SportsKannada | ಸ್ಪೋರ್ಟ್ಸ್ ಕನ್ನಡ

ಜಿ.ಪಿ.ಎಲ್ ಚರಿತ್ರೆಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿ ಇತಿಹಾಸ ನಿರ್ಮಿಸಿದ ಮಲ್ಪೆ ಯುನೈಟೆಡ್

ಮಂಗಳೂರಿನ ಸಹ್ಯಾದ್ರಿ ಸ್ಟೇಡಿಯಂನಲ್ಲಿ ಭಾನುವಾರ  ಫೆಬ್ರವರಿ 12 ರಂದು ರಾಯಲ್ ಚಾಲೆಂಜರ್ಸ್ ಬಳ್ಳಂಬೆಟ್ಟು (ಆರ್ ಸಿ ಬಿ) ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿದ ಮಲ್ಪೆ ಯುನೈಟೆಡ್ ಆರ್ಚ್ ಫಾರ್ಮಲ್ಯಾಬ್ಸ್ ಜಿ ಎಸ್ ಬಿ ಪ್ರೀಮಿಯರ್ ಲೀಗ್ (ಜಿಪಿಎಲ್) 2023 ರ ಚಾಂಪಿಯನ್ ಕಿರೀಟವನ್ನು ಗೆದ್ದುಕೊಂಡಿತು.  ಕಪ್ತಾನ ಸುನಿಲ್ ಶೆಣೈ ಮಲ್ಪೆ ಯುನೈಟೆಡ್  ತಂಡವನ್ನು ಮುನ್ನಡೆಸಿದರು. 7 ವಿಕೆಟ್ ವಿಜಯದ ನಂತರ ಮಲ್ಪೆ ಯುನೈಟೆಡ್ ಚೊಚ್ಚಲ ಜಿಪಿಎಲ್  ಪ್ರಶಸ್ತಿಯನ್ನು ಗಳಿಸಿತು.
ಫೈನಲ್‌ನಲ್ಲಿ ಗೆಲ್ಲಲು 37 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮಲ್ಪೆ ಯುನೈಟೆಡ್  ಮೊದಲ ಎಸೆತದಲ್ಲೇ ಸಚಿನ್ ಗಡಿಯಾರ್ ಅವರ ವಿಕೆಟನ್ನು ಕಳೆದುಕೊಂಡಿತು. ಆರ್ ಸಿ ಬಿ  ತಂಡದ ನಾಯಕ ದೀಪಕ್ ಕಾಮತ್ ಮತ್ತು ವೇಗದ ಬೌಲರ್ ಶ್ರೀಧರ ಮೂಡ್ಲಗಿರಿ ( ಮೆಂಡೋ) ಬಿಗು ಬೌಲಿಂಗ್ ಮಾಡುವ ಮೂಲಕ ಒತ್ತಡವನ್ನು ಹೆಚ್ಚಿಸಿದರು. ಮೊದಲ 3 ಓವರುಗಳ ಅಂತ್ಯಕ್ಕೆ 19 ಕ್ಕೆ 3 ವಿಕೆಟು ಗಳನ್ನು ಕಳಕೊಂಡ ಮಲ್ಪೆಯ ತಂಡ ತದನಂತರ ನಾಯಕ ಸುನಿಲ್ ಶೆಣೈ ಹಾಗೂ ಪ್ರತೀಕ್ ಪ್ರಭು ಇವರುಗಳ  ಜವಾಬ್ದಾರಿಯುತ ಬ್ಯಾಟಿಂಗ್ ನಿಂದಾಗಿ 5.5 ಓವರ್ ಗಳಲ್ಲಿ ಪಂದ್ಯವನ್ನು ಜಯಿಸಿ ಜಿಪಿಎಲ್ ನ  7 ನೇ ಆವೃತ್ತಿಯ ಚಾಂಪಿಯನ್ ಗಳಾಗಿ ಚೊಚ್ಚಲ ಟ್ರೋಫಿಯನ್ನು ಮುಡಿಗೇರಿಸಿ ಕೊಂಡಿತು.  ರಾಯಲ್ ಚಾಲೆಂಜರ್ಸ್ ಬಳ್ಳಂಬೆಟ್ಟು ಜಿಪಿಎಲ್  2023 ರ ರನ್ನರ್-ಅಪ್  ಪ್ರಶಸ್ತಿಗೆ ತೃಪ್ತಿ ಪಡಬೇಕಾಯಿತು.
