SportsKannada | ಸ್ಪೋರ್ಟ್ಸ್ ಕನ್ನಡ

80,90ರ ದಶಕಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಆಟಗಾರರು ಮೆರೆದ ಕ್ರೀಡಾಸ್ಪೂರ್ತಿ ಶರತ್ ಶೆಟ್ಟಿ ಪಡುಬಿದ್ರಿ

ಟೆನ್ನಿಸ್ ಬಾಲ್ ಕ್ರಿಕೆಟ್ ಇಂದು ಅತ್ಯಾಧುನಿಕ ತಂತ್ರಜ್ಞಾನಗಳ ಅಳವಡಿಕೆಯಿಂದ,ಯೂ ಟ್ಯೂಬ್ ಚಾನೆಲ್ ಗಳ ನೇರ ಪ್ರಸಾರ,ನಾನಾ ಮಾಧ್ಯಮಗಳ ಮೂಲಕ ಕ್ರಿಕೆಟ್ ಪ್ರೇಮಿಗಳನ್ನು ತಲುಪುತ್ತಿದ್ದು ಇನ್ನು ಕೆಲವು ವರ್ಷಗಳಲ್ಲಿ ಅತ್ಯುನ್ನತ ಮಟ್ಟ ತಲುಪುವುದರಲ್ಲಿ ಯಾವುದೇ ಸಂದೇಹವಿಲ್ಲ.ಈ ಬೆಳವಣಿಗೆಗಳಿಗೆ 80,90 ರ ದಶಕಗಳ ಆಟಗಾರರು ಮೆರೆದ ಕ್ರೀಡಾಸ್ಪೂರ್ತಿ, ಬರೆದ ಇತಿಹಾಸ,ತಂಡದ ಮೇಲಿನ ನಿಷ್ಟೆ ಈ ಎಲ್ಲಾ ವಿಚಾರಗಳೇ ಭದ್ರ ಬುನಾದಿ ಎನ್ನುದರಲ್ಲಿ ಎರಡು ಮಾತಿಲ್ಲ.

    ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಐತಿಹಾಸಿಕ ತಂಡ “ಪಡುಬಿದ್ರಿ ಫ್ರೆಂಡ್ಸ್” ತಂಡದ ಸೇವೆ ಅವಿಸ್ಮರಣೀಯ.ರಾಜ್ಯದಲ್ಲೇ ಮೊತ್ತ ಮೊದಲ ಬಾರಿಗೆ ಹೊನಲು ಬೆಳಕಿನ ಪಂದ್ಯಾಟ ಸಂಘಟಿಸಿ ಟೆನ್ನಿಸ್ ಬಾಲ್ ಕ್ರಿಕೆಟ್ ನ ಮೆರುಗನ್ನು ಹೀಗೂ ಹೆಚ್ಚಿಸಬಹುದೆಂದು ರಾಜ್ಯಕ್ಕೆ ಪರಿಚಯಿಸಿ,ತನ್ನದೇ ಊರಿನ ಆಟಗಾರರನ್ನು ನೆಚ್ಚಿಕೊಂಡು ತಂಡವನ್ನು ಕಟ್ಟಿ,90 ರ ದಶಕದ ಪ್ರತಿಷ್ಟಿತ ಪ್ರಶಸ್ತಿಗಳನ್ನು ಬಗಲಿಗೆ ಹಾಕಿಕೊಂಡ ತಂಡ.ಕತ್ತುಕತ್ತಿನ ಹೋರಾಟದಲ್ಲಿ ಗಮನಾರ್ಹ ನಿರ್ವಹಣೆ ತೋರಿ ಬಂದ ಪ್ರಶಸ್ತಿಯ ಅಷ್ಟೂ ಮೊತ್ತವನ್ನು ಸಮಾಜ ಸೇವೆಗೆ ಮುಡಿಪಾಗಿಟ್ಟ ತಂಡದ ಈ ಎಲ್ಲಾ ಯಶಸ್ಸಿನ ಕಾರ್ಯಗಳ ಮೂಲಕ ರಾಜ್ಯದ ಅಗ್ರಮಾನ್ಯ ತಂಡವಾಗಿ ಕಟ್ಟಿದ ಆದರ್ಶ ನಾಯಕ ಶ್ರೀಯುತ “ಶರತ್ ಶೆಟ್ಟಿ ಪಡುಬಿದ್ರಿ”ಯವರು.

