಗನಾಗಿ ಮೈದಾನಕ್ಕೆ ಇಳಿದಿದ್ದ ಜಿಂಬಾಂಬ್ವೆಯ ಬೌಲರ್ ಎಡ್ಡೋ ಬ್ರಾಂಡಿಸ್ ತನ್ನ ಧಡೂತಿ ದೇಹ ಮತ್ತು ಅತ್ಯಂತ ಕಳಪೆ ಬ್ಯಾಟಿಂಗ್ ಗಾಗಿಯೇ ಹೆಸರು ವಾಸಿಯಾದನು. ಗ್ಲೆನ್ ಮೆಗ್ರಾತ್ ಎಸೆಯುತ್ತಿದ್ದ ಪ್ರತಿ ಎಸೆತವನ್ನೂ ಸುಮ್ಮನೇ ಬಿಡುತ್ತಿದ್ದ ಬ್ರಾಂಡಿಸ್ ನ ವೈಖರಿ ಮುಂಗೋಪಿ ಮೆಕ್ರಾತ್ ಗೆ ಕಿರಿಕಿರಿಯೆನಿಸಿತ್ತು.ಸತತ ಐದು ಓವರಗಳ ನಂತರವೂ ಒಂದೇ ಒಂದು ರನ್ನು ಗಳಿಸದ ಎಡ್ಡೋ ಬ್ರಾಂಡಿಸ್ ಆಟದ ಶೈಲಿಯಿಂದ ತಾಳ್ಮೆ ಕಳೆದುಕೊಂಡ ಗ್ಲೆನ್,ಆತನನ್ನು ಕಿಚಾಯಿಸಲೆಂದೇ ,” ಹೇಯ್, ಬ್ರಾಂಡಿಸ್ ನೀನ್ಯಾಕೆ ದೊಡ್ಡ ಟೊಣಪನಂತೇ ಇಷ್ಟು ದಪ್ಪ ಇದ್ದೀಯಾ..’? ಎಂದು ಕೇಳಿದ.ಒಂದರೆಕ್ಷಣ ಮೆಗ್ರಾತನನ್ನು ದಿಟ್ಟಿಸಿದ ಎಡ್ಡೋ,” ನಾನು ಪ್ರತಿಸಾರಿಯೂ ನಿನ್ನ ಹೆಂಡತಿಯನ್ನು ಹಾಸಿಗೆಯಲ್ಲಿ ತೃಪ್ತಿಪಡಿಸಿದಾಗ ಆಕೆ ತಿನ್ನಲು ನನಗೊಂದು ಬಿಸ್ಕಿಟ್ ಕೊಡುತ್ತಾಳೆ.ಅದನ್ನು ತಿಂದುತಿಂದೇ ನಾನು ಹೀಗೆ ದಪ್ಪಗಾಗಿದ್ದೇನೆ ನೋಡು”ಎಂದು ತಣ್ಣಗೆ ಉತ್ತರಿಸಿದ.ಉತ್ತರವನ್ನು ಕೇಳಿ ಮೆಗ್ರಾತ್ ಇಂಗು ತಿಂದ ಮಂಗನಂತಾದರೆ,ಆಸ್ಟ್ರೇಲಿಯಾದ ಕ್ಷೇತ್ರರಕ್ಷಕರೂ ಸಹ ನಗು ತಡೆಯಲಾರದೆ ಹೋಗಿದ್ದರಂತೆ.

