SportsKannada | ಸ್ಪೋರ್ಟ್ಸ್ ಕನ್ನಡ

43 ವರ್ಷಗಳ ಹಿಂದೆ ಸಮುದ್ರದಲ್ಲಿ ಮುಳುಗಬೇಕಿದ್ದ ಹುಡುಗ, ಬಂಗಾಳದ ‘ಆಕಾಶದೀಪ’ನಿಗೆ ದ್ರೋಣಾಚಾರ್ಯನಾದ..!

ಈ ಕಥೆ ಶುರುವಾಗುವುದು 80ರ ದಶಕದ ಆರಂಭದಲ್ಲಿ. ಅವತ್ತು ಪಶ್ಚಿಮ ಬಂಗಾಳದ ರಣಜಿತ್ ಬೋಸ್ ಎಂಬ ವ್ಯಕ್ತಿ, ಪತ್ನಿ ಮತ್ತು 2 ವರ್ಷದ ಮಗನೊಂದಿಗೆ ಕಲ್ಕತ್ತಾದಿಂದ ಪೋರ್ಟ್ ಬ್ಲೇರ್’ಗೆ ಸಮುದ್ರ ಮಾರ್ಗವಾಗಿ ಹೊರಟಿದ್ದರು. ಮಾರ್ಗ ಮಧ್ಯೆ ಹಡಗು ಬಂಡೆಯೊಂದಕ್ಕೆ ಬಡಿದು ಮುಳುಗಲು ಪ್ರಾರಂಭಿಸಿತು.
ಸಮುದ್ರ ಉಗ್ರಾವತಾರ ತಾಳಿತ್ತು. ಹೀಗಾಗಿ ಹತ್ತಿರದಲ್ಲಿದ್ದ ಹಡಗುಗಳಿಗೆ ಮುಳುಗುತ್ತಿದ್ದ ಹಡಗಿನ ಬಳಿ ಬರಲು ಸಾಧ್ಯವಾಗಲಿಲ್ಲ. ರಣಜಿತ್ ಬೋಸ್’ಗೆ ಮೊದಲು ಪುಟ್ಟ ಮಗನನ್ನು ಉಳಿಸಿಕೊಳ್ಳಬೇಕಿತ್ತು. ಬೇರೆ ದಾರಿ ಕಾಣದೆ ಮಗನನ್ನು ಹಿಡಿದು ಹತ್ತಿರದಲ್ಲಿದ್ದ ಹಡಗಿಗೆ ಎಸೆದು ಬಿಟ್ಟರು. ಅಲ್ಲೊಬ್ಬ ವ್ಯಕ್ತಿ ಆ ಪುಟ್ಟ ಹುಡುಗನನ್ನು ಸುರಕ್ಷಿತವಾಗಿ ಹಿಡಿದುಕೊಂಡ.
18 ವರ್ಷಗಳ ನಂತರ ಆ ಹುಡುಗ ಬಂಗಾಳ ಪರ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ. ಆತನ ಹೆಸರು ರಣದೇವ್ ಬೋಸ್.
2006-07ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಕೇವಲ ಎಂಟೇ ಪಂದ್ಯಗಳಿಂದ 57 ವಿಕೆಟ್ ಕಬಳಿಸಿದ್ದ ರಣದೀಪ್ ಬೋಸ್, ಭಾರತ ಪರ ಆಡುವ ಎಲ್ಲಾ ಸಾಮರ್ಥ್ಯಗಳನ್ನು ಹೊಂದಿದ್ದ ವೇಗದ ಬೌಲರ್.
ಆದರೆ ಬಂಗಾಳದ ಕ್ರಿಕೆಟ್ ಸೈನಿಕನಿಗೆ ಆ ಅವಕಾಶ ಸಿಗಲಿಲ್ಲ.
ಆಟಗಾರನಾಗಿ ಮಾಡಲು ಸಾಧ್ಯವಾಗದ್ದನ್ನು ಬೌಲಿಂಗ್ ಕೋಚ್ ಆಗಿ ಸಾಧಿಸಿದ್ದಾರೆ ರಣದೇವ್ ಬೋಸ್.
ಭಾರತ ಟೆಸ್ಟ್ ತಂಡಕ್ಕೆ ಬಂಗಾಳದಿಂದ ಇಬ್ಬರು ಫಾಸ್ಟ್ ಬೌಲರ್’ಗಳನ್ನು ತಯಾರು ಮಾಡಿ ಕಳುಹಿಸಿದ್ದಾರೆ. ಒಬ್ಬ ಮುಕೇಶ್ ಕುಮಾರ್, ಇನ್ನೊಬ್ಬ ಆಕಾಶ್’ದೀಪ್. ರಣದೇವ್ ಬೋಸ್ ಗರಡಿಯಲ್ಲೇ ಪಳಗಿದ ಇಶಾನ್ ಪೊರೆಲ್ ಎಂಬ ಮತ್ತೊಬ್ಬ ಯುವ ವೇಗದ ಬೌಲರ್ 2018ರಲ್ಲಿ ಅಂಡರ್-19 ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದ.
ರಣದೇವ್ ಬೋಸ್ ಅವರ ಶಿಷ್ಯರಲ್ಲಿ ಒಬ್ಬನಾದ ಆಕಾಶ್’ದೀಪ್, ರಾಂಚಿಯಲ್ಲಿ ಶುಕ್ರವಾರ ಭಾರತ ಪರ ಟೆಸ್ಟ್ ಪದಾರ್ಪಣೆ ಮಾಡಿದ್ದಾನೆ.
43 ವರ್ಷಗಳ ಹಿಂದೆ ಸಮುದ್ರಕ್ಕೆ ಆಹುತಿಯಾಗಬೇಕಿದ್ದ ಆ ಹುಡುಗನೇ ಈಗ ಭಾರತ ಪರ ಆಡುವ ಕನಸು ಕಾಣುವ ಬಂಗಾಳದ ಯುವ ವೇಗದ ಬೌಲರ್’ಗಳ ಪಾಲಿಗೆ ದ್ರೋಣಾಚಾರ್ಯ.
#Akashdeep #RanadebBose
Exit mobile version