ಶರತ್ ಶೆಟ್ಟಿ ಯವರ ಕ್ರಿಕೆಟ್ ಜೀವನ ಶುರುವಾಗಿದ್ದೇ ಕುಂದಾಪುರದಿಂದ. ಪ್ರೌಢಶಾಲಾ ವ್ಯಾಸಂಗವನ್ನು ತೆಕ್ಕಟ್ಟೆಯಲ್ಲಿ ನಡೆಸುವ ಸಂದರ್ಭದಲ್ಲಿ ಮೊತ್ತ ಮೊದಲ ಬಾರಿಗೆ ಹಿರಿಯರಾದ ” ನಾಗೇಶಣ್ಣ”ರವರ “ಶ್ರೀಲತಾ ಕುಂದಾಪುರ” ತಂಡದಲ್ಲಿ ಆರಂಭಿಕ ದಾಂಡಿಗನಾಗಿ ಕ್ರಿಕೆಟ್ ಜೀವನ ಪ್ರಾರಂಭಿಸಿದ ಇವರು ಮುಂದೆ
ಪಡುಬಿದ್ರಿಯ “ಫಾರುಕ್” ರವರು ಕಟ್ಟಿದ ತಂಡ “ಪಡುಬಿದ್ರಿ ಫ್ರೆಂಡ್ಸ್” ನ್ನು ಮುನ್ನಡೆಸುವ ಅವಕಾಶ ಸಿಕ್ಕಾಗ ಸಹ ಆಟಗಾರರಾದ ಸುಭಾಶ್ ಕಾಮತ್ ಜೊತೆಗೂಡಿ‌ ಅದ್ಭುತ ಸಂಯೋಜಿತ ತಂಡವನ್ನು ಕಟ್ಟುತ್ತಾರೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ,M.P.L ಸರಣಿ ಶ್ರೇಷ್ಠ,ಟೆನ್ನಿಸ್ ಬಾಲ್ ನ ಸಭ್ಯ ಆಟಗಾರ ನಿತಿನ್ ಮೂಲ್ಕಿ,ಮ್ಯಾಜಿಕಲ್ ಆಲ್ ರೌಂಡರ್ ವಿನ್ಸೆಂಟ್, ಕ್ಲಾಸಿಕ್ ಬ್ಯಾಟ್ಸ್ ಮನ್ ರೂಪೇಶ್ ಶೆಟ್ಟಿ, ಹಿರಿಯ ಆಟಗಾರರಾದ ದಿ|ವೆಂಕಟೇಶ್,ಕಣ್ಣನ್ ನಾಯರ್,ಪ್ರಸಾದ್ ಪಡುಬಿದ್ರಿ ಹೀಗೆ ಹತ್ತು ಹಲವಾರು ಸವ್ಯಸಾಚಿ ಆಟಗಾರರನ್ನು ಟೆನ್ನಿಸ್ ಬಾಲ್ ಗೆ ಪರಿಚಯಿಸಿದ ಕೀರ್ತಿ ಕಳೆದ 2 ದಶಕಗಳಿಂದ ಮುನ್ನಡೆಸಿಕೊಂಡು ಬರುತ್ತಿರುವ ಆದರ್ಶ ಕಪ್ತಾನ ಶರತ್ ಶೆಟ್ಟಿ ಯವರಿಗೆ ಸಲ್ಲುತ್ತದೆ.