* ಅದು ಇಂಗ್ಲೆಂಡಿನ ನೆಲದಲ್ಲಿ ನಡೆಯುತ್ತಿದ್ದ ಕೌಂಟಿ ಪಂದ್ಯ.ಆಂಗ್ಲ ವೇಗಿ ಗ್ರೆಗ್ ಥಾಮಸ್,ಗ್ಲಾಮೊರ್ಗನ್ ಎನ್ನುವ ತಂಡದ ಪರ ಆಡುತ್ತಿದ್ದರೆ, ಎದುರಾಳಿಯಾಗಿ ವೆಸ್ಟ್ ಇಂಡಿಸ್ ದೈತ್ಯ ವಿವಿಯನ್ ರಿಚರ್ಡ್ಸ್ ಆಡುತ್ತಿದ್ದುದು ಸೋಮರ್ ಸೆಟ್ ತಂಡದ ಪರವಾಗಿ.ಗ್ರೆಗ್ ಥಾಮಸ್ಸನ ಕೆಲವು ಆರಂಭಿಕ ಎಸೆತಗಳನ್ನು ಗುರುತಿಸಲಾಗದೆ ರಿಚರ್ಡ್ಸ್ ಕೊಂಚ ಪರದಾಡುತ್ತಿದ್ದ.ಅಂಥದ್ದೇ ಒಂದು ಎಸೆತ ವಿವಿಯನ್ನನ ಮೂಗಿನ ತೀರ ಸಮೀಪ ತೆರಳಿ ವಿಕೆಟ್ ಕೀಪರ್ ಕೈ ಸೇರಿತು.ಒಮ್ಮೆ ಬೌಲರನತ್ತ ನೋಡಿ ವಿವಿಯನ್ ಮುಗುಳ್ನಕ್ಕರೆ,ರಿಚರ್ಡ್ಸನ ಕಾಲೆಳೆಯಬೇಕೆಂದುಕೊಂಡ ಗ್ರೆಗ್,” ಅದರ ತೂಕ ಐದು ಔನ್ಸುಗಳು,ಅದು ಕೆಂಪಗೆ ಗುಂಡಗೆ ಇರುತ್ತದೆ.ಅದನ್ನು ಚೆಂಡು ಎನ್ನುತ್ತಾರೆ.ಅದು ಹೇಗಿರುತ್ತದೆ ಎಂದು ಈಗಲಾದರೂ ಗೊತ್ತಾಯ್ತಾ’ಎಂದು ನುಡಿದ.ಆದರೆ ವಿವಿಯನ್ ರಿಚರ್ಡ್ಸ್ ಮಹಾನ್ ಪ್ರಳಯಾಂತಕ.ಗ್ರೆಗ್ ಥಾಮಸ್ಸನ ಮರುಎಸೆತವನ್ನು ನೇರವಾಗಿ ಮೈದಾನದ ಹೊರಗೆ ಅಟ್ಟಿದ ರಿಚರ್ಡ್ಸ್,ಬೌಲರನತ್ತ ತೆರಳಿ “ಅದು ಚೆಂಡು ,ಹೇಗಿರುತ್ತದೆ ಎಂದು ನಿನಗೆ ಗೊತ್ತಲ್ಲ, ಹುಡುಕಿ ತೆಗೆದುಕೊಂಡು ಬಾ ಹೋಗು”ಎಂದು ಪ್ರಶಾಂತವಾಗಿ ನುಡಿದನಂತೆ..!!

