SportsKannada | ಸ್ಪೋರ್ಟ್ಸ್ ಕನ್ನಡ

ಚೇತನಾ ಕೊಟೇಶ್ವರ – ಬೆಳ್ಳಿಹಬ್ಬ ಟ್ರೋಫಿ-1997  ಟೆನ್ನಿಸ್ ಕ್ರಿಕೆಟ್ ನ ರೋಚಕ ಕದನಗಳು

1972 ರಲ್ಲಿ ಸ್ಥಾಪನೆಯಾದ
ಚೇತನಾ ಕ್ರೀಡಾ ಹಾಗೂ ಕಲಾರಂಗ ಸಂಸ್ಥೆ, ಕೋಟೇಶ್ವರ ತನ್ನ 25 ನೇ ವರ್ಷದ ವಾರ್ಷಿಕೋತ್ಸವದ  ಸವಿ ನೆನಪಿಗಾಗಿ ಕೋಟೇಶ್ವರದ ಜಿ.ಜೆ‌.ಸಿ ಮೈದಾನದಲ್ಲಿ ಡಿಸೆಂಬರ್‌ ಮಾಸಾಂತ್ಯದಲ್ಲಿ
ಏರ್ಪಡಿಸಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ಪಂದ್ಯಾವಳಿ ಟೆನ್ನಿಸ್ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ರೋಚಕ‌ ಹೋರಾಟಗಳನ್ನು ಕಂಡ ಪಂದ್ಯಾವಳಿಗಳಲ್ಲಿ ಒಂದು.
ಬೈಂದೂರಿನಲ್ಲಿ ಅಂದು ಮಧ್ಯಾಹ್ನ ನಡೆದಿದ್ದ ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಶ್ರೀ ಬೆಂಗಳೂರು ತಂಡವನ್ನು ಸೋಲಿಸಿ ಜೈ ಕರ್ನಾಟಕ ಟ್ರೋಫಿ ಜಯಿಸಿತ್ತು.
ಇತ್ತ ಕೋಟೇಶ್ವರದಲ್ಲಿ ಟೊರ್ಪೆಡೋಸ್ ತಂಡವನ್ನು ಜೈ ಕರ್ನಾಟಕ ತಂಡ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿತ್ತು.
ಸೆಮಿಫೈನಲ್ ನಲ್ಲಿ ಒಂದೆಡೆ
ಜಗದೀಶ್ ಗೌಡರ ಸಾರಥ್ಯದ ಜೀವಲ್, ಮೂರ್ತಿ,ಅಚ್ಯುತ
ಬಸವರಾಜ್ ಪಾಟೀಲ್,ಜಗದೀಶ್,ಬೋಲು,
ನವೀನ್ ನಂತಹ ಪರಿಪೂರ್ಣ ಆಟಗಾರರಿಂದ ಕೂಡಿದ ಬಲಿಷ್ಠ ತಂಡ ಗುರುಬ್ರಹ್ಮ ಬೆಂಗಳೂರು  ಮತ್ತು ಶ್ರೀಪಾದ ಉಪಾಧ್ಯರ ಸಾರಥ್ಯದ,ಪ್ರದೀಪ್ ವಾಜ್,ಮನೋಜ್ ನಾಯರ್,ಕೆ.ಪಿ.ಸತೀಶ್,ಶಾಹಿದ್,
ರಂಜಿತ್ ಶೆಟ್ಟಿ ಯಂತಹ
ದೈತ್ಯ ಪ್ರತಿಭೆಗಳಿಂದ ಕೂಡಿದ ಚಕ್ರವರ್ತಿ ಕುಂದಾಪುರ.
ಮೊದಲು ಬ್ಯಾಟಿಂಗ್ ನಡೆಸಿದ ಗುರುಬ್ರಹ್ಮ 10 ಓವರ್ ಗಳಲ್ಲಿ 54 ರನ್ ಗಳಿಸಿ ಸವಾಲಿನ ಗುರಿಯನ್ನು ಚಕ್ರವರ್ತಿಗೆ ನೀಡಿತ್ತು.
ಚೇಸಿಂಗ್ ವೇಳೆ ಆರಂಭ ಹಂತದಲ್ಲೇ ಎಡವಿದ ಚಕ್ರವರ್ತಿ ತಂಡ 16 ರನ್ನಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿರುವ ಸಂದರ್ಭದಲ್ಲಿ, ಕ್ರೀಸ್ ಗೆ ಆಗಮಿಸಿದ ಚಕ್ರವರ್ತಿ ತಂಡದ ಶಿಸ್ತಿನ ಸಿಪಾಯಿ,ನಂಬುಗೆಯ ಎಡಗೈ ಆಲ್ ರೌಂಡರ್ ಪ್ರದೀಪ್ ವಾಜ್ ತನ್ನ ಕರ್ತವ್ಯ,ತಂಡ ಹಾಗೂ ತನ್ನೂರಿನ ಅಭಿಮಾನಿಗಳಿಟ್ಟ ನಂಬಿಕೆಯನ್ನು ಉಳಿಸಿಕೊಂಡಿದ್ದರು.
