SportsKannada | ಸ್ಪೋರ್ಟ್ಸ್ ಕನ್ನಡ

ಟೊರ್ಪೆಡೋಸ್ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಡೆಲ್ಲಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿಯರು ಮೈಸೂರು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ಮಂಗಳೂರು : ವಿಜಯದಶಮಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ಅದರಲ್ಲೂ ಮೈಸೂರಿನಲ್ಲಿ ಜಂಬೂ ಸವಾರಿಯ ಜೊತೆ ದಸರಾ ಸಂಭ್ರಮ ಜೋರಾಗಿ ಮೇಳೈಸಲಿದೆ. ಮೈಸೂರು ದಸರಾ ಪ್ರಯುಕ್ತ ಅಕ್ಟೋಬರ್ 1 ರಿಂದ 6 ರ ತನಕ ಮೈಸೂರಿನಲ್ಲಿ ರಾಜ್ಯಮಟ್ಟದ ಕ್ರೀಡಾ ಕೂಟ ನಡೆಯಲಿದ್ದು.ಈ ಹಿನ್ನೆಲೆ ಜಿಲ್ಲಾ ಹಾಗೂ ವಿಭಾಗೀಯ ಮಟ್ಟದ ಮಹಿಳಾ ವಿಭಾಗದ ಟೇಬಲ್ ಟೆನ್ನಿಸ್ ಪಂದ್ಯಾವಳಿ ಮಂಗಳೂರಿನ ಹಳೆಯಂಗಡಿಯಲ್ಲಿರೋ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಜರುಗಿದೆ.

ಸೆಪ್ಟೆಂಬರ್ 17 ರಂದು ನಡೆದಿದ್ದ ಯುವಜನ ಕ್ರೀಡಾ ಸೇವಾ ಇಲಾಖೆ ಮಂಗಳೂರು ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿ ಜರುಗಿದ್ದು, ಟೊರ್ಪೆಡೋಸ್ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿರುವ ಡೆಲ್ಲಿ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿನಿಯರು 3-0 ಅಂತರದಲ್ಲಿ ಚೈತನ್ಯ ಟೆಕ್ನೋ ಪಾರ್ಕ್ ಶಾಲಾ ತಂಡವನ್ನು ಸೋಲಿಸಿ,ಡೆಲ್ಲಿ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿನಿಯರಾದ ಪ್ರಶಸ್ತಿ ಶೆಟ್ಟಿ, ಆರ್ನಾ ಸದೋತ್ರಾ ಹಾಗೂ ಇಶಾನಿ ಹರೀಶ್ ಮೈಸೂರು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಅದೇ ರೀತಿ ವಿಭಾಗೀಯ ಮಟ್ಟದ ಮಹಿಳಾ ಟೇಬಲ್ ಟೆನ್ನಿಸ್ ಪಂದ್ಯಾಟ ಟೊರ್ಪೆಡೋಸ್ ಸಂಸ್ಥೆಯಲ್ಲಿ ಸೆಪ್ಟೆಂಬರ್ 22 ರಂದು ಜರುಗಿದ್ದು ಮಂಗಳೂರು, ಉಡುಪಿ, ಮೈಸೂರು, ಮಂಡ್ಯ, ಹಾಸನ, ಚಾಮರಾಜ ನಗರ, ಕೊಡಗು ಹಾಗೂ ಚಿಕ್ಕ ಮಗಳೂರು ಜಿಲ್ಲೆಯ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಯುವಜನ ಕ್ರೀಡಾ ಸೇವಾ ಇಲಾಖೆ ಮಂಗಳೂರಿನ ಜಿಲ್ಲಾ ಕ್ರೀಡಾಧಿಕಾರಿ ಪ್ರದೀಪ್ ಡಿಸೋಜಾ ,ಅಸಿಸ್ಟೆಂಟ್ ಕ್ರೀಡಾಧಿಕಾರಿ ಲಿಲ್ಲಿ ಡಿಸೋಜಾ ಹಾಗೂ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಗೌತಮ್ ಶೆಟ್ಟಿಯವರ ಉಪಸ್ಥಿತಿಯಲ್ಲಿ ಜಿಲ್ಲಾ ಹಾಗೂ ವಿಭಾಗೀಯ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿ ಜರುಗಿದ್ದು ವಿಭಾಗೀಯ ಮಟ್ಟದ ಮಹಿಳಾ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಉಡುಪಿ ವಿರುದ್ಧ ಸೆಣಸಾಡಿದ ಮಂಗಳೂರು ಜಿಲ್ಲಾ ವಿದ್ಯಾರ್ಥಿನಿಯರು 3-0 ಅಂತರದಲ್ಲಿ ಉಡುಪಿಯನ್ನು ಸೋಲಿಸಿ ಮೈಸೂರು ರಾಜ್ಯ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.