* ಕ್ರಿಕೆಟ್ ರಂಗದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಣ ಪಂದ್ಯವೆನ್ನುವುದು ಪದಶ: ಯುದ್ದದಂತಿರುತ್ತದೆ ಎನ್ನುವುದು ಕ್ರಿಕೆಟ್ ಪ್ರಿಯರಿಗೆ ಸರ್ವವೇದ್ಯ.ಆದರೆ ಇದೇ ಮಾದರಿಯ ಜಿದ್ದಿನ ಹಣಾಹಣಿ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ದೇಶಗಳ ನಡುವಿನ ಪಂದ್ಯಗಳಿಗೂ ಇರುತ್ತದೆನ್ನುವುದು ಅನೇಕರಿಗೆ ತಿಳಿದಿರಲಿಕ್ಕಿಲ್ಲ.ಇಂಥದ್ದೇ ಒಂದು ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಬ್ಯಾಟಿಂಗ್ ಮಾಡುತ್ತಿದ್ದಾಗ ದ್ವಿತಿಯ ಸ್ಲಿಪ್ ನಲ್ಲಿ ನಿಂತಿದ್ದವನು ಮಾರ್ಕ್ ವಾ.ಆಗಷ್ಟೇ ಬ್ಯಾಟಿಂಗ್ ಮಾಡಲು ಬಂದಿದ್ದ ನ್ಯೂಜಿಲೆಂಡ್ ತಂಡದ ಆಡಮ್ ಪರೋರೆಯನ್ನು ಅವಮಾನಿಸುವ ಮನಸ್ಸು ಮಾರ್ಕನಿಗಾಯಿತು.ತನ್ನತ್ತ ಬಂದ ಮೊದಲ ಚೆಂಡನ್ನು ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡ ಪರೋರೆಯನ್ನು ಕಂಡು ಒಮ್ಮೆ ಜೋರಾಗಿ ನಕ್ಕ ಮಾರ್ಕ್ ವಾ,”ಓಹ್..!! ನೀನು ಕಳೆದ ಬಾರಿಯೂ ಆಸ್ಟ್ರೇಲಿಯಾಕ್ಕೆ ಬಂದಿದ್ದೆ ಅಲ್ಲವಾ…? ಆಗ ನೀನು ದೊಡ್ಡ ನಿಷ್ಪ್ರಯೋಜಕನಾಗಿದ್ದೆ.ಈಗಲೂ ಹೆಚ್ಚು ಬದಲಾವಣೆಯೇನಿಲ್ಲ ಬಿಡು”ಎಂದು ನುಡಿದ. ಅದಕ್ಕುತ್ತರಿಸುತ್ತ ಪರೋರೆ,”ಆ ವಿಷಯ ಬಿಡು .ನಾನು ಕಳೆದ ಬಾರಿ ಆಸ್ಟ್ರೇಲಿಯಾಕ್ಕೆ ಬಂದಾಗ ಒಬ್ಬ ಮುದಿ,ಕುರೂಪಿ ಹೆಂಗಸಿನೊಂದಿಗೆ ಓಡಾಡುತ್ತಿದ್ದೆಯಲ್ಲ,ಅವಳನ್ನು ನೀನು ಇತ್ತೀಚೆಗಷ್ಟೇ ಮದುವೆಯಾದೆಯಂತೆ ಹೌದಾ..? ಎಂದು ಉತ್ತರಿಸಿದ.ಪರೋರೆಯ ತೀಕ್ಷ್ಣ ಉತ್ತರದ ಹೊಡೆತಕ್ಕೆ ಮಾರ್ಕ್ ವಾ ಕ್ಷಣ ಕಾಲ ಮಂಕುಬಡಿದವನಂತಾದನಂತೆ..!!

