
ಕಪ್ ರೆಡಿಯಾ..? ಗುಜರಾತ್ ಮಣಿಸಿ ಫೈನಲ್‌ಗೆ ಎಂಟ್ರಿ ಕೊಟ್ಟ ಬೆಂಗಳೂರು!
2026ರ ಐಪಿಎಲ್‌ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು 92 ರನ್‌ಗಳಿಂದ ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಎರಡನೇ ಬಾರಿಗೆ ಫೈನಲ್‌ಗೆ ಪ್ರವೇಶಿಸಿದೆ. ಧರ್ಮಶಾಲಾದಲ್ಲಿ ನಡೆದ ಈ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಮೇಲುಗೈ ಸಾಧಿಸಿದ ಆರ್‌ಸಿಬಿ ಚಾಂಪಿಯನ್ ತಂಡದ ಪ್ರದರ್ಶನ ನೀಡಿತು.
ಗುಜರಾತ್ ನಾಯಕ ಶುಭ್‌ಮನ್ ಗಿಲ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಎರಡನೇ ಇನ್ನಿಂಗ್ಸ್‌ನಲ್ಲಿ ಪರಿಣಾಮ ಬೀರುತ್ತದೆ ಎನ್ನುವ ನಿರೀಕ್ಷೆಯಲ್ಲಿ ತೆಗೆದುಕೊಂಡ ಈ ನಿರ್ಧಾರ ಬಳಿಕ ತಪ್ಪು ಲೆಕ್ಕಾಚಾರವಾಗಿ ಪರಿಣಮಿಸಿತು.
ಆರ್‌ಸಿಬಿಗೆ ವೆಂಕಟೇಶ್ ಅಯ್ಯರ್ ಆರಂಭದಲ್ಲೇ ಆಕ್ರಮಣಕಾರಿ ಆಟವಾಡಿ 7 ಎಸೆತಗಳಲ್ಲಿ 19 ರನ್ ಸಿಡಿಸಿದರು. ವಿರಾಟ್ ಕೊಹ್ಲಿ ಕೂಡ ಆರಂಭದಿಂದಲೇ ತಮ್ಮ ಛಾಪು ಮೂಡಿಸಿ 25 ಎಸೆತಗಳಲ್ಲಿ 43 ರನ್ ಗಳಿಸಿದರು. ದೇವದತ್ ಪಡಿಕ್ಕಲ್ ಕೂಡ ವೇಗವಾಗಿ ರನ್ ಕಲೆಹಾಕಿದರು. ಆದರೆ ಜೇಸನ್ ಹೋಲ್ಡರ್ ಒಂದೇ ಓವರ್‌ನಲ್ಲಿ ಕೊಹ್ಲಿ ಹಾಗೂ ಪಡಿಕ್ಕಲ್ ಅವರನ್ನು ಔಟ್ ಮಾಡಿ ಗುಜರಾತ್‌ಗೆ ಸ್ವಲ್ಪ ನೆಮ್ಮದಿ ನೀಡಿದರು.
ಆದರೆ ನಂತರ ನಾಯಕ ರಜತ್ ಪಾಟಿದಾರ್ ಹಾಗೂ ಕೃಣಾಲ್ ಪಾಂಡ್ಯ ಜೋಡಿ ಗುಜರಾತ್ ಬೌಲರ್‌ಗಳ ಮೇಲೆ ದಾಳಿ ನಡೆಸಿತು. ಕೃಣಾಲ್ 28 ಎಸೆತಗಳಲ್ಲಿ 43 ರನ್ ಗಳಿಸಿದರೆ, ಪಾಟಿದಾರ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಬೌಂಡರಿ ಹಾಗೂ ಸಿಕ್ಸರ್‌ಗಳ ಸುರಿಮಳೆಯ ನಡುವೆ ಗುಜರಾತ್ ಬೌಲರ್‌ಗಳು ಸಂಪೂರ್ಣ ಕಂಗೆಟ್ಟರು.