ಈ ನಡುವಿನಲ್ಲಿ ಜಗದೀಶ್ ಸಿಕ್ಸರ್ ಸಿಡಿಸಿ 8 ನೇ ವಿಕೆಟ್ ಕೆ.ಪಿ.ಸತೀಶ್ ಜೊತೆ ಹಾಗೂ 9 ನೇ ವಿಕೆಟ್ ರಂಜಿತ್ ಶೆಟ್ಟಿ ಜೊತೆ ನಿಧಾನವಾಗಿ ರನ್ ಗತಿಯನ್ನು ಏರಿಸುತ್ತಾ,8 ನೇ ಓವರ್ ನಲ್ಲಿ ಅಪಾಯಕಾರಿ  ಅಚ್ಯುತ್ ರವರ ಓವರ್ ನಲ್ಲಿ ಸ್ಟ್ರೈಕರ್ ನಲ್ಲಿದ್ದ ಸಂತೋಷ್ ರವರಿಗೆ ಎಚ್ಚರಿಕೆಯ ಆಡಲು ಸೂಚನೆ ನೀಡಿ,ಕೊನೆಯ 2 ಓವರ್ ಗಳಲ್ಲಿ 19 ರನ್ ಗಳ‌ ಜವಾಬ್ದಾರಿಯನ್ನು ತನ್ನ ಹೆಗಲಮೇಲೆ ವಾಜ್ ಹೊರುತ್ತಾರೆ.
*ಜೀವಲ್-ವಾಜ್ ಕಾಳಗ*
ತನ್ನ 31 ನೇ ವರ್ಷದಲ್ಲೇ ಬೆಂಗಳೂರಿನ ಹೆಬ್ಬಾಳದ ಬಳಿ
ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾದ ಜೀವಲ್ ಅದಾಗಲೇ ಜೀವಮಾನಕ್ಕಾಗುವಷ್ಟು ದಾಖಲೆಗಳನ್ನು ಬರೆದಾಗಿತ್ತು.ಜೀವಲ್ ಅವರ ಲೆಗ್ ಆಫ್ ಕಟ್ಟರ್ಸ್,ಸ್ಟ್ರೈಟ್ ಡೆಲಿವರೀಸ್ ಗಳನ್ನು ಎದುರಿಸುವ  ತಾಕತ್ತು ಯಾವ ಆಟಗಾರನ ಬಳಿ ಇರುತ್ತಿರಲಿಲ್ಲ. ರಿವರ್ಸ್ ಸ್ವೀಪ್ ನಿಷ್ಣಾತ,ಫೀಲ್ಡಿಂಗ್ ವೇಳೆ ಎಡ, ಬಲ
ಕೈಗಳಲ್ಲಿ ವಿಕೆಟ್ ಗೆ ನೇರ ಥ್ರೋ ಎಸೆಯುವ ಅಪರೂಪದ ಕ್ಷೇತ್ರ ರಕ್ಷಕ ಜೀವಲ್.
ಜೀವಲ್ ತಮ್ಮ 9 ನೇ ಓವರ್ ಎಸೆಯಲು ಚೆಂಡನ್ನು ಕೈಗೆತ್ತಿಕೊಂಡಾಗ ಅದಾಗಲೇ ಚಕ್ರವರ್ತಿ ತಂಡದ ಅಭಿಮಾನಿಗಳು,ಪಂದ್ಯಾಟ ನೋಡಲು ದೂರದೂರುಗಳಿಂದ ಬಂದಿದ್ದ ಸಾವಿರಾರು ಪ್ರೇಕ್ಷಕರು ಗ್ಯಾಲರಿಯಿಂದಿಳಿದು ಮನೆಯ ಹಾದಿ ಹಿಡಿದಿದ್ದರು.ದಾರಿಯಲ್ಲಿ ನಡೆಯುವಾಗ ಅಂಗಣದೊಳಗಿಂದ ಪಟಾಕಿ ಸಿಡಿದಂತೆ ಶಬ್ದ ಮೊಳಗಿತ್ತು.
