Site icon SportsKannada ಸ್ಪೋರ್ಟ್ಸ್ ಕನ್ನಡ

ರಣಜಿ ಟ್ರೋಫಿಗೆ ಕುಂದಾಪುರ ಹುಡುಗನ ಪಾದಾರ್ಪಣೆ.. ಕರಾವಳಿ ಮುಕುಟಕ್ಕೆ ಮತ್ತೊಂದು ಗರಿ

ರಣಜಿ ಟ್ರೋಫಿಗೆ ಕುಂದಾಪುರ ಹುಡುಗನ ಪಾದಾರ್ಪಣೆ.. ಕರಾವಳಿ ಮುಕುಟಕ್ಕೆ ಮತ್ತೊಂದು ಗರಿ

ಕರ್ನಾಟಕ ತಂಡದ ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಅಭಿಯಾನ ಆರಂಭವಾಗಿದ್ದು, ರಾಜ್’ಕೋಟ್’ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ ಸೆಣಸುತ್ತಿದೆ. ಟಾಸ್ ಗೆದ್ದಿರುವ ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಈ ಪಂದ್ಯದ ಮೂಲಕ ಕುಂದಾಪುರದ ಪ್ರತಿಭಾವಂತ ಎಡಗೈ ಸ್ಪಿನ್ನರ್ ಶಿಖರ್ ಶೆಟ್ಟಿ ರಣಜಿ ಕ್ರಿಕೆಟ್’ಗೆ ಪಾದಾರ್ಪಣೆ ಮಾಡಿದ್ದಾರೆ. 20 ವರ್ಷದ ಶಿಖರ್ ಶೆಟ್ಟಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಲೀಗ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದು, ಈ ದೇಶೀಯ ಕ್ರಿಕೆಟ್ ಟೂರ್ನಿಗೆ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಸೌರಾಷ್ಟ್ರ ವಿರುದ್ಧದ ಪಂದ್ಯದ ಮೂಲಕ ಪ್ರತಿಷ್ಠಿತ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡುವ ಅವಕಾಶ ಸಿಕ್ಕಿದೆ. ಕಳೆದ ವರ್ಷ ಉಡುಪಿ ಜಿಲ್ಲೆಯ ಕೋಟಾದ ಮೂಡು ಗಿಳಿಯಾರಿನ ಎಡಗೈ ಮಧ್ಯಮ ವೇಗಿ ಅಭಿಲಾಷ್ ಶೆಟ್ಟಿ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದರು. ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಕುಂದಾಪುರದ ಹುಡುಗರಾದ ಅಭಿಲಾಷ್ ಶೆಟ್ಟಿ ಮತ್ತು ಶಿಖರ್ ಶೆಟ್ಟಿ ಕರ್ನಾಟಕದ ಆಡುವ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.

20 ವರ್ಷದ ಶಿಖರ್ ಶೆಟ್ಟಿ ಎಡಗೈ ಸ್ಪಿನ್ನರ್ ಹಾಗೂ ಬಲಗೈ ಬ್ಯಾಟರ್. ಅಂಡರ್-19 ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ತೋರಿ ಇದೀಗ ಕರ್ನಾಟಕ ಸೀನಿಯರ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆ ಬಾರಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಶಿಖರ್ ಶೆಟ್ಟಿ ಮೈಸೂರು ವಾರಿಯರ್ಸ್ ತಂಡದ ಪರ ಆಡಿದ್ದರು. ಅದಕ್ಕೂ ಮುನ್ನ ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಹುಬ್ಬಳ್ಳಿ ಟೈಗರ್ಸ್ ತಂಡದಲ್ಲಿದ್ದರು.

27 ವರ್ಷದ ಪ್ರತಿಭಾವಂತ ಎಡಗೈ ವೇಗದ ಬೌಲರ್ ಅಭಿಲಾಷ್ ಶೆಟ್ಟಿ 2024ರ ನವೆಂಬರ್ 6ರಂದು ಬೆಂಗಳೂರಿನಲ್ಲಿ ನಡೆದ ಬಂಗಾಳ ವಿರುದ್ಧದ ಪಂದ್ಯದ ಮೂಲಕ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದ್ದರು. ಒಟ್ಟು 2 ರಣಜಿ ಪಂದ್ಯಗಳನ್ನಾಡಿರುವ ಅಭಿಲಾಷ್ ಶೆಟ್ಟಿ 7 ವಿಕೆಟ್ ಪಡೆದಿದ್ದಾರೆ. ಕರ್ನಾಟಕ ಪರ 7 ಲಿಸ್ಟ್ ಎ ಪಂದ್ಯಗಳನ್ನು ಆಡಿರುವ ಅಭಿಲಾಷ್ ಶೆಟ್ಟಿ 17 ವಿಕೆಟ್’ಗಳನ್ನು ಪಡೆದಿದ್ದಾರೆ.

Exit mobile version