ವಿಶೇಷವಾಗಿ ರಜತ್ ಪಾಟಿದಾರ್ ಅವರ ಸಿಕ್ಕಿದ್ದ ಹಲವು ಕ್ಯಾಚ್ ಅವಕಾಶಗಳನ್ನು ಗುಜರಾತ್ ಕೈಚೆಲ್ಲಿದ್ದು ಪಂದ್ಯಕ್ಕೆ ಟರ್ನಿಂಗ್ ಪಾಯಿಂಟ್ ಆಯಿತು. ಕೊನೆಯವರೆಗೂ ಅಜೇಯರಾಗಿ ಉಳಿದ ಪಾಟಿದಾರ್ ಕೇವಲ 33 ಎಸೆತಗಳಲ್ಲಿ 93 ರನ್ ಸಿಡಿಸಿದರು. ಇದರಲ್ಲಿ 5 ಬೌಂಡರಿ ಹಾಗೂ 9 ಭರ್ಜರಿ ಸಿಕ್ಸರ್‌ಗಳು ಸೇರಿದ್ದವು. ಕೊನೆಯಲ್ಲಿ ಜಿತೇಶ್ ಶರ್ಮಾ 5 ಎಸೆತಗಳಲ್ಲಿ 15 ರನ್ ಸೇರಿಸಿದ ಪರಿಣಾಮ ಆರ್‌ಸಿಬಿ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 254 ರನ್‌ಗಳ ಪರ್ವತದಂತ ಗುರಿ ನಿರ್ಮಿಸಿತು.
255 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಗುಜರಾತ್ ಆರಂಭದಲ್ಲೇ ಆಘಾತ ಅನುಭವಿಸಿತು. ಸಾಯಿ ಸುದರ್ಶನ 14 ರನ್ ಗಳಿಸಿ ಔಟ್ ಆದರು. ನಂತರದ ಓವರ್‌ಗಳಲ್ಲಿ ಶುಭ್‌ಮನ್ ಗಿಲ್ ಹಾಗೂ ಜೋಸ್ ಬಟ್ಲರ್ ವಿಕೆಟ್ ಕಳೆದುಕೊಂಡ ಪರಿಣಾಮ ಗುಜರಾತ್ ಆರಂಭಿಕ ಕುಸಿತಕ್ಕೆ ಒಳಗಾಯಿತು.
ಪ್ರಮುಖ ಆಟಗಾರರು ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್ ಸೇರಿದರೆ, ರಾಹುಲ್ ತೆವಾಟಿಯಾ ಮಾತ್ರ ಏಕಾಂಗಿ ಹೋರಾಟ ನಡೆಸಿದರು. ಅವರು 43 ಎಸೆತಗಳಲ್ಲಿ 68 ರನ್ ಗಳಿಸಿದರೂ ಇತರರಿಂದ ಹೆಚ್ಚಿನ ಬೆಂಬಲ ಸಿಗಲಿಲ್ಲ. ಅಂತಿಮವಾಗಿ ಗುಜರಾತ್ ತಂಡ 162 ರನ್‌ಗಳಿಗೆ ಆಲೌಟ್ ಆಯಿತು.
ಆರ್‌ಸಿಬಿ ಬೌಲಿಂಗ್‌ನಲ್ಲಿ ಜೇಕಬ್ ಡಫಿ ಪ್ರಮುಖ ಪಾತ್ರವಹಿಸಿದರು. ತಂಡಕ್ಕೆ ಮರು ಸೇರ್ಪಡೆಯಾದ ಬಳಿಕ ಪರಿಣಾಮಕಾರಿ ಪ್ರದರ್ಶನ ನೀಡಿದ ಅವರು 4 ಓವರ್‌ಗಳಲ್ಲಿ 3 ವಿಕೆಟ್ ಕಬಳಿಸಿದರು. ಭುವನೇಶ್ವರ್ ಕುಮಾರ್, ರಝಿಕ್ ಸಲಾಂದಾರ್ ಹಾಗೂ ಕೃಣಾಲ್ ಪಾಂಡ್ಯ ತಲಾ 2 ವಿಕೆಟ್ ಪಡೆದರು. ಜೋಸ್ ಬಟ್ಲರ್ ಅವರ ಮಹತ್ವದ ವಿಕೆಟ್ ಅನ್ನು ಜೋಶ್ ಹೇಜಲ್‌ವುಡ್ ಪಡೆದರು.
ಈ ಗೆಲುವಿನೊಂದಿಗೆ ಆರ್‌ಸಿಬಿ ಸತತ ಎರಡನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಮತ್ತೊಂದೆಡೆ, ಗುಜರಾತ್ ಟೈಟನ್ಸ್‌ಗೆ ಇನ್ನೂ ಒಂದು ಅವಕಾಶ ಉಳಿದಿದೆ. ಅವರು ಕ್ವಾಲಿಫೈಯರ್-2ರಲ್ಲಿ ಎಲಿಮಿನೇಟರ್ ಪಂದ್ಯದ ವಿಜೇತರನ್ನು ಎದುರಿಸಿ ಮತ್ತೆ ಫೈನಲ್ ಪ್ರವೇಶಿಸಲು ಹೋರಾಡಲಿದ್ದಾರೆ.