* ಆಂಗ್ಲರಲ್ಲಿ ಒಂದು ಅಂತರ್ನಿರ್ಮಿತ ಅಂಹಕಾರವಿದೆ.ತಾವು ವಿಶ್ವದ ಶ್ರೇಷ್ಠ ಮನುಷ್ಯ ಪ್ರಭೇದವೆನ್ನುವ ಅವರ ಅಹಂಕಾರ ಅವರ ಆಟಗಳಲ್ಲಿಯೂ ಮಾರ್ದನಿಸುತ್ತದೆ.ಇಂಥದ್ದೇ ಒಂದು ಸನ್ನಿವೇಶದಲ್ಲಿ ಪಾಕಿಸ್ತಾನ ತಂಡದ ಕುರಿತು ಸ್ಥಳೀಯ ರೇಡಿಯೊವೊಂದರಲ್ಲಿ ಮಾತನಾಡುತ್ತ ಅಂದಿನ ಆಟಗಾರ ಇಯಾನ್ ಬಾಥಮ್,”ಪಾಕಿಸ್ತಾನ ತಂಡ ಎಂಥಹ ದುರ್ಬಲ ತಂಡವೆಂದರೆ,ಅಲ್ಲಿಗೆ ನಮ್ಮಂಥಹ ವೃತ್ತಿಪರ ಆಟಗಾರರು ಆಡಲು ಹೋಗಬೇಕೆಂದೇನಿಲ್ಲ ಬದಲಾಗಿ ನಮ್ಮ ಅತ್ತೆಯಂದಿರನ್ನು ಕಳುಹಿಸಿದರೂ ಸಾಕು,ಸುಲಭವಾಗಿ ಗೆದ್ದು ಬರುತ್ತಾರೆ’ಎಂದು ಟೀಕಿಸಿದ.ಇದಾಗಿ ಕೆಲವೇ ದಿನಗಳಲ್ಲಿ ಪಾಕಿಸ್ತಾನ ತಂಡ ವಿಶ್ವ ಕಪ್ ಫೈನಲ್ ಪಂದ್ಯದಲ್ಲಿ ಗ್ರಾಹಂ ಗೂಚ್ ನಾಯಕತ್ವದ ಇಂಗ್ಲೆಂಡ್ ತಂಡವನ್ನು ಮಣ್ಣು ಮುಕ್ಕಿಸಿತ್ತು. ಹೀಗೊಂದು ಅವಕಾಶಕ್ಕಾಗಿ ಕಾಯುತ್ತಿದ್ದ ಪಾಕಿಸ್ತಾನದ ಆಟಗಾರ ಆಮೀರ್ ಸೋಹೈಲ್,ನೇರವಾಗಿ ಬಾಥಮನನ್ನು ಉದ್ದೇಶಿಸಿ ,” ನೀವು ನಿಮ್ಮ ಬದಲಾಗಿ ನಿಮ್ಮ ಅತ್ತೆಯಂದಿರನ್ನೇ ಫೈನಲ್ ಪಂದ್ಯಕ್ಕೆ ಕಳುಹಿಸಿದ್ದರೆ ಚೆನ್ನಾಗಿತ್ತು.ಅವರಾದರೂ ನಿಮ್ಮಷ್ಟು ಕೆಟ್ಟದ್ದಾಗಿ ಆಡುತ್ತಿರಲಿಲ್ಲವೇನೋ” ಎಂದನಂತೆ.ಬಾಥಮ್ ಏನನ್ನೂ ಉತ್ತರಿಸುವ ಪರಿಸ್ಥಿತಿಯಲ್ಲಿರಲಿಲ್ಲ ಬಿಡಿ.

* ಕಿಚಾಯಿಸುವ ವಿಷಯಕ್ಕೆ ಬಂದರೆ,ಭಾರತೀಯರು ಕೊಂಚ ಸೌಮ್ಯರೆನ್ನಬಹುದು.ಆದರೆ ತಮ್ಮನ್ನು ಕೆಣಕುವವರನ್ನು ಅವರು ಸಹ ಸುಮ್ಮನೇ ಬಿಡುವವರಲ್ಲ.ಅದೊಮ್ಮೆ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿದ್ದ ಪಂದ್ಯದಲ್ಲಿ ರವಿಶಾಸ್ತ್ರಿ ಬ್ಯಾಟು ಬೀಸುತ್ತಿದ್ದ.ಅವನು ಬಾರಿಸಿದ ಹೊಡೆತವೊಂದಕ್ಕೆ ಚೆಂಡು ಮೈಕ್ ವಿಟ್ನಿಯ ಕೈ ಸೇರಿತು.ಮೈಕ್ ವಿಟ್ನಿ ಆಸ್ಟ್ರೇಲಿಯಾ ತಂಡದಲ್ಲಿ ಮೀಸಲು ಆಟಗಾರನಾಗಿ ಕಣಕ್ಕಿಳಿದವನು.ಕೈಗೆ ಸಿಕ್ಕ ಚೆಂಡನ್ನು ಜೋರಾಗಿ ಎಸೆಯುವ ಶೈಲಿಯಲ್ಲಿ ಕೈಯನ್ನು ಎತ್ತಿ ನಿಂತ ಮೈಕ್, ಶಾಸ್ತ್ರಿಯನ್ನುದ್ದೇಶಿಸಿ, “ನೀನು ಕ್ರೀಸ್ ಬಿಟ್ಟು ನೋಡು,ನೇರವಾಗಿ ಚೆಂಡನ್ನು ನಿನ್ನ ತಲೆಗೆ ಎಸೆಯುತ್ತೇನೆ’ಎಂದ.ಸೌಮ್ಯವಾಗಿಯೇ ಅದಕ್ಕುತ್ತರಿಸಿದ ರವಿಶಾಸ್ತ್ರಿ,” ನಿನ್ನ ಮಾತಿನಲ್ಲಿರುವ ಚುರುಕು ನಿನ್ನ ಆಟದಲ್ಲಿಯೂ ಇದ್ದಿದ್ದರೆ,ನೀನು ಎಕ್ಸಟ್ರಾ ಆಟಗಾರನಾಗಿ ಆಡುವ ಅವಶ್ಯಕತೆ ಇರಲಿಲ್ಲ ನೋಡು”ಎಂದು ನುಡಿದ.ಅವನ ಉತ್ತರಕ್ಕೆ ಕಕ್ಕಾಬಿಕ್ಕಿಯಾಗುವ ಸರದಿ ಮೈಕ್ ವಿಟ್ನಿಯದ್ದು.