ಮೊದಲ ಬಾರಿಗೆ ಉಜಿರೆಯಲ್ಲಿ ರಾಜ್ಯಮಟ್ಟದ ಪಂದ್ಯಾಟದಲ್ಲಿ ಜಯಿಸಿದ ಪಡುಬಿದ್ರಿ ತಂಡ ಮುಂದೆ ಗೆಲುವಿನ ನಾಗಾಲೋಟಗೈದಿತು.1999 ರಲ್ಲಿ 14 ಜಿಲ್ಲಾ,ರಾಜ್ಯ ಮಟ್ಟದ ಪ್ರಶಸ್ತಿಗಳನ್ನು, ಶರತ್ ಶೆಟ್ಟಿ ಯವರ ನಾಯಕತ್ವದಲ್ಲಿ ಒಂದೇ ವರ್ಷದಲ್ಲಿ 8 ಟೂರ್ನಿಗಳಲ್ಲಿ ಭಾಗವಹಿಸಿ ,7 ಬಾರಿ ಚಾಂಪಿಯನ್ ತಂಡವಾಗಿಯೂ,1 ಬಾರಿ ರನ್ನರ್ಸ್ ಆಗಿ ಮೂಡಿ ಬಂದಿದ್ದು ಉತ್ಕೃಷ್ಟ ನಾಯಕತ್ವಕ್ಕೆ ಸಾಕ್ಷಿ.ಮೊದ ಮೊದಲಿಗೆ ಬ್ಯಾಟಿಂಗಲ್ಲಿ ಮಿಂಚುತ್ತಿದ್ದ ಇವರು 90 ರ ದಶಕದಲ್ಲಿ ನೇಜಾರಿನಲ್ಲಿ ಎ.ಕೆ.ಸ್ಪೋರ್ಟ್ಸ್ ತಂಡದ ವಿರುದ್ಧದ ಸೆಮಿಫೈನಲ್ ನಲ್ಲಿ ಕೊನೆಯ ಎಸೆತ ದಲ್ಲಿ 6 ರನ್ ಗಳ ಅವಶ್ಯಕತೆ ಬಿದ್ದಾಗ ಸಿಕ್ಸರ್ ಸಿಡಿಸಿ ಗೆಲ್ಲಿಸಿದ 2 ಉದಾಹರಣೆಗಳಿವೆ.ಮೈದಾನದ ಮಿಡ್ ವಿಕೆಟ್,ಕವರ್ಸ್ ನ ಚುರುಕಿನ ಅದ್ಭುತ ಫೀಲ್ಡರ್,ಯುವ ಕ್ರಿಕೆಟಿಗರಿಗಾಗಿ ತನ್ನ ಬ್ಯಾಟಿಂಗ್ ಸರದಿ ಬದಲಾಯಿಸಿಕೊಂಡು, ಯುವ ಆಟಗಾರರು ದೂರ ದೂರಿಗೆ ವೃತ್ತಿ ನಿಮಿತ್ತ ತೆರಳಲು ಬಂದಾಗ ತಂಡದ ವ್ಯಾಮೋಹವನ್ನು ಬದಿಗಿಟ್ಟು ಆಟಗಾರರ ಭವಿಷ್ಯ ರೂಪಿಸಿದ ನಿಸ್ವಾರ್ಥ ನಾಯಕ.

ಗಮನಾರ್ಹ ವಿಷಯವೆಂದರೆ ಸಮಾಜದ ಅಶಕ್ತರಿಗಾಗಿ,ರೋಗಿಗಳಿಗಾಗಿ,ಸಹಾಯಾರ್ಥ ಸಂಘಟಿಸಲ್ಪಡುತ್ತಿದ್ದ ಪಂದ್ಯಾಟಗಳಲ್ಲಿ ಜಯಿಸಿದ ಪ್ರಶಸ್ತಿ ಮೊತ್ತ ಆಯಾ ಫಲಾನುಭವಿಗಳನ್ನೇ ತಲುಪುತ್ತಿದ್ದು ಕಪ್ತಾನನ ಮಾನವೀಯತೆಗೆ ಸಾಕ್ಷಿ.

ಪ್ರಸ್ತುತ ಉಡುಪಿ ವಲಯದ : “ಕರ್ನಾಟಕ ರಾಜ್ಯ ಟೆನ್ನಿಸ್ ಕ್ರಿಕೆಟ್ ಅಸೋಸಿಯೇಷನ್” ನ ಅಧ್ಯಕ್ಷ ರಾಗಿ ಸೇವೆ ಸಲ್ಲಿಸುತ್ತಿದ್ದು ನೇರ ನುಡಿಗಳ ಮೂಲಕ ಯುವ ಕ್ರಿಕೆಟಿಗರಿಗೆ ಶಿಸ್ತಿನ ನೇರ ಸಂದೇಶವನ್ನು ತಲುಪಿಸುತ್ತಿದ್ದು, ಲಯನ್ಸ್ ಹಾಗೂ ಜೇಸಿ ಕ್ಲಬ್ ಗಳ ಮೂಲಕ ಸಮಾಜಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವರು. ಶಟಲ್ ಬ್ಯಾಡ್ಮಿಂಟನ್ ನಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.

ಆರ್.ಕೆ.ಆಚಾರ್ಯ ಕೋಟ…

Exit mobile version