SportsKannada | ಸ್ಪೋರ್ಟ್ಸ್ ಕನ್ನಡ

ಎರಡು ವರ್ಷ ಕಾಡಿದ್ದ ಕಾಯಿಲೆ.. 10 ಕೆ.ಜಿ ತೂಕ ನಷ್ಟ.. ದೊಡ್ಡ ಗಂಡಾಂತರದಿಂದ ಪಾರಾಗಿ ಬಂದಿದ್ದ ಪಡಿಕ್ಕಲ್..!

ರಣಜಿ ಟ್ರೋಫಿ-2024 ಟೂರ್ನಿಯಲ್ಲಿ ಆಡಿದ 4 ಮ್ಯಾಚ್’ಗಳಲ್ಲಿ 3 ಸೆಂಚುರಿ.. ಕಳೆದ 6 ಪ್ರಥಮದರ್ಜೆ ಪಂದ್ಯಗಳಲ್ಲಿ 4 ಶತಕಗಳ ಸಹಿತ 747 ರನ್. ಇಷ್ಟು ಸಾಕಿತ್ತು ದೇವದತ್ ಪಡಿಕ್ಕಲ್ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು.
ಟನ್’ಗಟ್ಟಲೆ ರನ್ ಗಳಿಸಿದ್ರೂ ಕೆಲವರಿಗೆ ಅವಕಾಶ ಸಿಗೋದಿಲ್ಲ. ಆ ನಿಟ್ಟಿನಲ್ಲಿ ನೋಡಿದರೆ ದೇವದತ್ ಪಡಿಕ್ಕಲ್ ಅದೃಷ್ಟವಂತ.
ಕರ್ನಾಟಕದ ಎಡಗೈ ದಾಂಡಿಗ ದೇವದತ್ ಪಡಿಕ್ಕಲ್ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಪಡಿಕ್ಕಲ್ ಪಟ್ಟ ಶ್ರಮವನ್ನು ಬಿಸಿಸಿಐ ಆಯ್ಕೆ ಸಮಿತಿ ಗುರುತಿಸಿ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಕಲ್ಪಿಸಿಕೊಟ್ಟಿದೆ.
ಶ್ರೀಮಂತ ಕ್ರಿಕೆಟ್ ಪರಂಪರೆಯ ಕರ್ನಾಟಕದಿಂದ ಮತೊಬ್ಬ ಕ್ರಿಕೆಟಿಗ ಭಾರತ ಪರ ಟೆಸ್ಟ್ ಆಡಲು ರೆಡಿಯಾಗಿದ್ದಾನೆ. ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯಕ್ಕೆ ಕೆ.ಎಲ್ ರಾಹುಲ್ ಲಭ್ಯರಿಲ್ಲದ ಕಾರಣ, ಆ ಸ್ಥಾನದಲ್ಲಿ ದೇವದತ್ ಪಡಿಕ್ಕಲ್ ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದಾನೆ.
ದೇವದತ್ ಪಡಿಕ್ಕಲ್ ಈ ಬಾರಿಯ ದೇಶೀಯ ಕ್ರಿಕೆಟ್’ನಲ್ಲಿ ರನ್ ಹೊಳೆಯನ್ನೇ ಹರಿಸಿದ್ದಾನೆ. ಇದೇ ಪಡಿಕ್ಕಲ್ ಕೇವಲ ಎರಡು ವರ್ಷಗಳ ಹಿಂದೆ ದೊಡ್ಡ ಗಂಡಾಂತರವೊಂದರಿಂದ ಪಾರಾಗಿ ಬಂದಿದ್ದ.
ರಾಜಸ್ಥಾನ ರಾಯಲ್ಸ್ ಪರ ಐಪಿಎಲ್ ಆಡುತ್ತಿರುವ ಸಂದರ್ಭದಲ್ಲಿ ಪಡಿಕ್ಕಲ್ ಪದೇ ಪದೇ ಜ್ವರದಿಂದ ಬಳಲ್ತಾ ಇದ್ದ. ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದಾಗ ಇದು ಸಾಮಾನ್ಯ ಜ್ವರ ಅಲ್ಲ ಎಂಬುದು ಗೊತ್ತಾಯ್ತು. ಕೂಡಲೇ ಮನೆಯವರನ್ನು ಸಂಪರ್ಕಿಸಿ ಮಾಹಿತಿ ನೀಡಲಾಯ್ತು.
ಬೆಂಗಳೂರಿಗೆ ಬಂದು ಇಲ್ಲಿ ಹಲವಾರು ಮೆಡಿಕಲ್ ಟೆಸ್ಟ್’ಗಳನ್ನು ನಡೆಸಿದ ಮೇಲೆ ಗೊತ್ತಾಗಿದ್ದು ಅಸಲಿ ವಿಷಯ. ದೇವದತ್ ಪಡಿಕ್ಕಲ್ ಗಂಭೀರ ಸ್ವರೂಪದ ಹೊಟ್ಟೆಯ ಸಮಸ್ಯೆಯಿಂದ ಬಳಲ್ತಾ ಇದ್ದ. ಅದೇ ಕಾರಣಕ್ಕೆ ಪದೇ ಪದೇ ಜ್ವರ ಕಾಣಿಸಿಕೊಳ್ಳುತ್ತಿತ್ತು.
