Site icon SportsKannada ಸ್ಪೋರ್ಟ್ಸ್ ಕನ್ನಡ

ಪಂಜಾಬ್ ವಿರುದ್ಧ ಕನ್ನಡಿಗರ ಪರಾಕ್ರಮ, ಮನೆಯಂಗಳದಲ್ಲಿ ರಣಜಿ ಪಂದ್ಯ ಗೆದ್ದು ಬೀಗಿದ ಕರ್ನಾಟಕ

ಪಂಜಾಬ್ ವಿರುದ್ಧ ಕನ್ನಡಿಗರ ಪರಾಕ್ರಮ, ಮನೆಯಂಗಳದಲ್ಲಿ ರಣಜಿ ಪಂದ್ಯ ಗೆದ್ದು ಬೀಗಿದ ಕರ್ನಾಟಕ

ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂಜಾಬ್ ವಿರುದ್ಧದ ರಣಜಿ ಪಂದ್ಯವನ್ನು ಆತಿಥೇಯ ಕರ್ನಾಟಕ ತಂಡ ಮೂರೇ ದಿನಗಳಲ್ಲಿ ಗೆದ್ದುಕೊಂಡಿದೆ.

ಪಂಜಾಬ್ ವಿರುದ್ಧದ ಎಲೈಟ್ ಸಿ ಗುಂಪಿನ 6ನೇ ಲೀಗ್ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ ಇನ್ನಿಂಗ್ಸ್ ಹಾಗೂ 207 ರನ್’ಗಳ ಭರ್ಜರಿ ಗೆಲುವು ದಾಖಲಿಸಿತು. ಇನ್ನಿಂಗ್ಸ್ ಗೆಲುವಿನ ಬಲದೊಂದಿಗೆ ಬೋನಸ್ ಅಂಕ ಸಹಿತ ಪಂದ್ಯದಲ್ಲಿ ಒಟ್ಟು ಏಳು ಪಾಯಿಂಟ್ ಗಳಿಸಿದ ಕರ್ನಾಟಕ ಒಟ್ಟಾರೆ ಅಂಕ ಗಳಿಕೆಯನ್ನು 19ಕ್ಕೆ ಏರಿಸಿಕೊಳ್ಳುವ ಮೂಲಕ ನಾಕೌಟ್ ಕನಸನ್ನು ಜೀವಂತವಾಗಿಟ್ಟುಕೊಂಡಿತು.

ಪ್ರಥಮ ಇನ್ನಿಂಗ್ಸ್’ನಲ್ಲಿ 420 ರನ್’ಗಳ ಭಾರೀ ಹಿನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಪಂಜಾಬ್ 213 ರನ್’ಗಳಿಗೆ ಆಲೌಟಾಯಿತು. ನಾಯಕ ಶುಭಮನ್ ಗಿಲ್ ಶತಕ ಬಾರಿಸಿದ್ರೂ ಉಳಿದ ಯಾವ ಆಟಗಾರರೂ ಕರ್ನಾಟಕದ ಬೌಲರ್’ಗಳಿಗೆ ಸವಾಲಾಗಲಿಲ್ಲ. ಕರ್ನಾಟಕ ಪರ ಯುವ ಆಲ್ರೌಂಡರ್ ಯಶೋವರ್ಧನ್ ಪರಂತಪ್ ಮತ್ತು ಉಪನಾಯಕ ಶ್ರೇಯಸ್ ಗೋಪಾಲ್ ತಲಾ ಮೂಪರು ವಿಕೆಟ್ ಕಬಳಿಸಿದರು.

ಪಂಜಾಬ್ ವಿರುದ್ಧದ ಇನ್ನಿಂಗ್ಸ್ ಗೆಲುವಿನೊಂದಿಗೆ ಕರ್ನಾಟಕ ತಂಡ ಸಿ ಗುಂಪಿನಲ್ಲಿ ಆಡಿರುವ 6 ಪಂದ್ಯಗಳಲ್ಲಿ 19 ಅಂಕ ಗಳಿಸಿದೆ. ಹರ್ಯಾಣ ವಿರುದ್ಧ ಜನವರಿ 30ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಅಂತಿಮ ಲೀಗ್ ಪಂದ್ಯವನ್ನು ಗೆದ್ದಲ್ಲಿ ಕರ್ನಾಟಕ ನಾಕೌಟ್ ಹಂತಕ್ಕೆ ಪ್ರವೇಶ ಪಡೆಯಲಿದೆ.

ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ತಂಡ ಆತಿಥೇಯ ಮುಂಬೈ ತಂಡಕ್ಕೆ ಶಾಕ್ ಕೊಟ್ಟಿದೆ. ಮುಂಬೈಯನ್ನು ಮೂರೇ ದಿನಗಳಲ್ಲಿ ಬಗ್ಗು ಬಡಿದ ಜಮ್ಮು ಕಾಶ್ಮೀರ ತಂಡ ಎಲೈಟ್ ಎ ಗುಂಪಿನಲ್ಲಿ ಆಡಿರುವ 6 ಪಂದ್ಯಗಳಲ್ಲಿ 4ರಲ್ಲಿ ಗೆದ್ದು 2 ಡ್ರಾಗಳೊಂದಿಗೆ 29 ಅಂಕ ಸಂಪಾದಿಸಿದೆ.

Exit mobile version