SportsKannada | ಸ್ಪೋರ್ಟ್ಸ್ ಕನ್ನಡ

ಡಿಸೆಂಬರ್ 29 ಇಂದಿನಿಂದ ಕುಂದಾಪುರದಲ್ಲಿ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಹಬ್ಬ- ಜಾನ್ಸನ್ ಟ್ರೋಫಿ-2022/23

ಕುಂದಾಪುರ: ಜಾನ್ಸನ್ ಕ್ರಿಕೆಟರ್ಸ್ ಹಂಗಳೂರು ಇವರ ಆಶ್ರಯದಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ರಾಷ್ಟ್ರ ಮಟ್ಟದ ಕ್ರಿಕೆಟ್ ಪಂದ್ಯಾಟ ಜಾನ್ಸನ್ ಟ್ರೋಫಿ ಇಲ್ಲಿನ ಗಾಂಧೀ ಮೈದಾನದಲ್ಲಿ ಶುಕ್ರವಾರ ಸಂಜೆ 7 ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಜಾನ್ಸನ್ ಕ್ರಿಕೆಟರ್ಸ್ ಹಂಗಳೂರು ಇದರ ಅಧ್ಯಕ್ಷರಾದ ರವೀಂದ್ರ ಹೆಗ್ಡೆ ಹೇಳಿದರು.
ಬುಧವಾರ ಕುಂದಾಪುರ ಪ್ರೆಸ್‍ಕ್ಲಬ್‍ನಲ್ಲಿ ನಡೆಸಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾಹಿತಿ ನೀಡಿದರು.
ಪಂದ್ಯಾಟದ ಎರಡನೇ ದಿನವಾದ ಡಿಸೆಂಬರ್ 30ರ ಶುಕ್ರವಾರ ಸಂಜೆ 7 ಗಂಟೆಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಮ್ ಸುಕುಮಾರ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಉದ್ಯಮಿ ಸುರೇಂದ್ರ ಶೆಟ್ಟಿ, ಜಯಶೀಲ ಶೆಟ್ಟಿ, ಅನ್ಸಾಫ್, ವಿಶ್ವಾಸ್ ಮೆಲ್ವಿನ್ ಡಿಸೋಜಾ, ವೀಣಾ ಭಾಸ್ಕರ್, ಸಂಪತ್ ಶೆಟ್ಟಿ, ರತ್ನಾಕರ್ ಶೆಟ್ಟಿ, ಸುಜಯ್ ಶೆಟ್ಟಿ ತೆಕ್ಕಟ್ಟೆ, ಸುಭಾಶ್ ಶೆಟ್ಟಿ ಹೊಳ್ಮಗೆ, ಪ್ರವೀಣ್ ಶೆಟ್ಟಿ ವಂಡಾರ್, ಲಕ್ಷ್ಮೀ ಮಂಜು ಬಿಲ್ಲವ, ಶ್ರೀಪಾದ್ ಉಪಾಧ್ಯ, ಸತೀಶ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿರಲಿದ್ದಾರೆ.
ಡಿಸೆಂಬರ್ 29 ರಿಂದ ಜನವರಿ 1 ರ ತನಕ ನಾಲ್ಕು ದಿನಗಳ ಕಾಲ ನಡೆಯಲಿರುವ ಲೀಗ್ ಕಮ್ ನಾಕೌಟ್ ಮಾದರಿಯ ಪಂದ್ಯಾಟವು ದೇಶದ ವಿವಿಧ ರಾಜ್ಯಗಳಿಂದ ಆಗಮಿಸುವ ಪ್ರತಿಷ್ಠಿತ 28 ತಂಡಗಳ ನಡುವೆ ನಡೆಯಲಿದೆ ಎಂದರು.
*ಜಿಲ್ಲೆಯ ಇತಿಹಾದಲ್ಲೇ ಮೊದಲ ಬಾರಿಗೆ:*
ಜಿಲ್ಲೆಯಲ್ಲೇ ಮೊದಲ ಬಾರಿಗೆ 4 ಲಕ್ಷ ನಗದಿನ ಅಂತರಾಷ್ಟ್ರೀಯ ಮಟ್ಟದ ಪಂದ್ಯಾಟ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರತೀ ತಂಡಕ್ಕೂ 30,000 ಪ್ರವೇಶ ಶುಲ್ಕ ನಿಗಧಿಪಡಿಸಲಾಗಿದ್ದು, ಪಂದ್ಯಾಟದ ಪ್ರಥಮ ಬಹುಮಾನ 4,04,000 ಹಾಗೂ ಶಾಶ್ವತ ಫಲಕ, ದ್ವಿತೀಯ ಬಹುಮಾನವಾಗಿ 2,02,000 ಹಾಗೂ ಶಾಶ್ವತ ಫಲಕ, ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರನಿಗೆ ಎಲೆಕ್ಟ್ರಿಕ್ ದ್ವಿಚಕ್ರ ಬೈಕ್ ಅನ್ನು ಸರಣಿ ಶ್ರೇಷ್ಠ ಪ್ರಶಸ್ತಿಯಾಗಿ ನೀಡಿ ಗೌರವಿಸಲಾಗುವುದು ಎಂದವರು ಮಾಹಿತಿ ನೀಡಿದರು.
*ವಿಶೇಷ ಆಕರ್ಷಣೆ:*
ರಾಜ್ಯದ ಪ್ರತಿಷ್ಠಿತ M9 ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ಪಂದ್ಯಾಟದ ನೇರ ಪ್ರಸಾರವನ್ನು ಭಿತ್ತರಿಸಲಿದೆ. ಕ್ರೀಡಾಂಗಣದ ಹೊರಭಾಗದಲ್ಲಿ ಎಲ್‍ಇಡಿ ಟಿವಿ ಪರದೆ ಅಳವಡಿಸಲಾಗಿದ್ದು, ಕೆಲವು ತೀರ್ಮಾನಗಳು ಮೂರನೇ ಅಂಪೈರ್ ಮೂಲಕ ಟಿವಿ ಪರದೆಯಲ್ಲಿ ಭಿತ್ತರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಂಗಳೂರು, ಚೆನ್ನೈ, ದಾವಣಗೆರೆ, ಚಿತ್ರದುರ್ಗಾ, ತೀರ್ಥಹಳ್ಳಿ, ಮಂಡ್ಯ, ಮೈಸೂರು, ಗೋವಾ, ಭದ್ರಾವತಿ ಸೇರಿದಂತೆ ವಿವಿಧ ಭಾಗಗಳಿಂದ ಒಟ್ಟು 28 ತಂಡಗಳು ಜಾನ್ಸನ್ ಟ್ರೋಫಿಗಾಗಿ ಸೆಣಸಾಟ ನಡೆಸಲಿದೆ.
ಪತ್ರಿಕಾಗೋಷ್ಠಿಯಲ್ಲಿ ಜಾನ್ಸನ್ ಕ್ರಿಕೆಟರ್ಸ್‍ನ ಕಾರ್ಯದರ್ಶಿ ಮನೋಜ್ ನಾಯರ್, ನಾಯಕ ರಾಜಾ ಸಾಲಿಗ್ರಾಮ, ಪ್ರದೀಪ್ ಹೆಗ್ಡೆ ಇದ್ದರು.
Exit mobile version