ಮೈದಾನಕ್ಕೆ ಪ್ರೇಕ್ಷಕರು ಹಿಂದಿರುಗಿದಾಗಲೇ ತಿಳಿದದ್ದು,
ಎಡಗೈ ದಾಂಡಿಗ ಪ್ರದೀಪ್ ವಾಜ್,
ಜೀವಲ್  9 ನೇ ಓವರ್ ನಲ್ಲಿ ಸಿಡಿದಿದ್ದ ಆ ಹ್ಯಾಟ್ರಿಕ್ ಸಿಕ್ಸರ್ ಜಿ.ಜೆ.ಸಿ ಹೈಸ್ಕೂಲ್ ನ ಮಾಡಿನ ಹಂಚುಗಳನ್ನುಸೀಳಿದ್ದವು.
ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ಚಕ್ರವರ್ತಿ ಗೆಲುವಿನ ಕೇಕೆ ಹಾಕಿತ್ತು.
 *ಎರಡನೇ ಸೆಮಿಫೈನಲ್*
*ಶ್ರೀ ಬೆಂಗಳೂರು- ಜೈ ಕರ್ನಾಟಕ*
ಎರಡನೇ ಸೆಮಿಫೈನಲ್ ನಲ್ಲಿ ಬೈಂದೂರಿನ ರನ್ನರ್ಸ್ ಪ್ರಶಸ್ತಿ ವಿಜೇತ,ಪ್ರಚಂಡ ಫಾರ್ಮ್ ನಲ್ಲಿದ್ದ ನದೀಮ್,ಜಾನಿ,ಮೌನ್ಸಿ,ಪಾಯಿಂಟ್ ಪ್ರಕಾಶ್,ಮಳ್ಳಿ ಮಂಜ,ಕುಮ್ಮಿ,
ಗುರು ಪ್ರಸಾದ್ ಭಟ್ ರನ್ನು ಹೊಂದಿದ ಬಲಿಷ್ಠ ಶ್ರೀ ಬೆಂಗಳೂರು ತಂಡದೆದುರು  ಭಗವಾನ್ ಅದ್ಭುತ ಬ್ಯಾಟಿಂಗ್ ನ ಫಲವಾಗಿ ಜೈ ಕರ್ನಾಟಕ ಫೈನಲ್ ಪ್ರವೇಶಿಸಿತ್ತು.
*ಚಕ್ರವರ್ತಿ & ಜೈ ಕರ್ನಾಟಕ ಫೈನಲ್*
ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಚಕ್ರವರ್ತಿ ತಂಡ ಸೆಮಿಫೈನಲ್ ಗೆಲುವಿನ ಹುಮ್ಮಸ್ಸಿನಲ್ಲಿ ಆರಂಭಿಕ‌ ಆಟಗಾರ ಮನೋಜ್ ನಾಯರ್ ಕವರ್ಸ್ ಸಿಡಿಸಿದ 3 ಸಿಕ್ಸರ್, 2 ಬೌಂಡರಿ
ಗಳಿಂದ ಕೂಡಿದ  48 ರನ್ ನೆರವಿನಿಂದ 10 ಓವರ್ ಗಳಲ್ಲಿ 76 ರನ್ ಗಳಿಸಿತ್ತು. ಬೃಹತ್ ಮೊತ್ತ ಬೆಂಬತ್ತುವಲ್ಲಿ ವಿಫಲವಾದ ಜೈ ಕರ್ನಾಟಕ 48 ರನ್ ಗಳನ್ನಷ್ಟೇ ಗಳಿಸಿ ಸೋಲೊಪ್ಪಿಕೊಂಡಿತ್ತು.
ಫೈನಲ್ ಪಂದ್ಯದ ಪಂದ್ಯಶ್ರೇಷ್ಟ ಪ್ರಶಸ್ತಿ ಹಾಗೂ ಬೆಸ್ಟ್ ಬ್ಯಾಟ್ಸ್‌ಮನ್
ಮನೋಜ್ ನಾಯರ್,
ಸರಣಿ ಶ್ರೇಷ್ಠ ಪ್ರದೀಪ್ ವಾಜ್,
ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಜೈ ಕರ್ನಾಟಕದ ಮಂಜುನಾಥ್ ಪಡೆದುಕೊಂಡಿದ್ದರು.
ಪಂದ್ಯಾವಳಿಯ ತೀರ್ಪುಗಾರರಾಗಿ ಚೇತನಾ ಸಂಸ್ಥೆಯ ಡಾ.ಜಗದೀಶ್ ಶೆಟ್ಟಿ ಮತ್ತು ಶಂಕರ್ ಕಾರ್ಯ ನಿರ್ವಹಿಸಿದ್ದರೆ,ವೀಕ್ಷಕ ವಿವರಣೆಯಲ್ಲಿ ಕೆ.ಸಿ.ರಾಜೇಶ್,
ಶಿವನಾರಾಯಣ ಐತಾಳ್ ಕೋಟ
ಹಾಗೂ ರಾಷ್ಟ್ರೀಯ ಭಾಷೆಯಲ್ಲಿ ಜಾಕಿರ್ ಹುಸೇನ್ ನಿರ್ವಹಿಸಿದ್ದರು.