ತಂದೆಯೇ ಕೋಚ್ : ಕುಮಾರಿ ಪ್ರಶಸ್ತಿ ಶೆಟ್ಟಿ ಟೊರ್ಪೆಡೋಸ್ ಕ್ಲಬ್ ನ ಅಧ್ಯಕ್ಷ ಗೌತಮ್ ಶೆಟ್ಟಿಯವರ ಪುತ್ರಿಯಾಗಿದ್ದು,”ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂಬಂತೆ ಈಗಾಗಲೇ ಟೇಬಲ್ ಟೆನ್ನಿಸ್ ಪಂದ್ಯಾಕೂಟಗಳಲ್ಲಿ, ದಸರಾ ರಾಜ್ಯ ಮಟ್ಟದ 5 ಚಿನ್ನದ ಪದಕಗಳನ್ನು ಗೆದ್ದು, 4 ಬಾರಿ ಕ್ಲಸ್ಟರ್ ಮಟ್ಟದಲ್ಲಿ 8 ಬಾರಿ ರಾಜ್ಯಮಟ್ಟದಲ್ಲಿ ಪದಕಗಳಿಸಿದ್ದು, CBSE ರಾಷ್ಟ್ರೀಯ ಮಟ್ಟದಲ್ಲಿ ಹಾಗೂ ಇನ್ನಿತರ ಕ್ರೀಡಾ ಚಟುವಟಿಕೆಗಳಲ್ಲಿ  ಹಲವಾರು ಪ್ರಶಸ್ತಿಗಳನ್ನು ಪಡೆದು ವಿದ್ಯಾ ಸಂಸ್ಥೆ ಹಾಗೂ ಟೊರ್ಪೆಡೋಸ್ ಸಂಸ್ಥೆಗೂ ಕೀರ್ತಿ ತಂದಿರುತ್ತಾಳೆ. ಈಕೆಗೆ ತಂದೆಯೇ ಕೋಚ್.

ಜೊತೆಯಾಗಿ ಪುತ್ರ ಪ್ರಥಮ್ ಕೂಡ ಟೇಬಲ್ ಟೆನ್ನಿಸ್ ನಲ್ಲಿ ಹೆಚ್ಚಿನ ಆಸಕ್ತಿ ತೋರುತ್ತಿದ್ದು, ಶಾಲಾ ಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪುರಸ್ಕರಿಸಲ್ಪಟ್ಟಿರುತ್ತಾನೆ. ಟೊರ್ಪೆಡೋಸ್ ಸಂಸ್ಥೆಯಲ್ಲಿ ದಿನ ಬೆಳಗಾದರೆ ಕಠಿಣ ಅಭ್ಯಾಸ ನಡೆಸಿ, ಹುರಿದುಂಬಿಸುವ ಕಾಯಕದಲ್ಲಿ ತಂದೆ ಕೋಚ್ ಹಾಗೂ ಮೆಂಟರ್ ಆಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಗೌತಮ್ ಶೆಟ್ಟಿಯವರು ಕ್ರಿಕೆಟ್, ಟೇಬಲ್ ಟೆನ್ನಿಸ್, ಷಟಲ್ ಹೀಗೆ ಹಲವಾರು ಕ್ರೀಡೆಗಳಲ್ಲಿ ಉನ್ನತ ಮಟ್ಟದ ಸಾಧನೆಗೈದಿದ್ದು,ತಂದೆಯ ಹಾದಿ ಹಿಡಿದಿರುವ ಮಗಳು ಮುಂದಿನ ದಿನಗಳಲ್ಲಿ ರಾಜ್ಯ,ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗುವ ಸೂಚನೆಯನ್ನು ನೀಡಿರುತ್ತಾರೆ.

ಮೈಸೂರು ರಾಜ್ಯ ಮಟ್ಟದ ಪಂದ್ಯಾಕೂಟಕ್ಕಾಗಿ ಮಂಗಳೂರು ವಿಭಾಗವನ್ನು ಪ್ರತಿನಿಧಿಸುತ್ತಿರುವ, ವಿದ್ಯಾರ್ಥಿನಿಯರಾದ ಪ್ರಶಸ್ತಿ ಶೆಟ್ಟಿ, ಆರ್ನಾ ಸದೋತ್ರಾ ಹಾಗೂ ಇಶಾನಿ ಹರೀಶ್ ಈ ಮೂವರಿಗೂ “ಸ್ಪೋರ್ಟ್ಸ್ ಕನ್ನಡ” ವೆಬ್ಸೈಟ್ ವತಿಯಿಂದ ಶುಭಾಶಯಗಳು.ಗೆದ್ದು ಬನ್ನಿ…

– ಆರ್.ಕೆ.ಆಚಾರ್ಯ ಕೋಟ

Exit mobile version