ಸೆಮಿ ಫೈನಲ್ ನಲ್ಲಿ ಪರಾಭವಗೊಂಡ ಮಂಗಳೂರಿನ  ಕೊಡಿಯಾಲ್ ಸೂಪರ್ ಕಿಂಗ್ಸ್ (KSK)  ತಂಡವು ಮತ್ತೊಂದು ಸೆಮಿ ಫೈನಲ್ ನಲ್ಲಿ ಸೋತ ಡೆಡ್ಲಿ ಪ್ಯಾಂಥರ್ಸ್ (ರಿ) ಕೊಡಿಯಾಲ್ ತಂಡವನ್ನು ಮಣಿಸುವ ಮೂಲಕ ಈ ಬಾರಿಯ ತೃತೀಯ ಸ್ಥಾನ ಪಡಕೊಂಡಿತು. ಫೈನಲ್ ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿ  ಮಲ್ಪೆಯ ಸಮೀರ್ ಶಾನಭಾಗ್  ಪಾಲಾಯಿತು. 13 ವಿಕೆಟುಗಳನ್ನು ಪಡಕೊಂಡ ಮಲ್ಪೆಯ ವಿನಾಯಕ್ ಪೈ ಟೂರ್ನಮೆಂಟ್ನ  ಬೆಸ್ಟ್ ಬೌಲರ್, ಆದೇ ರೀತಿ ಆರ್ ಸಿ ಬಿ ಯ  ಶಶಾಂಕ್ ಭಂಡಾರ್ಕರ್ (76 Runs ) ಬೆಸ್ಟ್ ಬ್ಯಾಟ್ಸಮನ್, KSK ಯ ಆದೇಶ ಭಟ್ ಮುಲ್ಕಿ ಪಂದ್ಯಾವಳಿಯ ಅತ್ಯುತ್ತಮ ಉದಯೋನ್ಮುಖ ಆಟಗಾರ ಹಾಗೂ ಡೆಡ್ಲಿ ಪ್ಯಾಂಥರ್ಸ್ (ರಿ) ಕೊಡಿಯಾಲ್ ನ ಐಕಾನ್ ಆಟಗಾರ ವಿಘ್ನೇಶ್ ಶೆಣೈ ಕಾರ್ಕಳ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದು ಕೊಂಡರು.  ಸರಣಿ ಶ್ರೇಷ್ಠ ಪ್ರಶಸ್ತಿಯನ್ನು  ಪಡೆದುಕೊಂಡ ಆಟಗಾರನಿಗೆ ಪೈ ಸೇಲ್ಸ್ ಸುಜುಕಿ ಮಂಗಳೂರು ಇವರು ಕೊಡ ಮಾಡಿದಂತಹ ಸುಜುಕಿ ಅವೆನಿಸ್ ದ್ವಿ ಚಕ್ರ ವಾಹನವನ್ನು ಹಸ್ತಾಂತರಿಸಲಾಯಿತು.
ಸತತ ಮೂರು ದಿನಗಳ ಕಾಲ ನಡೆದಂತ ಈ ಜಿ.ಪಿ.ಲ್ ಕ್ರಿಕೆಟ್ ಟೂರ್ನಿಯಲ್ಲಿ ಸಹಸ್ರಾರು ಮಂದಿ ಪ್ರೇಕ್ಷಕರು ಸೇರಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಜಿ.ಎಸ್ .ಬಿ ಕ್ರಿಕೆಟ್ ಇತಿಹಾಸದಲ್ಲಿ ಮೈಲಿಗಲ್ಲನ್ನು ಸ್ಥಾಪಿಸಿದ ಸಂಸ್ಥೆ ಕೊಡಿಯಾಲ್ ಸ್ಪೋರ್ಟ್ಸ್ ಅಸೋಸಿಯೇಷನ್  ಹಮ್ಮಿಕೊಂಡ ಏಳನೇಯ ಆವೃತ್ತಿಯ ಪಂದ್ಯಾಕೂಟ ಸಾಕಷ್ಟು  ವಿಜೃಂಭಣೆಯಿಂದ ಯಶಸ್ವಿಯಾಗಿ ಮುಕ್ತಾಯಗೊಂಡು ಮತ್ತೆ ಮುಂದಿನ ಆವೃತ್ತಿಗೆ ರಿಜಿಸ್ಟ್ರೇಷನ್ ಈಗಾಗಲೇ ಪ್ರಾರಂಭಗೊಂಡಿದೆ.  ಐಪಿಎಲ್ ಮಾದರಿಯ ಜಿ.ಎಸ್.ಬಿ ಗ ಳ ಜಿಪಿಎಲ್ ಪಂದ್ಯಾವಳಿ ಆಯೋಜಿಸಿದಂತ ಕೊಡಿಯಾಲ್ ಸ್ಪೋರ್ಟ್ಸ್ ಅಸೋಸಿಯೇಷನ್ ಹಾಗೂ ಯೂಥ್ ಆಫ್  ಜಿ ಎಸ್ ಬಿ ಯ ಪಧಾದಿಕಾರಿಗಳಿಗೆ  ಮತ್ತು ಎಲ್ಲಾ ಸದಸ್ಯರುಗಳಿಗೆ ಅಭಿನಂದನೆಗಳು.  ಮುಂಬರುವ ದಿನಗಳಲ್ಲಿ  ಮತ್ತಷ್ಟು  ಯಶಸ್ವಿಯಾಗಿ  ಟೂರ್ನಮೆಂಟ್ ಸಾಗಿ ಬರಲಿ ಮತ್ತು ಗತ ವೈಭವ ಮರುಕಳಿಸಲಿ ಎಂದು ಹಾರೈಸುತ್ತಾ  ಇದೆ ಸ್ಪೋರ್ಟ್ಸ್ ಕನ್ನಡ.
ಮತ್ತೆ ಸಿಗೋಣ,
 ಸುರೇಶ್ ಭಟ್ ಮುಲ್ಕಿ
Exit mobile version