* ಅದು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಪಂದ್ಯದ ಸನ್ನಿವೇಶ.ತುರುಸಿನ ಪೈಪೋಟಿಯಲ್ಲಿ ಸೌರವ ಗಂಗೂಲಿ ಗಾಳಿಯಲ್ಲಿ ಹಾರಿಸಿದ ತೀರ ಸುಲಭದ ಕ್ಯಾಚೊಂದನ್ನು ಆಫ್ರಿಕನ್ ಆಟಗಾರ ಲ್ಯಾನ್ಸ್ ಕ್ಲುಸ್ನರ್ ಕೈಚೆಲ್ಲಿದ್ದ. ಪರಿಣಾಮವಾಗಿ ಭಾರತ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿತ್ತು.ಸೋತ ನಿರಾಸೆಯಲ್ಲಿ ಪೆವಿಲಿಯನ್ ನತ್ತ ತೆರಳುತ್ತಿದ್ದ ಲ್ಯಾನ್ಸ್ ಕ್ಲುಸ್ನರನನ್ನು ಕಿಚಾಯಿಸುವ ಉದ್ದೇಶದಿಂದ ಮೋಹಾಲಿಯ ಪ್ರೇಕ್ಷಕನೊಬ್ಬ,” ಹೇಯ್,ಲ್ಯಾನ್ಸ್..ಅಷ್ಟು ಸುಲಭದ ಕ್ಯಾಚ್ ಕೈ ಚೆಲ್ಲಿದೆಯಲ್ಲ,ನಾನಾಗಿದ್ದರೆ ನನ್ನ ಬಾಯಿಯಲ್ಲಿಯೇ ಅದನ್ನು ಹಿಡಿದುಬಿಡುತ್ತಿದ್ದೆ’ಎಂದ.ಕ್ಷಣಮಾತ್ರವೂ ತಡಮಾಡದೆ ಚಕ್ಕನೇ ಪ್ರತ್ಯುತ್ತರ ನೀಡಿದ ಕ್ಲುಸ್ನರ್,” ನಿನ್ನಷ್ಟು ದೊಡ್ಡ ಬಾಯಿ ನನಗಿದ್ದಿದ್ದರೆ,ನಾನೂ ಬಾಯಿಯಲ್ಲಿಯೇ ಹಿಡಿದಿರುತ್ತಿದ್ದೆ ಬಿಡು’ಎಂದು ಮುಂದೆ ನಡೆದನಂತೆ..!!

ಕ್ರಿಕೆಟ್ ಜಗದ ಇಂಥಹ ಚಿಕ್ಕಪುಟ್ಟ ಕಲಹಗಳಿಂದಲೇ ಆಟದ ರುಚಿ ಇನ್ನಷ್ಟು ಹೆಚ್ಚುತ್ತದಲ್ಲವೇ….??

 

  ಲೇಖನೆ : ಗುರುರಾಜ ಕೊಡ್ಕಣಿ ಯಲ್ಲಾಪುರ

Exit mobile version