ಕಾಯಿಲೆಗೆ ಚಿಕಿತ್ಸೆ ಪಡೆದ ಪಡಿಕ್ಕಲ್ ಒಂದು ವರ್ಷ ಕ್ರಿಕೆಟ್’ನಿಂದ ದೂರ ಉಳಿಯುವಂತಾಯ್ತು. ಆ ಸಮಯದಲ್ಲಿ 10 ಕೆ.ಜಿಯಷ್ಟು ತೂಕವನ್ನೂ ಕಳೆದುಕೊಂಡು ಬಿಟ್ಟ. ಇನ್ನೇನು ಈ ಹುಡುಗನ ಕ್ರಿಕೆಟ್ ಕರಿಯರ್ ಮುಗಿಯಿತು ಎಂದುಕೊಳ್ಳುವಷ್ಟರಲ್ಲಿ ಮತ್ತೆ ಫೀನಿಕ್ಸ್’ನಂತೆ ಮೇಲೆದ್ದು ಬಂದಿದ್ದಾನೆ.
ಗಂಭೀರ ಆರೋಗ್ಯದ ಸಮಸ್ಯೆಗೆ ಗುರಿಯಾಗಿ ದೊಡ್ಡ ಗಂಡಾಂತರದಿಂದ ಪಾರಾಗಿ ಬಂದ ನಂತರ ದೇವದತ್ ಪಡಿಕ್ಕಲ್ ತನ್ನ ಜೀವನಶೈಲಿಯನ್ನೇ ಬದಲಿಸಿಕೊಂಡ. ಉಪ್ಪು, ಹುಳಿ, ಖಾರ ಇಲ್ಲದ ಆಹಾರ ಸ್ವೀಕರಿಸಬೇಕಾಯಿತು. ಕರ್ನಾಟಕ ರಣಜಿ ತಂಡದ ಜೊತೆಗಿದ್ದಾಗ ಹೋಟೆಲ್’ನ “ಶೆಫ್”ಗೆ ಹೇಳಿ ಇಂಥಾ ಆಹಾರಗಳನ್ನೇ ಸಿದ್ಧ ಪಡಿಸಿಕೊಳ್ಳಬೇಕಾಗಿತ್ತು. ಮ್ಯಾಚ್’ಗಳಿದ್ದ ಸಂದರ್ಭದಲ್ಲೂ ಅಲ್ಲಿನ ಊಟ ಮಾಡುತ್ತಿರಲಿಲ್ಲ. ಪಡಿಕ್ಕಲ್’ಗೆ ಹೋಟೆಲ್’ನಿಂದಲೇ ಊಟ ಬರುತ್ತಿತ್ತು.
ಭಾರತ ಪರ 2021ರಲ್ಲೇ ಎರಡು ಟಿ20 ಪಂದ್ಯಗಳನ್ನಾಡಿದ್ದರೂ, ದೇವದತ್ ಪಡಿಕ್ಕಲ್ ಗುರಿ ಇದ್ದದ್ದು ಟೆಸ್ಟ್ ಕ್ಯಾಪ್ ಪಡೆಯುವತ್ತ. ಈ ಬಾರಿಯ ಡೊಮೆಸ್ಟಿಕ್ ಕ್ರಿಕೆಟ್ ಸೀಸನ್ ಶುರುವಾಗುವ ಹೊತ್ತಿಗೆ “ಇದೇ ನನ್ನ ಸಮಯ” ಎಂದು ದೃಢ ಸಂಕಲ್ಪ ಮಾಡಿದ್ದ ಪಡಿಕ್ಕಲ್ ರಣಜಿ ಟ್ರೋಫಿಯ ಮೊದಲ ಪಂದ್ಯದಿಂದಲೇ ಅಬ್ಬರಿಸಲು ಶುರು ಮಾಡಿದ್ದ.
ಹುಬ್ಬಳ್ಳಿಯಲ್ಲಿ ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ 193 ರನ್ ಚಚ್ಚಿ ಬಿಸಾಕಿದ ಪಡಿಕ್ಕಲ್, ನಂತರ ಗೋವಾ ವಿರುದ್ಧ 103 ರನ್ ಗಳಿಸಿದ. ಇದರ ಮಧ್ಯೆ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಸರಣಿಗಾಗಿ ಭಾರತ ‘ಎ’ ತಂಡದಿಂದ ಕರೆ ಬಂತು. ಅಲ್ಲೂ ಮಿಂಚಿದ ಪಡಿಕ್ಕಲ್ 105, 65 ಮತ್ತು 21 ರನ್ ಬಾರಿಸಿದ. ಮರಳಿ ಕರ್ನಾಟಕ ತಂಡವನ್ನು ಸೇರಿಕೊಂಡು ಮೊನ್ನೆ ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ 151 ರನ್ ಬಾರಿಸಿ ತನ್ನ ತಾಕತ್ತು ತೋರಿಸಿದ್ದಾನೆ.
ಪಡಿಕ್ಕಲ್’ನ ಅದೃಷ್ಟ. ತಮಿಳುನಾಡು ವಿರುದ್ಧ ಆಡಿದ ಆ ಶತಕ ಇನ್ನಿಂಗ್ಸನ್ನು ಬಿಸಿಸಿಐ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಕ್ರೀಡಾಂಗಣದಲ್ಲೇ ಕೂತು ವೀಕ್ಷಿಸಿದ್ದರು. ಕೆ.ಎಲ್ ರಾಹುಲ್ ಫಿಟ್ ಆಗದಿದ್ದರೆ ಯಾರು ಎಂಬ ಪ್ರಶ್ನೆಗೆ ಅಗರ್ಕರ್’ಗೆ ಅಲ್ಲೇ ಉತ್ತರ ಸಿಕ್ಕಿತ್ತು.
#DevduttPadikkal
Exit mobile version