*ಕ್ರಿಕೆಟ್ ಪಂದ್ಯ=ಕೋಟೇಶ್ವರ ಜಾತ್ರೆ*
ಅಂದಿನ ದಿನದ ಕೋಟೇಶ್ವರದ ವಾತಾವಾರಣ,ವರ್ಷಕೊಮ್ಮೆ ನಡೆಯುವ ವಿಶ್ವ ಪ್ರಸಿದ್ಧ ಕೊಡಿ ಹಬ್ಬದಂತೆ ಜನಸ್ತೋಮ ನೆರೆದಿತ್ತು,ಚಕ್ರವರ್ತಿ ತಂಡ ಗೆಲುವಿನ ಹಬ್ಬವನ್ನೇ ಆಚರಿಸಿತ್ತು.
*ಟೆನ್ನಿಸ್ ಕ್ರಿಕೆಟ್ ಜೀವ ತುಂಬಿ ಮರೆಯಾದ ಜೀವಲ್*
ಪ್ರದೀಪ್ ವಾಜ್, ಚೇತನಾ ಪಂದ್ಯದಲ್ಲಿ ಇತಿಹಾಸವನ್ನು ನಿರ್ಮಿಸಿ,ಲೆದರ್ ಬಾಲ್ ಪಂದ್ಯಾವಳಿಗಳಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯವನ್ನು ಪ್ರತಿನಿಧಿಸಿ,ಚಕ್ರವರ್ತಿ ಕ್ರಿಕೆಟ್ ಕ್ಲಬ್ ನ‌ ಲೆದರ್ ಬಾಲ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರೆ,
ತನ್ನ 10 ನೇ ವಯಸ್ಸಿನಲ್ಲಿ‌ ಕ್ರಿಕೆಟ್ ಕ್ಷೇತ್ರಕ್ಕಿಳಿದ ಗುರುಬ್ರಹ್ಮದ ಜೀವಲ್, ಅಲ್ಪಾವಧಿಯಲ್ಲೇ ಕ್ರಿಕೆಟ್ ಇತಿಹಾಸದಲ್ಲಿ ಹಲವಾರು ಮೈಲಿಗಲ್ಲುಗಳನ್ನು ಸ್ಥಾಪಿಸಿ,
ಮ್ಯಾಜಿಕಲ್ ಆಲ್ ರೌಂಡರ್ ಗೌರವಕ್ಕೆ ಪಾತ್ರರಾಗಿದ್ದರು.
2001 ರ ತನಕ ದಾಖಲೆಗಳ ಮೇಲೆ ದಾಖಲೆಗಳನ್ನು ನಿರ್ಮಿಸಿ,ಗುರುಬ್ರಹ್ಮ ಬೆಂಗಳೂರಿನ ಟ್ರಂಪ್ ಕಾರ್ಡ್ ಆಗಿ ರಾಜ್ಯಾದ್ಯಂತ ಮನೆಮಾತಾಗಿದ್ದ ಆಟಗಾರ.
2001 ರ ಡಿಸೆಂಬರ್ 16 ರಂದು ಹೆಬ್ಬಾಳದಲ್ಲಿ ನಡೆದ ಪಂದ್ಯ ಮುಗಿಸಿ, ಗೆಲುವಿನ ಖುಷಿಯ ಸಂಭ್ರಮದಲ್ಲೇ,ಜೀವಲ್ ಅಪ್ಪಟ ಅಭಿಮಾನಿ ಸ್ವಾಮಿ ಜೊತೆ ಬೈಕ್ ಚಲಾಯಿಸಿಕೊಂಡು
ಮನೆಗೆ ಮರಳುವ ವೇಳೆ ನಿಲ್ಲಿಸಿದ್ದ ಲಾರಿಯ ಬಲಬದಿಗೆ ಢಿಕ್ಕಿ ಹೊಡೆದು ತಲೆಗೆ ಏಟು ಬಿದ್ದು ಜೀವಲ್ ಪ್ರಾಣಪಕ್ಷಿ ಹಾರಿ ಹೋಗಿತ್ತು.ಜೀವಲ್ ಜೀವನ ಅಂತ್ಯವಾಗಿದ್ದರೂ
ಜೀವಲ್ ಟೆನ್ನಿಸ್ ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಅಮರರಾಗಿ ಉಳಿದರು.
Exit mobile version